ಬೆಳಿಗ್ಗೆ ತರಕಾರಿ ತರೋದಕ್ಕೆ ಹೋಗಿದ್ದಾಗ ಟೀ ಕುಡಿದು ತಮಾಷೆ ಮಾಡಿ ಮನೆಗೆ ಬಂದೆ, ಒಂದು ಗಂಟೆ ನಂತರ RIP ಅಂತ ಗೆಳೆಯನ ಪೋಸ್ಟ್ ನೋಡಿದೆ, ಮತ್ತೆ ನಾನು ಯಾರ ಜೊತೆಗೆ ಮಾತನಾಡಿ ಮನೆಗೆ ಬಂದಿರುವೆನು? ಆತನಾ ? ಅಯ್ಯೋ ಹೇಗೆ ಸಾಧ್ಯ? ಈಗ ತಾನೆ ಮಾತನಾಡಿದ ವ್ಯಕ್ತಿಯ ಅಂತ್ಯಕ್ರಿಯೆಗೆ ಎಲ್ಲರೂ ಹೋಗೋಣ ಎನ್ನುವ ಗ್ರೂಪ್ ಸಂದೇಶಗಳು,ಒಂದು ಕ್ಷಣ ನನ್ನ ಎದೆ ಬಡಿತ ಪ್ರಾರಂಭವಾಯಿತು… .
ಆಶ್ಚರ್ಯ ಅಲ್ಲವೆ? ಎಲ್ಲದಕ್ಕೂ ಅವಸರ, instant ಜಮಾನಾ ಅಲ್ವಾ? ಸಾವು ಕೂಡ ಅಷ್ಟೆ, ಅದಕ್ಕೂ ಅವಸರ, ಯಾಕೆ.?ಇಷ್ಟು ಅನಾಹುತಗಳು ನಡೀತಾ ಇದಾವೆ. ?
ಬದಲಾಗುತ್ತಿರುವ ಜೀವನ ಶೈಲಿ. ಎಲ್ಲವೂ ಈಗಲೇ ಬೇಕು, ಈಗಲೇ ಆಗಬೇಕು ಎನುತ್ತ ನಾವು ಒತ್ತಡದ ಜೀವನ ಶೈಯಲ್ಲಿ ನಮ್ಮನ್ನು ನಾವು ಸಿಲುಕಿಸಿಕೊಂಡಿದ್ದೇವೆ.
ಹಿಂದಿನ ಕಾಲದಲ್ಲಿಯೂ ಕೂಡ ದಿನಕ್ಕೆ 24 ಘಂಟೆಗಳು ಇತ್ತು, ಈಗಲೂ ಕೂಡ 24 ಘಂಟೆಗಳು ಇದಾವೆ. ಯಾಕೆ ಇಷ್ಟೊಂದು ಬ್ಯುಸಿ ಆಗಿಬಿಟ್ಟಿದ್ದಿವಿ. ? ನಮ್ಮ ನಡೆ ಎತ್ತ ಕಡೆಗೆ? ನಮ್ಮ ಗುರಿ ಏನು? ಎಲ್ಲವು ಗಡಿಬಿಡಿ, ಬೆಳ್ಳಿಗೆ ಎದ್ದು ನಿದ್ರೆಯಲ್ಲಿಯೆ ಮಕ್ಕಳಿಗೆ 5 ನಿಮಿಷದಲ್ಲಿ ಸ್ನಾನ ಮಾಡಿಸಿ ಕೆಲಸದವಳು ಮಾಡಿಟ್ಟ ಅಡುಗೆ, ಲಂಚ್ ಬಾಕ್ಸ್ ಗೆ ಹಾಕಿ ಅವಸರದಲ್ಲಿ ಒಂದು ಗ್ಲಾಸ್ ಬೊರ್ನವಿಟಾ ಕುಡಿಯುತ್ತಾ ಎರಡು ಬಾದಾಮ್ ತಿನಿಸುತ್ತ ಎಳೆದುಕೊಂಡು ಓಡುತ್ತ ಸ್ಕೂಲ್ ಬಸ್ ನಲ್ಲಿ ಮಕ್ಕಳಿಗೆ ಕುಡ್ರಿಸಿ, ಮನೆಗೆ ಬಂದು ಜೀನ್ಸ್ ಪ್ಯಾಂಟ್ ಟಿ ಶರ್ಟ್ ಧರಿಸಿ ಸ್ಕೂಟಿ ಹತ್ತಿ ಹೋಗುವಾಗ ಅವಸರದಲ್ಲಿ ಗಂಡನ್ನನ್ನು ಲಾಕ್ ಮಾಡಿ ಬಂದು ಎಡವಟ್ಟು ಮಾಡಿಕೊಳ್ಳುವ ಪರಿ.
ಪೇರೆಂಟ್ಸ್ ಮೀಟಿಂಗ್ ಇದ್ದಾಗ ಅಮ್ಮನಿಗೆ ರಜೆ ಸಿಗದ ಕಾರಣ ಅಪ್ಪ ಹೋದಾಗ ನಿಮ್ಮ ಮಗನ ಪರ್ಫಾರ್ಮೆನ್ಸ್ ನೋಡಿ ಎಂದಾಗ ಸ್ವಲ್ಪ ಹೊತ್ತು ತಬ್ಬಿಬ್ಬಾಗಿ ತನ್ನ ಮಗ ಯಾವ ಕ್ಲಾಸ್ ಎಂದು ಮೆಲ್ಲನೆಯ ಧ್ವನಿಯಲ್ಲಿ ಹೆಂಡತಿಗೆ ಕೇಳಿದ್ದಾಗ,ಯಾರು ನೀವು ಎನ್ನುವ ಉತ್ತರ ಬಂದು..!
ಇನ್ನೊಂದು ಕಡೆ ಇತ್ತ ಯುವಕರ ಒಂದು ಕಥೆ ಶ್ರಮ ಪಟ್ಟು ಓದಿ, ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸಕ್ಕೆ ಸೇರಿ, ಬಿಡುವಿಲ್ಲದ ಜೀವನ ಶೈಲಿಯಲ್ಲಿ ತಮ್ಮ ವಾಸ್ತವದ ಬಗ್ಗೆ ಯೋಚಿಸದೆ,ಹೆಚ್ಚಿನ ವೇತನ, ಉನ್ನತ ಹುದ್ದೆಗಳತ್ತ ಗಮನ ಅಂತಹದರಲ್ಲಿ ಹಿಂದೆ ಮುಂದೆ ಯೋಚಿಸದೆ ಗೊತ್ತು ಪರಿಚಯ ಇಲ್ಲದ ಹುಡುಗಿಯರೊಂದಿಗೆ ಡೇಟಿಂಗ್ ಸುತ್ತಾಟ, ಎಲ್ಲವೂ ನೀನೆ, ನನ್ನ ಪ್ರಪಂಚ ನೀನೆ ಎನ್ನುತ ಮದುವೆ ಪ್ರಸ್ತಾಪ ಮಾಡುವ ಹೊತ್ತಿಗೆ ಬ್ರೇಕ್ಅಪ್ ಒತ್ತಡಕ್ಕೆ ಸಿಲುಕಿ ಅಮ್ಮ ಅಪ್ಪನ ಬಗ್ಗೆ ಯೋಚಿಸದೆ ಆತ್ಮಹತ್ಯೆ ಮಾಡಿಕೊಳ್ಳುವುದು.
ಇನ್ನೊಂದು ಕಡೆ ಏನಾದರೂ ಮಾಡಿ ಯಶಸ್ವಿಯಾಗುವ ಬಯಕೆಯಿಂದ ತನ್ನನ್ನು ತಾನು ಸ್ಮಾರ್ಟ್ ಆಗಿ ಕಾಣಲು gym ಗೆ ಹೋಗುವುದು, ಎಲ್ಲರಿಗಿಂತಲೂ ಸ್ಮಾರ್ಟ್ ಆಗಿ ಕಾಣಬೇಕೆಂಬ ಅವಸರದಲ್ಲಿ ಹೆಚ್ಚಿನ ಸಮಯ ಜಿಮ್ ನಲ್ಲಿ ಶ್ರಮಿಸುವಾಗ ಒತ್ತಡಕ್ಕೆ ಸಿಲುಕಿ ಕುಳಿತಲ್ಲೇ, ನಿಂತಲ್ಲೇ ಹೃದಯಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡ ಉದಾಹರಣೆಗಳು.
ಅವಸರದ ಜೀವನದಲ್ಲಿ ತಂದೆ ತಾಯಿಯರು ಮಕ್ಕಳಿಗೆ ಸಮಯ ಕೊಡದೇ ಇರುವುದು, ಮಕ್ಕಳ ವೈಯಕ್ತಿಕ ಜೀವನ ಅವರ ನಡೆ ನುಡಿಗಳ ಬಗ್ಗೆ ಗಮನ ಕೊಡದಿರುವುದು, ಅವರಿಗೆ ನೈತಿಕ ಬೆಂಬಲ ಮಾರ್ಗದರ್ಶನ ಕೊಡದಿರುವುದು, ಎಲ್ಲವೂ ವ್ಯವಸ್ಥಿತವಾಗಿ ಅನುಕೂಲಿಸಿದ್ದೇವೆ ನಮ್ಮ ಮಕ್ಕಳಿಗೆ ಎನ್ನುವ ಮೌಢ್ಯತೆಯಲ್ಲಿ ತಂದೆತಾಯಿ ಇರುವಾಗ ನಿಮ್ಮ ಮಗನ ಬಗ್ಗೆ tv ಯಲ್ಲಿ ಸುದ್ದಿ ಬಿತ್ತರವಾಗುತ್ತಿದಂತೆ ನಮ್ಮ ಮಗ ಅತ್ಯಾಚಾರ, ಕೊಲೆ, ದರೋಡೆ ಮಾಡಿದ್ದಾನೆಯೆ? ಇದು ಹೇಗೆ, ನಮ್ಮೊಂದಿಗೆ ಇದ್ದು ನಮಗೆ ಗೊತ್ತಿಲ್ಲದೆ ಈ ಥರಾ ಕೃತ್ಯ ಎಸಗುವಷ್ಟು ಕ್ರೂರಿಯಾದ ಮಕ್ಕಳ ಬಗ್ಗೆ ಗೊತ್ತಿಲ್ಲದ ನಮ್ಮ ಜೀವನ.
ಇನ್ನೊಂದೆಡೆ ಭಯ ಭಕ್ತಿ ಇಲ್ಲದ ಆಡಂಬರದ ಪೂಜಾ ಪುನಸ್ಕಾರಗಳು, ದೇವಸ್ಥಾನಗಳಿಗೆ ಹೋಗುವುದು ಫಾಶನ್, ಸಮಯ ಸಂದರ್ಭ ಇಲ್ಲದೆ ಪ್ರವಾಸಕ್ಕೆ ಹೋಗೋದು ಇಲ್ಲ ಸಲ್ಲದ ಸಾಹಸಕ್ಕೆ, ಸೆಲ್ಫೀಗಾಗಿ ಪ್ರಾಣ ಕಳೆದುಕೊಂಡ ಬುಚಿ ಜಲಪಾತ ಲೋನಾವಳ ಪುಣೆ ಘಟನೆ ಮೈಜುಮ್ ಎನ್ನುವ ಹೊತ್ತಿಗೆ, ಇತ್ತಕಡೆ ದಕ್ಷಿಣ ಕರ್ನಾಟಕದದಲ್ಲಿ ಗುಡ್ಡ ಕುಸಿತ, ಇನ್ನೊಂದೆಡೆ ಕೇರಳದಲ್ಲಿ ಭಯಾನಕ ಭೂ ಕುಸಿತ, ನದಿಯ ದಿಕ್ಕೆ ಬಾಲಾಯಿಸಿ ಪ್ರಕೃತಿ ವಿಕೋಪಕ್ಕೆ ಮನುಷ್ಯನ ಜೊತೆಗೆ ಇಡೀ ಜೀವ ಸಂಕುಲ ನಲುಗಿ ಹೋಯಿತು.
ಯಾಕೆ ಹೀಗೆ ಮನುಷ್ಯನ ಪ್ರಾಣಕ್ಕೆ ಬೆಲೆ ಇಲ್ಲವೆ?
ಎಲ್ಲವೂ ಎಲ್ಲರ ಬಳಿಯೂ ಇದೆ, ಎಲ್ಲರೂ ಅನುಕೂಲಸ್ಥರು, ಆದರೂ ನೆಮ್ಮದಿಯಿಲ್ಲ, ವಿಶ್ವಾಸ ಇಲ್ಲ, ಕರುಣೆ ಇಲ್ಲ, ಮಳೆ ಇದ್ದರೂ ಎಲ್ಲವೂ ಕೊಚ್ಚಿಕೊಂಡು ಹೋಗಿ ಬೆಳೆಗಳು ಇಲ್ಲ, ಪೂಜೆ ಪುನಸ್ಕಾರ ಮಾಡುತ್ತಿದ್ದರೂ ದೇವರ ಆಶೀರ್ವಾದ ಇಲ್ಲ, ಆಶೀರ್ವಾದ ಇದ್ದರೂ ದೇವರ ಕೃಪೆ ಇಲ್ಲ…. ಸಮಯ ಇದ್ದರೂ ವಿಶ್ರಾಂತಿ ಇಲ್ಲ, ಹಣ ಇದ್ದರೂ ಉಳಿತಾಯ ಇಲ್ಲ,ಎಲ್ಲವೂ ಕೃತಕ, ಆದರೂ ಎಲ್ಲಿಗೆ ನಮ್ಮನಮ್ಮ ಅವಸರದ ಪ್ರಯಾಣ?
ನಂದಿನಿ ಸನಬಾಳ್, ಶಿಕ್ಷಕಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಳಾ
ಕಲಬುರಗಿ