ಮೈಸೂರು ಜಿಲ್ಲೆಯಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಸಾಲಿಗ್ರಾಮ ತಾಲ್ಲೂಕಿನಲ್ಲಿ ತಾಲ್ಲೂಕು ಸಾಹಿತ್ಯ ಪರಿಷತ್ತಿನ ನೂತನ ಘಟಕವನ್ನು ಆರಂಬಿಸಬೇಕೆಂದು ಹಿರಿಯ ಸಾಹಿತಿ ಡಾ.ಭೇರ್ಯ ರಾಮಕುಮಾರ್ ಒತ್ತಾಯಿಸಿದ್ದಾರೆ.
ಸಾಲಿಗ್ರಾಮ ದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಸಾಲಿಗ್ರಾಮವನ್ನು ರಾಜ್ಯ ಸರ್ಕಾರವು ಈಗಾಗಲೇ ತಾಲ್ಲೂಕೆಂದು ಘೋಷಣೆ ಮಾಡಿದೆ.ನೂತನ ತಾಲ್ಲೂಕು ಕಛೇರಿಯೂ ಆರಂಭಗೊಂಡಿದೆ.ಜೊತೆಗೆ ಎಲ್ಲ ತಾಲ್ಲೂಕು ಸೌಲಭ್ಯಗಳನ್ನು ದೊರಕಿಸಲು ಶಾಸಕ ಸಾ.ರಾ.ಮಹೇಶ್ ಹಾಗೂ ರಾಜ್ಯಸರ್ಕಾರ ಕ್ರಮಕೈಗೊಂಡಿದ್ದಾರೆ ಆದ್ದರಿಂದ ತಾಲ್ಲೂಕಿನಲ್ಲಿ ಕ.ಸಾ.ಪ ಘಟಕ ಆರಂಭಿಸಿ,ಸಾಹಿತ್ಯ ಚಟುವಟಿಕೆ ಆರಂಭಿಸಬೇಕು.ಈ ಬಾರಿಯ ಮೈಸೂರು ಜಿಲ್ಲೆಯ ಪ್ರಥಮ ಜಿಲ್ಲೆ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಲಿಗ್ರಾಮದಲ್ಲಿಯೇ ನಡೆಸಬೇಕು ಎಂದು ಒತ್ತಾಯಿಸಿದರು.
ಹಿರಿಯ ಸಾಹಿತಿ ಗಳಾದ ಡಾ.ಸಿ.ಪಿ.ಕೆ. ಅವರ ಜನ್ಮಸ್ಥಳ ಚಿಕ್ಕನಾಯಕನಹಳ್ಳಿ, ಪ್ರೊ.ಎಚ್ಚೆಸ್ಕೆ ಅವರ ಜನ್ಮಸ್ಥಳ ಹಳೆಯೂರು, ಹಿರಿಯ ಲೇಖಕ ದಿ.ಹನಸೋಗೆ ಮಹಾದೇವಯ್ಯ ಅವರ ಜನ್ಮಸ್ಥಳ ಹನಸೋಗೆ , ಹಿರಿಯ ವೈದ್ಯಸಾಹಿತಿ ಡಾ.ಎಸ್ಪಿ ಯೋಗಣ್ಣ ಅವರ ಜನ್ಮಸ್ಥಳ ಸಾಲಿಗ್ರಾಮ ಇರುವುದು ಈ ತಾಲ್ಲೂಕಿನ ವಿಶೇಷ. ಅದೇ ರೀತಿ ಚುಂಚನಕಟ್ಟೆಯ ಶ್ರೀ ರಾಮದೇವಾಲಯ, ಸಾಲಿಗ್ರಾಮದ ಯೋಗಾನರಸಿಂಹ ದೇವಾಲಯ, ಜಿನಮಂದಿರಗಳು,ಭೇರ್ಯದ ಪುರಾತನ ಶಿಲ್ಪಕಲೆಯ ಶ್ರೀ ಚನ್ನಕೇಶವ ದೇವಾಲಯ, ಹೆಬ್ಬಸೂರಿನ ಜಪದಕಟ್ಟೆ ಮೊದಲಾದ ಸಾಂಸ್ಕೃತಿಕ ತಾಣಗಳು ಈ ತಾಲ್ಲೂಕಿನಲ್ಲಿವೆ. ಆದ್ದರಿಂದ ಆದಷ್ಟು ಶೀಘ್ರವಾಗಿ ಸಾಲಿಗ್ರಾಮ ತಾಲ್ಲೂಕಿನಲ್ಲಿ ನೂತನ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಶಾಖೆಯನ್ನು ಆರಂಭಿಸಬೇಕು.ಈ ಬಗ್ಗೆ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ರಾದ ಮಡ್ಡಿಕೆರೆ ಗೋಪಾಲ್ ಅವರು ಆಡಳಿತಾತ್ಮಕ ಕ್ರಮವನ್ನು ಕೈಗೊಳ್ಳಬೇಕೆಂದವರು ಆಗ್ರಹಪಡಿಸಿದರು.
ಹಿರಿಯ ಕನ್ನಡ ಪರ ಚಿಂತಕ ಎಸ್.
ಬಿ.ಗುಣಚಂದ್ರ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.