ಭಾರತವು ಹಲವಾರು ಪುಣ್ಯ ಪುರುಷರಿಗೆ ಜನ್ಮನೀಡಿದ ಪುಣ್ಯಭೂಮಿ.ಭಾರತದ ಆದರ್ಶ ಚಿಂತನೆಗಳನ್ನು,ಸಾಧನೆಗಳನ್ನು ಇಡೀ ವಿಶ್ವ ಮೆಚ್ಚಿದೆ.ಇಂತಹ ಸುಭದ್ರ ಬುನಾದಿಯ ಮೇಲೆ ಸದೃಢ ಹಾಗೂ ಸುಭದ್ರ ಭಾರತವನ್ನು ಕಟ್ಟುವ ಜವಾಬ್ದಾರಿ ಇಂದಿನ ಯುವ ಜನತೆಯ ಮೇಲಿದೆ ಎಂದು ಹಿರಿಯ ಪತ್ರಕರ್ತ, ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಕರೆ ನೀಡಿದರು.
ಅವರು ಇಂದು ಬೆಳಿಗ್ಗೆ ಮೈಸೂರು ಜಿಲ್ಲೆ ಕೆ.ಆರ್.ನಗರದ ಭಗತ್ ಸಿಂಗ್ ಯೂತ್ ಫೌಂಡೇಶನ್ ಸಂಸ್ಥೆಯು ಏರ್ಪಡಿಸಿದ್ದ ಕ್ರಾಂತಿವೀರ ಭಗತ್ ಸಿಂಗ್ ಅವರ ೧೧೪ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಭಾರತವು ಸ್ವಾತಂತ್ರ್ಯ ಗಳಿಸಿ ೭೫ ವರ್ಷಗಳು ಕಳೆದರೂ ರಾಷ್ಟವನ್ನು ಬಡತನ,ನಿರುದ್ಯೋಗ, ಮಹಿಳೆಯರ ಮೇಲೆ ದೌರ್ಜನ್ಯ,ಪರಿಸರ ವಿನಾಶ,ಭ್ರಷ್ಟಾಚಾರ ಮೊದಲಾದ ಸಮಸ್ಯೆಗಳು ಕಾಡುತ್ತಿವೆ.ಯುವಜನರು ಬಡತನ,ನಿರುದ್ಯೋಗ ಗಳಿಂದ ಬಸವಳಿದಿದ್ದಾರೆ.ಯುವಜನತೆಮೊಬೈಲ್ ಗೀಳಿಗೆ ಬಲಿಯಾಗುತ್ತಿದ್ದಾರೆ.ರೈತರಿಗೆ ವೈಜ್ನಾನಿಕ ಬೇಸಾಯದ ಮಾಹಿತಿ ಕೊರತೆ ,ಅವರು ಬೆಳೆದ ಬೆಳೆಗಳಿಗೆ ಬೆಲೆ ಕುಸಿತ ಜೀವಂತ ಸಮಸ್ಯೆಗಳಾಗಿ ಕಾಡುತ್ತಿದೆ.ಯುವಜನತೆ ಸಂಘಟಿತರಾಗಿ ಈ ಎಲ್ಲಾ ಸಮಸ್ಯೆಗಳ ನಿವಾರಣೆಗೆ ಶ್ರಮಿಸಬೇಕೆಂದವರು ಕರೆ ನೀಡಿದರು.
ಪರಿಸರ ರಕ್ಷಣೆ,ನೇತ್ರ ದಾನ,ಅಂಗಾಂಗ ದಾನ,ರೈತರಿಗೆ ವೈಜ್ನಾನಿಕ ಬೇಸಾಯದ ತರಬೇತಿ,ಯುವಜನರಿಗೆ ಸ್ವಯಂ ಉದ್ಯೋಗ ತರಬೇತಿ,ಸ್ವಚ್ಛಪರಿಸರ ನಿರ್ಮಿಸಲು ಯುವ ಸಂಘಟನಗಳು ಶ್ರಮಿಸಬೇಕು.ತಮ್ಮ ಜನ್ಮ ದಿನದಂದು,ತಂದೆ-ತಾಯಿಗಳ ಜನ್ಮ ದಿನದಂದು, ತಮ್ಮ ಮದುವೆಯ ವಾರ್ಷಿಕೋತ್ಸವದ ದಿನದಂದು ಪ್ರತಿ ವರ್ಷವೂ ಪ್ರತಿಯೊಬ್ಬ ವ್ಯಕ್ತಿಯೂ ಸಸಿಗಳನ್ನು ನೆಡಬೇಕು.ಆ ಮೂಲಕ ಪರಿಸರ ಉಳಿಸುವ ಕಾರ್ಯ ಮಾಡಬೇಕೆಂದವರು ಕರೆ ನೀಡಿದರು.ಎಲ್ಲರೂ ಬದುಕಿದ್ದಾಗ ತಮ್ಮ ನೇತ್ರಗಳನ್ನು ದಾನ ಮಾಡಲು ಒಪ್ಪಿಗೆ ಕೊಡಬೇಕು.ಆ ಮೂಲಕ ತಮ್ಮ ಸಾವಿನ ನಂತರ ಇಬ್ಬರು ಅಂಧರ ಬಾಳಿಗೆ ಬೆಳಕಾಗಬೇಕು ಎಂದು ಕಿವಿಮಾತು ನುಡಿದರು. ನಂತರ ಕಾರ್ಯಕ್ರಮದಲ್ಲಿ ಭಾಗವಸಿದ್ದ ಎಲ್ಲರಿಗೂ ಸಾಮೂಹಿಕ ಪರಿಸರ ಸಂರಕ್ಷಣಾ ಪ್ರಮಾಣವಚನವನ್ನು ಬೋಧಿಸಿದರು.
ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶ್ರೀಮತಿ ಗಾಯತ್ರಿ ಅವರು ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಭಗತ್ ಸಿಂಗ್ ಅವರ ಜೀವನ ಹಾಗೂ ಸ್ವಾತಂತ್ರ್ಯ ಹೋರಾಟ ಕುರಿತು ಶಶಿಕುಮಾರ್ ಅವರು ಮಾತನಾಡಿದರು.ಕವಿ ಹಾಗೂ ಸಮಾಜಸೇವಕಿ ಶ್ರೀಮತಿ ಚೆಲುವಾಂಬಿಕಾ,ಸಮಾಜಸೇವಕರಾದ ಧರ್ಮ ಹೊಸೂರು,ಕೃಷ್ಣಭಟ್,ಪ್ರಸಿದ್ದ ಜಾನಪದ ಗಾಯಕರಾದ ಅಮ್ಮ ರಾಮಚಂದ್ರ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಗತ್ ಸಿಂಗ್ ಯೂತ್ ಫೌಂಡೇಶನ್ ಪ್ರಧಾನಕಾರ್ಯದರ್ಶಿ ರಕ್ಷಿತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷರಾದ ಅರುಣ್ ಮೊದಲಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಹಿರಿಯ ಕವಿಗಳ ಗೀತೆಗಳನ್ನು ಗಾಯಕರಾದ ಅಮ್ಮ ರಾಮಚಂದ್ರ ಸುಶ್ರವ್ಯವಾಗಿ ಹಾಡಿದರ.ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಉಚಿತವಾಗಿ ಸಸಿಗಳನ್ನು ವಿತರಿಸಲಾಯಿತು.