ಹುನಗುಂದ :ವಿದ್ಯಾರ್ಥಿ ಜೀವನ ತುಂಬ ಮಹತ್ವದ್ದು ಅದು ಮರೆಯಲಾಗದ ಅನುಭವ. ನಮ್ಮನ್ನೆಲ್ಲ ಪುಳಕಗೊಳಿಸುವ ಹಳೆಯ ನೆನಪುಗಳು ನಮಗೆಲ್ಲ ಜೀವಚೈತನ್ಯ ನೀಡಬಲ್ಲವು ಎಂದು ಎಸ್ ಎಸ್.ಕಡಪಟ್ಟಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲಿನ ಟ್ರಸ್ಟಿ ಬಸವರಾಜ ಕಡಪಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.
ಇಲ್ಲಿನ ಎಸ್.ಎಸ್ ಕಡಪಟ್ಟಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲಿನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿ.ಮ.ಪ್ರೌಢಶಾಲೆಯ 1982 ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಪರಿಚಯಾತ್ಮಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಸ್ಪರ ಭೇಟಿ, ಕುಶಲೋಪರಿಗಳೇ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ 40 ವರ್ಷಗಳ ಹಿಂದಿನ ಗೆಳೆಯರು ಒಂದೆಡೆ ಸೇರಿ ನಮ್ಮ ಜೀವನದ ಏಳು- ಬೀಳು, ಯಶಸ್ಸನ್ನು ಹಂಚಿಕೊಳ್ಳಲು ಈ ಪರಿಚಯಾತ್ಮಕ ಕಾರ್ಯಕ್ರಮ ಸಹಕಾರಿಯಾಗಿದ್ದು ಇದೊಂದು ಮಾದರಿಯಾದ ಕಾರ್ಯಕ್ರಮವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಜಿ.ಪಂ.ಮಾಜಿ ಅಧ್ಯಕ್ಷ ಸುಭಾಸ ತಾಳಿಕೋಟಿ ಮಾತನಾಡಿ, ವಿದ್ಯಾರ್ಥಿ ಜೀವನದ ಕ್ಷಣಗಳನ್ನು ಮೆಲುಕು ಹಾಕಿ 40 ವರ್ಷಗಳ ಹಿಂದಿನ ಸ್ನೇಹಕ್ಕೆ ಈ ಕಾರ್ಯಕ್ರಮ ಕೊಂಡಿಯಂತಾಗಿದೆ ಎಂದರು.
ವಿ.ಮ.ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ಬನ್ನಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸ್ನೇಹ ಬಳಗದ ಗೌರವಾಧ್ಯಕ್ಷ ಈಶ್ವರ ಗಡ್ಡಿ, ಉಪಾಧ್ಯಕ್ಷ ಬಸವರಾಜ ಗೊಣ್ಣಾಗರ, ಸಾವಿತ್ರಿದೇವಿ ಕತ್ತಿ, ಗೌರವ ಕಾರ್ಯದರ್ಶಿ ಮಲ್ಲಣ್ಣ ತುಂಬದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಾಗೀರಥಿ ಬಾದವಾಡಗಿ ಪ್ರಾರ್ಥಿಸಿದರು. ಬಸವರಾಜ ಮಸ್ಕಿ ಸ್ವಾಗತಿಸಿದರು. ಈಶ್ವರ ಗಡ್ಡಿ ಪ್ರಾಸ್ತಾವಿಕವಿಕವಾಗಿ ಮಾತನಾಡಿದರು. ಬಿ.ಎಸ್.ಪಾಟೀಲ ಅಗಲಿದ ಸ್ನೇಹಿತರಿಗೆ ಸಂತಾಪ ಸೂಚಕ ಸಭೆ ನಡೆಸಿಕೊಟ್ಟರು. ಅಶೋಕ ಭಾವಿಕಟ್ಟಿ ವಂದಿಸಿದರು. ಸಿದ್ದಲಿಂಗಪ್ಪ ಬೀಳಗಿ ಮತ್ತು ಎಸ್.ಆರ್.ಹುಂಡೇಕಾರ ನಿರೂಪಿಸಿದರು.