spot_img
spot_img

ಹೊಸ ಪುಸ್ತಕ ಓದು: ಕಾದಂಬರಿ ಸಾಹಿತ್ಯ-೨ (ಶರಣ ಕೇಂದ್ರಿತ ಕಾದಂಬರಿಗಳು)

Must Read

- Advertisement -

ಡಾ. ಎಚ್. ತಿಪ್ಪೇರುದ್ರಸ್ವಾಮಿ ಸಮಗ್ರ ಸಾಹಿತ್ಯ ಸಂ.೫

ಕಾದಂಬರಿ ಸಾಹಿತ್ಯ-೨ (ಶರಣ ಕೇಂದ್ರಿತ ಕಾದಂಬರಿಗಳು)

ಲೇ: ಡಾ. ಎಚ್. ತಿಪ್ಪೇರುದ್ರಸ್ವಾಮಿ
ಸಂ: ಡಾ. ಎಚ್. ಟಿ. ಶೈಲಜಾ

ಪ್ರಕಾಶಕರು: ಶ್ರೀ ನಿಜಲಿಂಗೇಶ್ವರ ಗ್ರಂಥಮಾಲೆ, ಜಗದ್ಗುರು ದುರದುಂಡೀಶ್ವರ ಸಿದ್ಧಸಂಸ್ಥಾನಮಠ, ನಿಡಸೋಸಿ, ೨೦೧೭

- Advertisement -

ಪುಟಗಳು: ೧೦೯೬ ಬೆಲೆ: ರೂ. ೮೦೦/-

ಡಾ. ತಿಪ್ಪೇರುದ್ರಸ್ವಾಮಿ ಅವರ ಮಗಳು ಡಾ. ಎಚ್. ಟಿ. ಶೈಲಜಾ ಅವರು ತಮ್ಮ ತಂದೆಯವರು ಲಿಂಗೈಕ್ಯರಾದ ನಂತರ ಅವರ ಸಮಗ್ರ ಸಾಹಿತ್ಯ ಸಂಪುಟಗಳನ್ನು ಪ್ರಕಟಿಸಬೇಕೆಂದು ಅಪೇಕ್ಷೆ ಪಟ್ಟು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಮೊದಲಾದವುಗಳನ್ನು ಸಂಪರ್ಕಿಸಿ ಸೋತಿದ್ದರು.

ನಾನು ೨೦೧೪ರಲ್ಲಿ ಡಾ. ಎಚ್. ತಿಪ್ಪೇರುದ್ರಸ್ವಾಮಿ ಅವರ ಜೀವನ ಚರಿತ್ರೆಯನ್ನು ಗದುಗಿನ ತೋಂಟದಾರ್ಯ ಸಂಸ್ಥಾನಮಠದ ಲಿಂಗಾಯತ ಪುಣ್ಯಪುರುಷ ಮಾಲೆಗೆ ಬರೆದು ಕೊಟ್ಟ ನಂತರ, ಡಾ. ಎಚ್. ಟಿ. ಶೈಲಜಾ ಅವರ ಪರಿಚಯವಾಯಿತು. ತಮ್ಮ ತಂದೆಯ ಸಾಹಿತ್ಯ ಪ್ರಕಟಣೆಗಾಗಿ ತಾವು ತುಂಬಾ ಪ್ರಯತ್ನ ಪಡುತ್ತಿರುವ ವಿಷಯ ತಿಳಿಸಿದರು.

- Advertisement -

ಆಗ ನಾನು ನಾಗನೂರು ರುದ್ರಾಕ್ಷಿಮಠದ ಪೂಜ್ಯ ಶ್ರೀ ಡಾ. ಸಿದ್ಧರಾಮ ಸ್ವಾಮೀಜಿಯವರ ಗಮನಕ್ಕೆ ತಂದೆ. ಅವರು ತಕ್ಷಣ ಒಪ್ಪಿಗೆ ನೀಡಿ ತಿಪ್ಪೇರುದ್ರಸ್ವಾಮಿ ಅವರ ಸಮಗ್ರ ಸಾಹಿತ್ಯದ ಮೊದಲ ಸಂಪುಟವನ್ನು ತಮ್ಮ ಶ್ರೀಮಠದಿಂದ ಪ್ರಕಟಿಸಿದರು. ಈ ವಿಷಯ ತಿಳಿದ ನಿಡಸೋಸಿ ದುರದುಂಡೀಶ್ವರ ಸಿದ್ಧಸಂಸ್ಥಾನಮಠದ ಪೂಜ್ಯ ಶ್ರೀ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳವರು- ತಾವು ಒಂದು ಸಂಪುಟ ಪ್ರಕಟಿಸುವುದಾಗಿ ಹೇಳಿದರು.

ಗದುಗಿನ ಹಿಂದಿನ ಜಗದ್ಗುರುಗಳಾಗಿದ್ದ ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳವರು ಒಂದು ಸಂಪುಟ ಪ್ರಕಟಿಸುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಿಡಸೋಸಿ ದುರದುಂಡೀಶ್ವರ ಸಿದ್ಧಸಂಸ್ಥಾನಮಠದ ಪೂಜ್ಯ ಶ್ರೀ ಜಗದ್ಗುರು ಮಹಾಸನ್ನಿಧಿಯವರು ತಿಪ್ಪೇರುದ್ರಸ್ವಾಮಿ ಸ್ವಾಮಿ ಅವರ ಶರಣ ಕೇಂದ್ರಿತ ಕಾದಂಬರಿಗಳ ಸಂಪುಟವನ್ನು ಪ್ರಕಟಿಸಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ.

ಪ್ರಸ್ತುತ ಕೃತಿಯಲ್ಲಿ ಪರಿಪೂರ್ಣದೆಡೆಗೆ (ಅಲ್ಲಮನ ಕುರಿತು), ಕದಳಿಯ ಕರ್ಪುರ (ಅಕ್ಕಮಹಾದೇವಿ ಕುರಿತು), ಅಳಿವಿನಿಂದ ಉಳಿವಿಗೆ (ಚನ್ನಬಸವಣ್ಣನವರನ್ನು ಕುರಿತು), ನೆರಳಾಚೆಯ ಬೆಳಗು (ಸಿದ್ಧರಾಮನನ್ನು ಕುರಿತು) ಎಂಬ ನಾಲ್ಕು ಕಾದಂಬರಿಗಳ ಸಂಯುಕ್ತ ಸಂಪುಟ ಇಲ್ಲಿ ಮೂಡಿಬಂದಿದೆ.

೧೩ನೇ ಶತಮಾನದಲ್ಲಿ ಹರಿಹರ ಮಹಾಕವಿ ನೂರಾರು ಶರಣರ ಚರಿತ್ರೆಗಳನ್ನು ರಗಳೆ ಮಾಧ್ಯಮದಲ್ಲಿ ಚಿತ್ರಿಸಿದಂತೆ, ಕೆಲವು ಪ್ರಮುಖ ಶರಣರನ್ನು ಮುಖ್ಯವಾಗಿಟ್ಟುಕೊಂಡು ಇಡೀ ವಚನ ಕ್ರಾಂತಿಯ ಇತಿಹಾಸವನ್ನು ಕಾದಂಬರಿ ಮಾಧ್ಯಮದಲ್ಲಿ ಕಟ್ಟಿಕೊಟ್ಟವರು ಡಾ. ತಿಪ್ಪೇರುದ್ರಸ್ವಾಮಿ ಅವರು. ಅಂತೆಯೇ ಅವರ ಕಾದಂಬರಿಗಳು ಸರ್ವ ಜನಾದರಣೀಯಗೊಂಡು ಹತ್ತಾರು ಬಾರಿ ಪುನರ್ ಮುದ್ರಣಗೊಂಡಿವೆ. ಇಂದಿಗೂ ಅವರ ಕಾದಂಬರಿಗಳಿಗೆ ಅಪಾರ ಬೇಡಿಕೆ ಇದೆ.

ಪರಿಪೂರ್ಣದೆಡೆಗೆ

ಡಾ. ತಿಪ್ಪೇರುದ್ರಸ್ವಾಮಿ ಅವರು ಬರೆದ ಕಾದಂಬರಿಗಳಲ್ಲಿ ‘ಪರಿಪೂರ್ಣದೆಡೆಗೆ’ ಮೊದಲನೆಯದು. ಬನವಾಸಿ, ಬಳ್ಳಿಗಾವಿ ಪರಿಸರಗಳನ್ನು ಬಾಲ್ಯದಲ್ಲಿಯೇ ಸೂಕ್ಷ್ಮವಾಗಿ ಗಮನಿಸಿದ್ದ ಅವರು ಅಲ್ಲಮನ ಚರಿತ್ರೆಯನ್ನು ಚಿತ್ರಿಸಲು ಅವನ ವಚನಗಳ ಆಧಾರದ ಮೇಲೆಯೇ ಬಹುಮಟ್ಟಿಗೆ ಅವಲಂಬಿಸಿದ್ದಾರೆ. ‘ಕಗ್ಗತ್ತಲಿನಲ್ಲಿ ಕಾಂತಿಪುಂಜ’, ‘ಮಾಯೆಯ ಮೋಹಜಾಲ’, ‘ಬಿಂದುವಿನಿಂದ ಸಿಂಧುವಿಗೆ’, ‘ಮಹಾಸಂಗಮ’, ‘ಶೂನ್ಯಪೀಠದಲ್ಲಿ’, ‘ಶೂನ್ಯಮೂರ್ತಿ’, ‘ನಿರ್ವಯಲು’- ಎಂಬ ಆರು ಅಧ್ಯಾಯಗಳಲ್ಲಿ ಕಾದಂಬರಿ ವಿಸ್ತಾರಗೊಂಡಿದೆ.

‘ಹರಿಹರನು ಪ್ರಭುವನ್ನು ಕುರಿತು ಬರೆದಿರುವ ರಗಳೆಯಾಗಲೀ, ಚಾಮರಸನ ಪ್ರಭುಲಿಂಗಲೀಲೆಯಾಗಲೀ, ಇದಕ್ಕೆ ಹೆಚ್ಚಾಗಿ ಸಹಾಯಕವಾಗುವಂತಿಲ್ಲ. ಪ್ರಭುವಿನ ಒಟ್ಟು ಮಹತ್ವವನ್ನು ಒಂದು ರೀತಿಯಲ್ಲಿ ‘ಪ್ರತಿಮಾ’ ರೂಪವಾಗಿ ಅವು ಧ್ವನಿಸುತ್ತವೆಯೇ ಹೊರತು ಅವನು ಕೈಗೊಂಡ ಸಾಧನೆಯನ್ನಾಗಲೀ, ಎದುರಿಸಿದ ಸಮಸ್ಯೆಗಳನ್ನಾಗಲೀ, ಅವುಗಳನ್ನು ಮೆಟ್ಟಿ ಮೇಲೇರಿದ ಧೀರ ನಿಲುವನ್ನಾಗಲೀ ನಿರೂಪಿಸುವುದಿಲ್ಲ. ಅವನೊಬ್ಬ ಕೇವಲ ಅಲೌಕಿಕ ವ್ಯಕ್ತಿ, ಲೀಲೆಗಾಗಿಯೇ ಈ ಪ್ರಪಂಚಕ್ಕೆ ಇಳಿದು ಬಂದವನು ಎಂಬ ಭಾವನೆ ಪ್ರಭುಲಿಂಗಲೀಲೆಯಲ್ಲಿ ಉಂಟಾಗುತ್ತದೆ. ಇದರಿಂದ ಅಲ್ಲಮನ ವ್ಯಕ್ತಿತ್ವದ ಸಾರವತ್ತಾದ ಭಾಗವೇ ನಷ್ಟವಾಗುತ್ತದೆಂದು ನನ್ನ ಭಾವನೆ.

ಆದುದರಿಂದ ಈ ಕಾದಂಬರಿಯಲ್ಲಿ ಹಿಂದಿನ ಯಾವ ಒಂದು ಕಾವ್ಯವನ್ನಾಗಲೀ, ಸಂಪೂರ್ಣವಾಗಿ ಆಧಾರವಾಗಿಟ್ಟುಕೊಂಡು ಹೊರಟಿಲ್ಲ. ಅವನ ವಚನಗಳನ್ನು ಓದಿದಾಗ ಅಲ್ಲಿನ ಅರ್ಥ ಸಂಪತ್ತಿಯಿಂದ ಯಾವ ಒಂದು ವ್ಯಕ್ತಿಯ ಚಿತ್ರ ಮನಸ್ಸಿನ ಮೇಲೆ ಮೂಡಬಹುದೋ ಆ ವ್ಯಕ್ತಿಯ ರೂಪು ರೇಖೆಗಳನ್ನು ಚಿತ್ರಿಸುವ ಒಂದು ನಮ್ರ ಪ್ರಯತ್ನವಿದು. ಅವನು ಹುಟ್ಟುತ್ತಲೇ ಸಿದ್ಧನಾದವನೆಂದಾಗಲಿ ಅಥವಾ ಲೀಲೆಗಾಗಿ ಇಳಿದು ಬಂದ ಅವತಾರ ಪುರುಷನೆಂದಾಗಲೀ ಅವನನ್ನು ಇಲ್ಲಿ ನೋಡಿಲ್ಲ. ಇಲ್ಲಿ ಕಾಣುವ ಅವನ ಶಕ್ತಿಯೆಲ್ಲಾ ತನ್ನ ಸ್ವಸಾಮರ್ಥ್ಯದಿಂದ ಸಾಧಿಸಿ ಸಾಧಿಸಿ ಗಳಿಸಿಕೊಂಡ ಅಧ್ಯಾತ್ಮಿಕ ತೇಜಸ್ಸಿನಿಂದ ಲಭ್ಯವಾದುದು.

‘ಅವತರಣ’ಕ್ಕಿಂತ ಹೆಚ್ಚಾಗಿ ‘ಉತ್ತರಣ’ದಿಂದ ದೈವತ್ವಕ್ಕೇರಿದ ಸೀಮಾಪುರುಷ. ಇಲ್ಲಿ ಇದ್ದು, ಬಾಳಿ ಬದುಕಿ, ಈ ಬದುಕಿನ ಮೂಲಕವೇ ಇದರಾಚೆಯ ಚಿರಂತನವಾದ ಬದುಕನ್ನು ಕಂಡುಕೊಂಡವನು. ‘ಪರಿಪೂರ್ಣದೆಡೆಗೆ’ ಏರಿದವನು. ತಾನು ಮಾತ್ರ ಏರಿದುದಲ್ಲದೆ ಇಡೀ ಮಾನವ ಸಮಾಜವನ್ನೇ ‘ಪರಿಪೂರ್ಣದೆಡೆಗೆ’ ಕೊಂಡೊಯ್ಯಲು ಹವಣಿಸಿದ ಚಿರಂತನ ಸಾಹಸ ಶಕ್ತಿ ಆದ ಎಂಬ ಭಾವನೆಯಿಂದ ಅವನನ್ನು ಇಲ್ಲಿ ಚಿತ್ರಿಸಲಾಗಿದೆ.’ (ಅರಿಕೆ ಪು. ೫-೬)

ಅಲ್ಲಮನ ಸಾಧಕ ಬದುಕನ್ನು, ಯೋಗಿಕ ನೆಲೆಯಲ್ಲಿ, ತಾತ್ವಿಕ ಹಿನ್ನೆಲೆಯಲ್ಲಿ ಚಿತ್ರಿಸುವ ಪ್ರಯತ್ನ ಸಾರ್ಥಕವಾಗಿದೆ. ಸುಂದರ ಸಂಭಾಷಣೆ, ಸೊಗಸಾದ ಚಿತ್ರಣ, ಪಾತ್ರಗಳ ಬೆಳವಣಿಗೆ ಕಾರಣವಾಗಿ ಕಾದಂಬರಿ ಓದುಗರ ಮನಸೂರೆಗೊಳ್ಳುತ್ತದೆ. ಇದು ಡಾ. ತಿಪ್ಪೇರುದ್ರಸ್ವಾಮಿ ಅವರ ಮೊದಲ ಕಾದಂಬರಿ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಬಂದಿರುವುದು ಕೃತಿಯ ಮೌಲಿಕತೆಗೆ ಹಿಡಿದ ಕನ್ನಡಿಯಾಗಿದೆ. ಈ ಕೃತಿಯನ್ನು ಸಿ.ಎನ್. ಹಿರೇಮಠ ಅವರು Towards Perfection ಎಂಬ ಹೆಸರಿನಲ್ಲಿ ಇಂಗ್ಲಿಷ್ಗೆ ಅನುವಾದಿಸಿದ್ದಾರೆ.

ಪ್ರಸ್ತುತ ಕಾದಂಬರಿಯು ಗುಲಬರ್ಗಾ ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯದ ಪದವಿ ತರಗತಿಗಳಿಗೆ ಪಠ್ಯವಾಗಿತ್ತು. ಭದ್ರಾವತಿ ಆಕಾಶವಾಣಿ ಕೇಂದ್ರದಿಂದ ಮೂವತ್ತು ಕಂತುಗಳಲ್ಲಿ ಈ ಕಾದಂಬರಿಯ ವಾಚನ ಪ್ರಸಾರ ಕಾರ್ಯ ನಡೆದು ಅಪಾರ ಜನಮೆಚ್ಚುಗೆ ಪಡೆಯಿತು. ಒಟ್ಟಾರೆ ಪರಿಪೂರ್ಣದೆಡೆಗೆ ಕಾದಂಬರಿ ಎಂಟು ಬಾರಿ ಮರುಮುದ್ರಣಗೊಂಡು ಕಾದಂಬರಿ ಪ್ರಪಂಚದಲ್ಲಿ ವಿಶೇಷ ಸ್ಥಾನ ಪಡೆದಿದೆ.

ಕದಳಿಯ ಕರ್ಪುರ

ಅಕ್ಕಮಹಾದೇವಿ ಜೀವನ ಕುರಿತಾದ ‘ಕದಳಿಯ ಕರ್ಪುರ’ ಕಾದಂಬರಿ ಇಲ್ಲಿಯವರೆಗೆ ೧೪ ಮುದ್ರಣಗಳನ್ನು ಕಂಡಿದೆ. ‘ಕದಳಿಯ ಕರ್ಪುರ’ ಎಂಬ ಅರ್ಥಪೂರ್ಣವಾದ ತಾತ್ವಿಕ ಹೆಸರನ್ನು ಈ ಕಾದಂಬರಿಗೆ ಇಟ್ಟಿರುವ ವಿಷಯವಾಗಿ ಡಾ. ತಿಪ್ಪೇರುದ್ರಸ್ವಾಮಿ ಅವರು ಹೀಗೆ ಹೇಳುತ್ತಾರೆ. ‘ಈ ಜಗತ್ತೆಂಬ ಕದಳಿಯಲ್ಲಿ ಅದೊಂದು ಪರಿಮಳ ಭರಿತ ಕರ್ಪುರದ ಪರಂಜ್ಯೋತಿ. ಅದಕ್ಕೆ ಸಂಕೇತವೋ ಎಂಬಂತೆ ಅವಳ ಜೀವನದ ಘಟನೆಗಳು ಬೆಳೆಯುತ್ತವೆ; ಅವಳ ವೈರಾಗ್ಯದ ಪ್ರಭೆ ಹೊಳೆಯುತ್ತದೆ. ಕೊನೆಯಲ್ಲಿ ಆಕೆ ಉರಿಯುಂಡ ಕರ್ಪುರದಂತೆ ತನ್ನ ಭೌತ ದೇಹವನ್ನು ಮೀರಿ ಬಯಲಾಗುವುದು ಕೂಡ, ಶ್ರೀಶೈಲದ ಕದಳಿಯ ವನದಲ್ಲಿ’

ಪ್ರಾರಂಭದಲ್ಲಿ ಬರೆದ ಪರಿಪೂರ್ಣದೆಡೆಗೆ ಕಾದಂಬರಿಯಲ್ಲಿ ಅನುಸರಿಸಿದ ಮಾರ್ಗಕ್ರಮವೇ ಇಲ್ಲಿಯೂ ಮುಂದುವರೆದಿದೆ. ಅಕ್ಕನ ವಚನಗಳಲ್ಲಿ ಅಡಗಿರುವ ಅವಳ ಸ್ವಯಂ ವ್ಯಕ್ತಿತ್ವವನ್ನೇ ಇನ್ನಷ್ಟು ವಿಸ್ತಾರವಾಗಿ ವಿಶ್ಲೇಷಿಸುವ ಪ್ರಯತ್ನ ಮಾಡಿದ್ದಾರೆ. ಅವಳ ಜೀವನ ಚರ್ಚಾಸ್ಪದ. ಅವಳ ದಿಗಂಬರತ್ವ, ಕೌಶಿಕನ ಮದುವೆ ಮೊದಲಾದ ವಿಷಯಗಳಲ್ಲಿ ಇನ್ನೂ ಸರಿಯಾದ ತೀರ್ಮಾನಕ್ಕೆ ಬರಲಾಗಿಲ್ಲ. ಇಂಥ ಸಂದರ್ಭದಲ್ಲಿ ಅವುಗಳಿಗೆ ಕಾದಂಬರಿಗಳ ಉತ್ತರವನ್ನು ಕಂಡುಕೊಳ್ಳುವ ಡಾ. ತಿಪ್ಪೇರುದ್ರಸ್ವಾಮಿ ಅವರ ಕಾರ್ಯ ಯಶಸ್ವಿಯಾಗಿದೆ.

ಅಕ್ಕ ಹುಟ್ಟಿ ಬೆಳೆದ ಪರಿಸರ, ಅವಳ ಅಧ್ಯಾತ್ಮ ಸಾಧನೆಗೆ ಅಡ್ಡಿಯಾಗುವ ಲೌಕಿಕ ಘಟನೆಗಳ ವಿವರಣೆ ರೋಚಕವಾಗಿ ಮೂಡಿವೆ. ಕೌಶಿಕನು ಇಲ್ಲಿ ಕುವೆಂಪು ಅವರ ರಾಮಾಯಣ ದರ್ಶನಂದಲ್ಲಿ ಮೂಡಿದ ರಾವಣನ ಪ್ರತಿರೂಪವಾಗಿದ್ದಾನೆ. ಪರಿಪೂರ್ಣದೆಡೆಗೆ ಮತ್ತು ಕದಳಿಯ ಕರ್ಪುರ ಎರಡೂ ಕಾದಂಬರಿಗಳ ಧ್ಯೇಯ ಉದ್ದೇಶ ಒಂದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಮನದಟ್ಟಾಗುವುದು. ಅಲ್ಲಿ ಅಲ್ಲಮ ವೈರಾಗ್ಯದತ್ತ ವಾಲಿದರೆ, ಇಲ್ಲಿ ಅಕ್ಕ ವೈರಾಗ್ಯಕ್ಕೆ ಭಾಷ್ಯ ಬರೆಯುತ್ತಾಳೆ. ಅಲ್ಲಿ ಮಾಯೆ ಅಲ್ಲಮನನ್ನು ಸಂಸಾರಿಯಾಗೆಂದು ಕಾಡಿದರೆ, ಇಲ್ಲಿ ಅಲೌಕಿಕ ಸುಂದರಿ ಅಕ್ಕನನ್ನು ಕೌಶಿಕ ಕಾಡುತ್ತಾನೆ. ಇಬ್ಬರೂ ಶ್ರೀಶೈಲಕ್ಕೆ ಪಯಣ ಮಾಡುತ್ತಾರೆ. ಹೀಗೆ ಎರಡೂ ಕಾದಂಬರಿಗಳು ಒಂದೇ ಗತಿಯಲ್ಲಿ ಸಾಗಿವೆ.

ರಾಜವೈಭವದ ಸಂಪತ್ತಿಗಾಗಲೀ, ರೂಪಯೌವ್ವನಗಳ ಮಾಯೆಗಾಗಲೀ ಮಹಾದೇವಿ ಸಿಕ್ಕದೆ ತನ್ನ ಪ್ರೇಮವನ್ನು ಚೆನ್ನಮಲ್ಲಿಕಾರ್ಜುನನಿಗೆ ಧಾರೆಯೆರೆದಳು. ಈ ಲೋಕದಗಂಡಂದಿರನ್ನು ಕೈ ಹಿಡಿಯುವ ಆಕಾಂಕ್ಷೆಯನ್ನು ದಾಟಿ ಅವಳ ಪ್ರೇಮ ವಿಶ್ವವಲ್ಲಭನ ಸತಿಯಾಗುವ ಆಧ್ಯಾತ್ಮಿಕ ಮಾರ್ಗವನ್ನು ಹಿಡಿಯುವ ಚಿತ್ರವನ್ನು ಡಾ. ತಿಪ್ಪೇರುದ್ರಸ್ವಾಮಿ ಅವರು ವಿಶ್ಲೇಷಿಸುವ ಪರಿ ದಾರ್ಶನಿಕ ದೃಷ್ಟಿಯಿಂದ ಕೂಡಿದೆ. ಇಲ್ಲಿ ಕೌಶಿಕ ಕೊನೆಗೆ ಪರಿವರ್ತಿನಾಗಿ ಅಕ್ಕನಲ್ಲಿ ಜಗನ್ಮಾತೆಯನ್ನು ಕಾಣುವ ಒಂದು ಹೊಸ ಪರಿಕಲ್ಪನೆಯಲ್ಲಿ ಕಾದಂಬರಿಯಲ್ಲಿ ತಂದುದು ಗಮನಿಸುವ ಅಂಶ.

ಅಕ್ಕ ಕೌಶಿಕನಿಂದ ಗೌರವದಿಂದ ಬೀಳ್ಕೊಂಡು, ಮಹಾಮನೆಯ ಅಂಗಳಕ್ಕೆ ಬಂದು ಕಿನ್ನರಿ ಬೊಮ್ಮಯ್ಯ, ಅಲ್ಲಮ ಮೊದಲಾದವರಿಂದ ಪರೀಕ್ಷಿತಳಾಗಿ, ಅನುಭವ ಮಂಟಪದ ಧೃವತಾರೆಯಾಗಿ ಕೊನೆಗೆ ಶ್ರೀಶೈಲದ ಕದಳಿ ವನಕ್ಕೆ ಹೋಗಿ ಲಿಂಗೈಕ್ಯವಾಗುವ ವರೆಗಿನ ಕಥನವನ್ನು ‘ಬೆಳೆಯುವ ಬೆಳಕು’, ‘ದಿಗಂಬರದ ದಿವ್ಯಾಂಬರೆ’, ‘ತಪೋಯಾತ್ರೆ’, ‘ಕಲ್ಯಾಣದಿಂದ ಕದಳಿ’ ಎಂಬ ನಾಲ್ಕು ಅಧ್ಯಾಯಗಳಲ್ಲಿ ಡಾ. ತಿಪ್ಪೇರುದ್ರಸ್ವಾಮಿ ಅವರು ಸುಂದರವಾಗಿ ಚಿತ್ರಿಸಿದ್ದಾರೆ.

ಸಿರಿಗೆರೆ ತರಳಬಾಳು ಜಗದ್ಗುರುಗಳೊಂದಿಗೆ ಡಾ. ತಿಪ್ಪೇರುದ್ರಸ್ವಾಮಿ ಅವರು ಕದಳಿವನ ಪ್ರವಾಸ ಕೈಕೊಂಡಿದ್ದರು. ಅಂತೆಯೆ ಕದಳಿವನದ ವರ್ಣನೆ ಇಲ್ಲಿ ತುಂಬ ಸ್ವಾರಸ್ಯವಾಗಿ ಮೂಡಿ ಬಂದಿದೆ.

ಡಿ.ವಿ.ಕೆ ಮೂರ್ತಿಯವರು ಪರಿಚಯವಾದುದು ಈ ಕಾದಂಬರಿ ಮೂಲಕವೇ. ಎಚ್. ದೇವೀರಪ್ಪನವರಿಂದ ಡಿ.ವಿ.ಕೆ. ಮೂರ್ತಿ ಅವರನ್ನು ಭೇಟಿಯಾದ ಡಾ. ತಿಪ್ಪೇರುದ್ರಸ್ವಾಮಿ ಅವರು ‘ಕದಳಿಯ ಕರ್ಪುರ’ ಕಾದಂಬರಿಯನ್ನು ಪ್ರಕಟಣೆಗೆ ನೀಡಿದರು. ಈ ಕೃತಿ ಪ್ರಕಟಣೆಯಿಂದ ಪರಿಚಯವಾದ ಡಿ.ವಿ.ಕೆ. ಮೂರ್ತಿ ಅವರು ಡಾ. ತಿಪ್ಪೇರುದ್ರಸ್ವಾಮಿ ಅವರ ಬಹುತೇಕ ಕೃತಿಗಳನ್ನು ಪ್ರಕಟಿಸಿದ್ದಾರೆ.

ಪ್ರಸ್ತುತ ಕಾದಂಬರಿ ಕರ್ನಾಟಕ ವಿಶ್ವವಿದ್ಯಾಲಯ ಮೊದಲುಗೊಂಡು ಅನೇಕ ವಿಶ್ವವಿದ್ಯಾಲಯಗಳ ಪದವಿ ತರಗತಿಗೆ ಪಠ್ಯವಾಗಿತ್ತು. ಅಲ್ಲದೆ ವಿಶ್ವಕನ್ನಡ ಸಮ್ಮೇಳನದ ನಿಮಿತ್ತ ಸರ್ಕಾರದಿಂದ ೨೦೧೧ರಲ್ಲಿ ಜನಪ್ರಿಯ ಆವೃತ್ತಿಯಾಗಿ ಪ್ರಕಟಗೊಂಡಿದೆ. ಪ್ರೊ. ಸಿ. ಎನ್. ಹಿರೇಮಠ ಅವರು Soul unto the Sublime ಎಂಬ ಹೆಸರಿನಲ್ಲಿ ಕೃತಿಯನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದಾರೆ. ಪ್ರೊ. ಶಾಲಿನಿ ದೊಡ್ಡಮನಿ ಅವರು ಮರಾಠಿ ಭಾಷೆಗೆ ಅನುವಾದಿಸಿದ್ದಾರೆ. ಈ ಕಾದಂಬರಿ ಆಧಾರಿತ ಅನೇಕ ರೂಪಕಗಳು ನಾಡಿನಾದ್ಯಂತ ಪ್ರದರ್ಶನಗೊಂಡಿವೆ. ಅಲ್ಲದೆ ಖ್ಯಾತ ಕಲಾವಿದರಾದ ಬಸವರಾಜ ಬೆಂಗೇರಿ ಅವರ ನಿರ್ದೇಶನದಲ್ಲಿ ಸಾಂಗ್ಲಿಯ ಪದ್ಮಿನಿ ಮ್ಯೂಸಿಕ್ ಕ್ಯಾಸೆಟ್ಸ್ ನವರು ‘ಡಾ ತಿಪ್ಪೇರುದ್ರಸ್ವಾಮಿ ಕದಳಿಯ ಕರ್ಪುರ ಅಕ್ಕಮಹಾದೇವಿ’ ಎಂಬ ನಾಟಕದ ಧ್ವನಿ ಸುರಳಿಯನ್ನು ನಿರ್ಮಾಣ ಮಾಡಿದ್ದಾರೆ. ಹೀಗೆ ಕಾದಂಬರಿಯು ತುಂಬ ಜನಪ್ರಿಯವಾಗಿದೆ.

ಅಳಿವಿನಿಂದ ಉಳವಿಗೆ

೧೨ನೇ ಶತಮಾನದ ಪ್ರಮುಖ ಶರಣರಾದ ಅಲ್ಲಮ, ಅಕ್ಕ, ಬಸವಣ್ಣ, ಸಿದ್ಧರಾಮರನ್ನು ಕುರಿತು ಕಾದಂಬರಿ ಬರೆದಿದ್ದ ಡಾ. ತಿಪ್ಪೇರುದ್ರಸ್ವಾಮಿ ಅವರು ಈ ಮಾಲಿಕೆಯಲ್ಲಿ ತೇಜೋಮೂರ್ತಿಯಾಗಿ ಬೆಳಗುವ ಚೆನ್ನಬಸವಣ್ಣನವರ ಕುರಿತಾಗಿ ಒಂದು ಕಾದಂಬರಿ ಬರೆಯುವ ಮನಸ್ಸು ಮಾಡಿದರು. ಅದರ ಫಲವೇ ‘ಅಳಿವಿನಿಂದ ಉಳವಿಗೆ’.

ಕಲ್ಯಾಣಕ್ರಾಂತಿಯ ನಂತರ ಶರಣರೆಲ್ಲರು ಚದುರಿದರು. ಚೆನ್ನಬಸವಣ್ಣ, ಅಕ್ಕನಾಗಮ್ಮನವರ ನೇತೃತ್ವದಲ್ಲಿ ಒಂದು ತಂಡ ಗೋವೆಯ ಕದಂಬರಿಗೆ ಸೇರಿದ ಉಳವಿಯತ್ತ ಪಯಣ ಬೆಳೆಸಿತು. ಕಲ್ಯಾಣದಿಂದ ಉಳವಿಯವರೆಗೆ ಸಾಗಿ ಬಂದ ಶರಣರ ದಾರಿ ಅದು ದುರ್ಗಮದಾರಿಯಾಗಿತ್ತು. ಅನೇಕ ಕಷ್ಟ ನಷ್ಟಗಳನ್ನು ಎದುರಿಸಿ ಸೋವಿದೇವನ ಸೈನ್ಯದೊಂದಿಗೆ ಕಾದಾಡುತ್ತ ಕಾಳಿ ನದಿಯನ್ನು ದಾಟಿ ಉಳವಿಯ ಗಾಢ ಅರಣ್ಯಪ್ರದೇಶವನ್ನು ಭೇದಿಸಿದ ರೋಚಕ ಘಟನೆ ಈ ಕಾದಂಬರಿ ವಿವರಿಸುತ್ತದೆ. ಡಾ. ತಿಪ್ಪೇರುದ್ರಸ್ವಾಮಿ ಅವರು ಬೆಳಗಾವಿ ಜಿಲ್ಲೆಯ ಅನೇಕ ಶರಣ ಕ್ಷೇತ್ರಗಳನ್ನು ಸಂದರ್ಶನ ಮಾಡಿ, ಉಳವಿಯ ಕ್ಷೇತ್ರಕಾರ್ಯವನ್ನು ಮಾಡಿದರು. ಶರಣರು ಕಲ್ಯಾಣದಿಂದ ಉಳವಿಗೆ ಯಾವ ಮಾರ್ಗವಾಗಿ ಬಂದರು ಎಂಬುದರ ಸ್ಪಷ್ಟ ಕಲ್ಪನೆ ಇರಲಿಲ್ಲ. ಡಾ. ತಿಪ್ಪೇರುದ್ರಸ್ವಾಮಿ ಅವರು ಶೋಧಿಸಿ ಎರಡು ಮಾರ್ಗಗಳನ್ನು ವಿವರಿಸಿದ್ದಾರೆ. ಅವರ ಶೋಧಕ್ಕೆ ಬೆಂಬಲ ಎನ್ನುವಂತೆ ಗದಗ ತೋಂಟದಾರ್ಯಮಠದ ಲಿಂಗಾಯತ ಅಧ್ಯಯನ ಸಂಸ್ಥೆಯಿಂದ ಪ್ರಕಟಗೊಂಡ ‘ಸೋದೆಯ ಸದಾಶಿವರಾಯನ ಕೃತಿಗಳು’ ಎಂಬ ಗ್ರಂಥದಲ್ಲಿ ‘ಉಳವಿ ಮಹಾತ್ಮೆ’ ಎಂಬ ಚಿಕ್ಕ ಕೃತಿಯಿದ್ದು, ಆ ಕೃತಿಯಲ್ಲಿ ಶರಣರು ಸಾಗಿ ಬಂದ ದಾರಿಯ ಸ್ಪಷ್ಟ ಚಿತ್ರಣವಿದೆ.

ಹೀಗಾಗಿ ಇದೊಂದು ಕಾದಂಬರಿ ಎನ್ನುವುದಕ್ಕಿಂತ ಒಂದು ಹೋರಾಟದ ಕಥನವೆಂದೂ, ಸಂಶೋಧನಾತ್ಮಕ ಕೃತಿಯೆಂದೂ ಹೇಳಬಹುದು.

ನೆರಳಾಚೆಯ ಬೆಳಗು

ಡಾ. ತಿಪ್ಪೇರುದ್ರಸ್ವಾಮಿ ಅವರು ಕರ್ತಾರನ ಕಮ್ಮಟವೇ ಶರಣರ ಕುರಿತಾಗಿ ಕೊನೆಯ ಕಾದಂಬರಿ ಆಗಬಹುದೆಂದು ಅಂದುಕೊಂಡಿದ್ದರು. ಆದರೂ ಅವರ ಶರಣರ ಬದುಕಿನ ಸೆಳೆತ, ವಚನಗಳ ನಿರಂತರ ಅನುಸಂಧಾನ ಕಾರಣವಾಗಿ ಸಿದ್ಧರಾಮನ ಜೀವನ ಕುರಿತಾಗಿ ‘ನೆರಳಾಚೆಯ ಬೆಳಗು’ ಕಾದಂಬರಿ ಬರೆಯುವ ಮೂಲಕ ಮತ್ತೊಂದು ಮೌಲಿಕ ಕೃತಿಯನ್ನು ಕನ್ನಡ ಸಾರಸ್ವತಲೋಕಕ್ಕೆ ನೀಡಿದರು.

‘ನೆನಪಿನ ನೆರಳು’, ‘ನೆಲದ ಮರೆಯ ನಿಧಾನ’, ‘ಶಿಲೆಯೊಳಗಣ ಪಾವಕ’, ‘ಸಿಡಿದ ಕಿಡಿ’, ‘ಬೆಳೆವ ಕುಡಿ’, ‘ಬಯಲ ಮೂರ್ತಿಯಾಗಿ’, ‘ಶೂನ್ಯಸಿಂಹಾಸನ’, ‘ನೆರಳಿನಾಚೆಯ ಬೆಳಕು’ ಎಂಬ ಏಳು ಅಧ್ಯಾಯಗಳಲ್ಲಿ ಸಿದ್ಧರಾಮ ಶಿವಯೋಗಿ ಗಳ ಜೀವನವನ್ನು ಅತ್ಯಂತ ಹೃದಯಂಗಮವಾಗಿ ಚಿತ್ರಿಸಿದ್ದಾರೆ.

ಬಿಜ್ಜಳನ ಮಗ ಸೋವಿದೇವ ಸಿದ್ಧರಾಮನ ಸನ್ನಿಧಿಗೆ ಬಂದು, ಪೂರ್ವವೃತ್ತಾಂತವನ್ನು ಕೇಳಬೇಕೆಂದು ಅಪೇಕ್ಷಿಸುತ್ತಾನೆ. ನೆನಪಿನ ನೆರಳು ವಿಸ್ತಾರವಾಗುತ್ತ ಸಾಗುತ್ತದೆ. ಕಥೆ ನಿರೂಪಣೆಯಲ್ಲಿ ಡಾ. ತಿಪ್ಪೇರುದ್ರಸ್ವಾಮಿ ಅವರು ಹೊಸತನವನ್ನು ತುಂಬಿದ್ದಾರೆ.

ಸೋವಿದೇವನಿಗೆ ಸಿದ್ಧರಾಮನ ಜೀವನ ಕಥನವನ್ನು ನಿರೂಪಿಸಲು ಸಿದ್ಧರಾಮನ ಶಿಷ್ಯರೇ ನಿರೂಪಕರಾಗುತ್ತಾರೆ. ಎರಡನೆಯ ಅಧ್ಯಾಯ ನೆಲದ ಮರೆಯ ನಿಧಾನವನ್ನು ಹಾವಿನಾಳ ಕಲ್ಲಯ್ಯ ಹೇಳಿದರೆ, ಶಿಲೆಯೊಳಗಿನ ಪಾವಕ ಮೂರನೆಯ ಅಧ್ಯಾಯವನ್ನು ಪಶುಪತಿ ನಿರೂಪಿಸುವನು. ‘ಸಿಡಿದ ಕಿಡಿ ಬೆಳೆವ ಕುಡಿ’ ಅಧ್ಯಾಯವನ್ನು ಸಿದ್ಧರಾಮನ ಅಣ್ಣ ಬೊಮ್ಮಣ್ಣ ಹೇಳುತ್ತಾನೆ. ‘ಬಯಲ ಮೂರ್ತಿಯಾಗಿ’ ಐದನೆಯ ಅಧ್ಯಾಯವನ್ನು ಸಿದ್ಧರಾಮನ ಗುರು ರುದ್ರಮುನಿ ಹೇಳುತ್ತಾನೆ. ಆರನೆಯ ಅಧ್ಯಾಯನ ‘ಶೂನ್ಯಸಿಂಹಾಸನ’ ಪ್ರಕರಣವನ್ನು ಸ್ವತಃ ಸಿದ್ಧರಾಮನೇ ಹೇಳುವ ಶೈಲಿ ಅತ್ಯಂತ ಸುಂದರವಾಗಿ ಮೂಡಿಬಂದಿದೆ.

ಸಿದ್ಧರಂತೆ, ಲೌಕಿಕ ಕಾರ್ಯದಲ್ಲಿ ಮಗ್ನನಾಗಿದ್ದ ಸಿದ್ಧರಾಮನನ್ನು ಅಲ್ಲಮಪ್ರಭು ಬಂದು ಕಣ್ತೆರೆಸಿ ಕಲ್ಯಾಣಕ್ಕೆ ಕರೆದುಕೊಂಡು ಬಂದು ಚೆನ್ನಬಸವಣ್ಣನವರಿಂದ ಲಿಂಗದೀಕ್ಷೆಯನ್ನು ಕೊಡಿಸುತ್ತಾನೆ. ಸಿದ್ಧರಾಮನು ಶಿವಯೋಗ ಸ್ಥಲಕ್ಕೆ ಸಲ್ಲುವ ರೀತಿಯಲ್ಲಿ ಅಧ್ಯಾತ್ಮ ಸಾಧನೆ ಮಾಡುತ್ತಾನೆ. ಅಲ್ಲಮ ಪ್ರಭುದೇವರು ಏರಿದ ಶೂನ್ಯಸಿಂಹಾಸನ ಸಿದ್ಧರಾಮನಿಗೆ ಒಲಿಯುತ್ತದೆ. ಈ ಎಲ್ಲ ಘಟನೆಗಳನ್ನು ಡಾ. ತಿಪ್ಪೇರುದ್ರಸ್ವಾಮಿ ಅವರು ಸ್ವಾರಸ್ಯಕರವಾಗಿ ಚಿತ್ರಿಸಿದ್ದಾರೆ.

‘ಸಿದ್ಧರಾಮನ ಚರಿತ್ರೆ ಸಂಕೀರ್ಣವಾದುದು ತುಂಬಾ ಜಟಿಲವಾದುದು. ಸಾಮಾನ್ಯರಿಗೆ, ಪಾಮರರಿಗೆ ಅಗಮ್ಯವಾದುದು. ಅವನ ಹುಟ್ಟು, ಬೆಳವಣಿಗೆ, ಜೀವನ ಭಕ್ತಿ, ಅಸಾಧಾರಣವಾದ ಮಹಾಂತ ಯೌಗಿಕ ನಿಲುವು, ಅನುಭಾವ, ಕೈಕೊಂಡ ಕಾರ್ಯಗಳು, ಎತ್ತಿ ಹಿಡಿದ ಮೌಲ್ಯಗಳು, ಆದರ್ಶಗಳು, ಅದ್ಭುತ ದೈವೀ ಪವಾಡಗಳು ಶ್ರೀಸಾಮಾನ್ಯನ ಕಲ್ಪನೆಗೂ ಮೀರಿದವುಗಳು. ಸಂಪ್ರದಾಯದ ಪೌರಾಣಿಕ ಚೌಕಟ್ಟಿನಿಂದ ಅವನನ್ನು ಬಿಡಿಸಿ, ಅವನ ಅಖಂಡ ವ್ಯಕ್ತಿತ್ವವನ್ನು ಅರಳೆಯಂತೆ ಹಿಂಜಿ, ಅವನ ಆಂತರಿಕ ಜೀವನದ ಸೂಕ್ಷ್ಮಾತಿಸೂಕ್ಷ್ಮಮ ಪದರುಗಳನ್ನು ಬಿಡಿಸಿ, ವೈಚಾರಿಕ ಹಿನ್ನೆಲೆಯಲ್ಲಿ ತೂಗಿನೋಡಿ, ಅರ್ಥೈಸಿನೋಡಿ, ಪಂಡಿತರಿಂದ ಪಾಮರರವರೆಗೂ ಎಲ್ಲರಿಗೂ ಅವನ ದಿವ್ಯವ್ಯಕ್ತಿತ್ವದ ದಿಗ್ದರ್ಶನ ಮಾಡಿಸಿ ಅವನ ಸಾಧನೆ, ಸಿದ್ಧಿ, ಸಾಕ್ಷಾತ್ಕಾರಗಳ ತ್ರೀವೇಣೀ ಸಂಗಮದಲ್ಲಿ ಮಿಂದು ಓದುಗರೆಲ್ಲರಲ್ಲೂ ‘ಧನ್ಯೋಸ್ಮಿ’ ಎಂಬ ಉದ್ಗಾರ ತೆಗೆಯುವಂತೆ ಮಾಡಿದ್ದಾರೆ. ಇದು ಡಾ. ತಿಪ್ಪೇರುದ್ರ ಸ್ವಾಮಿ ಅವರ ಅಭೂತಪೂರ್ವವಾದ ಸಾಧನೆ’ ಎಂದು ಪ್ರೊ. ಸಿ. ಎನ್. ಹಿರೇಮಠ ಅವರು ಹೇಳಿರುವುದು ಔಚಿತ್ಯಪೂರ್ಣವಾಗಿದೆ.

ಒಟ್ಟಾರೆ ಕನ್ನಡ ಕಾದಂಬರಿ ಕ್ಷೇತ್ರಕ್ಕೆ ಡಾ. ತಿಪ್ಪೇರುದ್ರಸ್ವಾಮಿ ಅವರ ಕೊಡುಗೆ ಅಪರೂಪವಾಗಿದೆ. ಸಾರ್ವಕಾಲಿಕವಾಗಿ ನಿಲ್ಲುವ ಮೌಲಿಕ ಕಾದಂಬರಿಗಳನ್ನು ಅವರು ಸಾರಸ್ವತಲೋಕಕ್ಕೆ ನೀಡಿದ್ದಾರೆ. ಅಂತೆಯೆ ಅವರು ಲಿಂಗೈಕ್ಯರಾಗಿ ೨೭ ವರ್ಷಗಳಾದರೂ ಅವರ ಕಾದಂಬರಿಗಳು ಮರುಮುದ್ರಣದ ಮೇಲೆ ಮರುಮುದ್ರಣಗೊಳ್ಳುತ್ತಲೇ ಇವೆ. ಇದೇ ನಿಜವಾದ ಲೇಖಕನ ಸಾರ್ಥಕತೆಯಾಗಿದೆ.

ಇಂಥ ಬೃಹತ್ ಸಂಪುಟವನ್ನು ಪ್ರಕಟಿಸಿದ ನಿಡಸೋಸಿ ದುರದುಂಡೀಶ್ವರ ಮಠದ ಪೂಜ್ಯ ಶ್ರೀ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳವರಿಗೆ, ಸಂಪಾದಿಸಿದ ಡಾ. ಎಚ್.ಟಿ.ಶೈಲಜಾ ಅವರಿಗೆ ವಂದನೆ-ಅಭಿನಂದನೆಗಳು.


ಪ್ರಕಾಶ ಗಿರಿಮಲ್ಲನವರ
ಬೆಳಗಾವಿ

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group