ಹೊಸ ಪುಸ್ತಕ ಓದು: ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳು (ಪಿಎಚ್.ಡಿ. ಮಹಾಪ್ರಬಂಧ)

Must Read

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...

ನದಿ ಸ್ವಚ್ಛತೆಗೆ ಚಾಲನೆ ನೀಡಿದ ಈರಣ್ಣ ಕಡಾಡಿ

ಗೋಕಾಕ: ಪ್ರಕೃತಿ ಉಚಿತವಾಗಿ ಕೊಟ್ಟಿರುವ ನೀರನ್ನು, ಗಿಡ ಮರಗಳು ಉಚಿತವಾಗಿ ಕೊಟ್ಟಿರುವ ಆಮ್ಲಜನಕವನ್ನು ನಾಶ ಮಾಡುವ ಮೂಲಕ ಸ್ವಯಂಕೃತ ಅಪರಾಧಗೈದ ನಾವೆಲ್ಲ ನದಿ ಸ್ವಚ್ಛತೆ ಮಾಡುವ...

ಮುಷ್ಕರ ಮತ್ತು ಆರ್ಥಿಕ ಪರಿಸ್ಥಿತಿ

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರಚಲಿತದಲ್ಲಿರುವ ಒಂದು ವಿದ್ಯಮಾನಗಳಲ್ಲಿ ಮುಷ್ಕರ ಕೂಡ ಒಂದು. ಬಂದ್ ಬಂದ್ ಬಂದ್.ಏನಿದು?ಏಕೆ ಮಾಡಬೇಕು? ಇದರಿಂದ ಆಗುವ ಬದಲಾವಣೆಗಳೇನು? ಯಾರಿಗೆ ಲಾಭ?...

ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳು (ಪಿಎಚ್.ಡಿ. ಮಹಾಪ್ರಬಂಧ)

ಲೇಖಕರು : ಡಾ. ನಾಗರಾಜ ಮುದಕಪ್ಪನವರ
ಪ್ರಕಾಶಕರು : ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ, ೨೦೨೧
ಬೆಲೆ : ರೂ. ೫೦೦
(ಪುಸ್ತಕಕ್ಕಾಗಿ ಸಂಪರ್ಕಿಸಿ : ೯೪೪೮೧೪೪೪೧೯)


೧೨ನೇ ಶತಮಾನದಲ್ಲಿ ಬಸವಣ್ಣನವರಿಂದ ಅಸ್ತಿತ್ವಕ್ಕೆ ಬಂದ ಶೂನ್ಯಪೀಠದ ಮೊದಲ ಅಧಿಪತಿಯಾದವರು ಶ್ರೀಮದಲ್ಲಮಪ್ರಭುದೇವರು. ಇವರ ತರುವಾಯ ಚನ್ನಬಸವಣ್ಣನವರು, ಸಿದ್ಧರಾಮರು ಈ ಶೂನ್ಯಪೀಠವನ್ನು ಆರೋಹಣ ಮಾಡಿದರು. ಅಷ್ಟರಲ್ಲಿ ಕಲ್ಯಾಣಕ್ರಾಂತಿ ಜರುಗಿ, ಶರಣ ಸಂಕುಲ ಚೆಲ್ಲಾಪಿಲ್ಲಿಯಾಯಿತು. ಶೂನ್ಯಪೀಠವು ನಿಜವಾದ ವಾರಸುದಾರರಿಲ್ಲದೆ ಅನಾಥಸ್ಥಿತಿಯನ್ನು ಅನುಭವಿಸುತ್ತಿತ್ತು. ಇಂಥ ಸಂದರ್ಭದಲ್ಲಿ ದ್ವಿತೀಯ ಅಲ್ಲಮ ಎಂದು ಖ್ಯಾತರಾದ ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳು ಈ ಶೂನ್ಯಪೀಠವನ್ನು ಆರೋಹಣ ಮಾಡಿ, ಬಸವಾದಿ ಶಿವಶರಣರ ತತ್ವ ಸಿದ್ಧಾಂತಗಳನ್ನು ಪುನರುತ್ಥಾನಗೊಳಿಸುವ ಮಹಾಮಣಿಹ ಪೂರೈಸಿದರು. ತಮ್ಮ ಶಿಷ್ಯ-ಪ್ರಶಿಷ್ಯ ಪರಂಪರೆಯ ಮೂಲಕ ವಿರಕ್ತ ಸಂಪ್ರದಾಯವನ್ನು ಜೀವಂತಗೊಳಿಸಿದ ಕೀರ್ತಿ ಸಿದ್ಧಲಿಂಗ ಯತಿಗಳಿಗೆ ಸಲ್ಲುತ್ತದೆ. ಇಂಥ ಮಹಾ ಯೋಗಿಗಳ ಜೀವನ ಸಾಧನೆಯ ಸಮಗ್ರ ವಿವರಗಳನ್ನು ತಿಳಿಸುವ ಒಂದು ಮಹತ್ವದ ಸಂಶೋಧನಾ ಕೃತಿಯಾಗಿ ರೂಪುಗೊಂಡಿದೆ ‘ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳು’.

ನಾಗರಾಜ ಮುದಕಪ್ಪನವರ ಅವರು ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್. ಸಿ. ಹಿರೇಮಠ ಕನ್ನಡ ಅಧ್ಯಯನಪೀಠಕ್ಕೆ ಸಲ್ಲಿಸಿದ ಪ್ರಸ್ತುತ ಮಹಾಪ್ರಬಂಧವು ಏಳು ಅಧ್ಯಾಯಗಳನ್ನು ಒಳಗೊಂಡಿದೆ. ಪ್ರಾರಂಭದಲ್ಲಿ ಅಧ್ಯಯನದ ಉದ್ದೇಶ-ವ್ಯಾಪ್ತಿ ಮತ್ತು ಸ್ವರೂಪವನ್ನು ತಿಳಿಸುತ್ತ ಮಹಾಪ್ರಬಂಧದ ಕೃತಿಶಿಲ್ಪವನ್ನು ನಿರೂಪಿಸಿದ್ದಾರೆ.

- Advertisement -

ಮೊದಲನೆಯ ಅಧ್ಯಾಯದಲ್ಲಿ ‘ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಸಮಕಾಲೀನ ಪರಿಸರ’ ಎಂಬ ವಿಷಯ ಕುರಿತು ವಿವೇಚನೆ ಮಾಡಿದ್ದಾರೆ. ಸಿದ್ಧಲಿಂಗ ಶಿವಯೋಗಿಗಳ ಕಾಲನಿರ್ಣಯ, ಯುಗಪರಿಚಯ, ರಾಜಕೀಯ ಸ್ಥಿತಿ, ಧಾರ್ಮಿಕ ಸ್ಥಿತಿ, ಸಾಹಿತ್ಯಿಕ ಸ್ಥಿತಿ ಏನಿತ್ತು ಎಂಬುದನ್ನು ಸಮಗ್ರವಾಗಿ ಪರಿಶೀಲಿಸಿದ್ದಾರೆ. ಶಿವಯೋಗಿಗಳ ಕಾಲ ನಿರ್ಣಯ ಕುರಿತು ಪೂರ್ವಸೂರಿಗಳ ಅಧ್ಯಯನವನ್ನೆಲ್ಲ ಬಳಸಿಕೊಂಡಿದ್ದಾರೆ.

ಎರಡನೆಯ ಅಧ್ಯಾಯದಲ್ಲಿ ‘ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಜೀವನ, ಸಾಧನೆ-ಸಿದ್ಧಿ’ಗಳನ್ನು ಕುರಿತು ವಿಸ್ತೃತವಾಗಿ ಚರ್ಚಿಸಿದ್ದಾರೆ. ಈ ಮಹಾಪ್ರಬಂಧದ ಕೇಂದ್ರ ಅಧ್ಯಾಯವೇ ಇದಾಗಿದೆ. ತೋಂಟದ ಸಿದ್ಧಲಿಂಗ ಯತಿಗಳ ಕುರಿತು ಕಾವ್ಯ-ಪುರಾಣಗಳನ್ನು ಆಧರಿಸಿ ಕೆಲವು ವಿಚಾರಗಳನ್ನು ಲೇಖಕರು ಪ್ರಸ್ತಾಪಿಸಿದ್ದಾರೆ. ಸಿದ್ಧಲಿಂಗರ ನಿಜವಾದ ತಂದೆ ತಾಯಿಗಳ ಹೆಸರನ್ನು ಕೇವಲ ಸಿದ್ಧಲಿಂಗೇಶ್ವರ ಸಾಂಗತ್ಯದಲ್ಲಿ ಉಲ್ಲೇಖವಾಗಿರುವುದನ್ನು ಗುರುತಿಸಿದ್ದಾರೆ.

ಮೂರು ಮತ್ತು ನಾಲ್ಕನೆಯ ಅಧ್ಯಾಯದಲ್ಲಿ ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳ ವಚನಗಳ ವಿಶ್ಲೇಷಣೆಗೆ ಮೀಸಲಿಟ್ಟಿದ್ದಾರೆ. ೭೦೧ ವಚನಗಳಲ್ಲಿ ಅಡಕವಾಗಿರುವ ಶಿವಯೋಗ, ಆತ್ಮನಿವೇದನ, ಬೆಡಗಿನ ವಚನ, ಲಿಂಗಾಯತ ಸ್ಥಲವಿವೇಚನೆ, ಸಮಾಜ ವಿಡಂಬನೆ ಮತ್ತು ಸಾಹಿತ್ಯಿಕ ಅಂಶಗಳನ್ನು ಕುರಿತು ಇಲ್ಲಿ ವಿವರವಾಗಿ ವಿಶ್ಲೇಷಿಸಿದ್ದಾರೆ.

ಅಧ್ಯಾಯ ಐದರಲ್ಲಿ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಮೇಲೆ ಬಸವಾದಿ ಶರಣರ ಪ್ರಭಾವ ಹಾಗೂ ಸಿದ್ಧಲಿಂಗ ಶಿವಯೋಗಿಗಳ ವಚನಗಳ ಸ್ವರೂಪ ಕುರಿತು ವಿವೇಚನೆ ಇದೆ. ಶರಣರ ವಚನಗಳಲ್ಲಿ ಮತ್ತು ಸಿದ್ಧಲಿಂಗರ ವಚನಗಳಲ್ಲಿ ಸಮಾನ ಮನಸ್ಕ ಧೋರಣೆಯ ಅಂಶಗಳಿರುವುದನ್ನು ಲೇಖಕರು ತೌಲನಿಕವಾಗಿ ವಿವರಿಸಿದ್ದಾರೆ.

ಆರನೆಯ ಅಧ್ಯಾಯದಲ್ಲಿ ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳನ್ನು ಕುರಿತು ಇರುವ ಸಾಹಿತ್ಯದ ವ್ಯಾಖ್ಯಾನ ಮಾಡಲಾಗಿದೆ. ಸಿದ್ಧಲಿಂಗ ಯತಿಗಳ ಕುರಿತು ಇರುವ ಶಾಸನಗಳು, ಪುರಾಣಗಳು, ಸಾಂಗತ್ಯಗಳು, ರಗಳೆ, ಶತಕಗಳು, ಲಘು ಕೃತಿಗಳು, ಬಿಡಿ ಲೇಖನಗಳು, ಲಾವಣಿ ಹಾಡುಗಳು, ಭಕ್ತಿಗೀತೆಗಳು, ಚಲನ ಚಿತ್ರ ಇವೆಲ್ಲವುಗಳನ್ನು ವಿಶ್ಲೇಷಣೆಗೆ ಒಳಗು ಮಾಡಿದ್ದಾರೆ.

ಏಳನೆಯ ಅಧ್ಯಾಯ ಸಮಾರೋಪದಲ್ಲಿ ಅಧ್ಯಯನದ ಫಲಿತಗಳನ್ನು ನೀಡಿದ್ದಾರೆ. ಲೇಖಕರು ಮನಸ್ಸು ಮಾಡಿದ್ದರೆ ಇನ್ನೂ ಚೆನ್ನಾಗಿ ಗಟ್ಟಿಯಾಗಿ ಬರಹವನ್ನು ಕಟ್ಟಿಕೊಡಬಹುದಿತ್ತು. ಭಾಷೆಯ ಬಳಕೆಯಲ್ಲಿ ಕೆಲವು ನೂನ್ಯತೆಗಳನ್ನು ಗಮನಿಸಬಹುದು. ವಿಷಯ ವಿಶ್ಲೇಷಣೆಯಲ್ಲಿ ಇನ್ನಷ್ಟು ಆಳಕ್ಕಿಳಿಯಬೇಕಾಗಿತ್ತು ಎಂದೆನಿಸುತ್ತದೆ.

ಲೇಖಕರು ಪಿಎಚ್.ಡಿ. ಅಧ್ಯಯನ ಮಾಡಿದ ಕಾಲಕ್ಕೆ ಅವರಿಗೆ ದೊರೆತ ಸೀಮಿತ ಆಕರಗಳನ್ನು ಬಳಸಿಕೊಂಡು ಮಹಾಪ್ರಬಂಧ ರಚಿಸಿದ್ದರು. ಈಗ ಪ್ರಕಟಣೆಯ ಹಂತದಲ್ಲಿ ತೋಂಟದಾರ್ಯ ಸಂಸ್ಥಾನಮಠದ ಪೀಠಪರಂಪರೆಯ ಬಗ್ಗೆ ಕೆಲವು ಮಹತ್ವದ ಲೇಖನಗಳನ್ನು ಅನುಬಂಧದಲ್ಲಿ ನೀಡಿದ್ದಾರೆ. ಡಾ. ಸುರೇಶ ಹನಗಂಡಿ ಅವರ ‘ಬಯಲ ಬೆಳಕು’ ಗ್ರಂಥದ ಆಯ್ದಭಾಗ, ನಾನು ಸಂಪಾದಿಸಿದ ಲಿಂಗಾಯತ ಸಂಸ್ಕೃತಿ ಕೃತಿಯಲ್ಲಿಯ ಡಾ. ಕಲಬುರ್ಗಿ ಅವರ ಲೇಖನಗಳನ್ನು ಇಲ್ಲಿ ಬಳಸಿಕೊಂಡಿದ್ದಾರೆ.

ಒಟ್ಟಾರೆ, ಸಿದ್ಧಲಿಂಗ ಯತಿಗಳ ಕುರಿತು ಒಂದು ಮಹತ್ವದ ಪಿಎಚ್.ಡಿ. ಮಹಾಪ್ರಬಂಧ ಅಚ್ಚುಕಟ್ಟಾಗಿ ಮುದ್ರಣವಾಗಿದೆ. ಈ ಕೃತಿಯನ್ನು ರಚಿಸಿದ ನಾಗರಾಜ ಮುದಕಪ್ಪನವರ ಅವರಿಗೆ ಪ್ರಕಟಿಸಿದ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಪ್ರಸಾರಂಗಕ್ಕೆ ಅಭಿನಂದನೆಗಳು.


ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: ೯೯೦೨೧೩೦೦೪೧

- Advertisement -
- Advertisement -

Latest News

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...
- Advertisement -

More Articles Like This

- Advertisement -
close
error: Content is protected !!