ಖಾಲಿ ಬಿದ್ದಿರುವ ಓವರಹೆಡ್ ನೀರಿನ ಟ್ಯಾಂಕ್ ಸರ್ಕಾರದ ದುಡ್ಡು ಹೀಗೂ ಪೋಲು ?
ಮೂಡಲಗಿ – ಗ್ರಾಮಗಳಲ್ಲಿ ಮನೆ ಮನೆಗೂ ಕುಡಿಯುವ ನೀರು ಒದಗಿಸುವ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ ಮಿಷನ್ ಯೋಜನೆಯು ತಾಲೂಕಿನ ಶಿವಾಪೂರ (ಹ) ಗ್ರಾಮದಲ್ಲಿ ಎಕ್ಕುಟ್ಟಿ ಹೋಗಿದ್ದು ಮೂರು ವರ್ಷವಾದರೂ ಗ್ರಾಮಸ್ಥರಿಗೆ ಇನ್ನೂ ನೀರು ಪೂರೈಕೆಯಾಗುತ್ತಿಲ್ಲ.
ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ಗ್ರಾಮದ ೧೧೦ ಮನೆಗಳಿಗೆ ಕಾರ್ಯಾತ್ಮಕ ನಳಗಳ ಜೋಡಣೆ ಕೈಗೊಳ್ಳುವ ಯೋಜನೆಗಾಗಿ ರೂ. ೭೨ ಲಕ್ಷ ವೆಚ್ಚದಲ್ಲಿ ಗ್ರಾಮದ ತೋಟ ನಂ.೧ ರ ಸರ್ಕಾರಿ ಶಾಲೆಯ ಹಿಂದೆ ಓವರ್ ಹೆಡ್ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ, ಮನೆ ಮನೆಗೆ ನಳಗಳ ಸಂಪರ್ಕಗಳನ್ನು ಕೊಡಲಾಗಿದೆ ಆದರೆ ನೀರಿನ ವ್ಯವಸ್ಥೆ ಇಲ್ಲದೆ ನಳಗಳು ಮಾತ್ರ ಬಿಕೋ ಎನ್ನುತ್ತಿವೆ.

ಈ ಜಲ ಜೀವನ ಮಿಷನ್ ಕಾಮಗಾರಿಯಲ್ಲಿ ಕೇಂದ್ರದ ಪಾಲು, ರಾಜ್ಯದ ಪಾಲು ಹಾಗೂ ಸಮುದಾಯದ ಪಾಲು ಇದ್ದು ಒಟ್ಟು ವೆಚ್ಚ ಎರಡು ಬ್ಯಾಚ್ ಗಳಲ್ಲಿ ಒಂದು ರೂ. ೭೨ ಲಕ್ಷ ಹಾಗೂ ಬ್ಯಾಚ್ ಮೂರು ೫೬ ಲಕ್ಷವಾಗಿದೆ. ಆದರೆ ಇಷ್ಟೊಂದು ಖರ್ಚು ಮಾಡಿ ಕಟ್ಟಿಸಿರುವ ನೀರಿನ ಟ್ಯಾಂಕ್ ನೀರು ಕಾಣದೇ ಹಾಳಾಗುವ ಲಕ್ಷಣಗಳಿವೆ. ಯೋಜನೆಯೂ ಕೂಡ ಹಳ್ಳ ಹಿಡಿಯುವ ಲಕ್ಷಣ ಕಾಣುತ್ತಿದೆ. ಅಷ್ಟಕ್ಕೂ ಇಷ್ಟು ಹಣ ಈ ಯೋಜನೆಗೆ ನಿಜವಾಗಲೂ ಖರ್ಚಾಗಿದೆಯಾ ಎಂಬ ಬಗ್ಗೆ ಸರಿಯಾದ ಮಾಹಿತಿ ಬರಬೇಕಾಗಿದೆ.
ಕಾಮಗಾರಿ ಪೂರ್ಣಗೊಂಡು ಇಂದಿಗೆ ಎರಡು ವರ್ಷಗಳಾಗಿವೆ. ಎಲ್ ಆರ್ ಕಂಬಳಿ ಮತ್ತು ಎ ಎಸ್ ಹಸರಂಗಿ ಎಂಬ ಏಜೆನ್ಸಿಯವರಿಂದ ನಿರ್ಮಾಣವಾಗಿದೆಯೆನ್ನಲಾಗಿದೆ.
ಈ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಾಯ್ ಎಚ್ ಗಿಡ್ಡವ್ವಗೋಳ ಹಾಗೂ ಪಂಚಾಯಿತಿ ಪಿಡಿಓ ಬಬಲಿಯವರನ್ನು ಸಂಪರ್ಕಿಸಿದಾಗ ಗುತ್ತಿಗೆದಾರರು ಕಾಮಗಾರಿ ಪೂರ್ತಿ ಮಾಡಿ ನಮಗೆ ಹಸ್ತಾಂತರ ಮಾಡಿದ ನಂತರ ನಾವು ನಿರ್ವಹಣೆ ಮಾಡಬೇಕಾಗುತ್ತದೆ ಆದರೆ ಜಲ ಜೀವನ ಮಿಷನ್ ಯೋಜನೆಯ ಹಸ್ತಾಂತರ ನಮಗೆ ಆಗಿಲ್ಲ ಎಂದರು.
ನೀರಿನ ಟ್ಯಾಂಕ್ ಕಟ್ಟಿದವರಲ್ಲಿ ಒಬ್ಬರಾದ ರಾಜು ಮದಲಮಟ್ಟಿ ಎಂಬುವವರನ್ನು ಸಂರ್ಕಿಸಿದಾಗ ಟ್ಯಾಂಕಿಗೆ ನೀರು ಸರಬರಾಜು ಮಾಡುವ ಪೈಪ್ ಲೈನ್ ಒಡೆದಿದ್ದು ಅದನ್ನು ಏಜೆನ್ಸಿಯವರು ದುರಸ್ತಿ ಮಾಡುತ್ತಿಲ್ಲ ಅದು ದುರಸ್ತಿಯಾದ ಮೇಲೆ ನೀರು ಸರಬರಾಜಾಗುವುದು ಎಂದರು.
ಒಟ್ಟಿನಲ್ಲಿ ಮನೆ ಮನೆಗೆ ನೀರು ತಲುಪಿಸುವ ಜಲ ಜೀವನ ಮಿಷನ್ ಅಡಿಯಲ್ಲಿ ಈ ಯೋಜನೆಗೆ ಸರ್ಕಾರದ ದುಡ್ಡು ದಂಡವಾಗಿದೆ ಎಂಬ ಸಂದೇಹ ಹುಟ್ಟುವಂತೆ ಶಿವಾಪೂರ (ಹ) ಗ್ರಾಮದ ಈ ಯೋಜನೆಯು ಫ್ಲಾಪ್ ಆಗುತ್ತದೆಯಾ ಕಾದು ನೋಡಬೇಕು.
ಉಮೇಶ ಬೆಳಕೂಡ, ಮೂಡಲಗಿ