ದೇವರನ್ನು ಮನುಷ್ಯನ ಅಂತರಂಗದಲ್ಲಿ ಹುಡುಕುವ ಮಾನಸಿಕ ಭೌದ್ಧಿಕ ವಿಕಾಸವೇ ಶರಣ ಧರ್ಮದ ತತ್ವವು.
ಇಲ್ಲಿ ದೇವರು ಮತ್ತು ಭಕ್ತನ ಮಧ್ಯೆ ದಳ್ಳಾಳಿಯಿಲ್ಲ (ಪುರೋಹಿತಶಾಹಿ ವ್ಯವಸ್ಥೆ ಧಿಕ್ಕರಿಸಿದ ಮೊದಲ ಧೀರ ಧರ್ಮ ಲಿಂಗಾಯತ ಧರ್ಮವು.)
ಇಷ್ಟಲಿಂಗವು ಸಮಷ್ಟಿಯ ಪ್ರತೀಕವು.
ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮವು.
ಗುರುವು ವ್ಯಕ್ತಿಯಲ್ಲ -ಲಿಂಗ ವಸ್ತು ಅಲ್ಲ ಹಾಗು ಜಂಗಮ -ಜಾತಿಯಲ್ಲ.
ಲಿಂಗ ಚೈತನ್ಯ ಚಿತ್ಕಳೆಯ ಕುರುಹುವಾಗಿದೆ . ಲಿಂಗ ಯೋಗದ ಸಾಧನವಾಗಿದೆ (ಸಾತಿಶಯ ನಿರುಪಾಧಿತ ಲಿಂಗವೇ ಜ್ಯೋತಿ ) ಕಾಯ ಸಹಜ ಗುಣಗಳು ಶರಣರ ಲಿಂಗ ತತ್ವದಲ್ಲಿ ಅಡಕವಾಗಿವೆ. ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮವು ಮಾನವ ಹಕ್ಕುಗಳಿಗಾಗಿ ನಡೆಸಿದ ಅಪೂರ್ವ ಆಂದೋಲನವಾಗಿದೆ.
ಲಿಂಗಾಯತ ಧರ್ಮದಲ್ಲಿ ಜಾತಿಗಳಿಲ್ಲ ,ಕಸುಬುಗಳಿವೆ .ಆದರೆ ವೃತ್ತಿ ಗೌರವ ಸಮಾನತೆಯನ್ನು ಶರಣರ ಸಂದೇಶಗಳಲ್ಲಿ ಕಾಣುತ್ತೇವೆ. ವರ್ಗ ವರ್ಣ ಆಶ್ರಮ ಲಿಂಗ ಭೇದ ಹೊಡೆದು ಹಾಕಿ ಸರ್ವ ಕಾಲಿಕ ಸಮಾನತೆ ಸಾರುವ ಅತ್ಯಂತ ವೈಜ್ಞಾನಿಕ ವೈಚಾರಿಕ ಧರ್ಮವೇ ಲಿಂಗಾಯತ ಧರ್ಮವಾಗಿದೆ .
ಬುದ್ಧನ ಕಾಲದಲ್ಲಿ ಹುಟ್ಟಿಕೊಂಡ ಆಶ್ರಮಗಳ ಸಂಸ್ಕೃತಿ ಬಸವಣ್ಣನವರ ಕಾಲದಲ್ಲಿ ಸಂಪೂರ್ಣ ನೆಲೆ ಕಚ್ಚಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿದ್ದವು.
ಬಸವಣ್ಣನವರು ಸಾರಿದ ತತ್ವಗಳನ್ನು ಗಾಳಿಗೆ ತೋರಿ ಮತ್ತೆ ಆಶ್ರಮ ಮಠ ಪ್ರತಿಷ್ಠಾನಗಳ ಗುಲಾಮಗಿರಿಗೆ ಸಿಕ್ಕಿಕೊಂಡು ಜನರು ತಮ್ಮನ್ನು ಬಂಧನದ ಬೇಡಿಗೆ ಕೈಯೊಡ್ಡಿ ದಾಸ್ಯತ್ವಕ್ಕೆ ಅಂಟಿಕೊಂಡು ಬಾಳುವ ಗುಲಾಮಗಿರಿ ಬಿಡಬೇಕು. ಶರಣ ತತ್ವವು ಲಿಂಗಾಯತ ಧರ್ಮವು ಭಕ್ತ ಕೇಂದ್ರಿತ ಧರ್ಮವಾಗಿದೆ.
ಅಷ್ಟಾವರಣಗಳು ಪಂಚಾಚಾರಗಳು ಇವುಗಳನ್ನು ವೈಜ್ಞಾನಿಕ ವ್ಯಾಖ್ಯಾನಕ್ಕೆ ಒಳಪಡಿಸಿ ಷಟಸ್ಥಲಗಳ ಮೂಲಕ ಭಕ್ತ ತಾನೇ ಮಹಾದೇವನಾಗುವ ಪರಿಯನ್ನು ರೂಪಿಸಿದ ಅತ್ಯಮೂಲ್ಯದ ಕೊಡುಗೆ.
ಶರಣಾರ್ಥಿ
————————————————-
ಡಾ.ಶಶಿಕಾಂತ.ಪಟ್ಟಣ -ರಾಮದುರ್ಗ ಪೂನಾ