Homeಲೇಖನಹೆತ್ತವರ ಗೌರವಿಸದಿದ್ದರೆ ಎಲ್ಲವೂ ಶೂನ್ಯ

ಹೆತ್ತವರ ಗೌರವಿಸದಿದ್ದರೆ ಎಲ್ಲವೂ ಶೂನ್ಯ

ಯಾವುದೇ ಕಾರ್ಯಕ್ರಮವಿರಲಿ ಆರಂಭದಲ್ಲಿ ಗಣೇಶನ ಸ್ತುತಿ, ಪೂಜೆ ಇದ್ದೇ ಇರುತ್ತದೆ. ಪೂಜೆ ಪುನಸ್ಕಾರಗಳಿರಲಿ, ಯಜ್ಞ ಯಾಗಾದಿಗಳಿರಲಿ ಯಾವ ದೇವರಿಗೆ ಸಂಬಂಧಪಟ್ಟಿರಲಿ ಮೊದಲು ವಿನಾಯಕನಿಗೆ ಪೂಜೆ. ‘ಮೊದಲ ವಂದಿಪೆ ನಿನಗೆ ಗಣನಾಥ.’ ಎನ್ನುವ ಹಾಡನ್ನು ಸಹ ಹಾಡುತ್ತೇವೆ. ಹೀಗೆ ಏಕದಂತನನ್ನು ಪೂಜಿಸುವುದರಿಂದ ಫಲವೂ ಹೆಚ್ಚು. ಅಷ್ಟೇ ಅಲ್ಲ ಉಪನಯನ, ವಿವಾಹ, ಮಂಗಳ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುತ್ತವೆ. ಅಕ್ಷಯಪುಣ್ಯ ಪ್ರಾಪ್ತಿಯಾಗುತ್ತದೆ. ಗಣೇಶನನ್ನು ಆವಾಹನೆ ಮಾಡಿ ಪೂಜಿಸಿದರೆ, ಕಾರ್ಯದಲ್ಲಿ ಸಂಪೂರ್ಣ ಸಿದ್ಧಿ ದೊರೆಯುವುದು. ಸದ್ಗತಿಯೂ ಪ್ರಾಪ್ತಿಯಾಗುವುದು. ವಿಪತ್ತುಗಳನ್ನು ದೂರ ಮಾಡಲು ಸರ್ವಪ್ರಥಮವಾಗಿ ಗಣೇಶನನ್ನು ಏಕೆ ಪೂಜಿಸುತ್ತೇವೆ ಎನ್ನುವುದಕ್ಕೆ ಕಥೆಯೊಂದಿದೆ.

ಅದನ್ನೇ ಇಲ್ಲಿ ಹೇಳುವೆನು. ಗಣೇಶ ಮತ್ತು ಷಣ್ಮುಖರು ಶಿವ ಪಾರ್ವತಿ ಪುತ್ರರು, ಒಮ್ಮೆ ದೇವತೆಗಳು ಅಮೃತದಷ್ಟು ರುಚಿಯಾದ ಮೋದಕವನ್ನು ಪಾರ್ವತಿಗೆ ಅರ್ಪಿಸಿದರು. ಅದು ತಮಗೆ ಬೇಕೆಂದು ಇಬ್ಬರೂ ಬಾಲಕರು ತಾಯಿಯನ್ನು ಪೀಡಿಸತೊಡಗಿದರು. ಆಗ ಪಾರ್ವತಿಯು ಮಕ್ಕಳಿಗೆ ‘ ಈ ಮೋದಕವನ್ನು ತಿನ್ನುವವನು ಜ್ಞಾನಿಯೂ ಸಕಲಕಲಾವಲ್ಲಭನೂ ಆಗಿರಬೇಕು. ಆದ್ದರಿಂದ ನಿಮ್ಮಲ್ಲಿ ಧರ್ಮಾಚರಣೆಯಿಂದ ಶ್ರೇಷ್ಠನಾಗಿ ಯಾರು ಮೊದಲು ಬರುವಿರೋ ಅವರಿಗೆ ಈ ಮೋದಕವನ್ನು ನೀಡುವೆ’ ಎಂದಳು. ಷಣ್ಮುಖನು ತನ್ನ ವಾಹನವಾದ ನವಿಲಿನ ಮೇಲೆ ಕುಳಿತು ತ್ರಿಲೋಕಗಳ ತೀರ್ಥಕ್ಷೇತ್ರಗಳ ದರ್ಶನಕ್ಕೆ ಹೊರಟನು. ಎಲ್ಲ ಕ್ಷೇತ್ರಗಳಲ್ಲೂ ಸ್ನಾನ ಮಾಡಿದನು. ಆದರೆ ಗಣೇಶ ಮಾತ್ರ ಷಣ್ಮುಖನಿಗಿಂತಲೂ ಬುದ್ಧಿವಂತನಾಗಿ ತಂದೆ-ತಾಯಿಯರಿಗೆ ಪ್ರದಕ್ಷಿಣೆ ಹಾಕಿ, ದೀರ್ಘದಂಡ ಪ್ರಣಾಮ ಮಾಡಿ, ಅವರೆದುರಿಗೆ ಕೈ ಮುಗಿದು ನಿಂತನು.
ಅಷ್ಟೊತ್ತಿಗೆ ಅಲ್ಲಿಗೆ ಬಂದ ಷಣ್ಮುಖ ತನಗೆ ಮೋದಕ ಕೊಡಬೇಕೆಂದು ಆಗ್ರಹಿಸಿದನು. ಆಗ ಪಾರ್ವತಿಯು ‘ಪುಣ್ಯನದಿ ಸ್ನಾನ, ವ್ರತ ಜಪ ತಪಾದಿಗಳು, ದೇವರಿಗೆ ಮಾಡಿದ ನಮಸ್ಕಾರ, ಯಾವುದೂ ತಂದೆ-ತಾಯಿಗೆ ಮಾಡಿದ ನಮಸ್ಕಾರ ಮಾಡಿದಾಗ ದಕ್ಕುವ ಪುಣ್ಯ ಫಲಕ್ಕೆ ಸರಿಸಾಟಿಯಾಗಲಾರದು. ಆದ್ದರಿಂದ ಈ ದಿವ್ಯ ಮೋದಕ ಗಣೇಶನಿಗೆ ಸಲ್ಲಬೇಕು. ಹಾಗೂ ಮುಂದೆ ಎಲ್ಲ ಪೂಜಾ ಕಾರ್ಯಗಳಲ್ಲೂ ಗಣೇಶನಿಗೆ ಮೊದಲ ಪೂಜೆ ಎಂದು ಹೇಳಿ ಅವನಿಗೆ ಮೋದಕವನ್ನು ನೀಡಿದಳು. ತಂದೆ ತಾಯಿಯರಿಗೆ ಮೂರು ಪ್ರದಕ್ಷಿಣೆ ಹಾಕಿ, ಅದರಲ್ಲೇ ಪ್ರಪಂಚವನ್ನು ಮತ್ತು ಎಲ್ಲರ ಒಳಿತನ್ನು ಕಂಡ ಗಣೇಶನ ಗುಣವು ಮೊದಲ ವಂದಿತ, ಪ್ರಥಮ ಪೂಜಿತನನ್ನಾಗಿಸಿತು.

ಎಷ್ಟು ದೊಡ್ಡ ಸಾಧನೆ ಮಾಡಿದರೂ ತಂದೆ ತಾಯಿಯರನ್ನು ಗೌರವಿಸದಿದ್ದರೆ ಅದು ಶೂನ್ಯವೇ ಸರಿ. ಇತ್ತೀಚೆಗೆ ಮಕ್ಕಳು ಹೆತ್ತವರಿಗೆ ಆಧುನಿಕ ಗೆಜೆಟ್‌ಗಳ ತಿಳಿವಳಿಕೆ ಇಲ್ಲವೆಂದು ತಂದೆ ತಾಯಿಯರ ರೀತಿನೀತಿಗಳು ಹಿಂದಿನ ಕಾಲದವು ಅವರು ನಮ್ಮಂತೆ ಬದಲಾಗಬೇಕು. ಇಲ್ಲದಿದ್ದರೆ ಅವರೊಂದಿಗೆ ಹೆಜ್ಜೆ ಹಾಕುವುದು ತುಂಬಾ ತೊಂದರೆದಾಯಕವೆಂದು ಭಾವಿಸುತ್ತಾರೆ.

ವಿದ್ಯಾವಂತರಾದರೂ ವಿನಯ ಮರೆಯುತ್ತಾರೆ. ಹೆತ್ತು ಹೊತ್ತು ಕಡುಕಷ್ಟಗಳ ನಡುವೆಯೂ ಸಾಕಿ ಸಲುಹಿ, ತಮಗೆ ಸಿಗದ ಸೌಲಭ್ಯಗಳನ್ನು ಮಕ್ಕಳಿಗೆ ಕೊಟ್ಟ ಅವರೇ ಇಂದಿನ ಪ್ರಗತಿಗೆ ಕಾರಣ ಎಂಬುದನ್ನು ಮರೆಯುತ್ತಿದ್ದಾರೆ. ಹತ್ತಿದ ಏಣಿಯನ್ನು ತಳ್ಳಿ ವೃದ್ಧಾಶ್ರಮದ ದಾರಿ ತೋರಿಸುವುದು ಎಷ್ಟು ಸರಿ? ಈ ಸುಂದರ ಜಗಕ್ಕೆ ಬರಲು ಕಾರಣರಾದ, ಸುಖ ನೆಮ್ಮದಿಗೆ ಸೆಲೆಯಂತಿರುವ ಅಪ್ಪ ಅವ್ವನನ್ನು ಪ್ರಾಣದಂತೆ ಕಾಪಾಡಿಕೊಂಡರೆ ಜೀವಕ್ಕೆ ಚೈತನ್ಯ ತುಂಬುವುದು ಆತಂಕ ಒತ್ತಡ ಖಿನ್ನತೆ ಇತ್ಯಾದಿ ಸಮಸ್ಯೆಗಳು ತಹಬಂದಿಗೆ ಬರುವವು. ಬದುಕು ಚುರುಕುಗೊಂಡು ಪ್ರತಿದಿನ ಪ್ರತಿಕ್ಷಣ ಉತ್ಸಾಹ ಉಲ್ಲಾಸ ಆವರಿಸುವುದು. ಹೆತ್ತವರನ್ನು ಪ್ರೀತಿಸುವುದು ಗೌರವಿಸುವುದು ಜೀವನದ ಸಂಜೀವಿನಿಯಾಗಿದೆ. ಅಷ್ಟೇ ಅಲ್ಲ ಬದುಕಿನ ಅದ್ಭುತ ಯಾತ್ರೆಯನ್ನು ಸಾರ್ಥಕಗೊಳಿಸುತ್ತದೆ.

ಜಯಶ್ರೀ.ಜೆ.ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group