ಹೊಸ ಪುಸ್ತಕ ಓದು: ಮಹಾವೃಕ್ಷ

Must Read

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...

ಹೆಣ್ಣು ಮಕ್ಕಳು ಪೌಷ್ಠಿಕ ಆಹಾರ ಸೇವನೆ ಮಾಡಬೇಕು – ಡಾ.ನಯನಾ ಭಸ್ಮೇ

ಸವದತ್ತಿ - “ಹೆಣ್ಣು ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಸದೃಢವಾಗಿರಬೇಕು ಅವರು ಹದಿ ಹರೆಯದ ವಯಸ್ಸಿಗೆ ಬಂದಾಗ ಅವರಲ್ಲಿ ನೈಸರ್ಗಿಕವಾದ ಬದಲಾವಣೆಗಳು ಆಗುತ್ತವೆ ಅಂತಹ ಸಂದರ್ಭದಲ್ಲಿಯೂ...

ಪ್ರೊ.ಅಲಕಾ ಕುರಣೆ ಯವರಿಗೆ ‘ ಶಿಕ್ಷಕ ಶ್ರೀ ‘ ರಾಜ್ಯ ಮಟ್ಟದ ಪ್ರಶಸ್ತಿ

ಬೆಳಗಾವಿ: ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ, ಧಾರವಾಡ ಬೆಂಗಳೂರು ಘಟಕದಿಂದ ನೀಡಲಾಗುವ ರಾಜ್ಯ ಮಟ್ಟದ ಶಿಕ್ಷಕ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಳಗಾವಿಯ...

ಮಹಾವೃಕ್ಷ

ಮಹಾವೃಕ್ಷ : ಕೃತಿ ಪರಿಚಯ

ಮಹಾವೃಕ್ಷ : ಶ್ರೀ ಶಿವಬಸವ ಸ್ವಾಮಿಗಳವರ ಜೀವನ ಕುರಿತಾದ ಕಾದಂಬರಿ

ಲೇಖಕರು : ಪ್ರೊ. ಬಿ. ಆರ್. ಪೋಲೀಸ್‌ಪಾಟೀಲ

- Advertisement -

ಪ್ರಕಾಶನ : ವಚನ ಅಧ್ಯಯನ ಕೇಂದ್ರ, ಬೆಳಗಾವಿ

ಪುಟ ೩೪೮,

ಬೆಲೆ : ೩೦೦


ನಾಗನೂರು ರುದ್ರಾಕ್ಷಿಮಠದ ಏಳನೆಯ ಪೀಠಾಧಿಪತಿಗಳಾಗಿದ್ದ ಪರಮಪೂಜ್ಯ ಲಿಂ. ಡಾ. ಶಿವಬಸವ ಮಹಾಸ್ವಾಮಿಗಳು ಬೆಳಗಾವಿಯನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡು ಶೈಕ್ಷಣಿಕ-ಧಾರ್ಮಿಕ-ಸಾಹಿತ್ಯಿಕ-ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧಿಸಿದ ಸಾಧನೆ ಅನೂಹ್ಯವಾದುದು.

ಬಡತನ-ಅನಕ್ಷರತೆಯಿಂದ ಬಳಲುತ್ತಿದ್ದ ಲಿಂಗಾಯತ ಸಮುದಾಯಕ್ಕೆ ಬೆಳಕು ನೀಡಿದ ಪುಣ್ಯಪುರುಷರು. ಕಾಯಕಯೋಗಿ, ಮಹಾಪ್ರಸಾದಿ, ತ್ರಿವಿಧ ದಾಸೋಹಿ ಎನಿಸಿಕೊಂಡವರು. ಪೂಜ್ಯರು ೧೦೫ ವರುಷಗಳ ಲಿಂಗವಿಡಿದು, ಲಿಂಗಸಿದ್ಧಿಯ ಬದುಕನ್ನು ಸಾಗಿಸಿದವರು. ಭೂಮಿ ತನಗವಸಾನಂ, ತಾನುಭೂಮಿಗವಸಾನಂ ಎಂಬಂತೆ ಬಾಳಿದವರು.

ಸಾವಿರ ಸಾವಿರ ಬಡ ಮಕ್ಕಳಿಗೆ ಅನ್ನ-ಆಶ್ರಯ ನೀಡಿ, ಅವರ ಬದುಕಿಗೆ ಬೆಳಕು ನೀಡಿದವರು. ಇಂಥ ಪೂಜ್ಯರ ಬದುಕನ್ನು ಕುರಿತು ಅನೇಕ ಜೀವನ ಚರಿತ್ರೆಗಳು ಪ್ರಕಟಗೊಂಡಿದ್ದವು. ಡಾ. ಆರ್. ಸಿ. ಹಿರೇಮಠ, ಸ. ಜ. ನಾಗಲೋಟಿಮಠ, ವಿ. ಜಿ. ಶೀಲವಂತರ, ವಿ. ಎಸ್. ಕಂಬಿ, ಬಿ. ಎಸ್. ಪಾಟೀಲ, ಪ್ರಕಾಶ ಗಿರಿಮಲ್ಲನವರ ಮೊದಲಾದವರು ಬರೆದ ಜೀವನ ಚರಿತ್ರೆಗಳು ಶ್ರೀಗಳ ಸಾಧನೆಯ ವಿವರಗಳನ್ನು ತಿಳಿಸುವ ಮಹತ್ವದ ಆಕರಗಳಾಗಿವೆ. ಆದರೆ ಕಾದಂಬರಿ ಮಾದರಿಯಲ್ಲಿ ಶ್ರೀಗಳ ಚಾರಿತ್ರಿಕ ಜೀವನದ ವಿವರಗಳನ್ನು ಮೊಟ್ಟಮೊದಲು ಅತ್ಯಂತ ರಸವತ್ತಾಗಿ ಕಟ್ಟಿಕೊಟ್ಟವರು ಬಿ. ಆರ್. ಪೋಲೀಸ್‌ಪಾಟೀಲ ಅವರು.

‘ಮಹಾವೃಕ್ಷ’ ಕಾದಂಬರಿಯಲ್ಲಿ ಬಿ. ಎಸ್. ಪೋಲೀಸ್‌ಪಾಟೀಲರು ಶ್ರೀ ಶಿವಬಸವ ಸ್ವಾಮಿಗಳವರ ಜೀವನದ ಅನೇಕ ಮಹತ್ವದ ಘಟನೆಗಳನ್ನು ಅತ್ಯಂತ ಕರಾರುವಕ್ಕಾಗಿ ಚಿತ್ರಿಸಿದ್ದಾರೆ. ಸಮಕಾಲೀನ ವ್ಯಕ್ತಿಯೊಬ್ಬರ ಜೀವನ ಕುರಿತು ಕಾದಂಬರಿ ರೂಪದಲ್ಲಿ ಕಟ್ಟಿಕೊಡುವುದು ತುಂಬ ಕಷ್ಟದಾಯಕ. ಅವರ ವ್ಯಕ್ತಿತ್ವವನ್ನು ಹತ್ತಿರದಿಂದ ಕಂಡವರು ಇನ್ನೂ ಬಹಳಷ್ಟು ಜನ ಇದ್ದಾಗಲೇ ವಸ್ತುನಿಷ್ಠವಾದ ಕೃತಿಯನ್ನು ಬರೆಯುವುದು ಸಾಹಸದ ಕೆಲಸ. ಲೇಖಕರು ಈ ಕಾರ್ಯದಲ್ಲಿ ಅತ್ಯಂತ ಯಶಸ್ವಿಯಾಗಿದ್ದಾರೆ. ಪೂಜ್ಯರನ್ನು ದೈವತ್ವದ ಪಟ್ಟಕ್ಕೆ ಏರಿಸದೇ, ಸಾಮಾನ್ಯ ವ್ಯಕ್ತಿಯೊಬ್ಬ ಜನಸಾಮಾನ್ಯರ ನಡುವೆ ಇದ್ದು, ಅವರ ಕಷ್ಟಸುಖಗಳಿಗೆ ಸ್ಪಂದಿಸಿ, ಮಾನವೀಯತೆಯ ಮಹಾಸಂತನಾದ ಕಥೆಯನ್ನು ಎಳೆಎಳೆಯಾಗಿ ನಿರೂಪಿಸಿದ್ದಾರೆ.

ಪೂಜ್ಯ ಶ್ರೀಗಳು ನೂರೈದು ವರ್ಷ ಬದುಕಿದವರು. ಈ ಕಾರಣಕ್ಕಾಗಿ ಈ ಕಾದಂಬರಿಯಲ್ಲಿ ನೂರೈದು ಅಧ್ಯಾಯಗಳನ್ನು ಮಾಡಿಕೊಂಡಿದ್ದಾರೆ. ಪ್ರತಿಯೊಂದು ಅಧ್ಯಾಯದಲ್ಲಿ ಶ್ರೀಗಳೇ ತಮ್ಮ ಬದುಕಿನ ಘಟನೆಗಳನ್ನು ಪ್ರಸ್ತಾಪಿಸುತ್ತ ಹೋಗುತ್ತಾರೆ. ಉತ್ಪ್ರೇಕ್ಷೆಗೆ ಒಳಗಾಗದೆ, ವಾಸ್ತವ ನೆಲೆಯಲ್ಲಿ ಜೀವನದ ಯಾತ್ರೆ ಸಾಗಿ ಬಂದ ರೀತಿ ರೋಚಕವಾಗಿದೆ. ‘ಆತ್ಮಸ್ತುತಿ-ಪರನಿಂದೆ’ಯ ಮಿತಿಯನ್ನು ದಾಟಿ, ಆತ್ಮಾವಲೋಕನದ ಮಾದರಿಯನ್ನು ಇಲ್ಲಿ ಕಾಣಬಹುದು. ಗೌರವ-ಸಂಪತ್ತು-ಪದವಿಗಳನ್ನು ಕೀರ್ತಿಶನಿಯೆಂದು ಭಾವಿಸಿದ ಶಿವಬಸವ ಶ್ರೀಗಳು ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೆ ಸಮಚಿತ್ತದಿಂದ ಭಾವಿಸಿ, ಬದುಕಿದವರು. ತಮ್ಮ ಬದುಕಿನ ಕಥೆಯನ್ನು ನಮ್ಮೆದುರು ಕುಳಿತು ಕಥೆಮಾಡಿ ಹೇಳುತ್ತಿದ್ದಾರೆನೋ ಎನ್ನುವಷ್ಟರ ಮಟ್ಟಿಗೆ ಆತ್ಮೀಯತೆಯ ಬರವಣಿಗೆ ಇಲ್ಲಿದೆ.

ಬಿ. ಆರ್. ಪೋಲೀಸ್‌ಪಾಟೀಲ ಅವರು ಮೂಲತಃ ಕವಿ. ನಾಟಕಕಾರರು. ಜನಪದ ಪರಂಪರೆಯ ಕಾವ್ಯ-ಲಾವಣಿಗಳನ್ನು ಆಧುನಿಕ ದಿನಮಾನದಲ್ಲಿಯೂ ಜನಪ್ರಿಯಗೊಳಿಸಿದವರು. ನೂರು ನಾಟಕಗಳನ್ನು ರಚಿಸಿದ ಶ್ರೇಯಸ್ಸು ಅವರದು. ಅನೇಕ ಮಹಾತ್ಮರನ್ನು ಹತ್ತಿರದಿಂದ ಕಂಡವರು. ಸಾಹಿತ್ಯ ಕ್ಷೇತ್ರದಲ್ಲಿ ಅನನ್ಯವಾದ ಸಾಧನೆ ಮಾಡಿದವರು. ಇಂಥ ಪ್ರಬುದ್ಧ ಬರಹಗಾರರ ಸಿದ್ಧಹಸ್ತದಲ್ಲಿ ‘ಮಹಾವೃಕ್ಷ’ ತುಂಬ ಅರ್ಥಪೂರ್ಣವಾಗಿ ಅರಳಿನಿಂತಿದೆ.

ಲೇಖಕರು ಕೇವಲ ಪಠ್ಯಕೇಂದ್ರೀತ ಸಾಹಿತ್ಯವನ್ನು ಗಮನಿಸಿ ಬರೆಯದೆ, ಕ್ಷೇತ್ರಕಾರ್ಯವನ್ನು ಮಾಡಿದ್ದಾರೆ. ಶ್ರೀಗಳ ಕಾರ್ಯಕ್ಷೇತ್ರಗಳಾದ ನಾಗನೂರು, ಶಿವಯೋಗಮಂದಿರ, ಬೆಳಗಾವಿ, ಹುದಲಿ, ಘಟಪ್ರಭಾ ಮೊದಲಾದ ಊರುಗಳನ್ನು ಸುತ್ತಿದ್ದಾರೆ, ಹತ್ತಾರು ಜನರನ್ನು ಸಂಪರ್ಕಿಸಿದ್ದಾರೆ. ಶ್ರೀಗಳ ವ್ಯಕ್ತಿತ್ವವನ್ನು ಅವರು ಪರಿಭಾವಿಸಿದ ಪರಿಯನ್ನು, ತಮ್ಮ ಸತ್ಯದ ಬೆಳಕಿನ ಲೇಖನಿಯಿಂದ ಉಜ್ಜಿ ನೋಡಿದ್ದಾರೆ. ಹೀಗಾಗಿ ಇದೊಂದು ಚಾರಿತ್ರಿಕ ಸಮಕಾಲೀನ ಸಂದರ್ಭದ ಮಹತ್ವದ ಕಾದಂಬರಿಯೆAದು ಹೇಳಬೇಕು.

“ಶ್ರೀಗಳವರ ಜೀವನದ ಹಲವಾರು ಸಂಗತಿಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಈ ಕಾದಂಬರಿಯಲ್ಲಿ ಸಾಮಾಜಿಕ, ಶೈಕ್ಷಣಿಕ, ಜನಹಿತದ ಅನೇಕ ಕಾರ್ಯಗಳಿರುವಂತೆ ಇತಿಹಾಸದಲ್ಲಿ ದಾಖಲೆಯಾಗಿ ಉಳಿಯುವ, ಕನ್ನಡ ಕುಲಕೋಟಿ ಸದಾ ಸ್ಮರಿಸುವಂಥ ಹಲವು ಸಂಗತಿಗಳೂ ಇವೆ. ಇದು ಕಾದಂಬರಿಯೂ ಹೌದು, ಕಾದಂಬರಿ ರೂಪದ ಇತಿಹಾಸವೂ ಅಹುದು. ತುಂಬ ಪರಿಶ್ರಮ ವಹಿಸಿ ಈ ‘ಮಹಾವೃಕ್ಷ’ವನ್ನು ಸೃಷ್ಟಿಸಿದ ಪ್ರಾ. ಬಿ. ಆರ್. ಪೋಲೀಸ್‌ಪಾಟೀಲರು ಕನ್ನಡಿಗರ ಕೃತಜ್ಞತೆಗೆ ಪಾತ್ರರು” ಎಂದು ಮುನ್ನುಡಿ ಬರೆದ ಖ್ಯಾತ ವಿದ್ವಾಂಸರಾದ ಡಾ. ಗುರುಲಿಂಗ ಕಾಪಸೆ ಅವರು ಹೇಳುವ ಮಾತುಗಳು ಕೃತಿಯ ಮೌಲ್ಯವನ್ನು ತಿಳಿಸುತ್ತವೆ.

ಪೂಜ್ಯ ಶ್ರೀ ಶಿವಬಸವ ಮಹಾಸ್ವಾಮಿಗಳವರ ನೂರೈದು ವರ್ಷಗಳ ಲೋಕಜೀವನದ ಘಟನೆಗಳನ್ನು ಹೃದಯಸ್ಪರ್ಶಿಯಾಗಿ ಚಿತ್ರಿಸಿದ್ದಾರೆ. ಭಿಕ್ಷೆಗೆ ಹೋದಾಗ ಅನುಭವಿಸಿದ ನೋವು, ಗಾಂಧೀಜಿಯವರ ಭೇಟಿ, ಜೈನಧರ್ಮದ ಸ್ವಾಮಿಗಳು ಶ್ರೀಗಳನ್ನು ಭೇಟಿಯಾದಾಗ ನಡೆದುಕೊಂಡ ರೀತಿ, ರಾಷ್ಟ್ರನಾಯಕ ನಿಜಲಿಂಗಪ್ಪ, ವೀರೇಂದ್ರ ಪಾಟೀಲರಂಥ ಪರಿಶುದ್ಧ ರಾಜಕಾರಣಿಗಳ ಒಡನಾಟ, ಭಾರತದ ಸ್ವಾತಂತ್ಯ, ಕರ್ನಾಟಕದ ಏಕೀಕರಣದ ಸಂದರ್ಭದಲ್ಲಿ ಶ್ರೀಗಳು ನಿರ್ವಹಿಸಿದ ಪಾತ್ರ ಮೊದಲಾದವುಗಳ ಕುರಿತು ಈ ಕೃತಿ ಚಾರಿತ್ರಿಕ ಸಂಗತಿಗಳನ್ನು ತಿಳಿಸುತ್ತದೆ.

ಪೂಜ್ಯ ಡಾ. ಶಿವಬಸವ ಮಹಾಸ್ವಾಮಿಗಳವರ ಘನವ್ಯಕ್ತಿತ್ವವನ್ನು ಅತ್ಯಂತ ಸರಳವಾಗಿ ಸುಲಲಿತವಾಗಿ ಕಾದಂಬರಿ ರೂಪದಲ್ಲಿ ನಿರೂಪಿಸಿದ ಪ್ರಾ. ಬಿ. ಆರ್. ಪೋಲೀಸ್‌ಪಾಟೀಲ ಅವರು ನಿಜಕ್ಕೂ ಅಭಿನಂದನಾರ್ಹರು.


ಪ್ರಕಾಶ ಗಿರಿಮಲ್ಲನವರ
ಬೆಳಗಾವಿ

- Advertisement -
- Advertisement -

Latest News

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...
- Advertisement -

More Articles Like This

- Advertisement -
close
error: Content is protected !!