ವರದಿ : ಪಂಡಿತ ಯಂಪೂರೆ.
ಸಿಂದಗಿ; ಏನ್ರಿ ಮನೆ ದಾಖಲೆಗಳಿಗಾಗಿ ನಿತ್ಯ ಅಲೆದಾಡಿದರು ಸಿಬ್ಬಂದಿ ಮಾತ್ರ ದಿನಕ್ಕೊಂದು ಸಬೂಬ ಹೇಳಿ ಸಾಗ ಹಾಕುತ್ತರ‍್ರಿ. ಕೆಲ ದಿನ ದಾಖಲಾತಿ ಪಡೆದುಕೊಳ್ಳದಿದ್ರ ನಮ್ಮ ಮನೆ ಮತ್ತೊಬ್ಬರ ಹೆಸರ್ಲೆ ಆಗಿ ಬಿಡತಾದ ಅನ್ನುವ ಅಂಜಿಕಿ ಐತ್ರಿ ಎಂದು ಸಿಂದಗಿ ಪಟ್ಟಣದ ಸಾರ್ವಜನಿಕರು ಮಾತನಾಡುತ್ತಿರುವುದು ಸರ್ವೆ ಸಾಮಾನ್ಯವಾಗಿದೆ.
ಹೌದು, ಇಲ್ಲಿನ ಪುರಸಭೆಯಲ್ಲಿ. ಬೆಳಿಗ್ಗೆ ೧೦ ಗಂಟೆಯಿಂದ ಮದ್ಯಾಹ್ನ ೨ ಗಂಟೆಯವರೆಗೆ ಅಧ್ಯಕ್ಷರು ಕಾರ್ಯಾಲಯದಲ್ಲಿ ಇದ್ದರು ಕೂಡಾ ಸಾರ್ವಜನಿಕರು ಕುಳಿತು ಸುಸ್ತಾಗಿ ಶಪಿಸುತ್ತ ದಾಖಲೆಗಳಿಗಾಗಿ ಪರದಾಡುತ್ತಿರುವ ದೃಶ್ಯ ಕಂಡು ಬಂತು.
ಅವಕ-ಜಾವಕ, ಜೆಇ, ಕಂದಾಯ ನಿರೀಕ್ಷಕ ಹೊರತು ಪಡಿಸಿ ಕೆಲ ಸಿಬ್ಬಂದಿ ಕಛೇರಿಯಲ್ಲಿದ್ದರು ಸಾರ್ವಜನಿಕರಿಗೆ ಮುಖ್ಯವಾದ ದಾಖಲೆ ನೀಡುವವರೇ ಕರ ವಸೂಲಿ ನೆಪದಲ್ಲಿ ಕಛೇರಿಯಲ್ಲಿ ಇರದೇ ಕರ ವಸೂಲಿ ಮಾಡುತ್ತೇವೆ ಸಾರ್ವಜನಿಕರು ಸಹಕರಿಸಬೇಕು ಎನ್ನುವ ನಾಮಫಲಕ ಅಂಟಿಸಿ ಮದ್ಯಾಹ್ನ ೨ ಗಂಟೆಯಾದರು ಕೂಡಾ ಕಾರ್ಯಾಲಯಕ್ಕೆ ಬರದಿರುವುದನ್ನು ಮುಖ್ಯಾಧಿಕಾರಿಗಳ ಗಮನಕ್ಕೆ ತರಬೇಕಂದರೆ ಅವರು ಆಲಮೇಲ ಮತ್ತು ಸಿಂದಗಿ ಪುರಸಭೆ ಪ್ರಭಾರಿ ಅಧಿಕಾರಿ ಇರುವುದರಿಂದ ಅವರಿಗೂ ಕೂಡಾ ಇದರ ಬಗ್ಗೆ ಆಸಕ್ತಿ ಇಲ್ಲದಂತಾಗಿದೆ. ಯಾರಾದರು ಮುಖ್ಯಾದಿಕಾರಿಗಳಿಗೆ ದೂರವಾಣಿ ಕರೆ ಮಾಡಿದರೆ ಆಲಮೇಲ ಜನತೆಗೆ ಸಿಂದಗಿಯಲ್ಲಿದ್ದೇನೆ ಎನ್ನುವುದು ಇತ್ತ ಸಿಂದಗಿ ಸಾರ್ವಜನಿಕರು ಕರೆ ಮಾಡಿದರೆ ಆಲಮೇಲದಲ್ಲಿದ್ದೇನೆ ಎನ್ನುವ ಉತ್ತರದಿಂದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೆಲ ದಿನಗಳ ಹಿಂದೆ ಡಾ. ಆರ್.ಆರ್.ವಾರದ ಹಾಗೂ ಡೋಣೂರ ಲೇಔಟನಲ್ಲಿ ಕೆಲ ಪ್ಲಾಟ್‌ಗಳು ಮಾಲಿಕರಿಲ್ಲದೆ ಬೇರೊಬ್ಬರ ಹೆಸರಲ್ಲಿ ದಾಖಲೆಗಳನ್ನು ಸೃಷ್ಠಿಸಿ ಖರೀದಿಯಾಗಿದ್ದು ಇನ್ನೂ ನ್ಯಾಯಾಲಯದ ಕಟಕಟೆಯಲ್ಲಿದೆ ಅದರಿಂದ ಎಚ್ಚತ್ತುಕೊಂಡ ಸಾರ್ವಜನಿಕರು ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿ ಮಾಡಿ ತಮ್ಮ ಆಸ್ತಿಯ ದಾಖಲೆಗಳನ್ನು ಪಡೆದುಕೊಳ್ಳಬೇಕಾದರೆ ಹರಸಹಾಸ ಪಡಬೇಕಾಗಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡರು.

ಪುರಸಭೆಗೆ ಕೆಲ ದಿನಗಳ ಹಿಂದೆ ಲೋಕಾಯುಕ್ತ ಅಧಿಕಾರಿಗಳು ಬೇಟಿ ನೀಡಿ ಸ್ವಯಂ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಹಂತದಲ್ಲಿದೆ ಕಾರಣ ಮೇಲಾಧಿಕಾರಿಗಳು ಸಾರ್ವಜನಿಕರ ದಾಖಲೆಗಳ ರಕ್ಷಣೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಇಲ್ಲಿನ ಕೆಲವು ಜನರ ಚರ್ಮ ದಪ್ಪವಾಗಿದೆ ಅದನ್ನು ಇಳಿಸಬೇಕಾದರೆ ಕಾಲಾವಕಾಶ ಬೇಕು ಅದನ್ನು ಸರಿಪಡಿಸುವೆ. ಬೆಳಿಗ್ಗೆ ೮ ರಿಂದ ೧೧ರ ವರೆಗೆ ಕರ ವಸೂಲಿ ಮಾಡಿ ನಂತರ ಪುರಸಭೆಗೆ ಬಂದು ಸಾರ್ವಜನಕರಿಗೆ ಬೇಕಾಗುವ ದಾಖಲೆಗಳನ್ನು ಪೂರೈಸುವಂತೆ ಸೂಚಿಸುತ್ತೇನೆ ಅಲ್ಲದೆ ಗೈರು ಉಳಿದ ಸಿಬ್ಬಂದಿಗೆ ನೋಟಿಸ್ ನೀಡಿ ಕ್ರಮಕ್ಕೆ ಮುಂದಾಗುತ್ತೇನೆ ಎಂದು ಪುರಸಭಾ ಅಧ್ಯಕ್ಷ ಶಾಂತವೀರ ಬಿರಾದಾರ ಕಿಡಿ ಕಾರಿದರು.
ಪ್ಲಾಟ್ ಖರೀದಿಸಿ ದಾಖಲಾತಿಗಾಗಿ ಅರ್ಜಿ ಸಲ್ಲಿಸಿ ಒಂದು ತಿಂಗಳಾಯಿತು ಇನ್ನೂ ದಾಖಲಾತಿ ಮಾಡಿಲ್ಲ ಬಂದಾಗೊಮ್ಮೆ ನಾಳೆ ಬನ್ನಿರಿ ಎನ್ನುವ ಉತ್ತರ ಸಿಗುತ್ತೆ ವಿನಃ ಬೇರೆ ಉತ್ತರವೇ ಇಲ್ರ‍್ರಿ
ಶಾಂತಪ್ಪ ಕರಗಲ್
ಪಟ್ಟಣ ನಿವಾಸಿ
೧೯೮೭ರಲ್ಲಿ ಖರೀದಿಯಾಗಿದೆ ಇಲ್ಲಿಯವರೆಗೆ ಆಸ್ತಿ ಕರ ಪಾವತಿ ಕೂಡಾ ಆಗಿದೆ ಆದರೆ ಕೆಲ ದಿನಗಳ ಹಿಂದೆ ಹೊಸ ರಜಿಷ್ಟರನಲ್ಲಿ ನಮ್ಮ ಆಸ್ತಿಯಲ್ಲಿ ಬೇರೆಯವರ ಹೆಸರು ನಮೂದಾಗಿದೆ ಹೀಗಾದರೆ ಪುರಸಭೆಯಲ್ಲಿದ್ದ ರಜಿಷ್ಟರ ನಮ್ಮ ಮನೆಯಲ್ಲಿಯೂ ಇಡುವಂತ ಪ್ರಸಂಗ ಬಂದಿದೆ ಅದಕ್ಕೆ ಪ್ರತಿ ವರ್ಷ ಕರ ಪಾವತಿಸಿ ಹೊಸ ಉತಾರೆ ಪಡೆದುಕೊಳ್ಳೋಣ ಎಂದರೆ ನಿತ್ಯ ಕೆಲಸ ಬಿಟ್ಟು ತಿರುಗಾಡಿದರು ಉತಾರೆ ಸಿಗುತ್ತಿಲ್ಲ
ಹುಲಗವ್ವ ಪಾತ್ರೋಟಿ
೭ ನೇ ವಾರ್ಡ ನಿವಾಸಿ
ಹೀಗೆಂದು ಸಾರ್ವಜನಿಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದು ಪುರಸಭೆಯ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ.