spot_img
spot_img

ಹೊಸ ಪುಸ್ತಕ ಓದು: ಅಲ್ಲಮಪ್ರಭು

Must Read

spot_img

ಅಲ್ಲಮಪ್ರಭು

- Advertisement -

ಲೇಖಕರು : ಪ್ರೊ. ಚಂದ್ರಶೇಖರ ವಸ್ತ್ರದ
ಪ್ರಕಾಶಕರು : ಪ್ರಭು ಗ್ರಾಫಿಕ್ಸ್, ಗದಗ, ೨೦೨೧
ಬೆಲೆ : ೨೫ ರೂ.
(ಲೇಖಕರ ಸಂಪರ್ಕ ನಂ. ೯೪೪೮೬೭೭೪೩೪, ೯೪೪೮೧೮೫೮೪೧)


‘ಅಲ್ಲಮಪ್ರಭು’ ೧೨ನೇ ಶತಮಾನದ ಶರಣ ಸಂದೋಹದ ಒಂದು ಅನನ್ಯ ಬೆರಗು-ಬೆಡಗು-ಬೆಳಗು. ಅಲ್ಲಮನ ವ್ಯೋಮಾತೀತ ಸಾಧನೆ ಪ್ರಾಯಶಃ ಇಡೀ ಭಾರತದಲ್ಲಿಯೇ ಯಾವ ಅನುಭಾವಿಗೂ ಸಾಧ್ಯವಾಗಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು. ಅಲ್ಲಮನ ಕುರಿತು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನೂರಾರು ಕೃತಿಗಳು ರಚನೆಗೊಂಡಿವೆ. ೧೫-೧೬ನೇ ಶತಮಾನದಲ್ಲಿ ಶೂನ್ಯಸಂಪಾದನೆ, ಪ್ರಭುಲಿಂಗಲೀಲೆ, ಪ್ರಭುದೇವರ ಪುರಾಣ ಮೊದಲಾದ ಕೃತಿಗಳು ರಚನೆಗೊಂಡಿವೆ.

ಆಧುನಿಕ ಯುಗದಲ್ಲಿ ಮೊಟ್ಟ ಮೊದಲು ಸಿದ್ಧರಾಮಪ್ಪ ಪಾವಟೆ ಅವರು ‘ಶ್ರೀಮದಲ್ಲಮವ್ಯೋಮ’ ಎಂಬ ಕೃತಿಯನ್ನು ರಚಿಸಿದ್ದರು. ಜ.ಚ.ನಿ.ಯವರು ಆರು ದಶಕಗಳ ಹಿಂದೆ ‘ಅಲ್ಲಯ್ಯನ ಬೆಳಕು’ ಎಂಬ ಮೌಲಿಕ ಕೃತಿಯನ್ನು ಬರೆದಿದ್ದರು.

- Advertisement -

ಇಷ್ಟೇ ಅಲ್ಲದೆ ನೂರಾರು ಲೇಖಕರು ಅಲ್ಲಮನ ಚರಿತ್ರೆ, ವಚನಗಳ ಅನುಸಂಧಾನ ಮಾಡುತ್ತಲೇ ಬಂದಿದ್ದಾರೆ. ಅಲ್ಲಮನ ಕುರಿತು ಬರೆದಷ್ಟೂ ಹೊಸ ಹೊಳಹುಗಳು ದೊರೆಯುತ್ತಲೇ ಇರುತ್ತವೆ. ಅಂತೆಯೆ ಇತ್ತೀಚೆಗೆ ಪ್ರೊ. ಚಂದ್ರಶೇಖರ ವಸ್ತ್ರದ ಅವರು ರಚಿಸಿದ ‘ಅಲ್ಲಮಪ್ರಭು’ ಒಂದು ವಿನೂತನ ಕೃತಿಯಾಗಿದೆ.

ಪ್ರೊ. ಚಂದ್ರಶೇಖರ ವಸ್ತ್ರದ ಅವರು ವ್ಯಕ್ತಿಚಿತ್ರಗಳನ್ನು ಕಟ್ಟಿಕೊಡುವಲ್ಲಿ ಪರಿಣತರು. ಈ ಹಿಂದೆ ‘ಮಹಾಮಾನವತಾವಾದಿ ಬಸವಣ್ಣನವರು’ ಮತ್ತು ‘ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ’ ಎಂಬ ಚರಿತ್ರೆಗಳನ್ನು ರಚಿಸಿದ್ದರು. ಶರಣ ಚರಿತ್ರ ಕಥಾ ಮಾಲಿಕೆಯಲ್ಲಿ ಈಗ ಮೂರನೆಯ ಕೃತಿಯಾಗಿ ‘ಅಲ್ಲಮಪ್ರಭು’ ಪ್ರಕಟಗೊಂಡಿದೆ.

ಗದುಗಿನ ಪ್ರಭು ಗ್ರಾಫಿಕ್ಸ್ ಮಾಲೀಕರಾದ ಶಾಂತವೀರಪ್ಪ ಜಂಗಮನಿಯವರು ಅಲ್ಲಮನ ಪರಮ ಭಕ್ತರು. ಅಲ್ಲಮ ಬಯಲ ಭಂಡಾರಿಯಾಗಿ ಲೋಕಸಂಚಾರ ಮಾಡುತ್ತ ಗದಗ ಜಿಲ್ಲೆಯ ಮುಳಗುಂದಕ್ಕೂ ಬಂದಿದ್ದ. ಈ ಮುಳಗುಂದ ಗ್ರಾಮದಲ್ಲಿ ಒಂದು ಅಲ್ಲಮನ ಸ್ಮಾರಕವಿದೆ.

- Advertisement -

ಮುಳಗುಂದ ಗ್ರಾಮದ ಅಲ್ಲಮಪ್ರಭು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಜಂಗಮನಿ ಅವರು ಕೈಕೊಂಡ ಹಿನ್ನೆಲೆಯಲ್ಲಿ, ಈ ಕಾರ್ಯ ಜನಮನದಲ್ಲಿ ಶಾಶ್ವತವಾಗಿ ಉಳಿದುಕೊಳ್ಳಬೇಕೆಂಬ ಸದಾಶಯದಿಂದ ಪ್ರೊ. ವಸ್ತ್ರದ ಅವರಿಂದ ಈ ಕೃತಿಯನ್ನು ಬರೆಯಿಸಿ ಪ್ರಕಟಿಸಿ, ಉಚಿತವಾಗಿ ವಿದ್ವತ್‌ವಲಯಕ್ಕೆ ಕೊಡಮಾಡಿರುವುದು ಅವರ ಅಲ್ಲಮಪ್ರಭುದೇವರ ಬಗೆಗಿನ ಭಕ್ತಿ, ಸಾಹಿತ್ಯಲೋಕದ ಬಗೆಗಿನ ಕಾಳಜಿಯನ್ನು ತೋರಿಸುತ್ತದೆ.

ಕೇವಲ ಒಂದು ತಿಂಗಳ ಅವಧಿಯಲ್ಲಿ ಈ ಕೃತಿಯನ್ನು ರಚಿಸಿ ಕೊಡಬೇಕೆಂದು ಶಾಂತವೀರಪ್ಪ ಜಂಗಮನಿ ಅವರು ಪ್ರೊ. ವಸ್ತ್ರದ ಅವರನ್ನು ಕೇಳಿಕೊಂಡಾಗ- ‘ಕಲ್ಪಿಸಲು ಸಾಧ್ಯವಿಲ್ಲದ, ಅಕ್ಷರಗಳಿಗೆ ದಕ್ಕದ, ಭಾವನೆಗಳಿಗೆ ಮಿಕ್ಕಿದ, ಬರೆಯುವದಂತಿರಲಿ ಊಹಿಸಲೂ ಸಾಧ್ಯವಿರದ ಆ ಘನ ವ್ಯಕ್ತಿತ್ವವನ್ನು ನಿರೂಪಿಸಲು ಈ ಒಂದು ತಿಂಗಳ ಅವಧಿಯಲ್ಲಿ ಸಾಧ್ಯವೆ?’ ಎಂದು ಪ್ರೊ. ವಸ್ತ್ರದ ಅವರು ಹೇಳುತ್ತ, ತಮ್ಮ ಅನಾರೋಗ್ಯದಲ್ಲೂ ಈ ಕೃತಿಯನ್ನು ರಚಿಸಿರುವುದು ಗಮನಾರ್ಹ ಸಂಗತಿಯಾಗಿದೆ.

ಈ ಚರಿತ್ರೆಯನ್ನು ಬರೆಯುವಲ್ಲಿ ಈ ಪೂರ್ವದಲ್ಲಿ ಬಂದ ಅಲ್ಲಮನ ಎಲ್ಲ ಸಾಹಿತ್ಯವನ್ನು ಆಳವಾಗಿ, ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದ ಪ್ರೊ. ವಸ್ತ್ರದ ಅವರು ತುಂಬ ವಾಸ್ತವ ತಳಹದಿಯ ಮೇಲೆ ಕೃತಿ ರಚಿಸಿದ್ದಾರೆ. ಅಧ್ಯಯನದ ಪೂರ್ವಸಿದ್ಧತೆ, ಐತಿಹಾಸಿಕ ಪ್ರಜ್ಞೆ, ಒಳನೋಟ, ಮುಖ್ಯವಾಗಿ ಭಾವನಾವೇಶದಿಂದ ಮುಕ್ತವಾದ ಸಮಚಿತ್ತತೆ, ವಸ್ತುನಿಷ್ಠತೆ, ಲಭ್ಯ ಐತಿಹಾಸಿಕ ಆಕರಗಳನ್ನು ಶೋಧಿಸಿ, ಅಲಭ್ಯ ಸಂಗತಿಗಳನ್ನು ತರ್ಕಸಮ್ಮತವಾಗಿ ಪರಿಕಲ್ಪಿಸುವ ಪ್ರತಿಭಾ ವಿಲಾಸ ಹಾಗೂ ಸೃಜನಶೀಲ ವಿಕಾಸಗಳನ್ನು ಬಳಸಿಕೊಂಡು ಒಂದು ಅತ್ಯುತ್ತಮ ಕೃತಿರತ್ನವನ್ನು ನೀಡಿದ್ದಾರೆ.

ಅಲ್ಲಮನ ಜೀವನ ವೃತ್ತಾಂತದ ವಾಸ್ತವಿಕ ವಿವರಗಳು, ಸಾಧನೆ ಸಿದ್ಧಿಗಳ ನೈಜ ವಿವರಗಳು ಇಲ್ಲಿ ಆಪ್ತವಾಗಿ ಮೂಡಿವೆ. ಹರಿಹರನ ರಗಳೆ, ಚಾಮರಸನ ಪ್ರಭುಲಿಂಗಲೀಲೆ. ಶೂನ್ಯಸಂಪಾದನೆ ಮೊದಲಾದ ಕೃತಿಗಳಿಂದ ದೊರೆಯಬಹುದಾದ ಪ್ರಾಸಂಗಿಕ ಅಂಶಗಳು, ಪ್ರಭುದೇವನ ಮತ್ತು ಇತರರ ವಚನಗಳಲ್ಲಿ ದೊರೆಯುವ ಆಧಾರಗಳನ್ನು ಉಪಾಯವಾಗಿ, ಸಾಂದರ್ಭಿಕವಾಗಿ ಅರ್ಥೈಸಿ, ಅವುಗಳಿಂದ ಅವನ ಜೀವನ ದರ್ಶನವನ್ನು ಕಂಡುಕೊಳ್ಳುವ ಪ್ರಯತ್ನ ಇಲ್ಲಿದೆ.

ಪ್ರೊ. ವಸ್ತ್ರದ ಅವರು ಎಲ್ಲ ಆಧಾರಗಳನ್ನು ಸೋಸಿ ಅಲ್ಲಿರುವ ಪ್ರತಿರೂಪದ ಕೋಟೆಯನ್ನು ಭೇದಿಸಿ, ವಾಸ್ತವಾಂಶಗಳನ್ನೂ ಜೀವಸ್ರೋತವನ್ನು ಗುರುತಿಸಿದ್ದಾರೆ. ಅದರಲ್ಲೂ ಶೂನ್ಯಸಂಪಾದನೆಯಲ್ಲಿನ ಅನುಭವಮಂಟಪದ ಶರಣಗೋಷ್ಠಿಯ ಸಂವಾದವನ್ನೂ, ಅಲ್ಲಮನ ವಚನಗಳನ್ನೂ ಆಧಾರವಾಗಿ ಸ್ವೀಕರಿಸಿ ಸಾಂದರ್ಭಿಕವಾಗಿ ಬಳಸಿಕೊಂಡು ಕಥಾಸಂವಿಧಾನವನ್ನು ರೂಪಿಸಿರುವುದರಿಂದ ಒಂದು ಭದ್ರ ನೆಲಗಟ್ಟು ದೊರೆತಂತಾಗಿದೆ.

ಅಲ್ಲಮಪ್ರಭುದೇವನ ಬಾಲ್ಯಜೀವನ, ಗೃಹತ್ಯಾಗ, ಯೋಗಾಭ್ಯಾಸ, ಅನಿಮಿಷನಿಂದ ಲಿಂಗ ಸ್ವೀಕರಣ, ಅವನ ಲೋಕಪರ್ಯಟನ ಪಥದ ಚಿತ್ರಣ ಇಲ್ಲಿ ತುಂಬ ಕುತೂಹಲಕಾರಿಯಾಗಿ ಮೂಡಿಬಂದಿದೆ. ಅಲ್ಲಮ ಮಾಯೆಗೆ ಸಿಗದೆ ಹೋದುದು, ಮುಳಗುಂದ ನಾಡಿಗೆ ಬಂದು ಮಹಾದೇವನಿಗೆ ಅರಿವಿನ ಬೆಳಗು ತೋರಿದ್ದು, ಸೊಲ್ಲಾಪುರಕ್ಕೆ ಹೋಗಿ ಸಿದ್ಧರಾಮನಿಗೆ ಜ್ಞಾನೋದಯ ಮಾಡಿಸಿ, ಆತನನ್ನು ಕಲ್ಯಾಣಪಟ್ಟಣಕ್ಕೆ ಕರೆತಂದ್ದದ್ದು, ಮುಕ್ತಾಯಿಗೆ ಮಾರ್ಗದರ್ಶನ ಮಾಡಿದ್ದು, ಬಸವಣ್ಣನವರ ಅನುಭವ ಮಂಟಪದಲ್ಲಿ ಶೂನ್ಯಸಿಂಹಾಸನದ ಮೊದಲ ಅಧಿಪತಿಯಾಗಿ ಸಾಧನೆಯ ಚರಮಸಿದ್ಧಿಯನ್ನು ತಲುಪಿದ್ದು, ಗೋರಕ್ಷನಿಗೆ ಕಾಯ-ಜೀವದ ಮಹತ್ವ ತಿಳಿಸಿದ್ದು, ನಂತರ ಬಯಲು ಬಯಲನು ಸೇರಲು ಕದಳಿ ವನಕ್ಕೆ ಹೋದದ್ದು ಈ ಎಲ್ಲ ಘಟನೆಗಳು ಪ್ರಸ್ತುತ ಕೃತಿಯಲ್ಲಿ ರಸಾರ್ದ್ರವಾಗಿ ಮೂಡಿ ಬಂದಿವೆ.

ಅಲ್ಲಮನ ಚರಿತ್ರೆಗಳು ಬಹಳಷ್ಟು ಬಂದಿದ್ದರೂ ಈ ಕೃತಿಯ ವಿಶೇಷತೆಯನ್ನು ಗಮನಿಸಲೇಬೇಕು. ಅದು ಭಾಷೆಯ ಬಳಕೆ. ಪ್ರೊ. ವಸ್ತ್ರದ ಅವರು ಬಳಸುವ ಭಾಷೆ ಅತ್ಯಂತ ಸರಳ-ಸುಂದರ ಸೊಗಸಿನಿಂದ ಕೂಡಿದೆ. ಇಲ್ಲಿ ಬಳಕೆಯಾದ ಭಾಷೆ ಪ್ರೊ. ವಸ್ಚೇತೋಹಾರಿಯಾಗಿದಸ್ತ್ರದ ಅವರ ಸಿದ್ಧಶೈಲಿಯಿಂದ ರೂಪಗೊಂಡ ಒಂದು ಮಾದರಿ. ಇಂಥ ಭಾಷೆಯನ್ನು ಅವರಷ್ಟು ಸಾಲಂಕೃತವಾಗಿ ಬಳಸುವರು ಮತ್ತೊಬ್ಬರಿಲ್ಲ. ಅದರಲ್ಲೂ ಅಲ್ಲಮನಂತಹ ವ್ಯೋಮಾತೀತ ವ್ಯಕ್ತಿತ್ವವನ್ನು ಕಟ್ಟುಕೊಡುವಲ್ಲಿ ಅವರು ಬಳಸಿದ ಭಾಷೆ ಅತ್ಯಂತ ಚೇತೋಹಾರಿಯಾಗಿದೆ.

‘ಅಲ್ಲಮಪ್ರಭುದೇವರ ವಚನಗಳು ಕನ್ನಡದಲ್ಲಿ ಇರುವವರೆಗೂ ಕನ್ನಡ ಭಾಷೆಗೆ ಸಾವಿಲ್ಲ’ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಇತ್ತೀಚೆಗೆ ಭಾಷಣವೊಂದರಲ್ಲಿ ಹೇಳಿದ್ದರು. ಈ ಮಾತುಗಳ ಹಿನ್ನೆಲೆಯಲ್ಲಿ ಪ್ರೊ. ಚಂದ್ರಶೇಖರ ವಸ್ತ್ರದ ಅವರಂತಹ ಹಿರಿಯ ವಿದ್ವಾಂಸರ ಇಂಥ ಕೃತಿಗಳು ಇರುವವರೆಗೂ ಕನ್ನಡ ಭಾಷೆ ಸಂಸ್ಕೃತಿಗಳಿಗೆ ಯಾವುದೇ ಧಕ್ಕೆ ಇಲ್ಲ ಎಂದು ಹೇಳಿದರೆ ಅತ್ಯುಕ್ತಿಯಾಗಲಾರದು.

ಇಂಥ ಮೌಲಿಕ ಕೃತಿಯನ್ನು ರಚಿಸಿದ ಪ್ರೊ. ಚಂದ್ರಶೇಖರ ವಸ್ತ್ರದ ಸರ್ ಅವರಿಗೆ ವಂದನೆಗಳು, ಕೃತಿಯನ್ನು ಪ್ರಕಟಿಸಿ ವಿದ್ವತ್‌ಲೋಕಕ್ಕೆ ಉಚಿತವಾಗಿ ಹಂಚುತ್ತಿರುವ ಪ್ರಕಾಶಕರಾದ ಶಾಂತವೀರಪ್ಪ ಜಂಗಮನಿ, ವಿವೇಕ ಜಂಗಮನ ಅವರ ಪುಸ್ತಕ ಪ್ರೀತಿಗೆ ಅನಂತ ವಂದನೆ-ಅಭಿನಂದನೆಗಳು.


ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: ೯೯೦೨೧೩೦೦೪೧

- Advertisement -
- Advertisement -

Latest News

10ರಂದು ಅಬ್ಬಿಗೇರಿ ದಂಪತಿಯ 15 ಕೃತಿ ಲೋಕಾರ್ಪಣೆ

ಬೆಳಗಾವಿ: ಜಿಲ್ಲಾ ಲೇಖಕಿಯರ ಸಂಘ ಬೆಳಗಾವಿ ಹಾಗೂ ಲೋಕವಿದ್ಯಾ ಪ್ರಕಾಶನ ಸಂಕೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಉಪನ್ಯಾಸಕಿ, ಲೇಖಕಿ ಜಯಶ್ರೀ ಮತ್ತು ಜಯಪ್ರಕಾಶ ಅಬ್ಬಿಗೇರಿ ದಂಪತಿಗಳ...
- Advertisement -

More Articles Like This

- Advertisement -
close
error: Content is protected !!
Join WhatsApp Group