ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸುಪುತ್ರಿ ಶ್ರೀಮತಿ ವಾಸಂತಿಮೂರ್ತಿ ಕೆನಡಾದಲ್ಲಿ ವಾಸವಿದ್ದಾರೆ. ಕಳೆದ ವರ್ಷ ಗೊರೂರಿನಲ್ಲಿ ನಡೆದ ಡಾ.ಗೊರೂರು ನೆನಪು ಕಾರ್ಯಕ್ರಮಕ್ಕೆ ಆಗಮಿಸಿದ್ದು ಅಲ್ಲಿ ನನಗೆ ಪರಿಚಿತರಾದರು. ಆದಾಗಿ ಒಂದು ವರ್ಷದ ನಂತರ ಪುನಃ ಗೊರೂರು ಹಾಗೂ ಬೆಂಗಳೂರು ಗಾಂಧಿ ಭವನದಲ್ಲಿ ಗೊರೂರು ಸಂಸ್ಮರಣೆ ಕಾರ್ಯಕ್ರಮ ಸಂಘಟಿಸುವಲ್ಲಿ ನಾಲ್ಕೈದು ತಿಂಗಳ ನನಗೊಂದು ಮೆಸೇಜ್ ಹಾಕಿ, ಅನಂತರಾಜು, ಅಮೆರಿಕಾದಿಂದ ಡಾ.ಸುಸಾನ್ ಹ್ಯಾಂಸೆಟ್ ಹಾಸನಕ್ಕೆ ಬರುತ್ತಾರೆ. ಅಲ್ಲಿ ಕೆಲ ದಿನ ಹೋಟೆಲ್‍ನಲ್ಲಿ ತಂಗಿದ್ದು ಗೊರೂರಿಗೆ ಹೋಗಿ ಬರುತ್ತಾರೆ ಅವರಿಗೆ ಸಹಕರಿಸಿ ಎಂಬುದಾಗಿತ್ತು ಮೆಸೇಜ್ ತಾತ್ಪರ್ಯ. ಓಕೆ ಮೆಸೇಜ್ ರಿಟರ್ನ್ ಹಾಕಿದೆ. ಕಾರ್ಯಕ್ರಮ ನಡೆದ ಜುಲೈ 4ಕ್ಕೆ ಸುಸಾನ್ ಮೇಡಂ ನೇರ ಗೊರೂರಿಗೆ ವಾಸಂತಿಮೂರ್ತಿ ಮೇಡಂ ಜೊತೆಗೆ ಬಂದು ಅಲ್ಲಿ ಪರಿಚಯವಾಯಿತು.
ಹಾಸನದಲ್ಲಿ ಹೋಟೆಲ್ ಬುಕ್ ಆಗಿತ್ತು. ಗೊರೂರು ಕಾರ್ಯಕ್ರಮ ಮುಗಿಸಿ ಮೇಡಂ ಅವರನ್ನು ಹೋಟೆಲ್‍ಗೆ ಬಿಟ್ಟು ವಾಪಸ್ಸು ಬೆಂಗಳೂರಿಗೆ ಹೋಯಿತು ವಾಸಂತಿ ಮೇಡಂ ತಂಡ. ಮಾರನೇ ದಿನ ನಾನು ಮತ್ತು ಹ್ಯಾಂಸೆಟ್ ಮೇಡಂ ಗೊರೂರಿಗೆ ಬಸ್ಸಿನಲ್ಲೇ ಹೊರಟೆವು. ಬಸ್ಸಿನಲ್ಲಿ ಮೇಡಂ ‘ಫುಡ್ ಕಮ್ಯೂನಿಟಿ ಅಂಡ್ ದಿ ಸ್ಪಿರಿಟ್ ವರ್ಲ್ಡ್ ಎನ್ ಇಂಡಿಯನ್ ವಿಲೇಜ್ ಸ್ಟಡಿ’ ಪುಸ್ತಕ ಕೊಟ್ಟರು. ಅದನ್ನು ಹಾಗೆಯೇ ಒಮ್ಮೆ ತಿರುವಿ ಹಾಕಿದೆ. ಪುಸ್ತಕದೊಳಗಿನ ಛಾಯಾಚಿತ್ರಗಳನ್ನು ವಿಶೇಷ ಆಸಕ್ತಿಯಿಂದ ಗಮನಿಸಿದೆ.
ಆಗಲೇ ಅರಿವಾಯಿತು ಇದೊಂದು ಬಹಳ ಮಹತ್ವಪೂರ್ಣ ಕೃತಿ ಎಂದು. ಇದು ಇವರ ಪತಿ ಸ್ಟಾನ್ಲಿ ರೆಜಿಲ್ಸನ್ ಅವರ ಪಿಹೆಚ್‍ಡಿ ಪ್ರಬಂಧ. ಅಮೇರಿಕಾದ ಕೊಲಂಬಿಯ ಯೂನಿವರ್ಸಿಟಿಗಾಗಿ ಸಿದ್ಧಪಡಿಸಿದ್ದು. ಬಸ್ಸಿನಲ್ಲಿ ಪ್ರಯಾಣಿಸುತ್ತಿರಲು ಯಾಕೂಬ್ ಪೋನ್ ಮಾಡಿದ. ‘ಅಣ್ಣ, ವೇದಮೂರ್ತಿಗೆ ಕೊಡುತ್ತೇನೆ ನೋಡಿ ಎಂದ. ‘ಏನ್ ನೋಡುದು..? ಯಾವಾಗಲೂ ಇವನದು ಇದೇ ಕಥೆ. ಯಾರು ಏನೂ ಯತ್ತಾ ಯಾವುದೂ ವಿಷಯ ತಿಳಿಸದೇ ನೇರ ಪೋನ್ ಕೊಟ್ಟು ಇಕ್ಕಿಟ್ಟಿಗೆ ಸಿಕ್ಕಿಸುವುದು ಅವನ ಹಳೆಯ ಚಾಳಿ.
‘ಅನಂತರಾಜ್ ಸಾರ್, ನಾನು ವೇದಮೂರ್ತಿ. ಫಾರಿನ್ ಮೇಡಂ ಅವರನ್ನು ನೇರ ನಮ್ಮ ಗೊರೂರು ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಕರೆದುಕೊಂಡು ಬನ್ನಿ, ನಾನು ಬಸ್‍ಸ್ಟ್ಯಾಂಡ್‍ನಲ್ಲಿ ಬೈಕ್ ನಿಲ್ಲಿಸಿಕೊಂಡು ಕಾಯುತ್ತಿರುತ್ತೇನೆ.. ಎಂದರು. ಆದರೆ ಇರಲಿಲ್ಲ. ನಾವೇ ನಡೆದುಕೊಂಡು ಕಾಲೇಜು ಗೇಟ್ ಬಳಿಗೆ ಹೋಗುತ್ತಿರಲು ಆಗ ವೇದಮೂರ್ತಿ ಆಗಮಿಸಿ ಬೈಕ್‍ನಿಂದ ಇಳಿದರು.
ಡಾ. ಗೊರೂರು ಕಾರ್ಯಕ್ರಮ ನಡೆದ ಭಾನುವಾರ ನಾನು ಮತ್ತು ನಮ್ಮೂರಿನ ಹಿರಿಯ ಉದ್ಯಮಿ ಜಿ.ಎಲ್.ಮುದ್ದೇಗೌಡರು ಜೂನಿಯರ್ ಕಾಲೇಜಿಗೆ ಭೇಟಿ ಇತ್ತಿದ್ದೆವು. ಆಗ ನಾನು ಪ್ರಾಂಶುಪಾಲರಿಗೆ ‘ಮೇಡಂ, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಉಪನ್ಯಾಸ ಏರ್ಪಡಿಸಲು ಮುಂದಿನ ದಿನಗಳಲ್ಲಿ ಸಾಹಿತಿಗಳನ್ನು ಕಾಲೇಜಿಗೆ ಕರೆತರುತ್ತೇನೆ ಎಂದಿದ್ದೆ. ಅದು ಮಾರನೇ ದಿನವೇ ಆಗಿತ್ತು. ಸುಸಾನ್ ಹ್ಯಾಂಸೆಟ್ ಮೇಡಂ ಅವರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ದಿಢೀರನೇ ನಡೆದರೂ ಅರ್ಥಪೂರ್ಣವಾಗಿತ್ತು. ಇದೇ ವೇಳೆ ಸೂಸಾನ್ ಮೇಡಂ ತಮ್ಮ ಯಜಮಾನರ ಒಂದು ಪುಸ್ತಕದ ಜೊತೆಗೆ ತಮ್ಮದೇ 2 ಕೃತಿಗಳಾದ ‘ಕಲರ್ಡ್ ರೈಸ್ ಸಿಂಬಲಿಕ್ ಸ್ಟ್ರಕ್ಚರ್ ಇನ್ ಹಿಂದು ಫ್ಯಾಮಿಲಿ ಫೆಸ್ಟಿವೆಲ್ ಮತ್ತು ‘ಪ್ಲಾಂಟ್ಸ್ ಅಂಡ್ ಪೀಪಲ್ ಕರ್ನಾಟಕ ರೈಟ್ಸ್ ಆಫ್ ಫ್ಯಾಸೆಜ್’ ಪುಸ್ತಕಗಳನ್ನು ಕಾಲೇಜಿನ ಗ್ರಂಥಾಲಯಕ್ಕೆ ಕೊಟ್ಟರು. ನಾನು ಗೊರೂರು ಸೋಮಶೇಖರ್ ಅವರ ಗೊರೂರು ನೆನಪುಗಳು ಪುಸ್ತಕ ಕೊಟ್ಟೆನು. ಸೂಸನ್ ಮೇಡಂ ಅವರು ತಮ್ಮ ಮತ್ತೊಂದು ಕೃತಿ ಬ್ಲಾಂಗಾದೇಶ್..ಕೃತಿಯನ್ನು ಯಾಕೋ ಯಾಕೂಬ್‍ಗೆ ಕೊಟ್ಟರು. ಆತ ಅದನ್ನು ಕಾಲೇಜಿನಲ್ಲೇ ಬಿಟ್ಟುಬಂದ..
ಸೂಸನ್ ಮೇಡಂ ಹಾಸನದಲ್ಲಿ ಇರುವಾಗ್ಗೆ ಮೊನ್ನೆ ನಾನು ಹಾಸನದ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರು ಡಾ. ಎಂ.ಬಿ.ಇರ್ಷಾದ್ ಅವರಿಗೆ ಪೋನ್ ಮಾಡಿ ಹ್ಯಾಂಸೆಟ್ ಮೇಡಂ ಅವರನ್ನು ಕಾಲೇಜಿಗೆ ಕರೆದುಕೊಂಡು ಹೋದೆ. ನಾನು ಅದೇ ಕಾಲೇಜಿಗೆ ಏಕೆ ಕರೆದುಕೊಂಡು ಹೋದೆ ಎಂದರೆ ನಾನು ಆ ಕಾಲೇಜಿನ ಓಲ್ಡ್ ಸ್ಟೂಡೆಂಟ್. ಓದಿದ ಕಾಲೇಜಿಗೆ ಬಾಕಿ ಋಣ ತೀರಿಸಬೇಕಲ್ಲ.!
ನಾವಾದರೂ ಕವಿಗಳು ಶ್ರೀಮಂತರು
ಹಾಗೆಂದು ಲೋಕಾಯುಕ್ತರು
ದಾಳಿ ಮಾಡಿದರೆ ಸಿಗಬಹುದು ಶಾಲು
ಒಂದಿಷ್ಟು ಕೃತಿಗಳು ಜೊತೆಗೆ ನಿಘಂಟು
ದೊರೆಯಲಾರದು ಹಣದ ಗಂಟು
ಏಕೆಂದರೆ ನಾವು ಬರೇ
ಭಾವನೆಗಳ ಹೃದಯ ಶ್ರೀಮಂತರು
ಮಾರನೇ ದಿನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಾಡಾಯಿತು. ಕಾರ್ಯಕ್ರಮದ ವರದಿ ಪತ್ರಿಕೆಗಳಲ್ಲಿ ಹೀಗೆ ಬಂದಿತ್ತು.
50 ವರ್ಷಗಳಲ್ಲಿ ಭಾರತೀಯ ಸ್ಥಳೀಯ ಸಂಸ್ಕೃತಿ ಮತ್ತು ಆಚರಣೆಗಳಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಅವು ಪ್ರಗತಿಯ ಹಾದಿಯಲ್ಲಿವೆ ಎಂದು ಅಮೆರಿಕದ ಸಮಾಜ ವಿಜ್ಞಾನಿ ಡಾ. ಸುಸಾನ್ ಹ್ಯಾಂಸೆಟ್ ತಿಳಿಸಿದರು. ಅವರು ನಗರದ ಸರ್ಕಾರಿ ಸ್ವಾಯತ್ತ ಕಲಾ ಕಾಲೇಜಿನಲ್ಲಿ ಸಮಾಜ ಶಾಸ್ತ್ರ ವಿಭಾಗದಿಂದ ಏರ್ಪಡಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
55 ವರ್ಷಗಳ ಹಿಂದೆ ತಮ್ಮ ಪತಿಯೊಂದಿಗೆ ಗ್ರಾಮೀಣ ಸಾಮಾಜಿಕ ಸಾಂಸ್ಕೃತಿಕ ಮತ್ತು ಜಾನಪದ ಅಧ್ಯಯನಕ್ಕಾಗಿ ಗೊರೂರು ಮತ್ತು ಪೊನ್ನಾಥಪುರವನ್ನು ಆಯ್ಕೆ ಮಾಡಿಕೊಂಡು ಕ್ಷೇತ್ರಕಾರ್ಯ ಮಾಡಿದ ಸಂದರ್ಭಕ್ಕೂ , ಪ್ರಸ್ತುತ ಸಂದರ್ಭಕ್ಕೂ ಆಚಾರ ವಿಚಾರ ಉಡುಗೆ ತೊಡುಗೆಗಳಲ್ಲಿ ಗಮನಾರ್ಹ ಬದಲಾವಣೆಗಳಾಗಿದೆ. ನನ್ನ ವಿದೇಶಿ ಉಡುಪುಗಳನ್ನು ಕಂಡು ಸೀರೆಯನ್ನು ಉಡಲು ಒತ್ತಾಯಿಸಿದ ಅಂದಿನ ಸಂದರ್ಭ ಇಂದು ಬದಲಾಗಿದ್ದು ಬಹುತೇಕರು ಚೂಡಿದಾರ ಸೆಲ್ವಾರ್ ಕಮೀಜ್ ನಂತಹ ಉಡುಪಿಗೆ ಬದಲಾಗಿರುವುದನ್ನು ಗಮನಿಸಿದ್ದೇನೆ . ಜೊತೆಗೆ ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣ ಭಾರತದ ಸ್ತ್ರೀಯರ ಸ್ಥಾನಮಾನ ಗಳಲ್ಲಿ ಸಾಕಷ್ಟು ಸುಧಾರಣೆಗಳನ್ನು ಗಮನಿಸಿದ್ದೇನೆ ಎಂದರು.
ಭಾರತದ ಸಮಾಜಶಾಸ್ತ್ರದ ಅಧ್ಯಯನ ಸಂಸ್ಕೃತಿಯ ಅಧ್ಯಯನಕ್ಕೆ ಸೀಮಿತವಾಗಿದ್ದರೆ ಅಮೆರಿಕದ ಸಮಾಜಶಾಸ್ತ್ರದ ಅಧ್ಯಯನ ಸಂಸ್ಕೃತಿ ಅಧ್ಯಯನವನ್ನು ಮೀರಿ ರಾಜಕೀಯ ಚುನಾವಣೆ ಅವುಗಳ ಪ್ರಭಾವದ ಅಧ್ಯಯನವನ್ನು ಒಳಗೊಂಡಿದೆ ಎಂದು ವಿವರಿಸಿದ ಅವರು ಪ್ರಸ್ತುತ ತಾವು ಭಾರತದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಅದರಲ್ಲೂ ಪಂಚಾಯತ್ ರಾಜ್ ಆಡಳಿತದಲ್ಲಿ ಸ್ತ್ರೀಯರ ಸ್ಥಾನಮಾನ ಕುರಿತಾಗಿ ಅಧ್ಯಯನ ಮಾಡಲು ಆಸಕ್ತರಾಗಿರುವುದಾಗಿ ತಿಳಿಸಿದರು.
ಸುಸಾನ್ ಹ್ಯಾಂಸೆಟ್ ಅವರ ಪತಿ ಸ್ಟ್ಯಾನ್ಲಿ ರಜೆಲ್ಸನ್ ರಚಿಸಿರುವ ಸಂಶೋಧನಾ ಗ್ರಂಥ ಫುಡ್ ಕಮ್ಯುನಿಟಿ ಅಂಡ್ ಸ್ಪಿರಿಟ್ ವರ್ಲ್ಡ್ ಜಿಲ್ಲೆಯ ಮಲೆನಾಡಿನ ಸಂಸ್ಕೃತಿಯನ್ನು ವಿಭಿನ್ನ ನೆಲೆಯಲ್ಲಿ ಸಾಕ್ಷಾಧಾರಗಳ ಮೂಲಕ ಕಟ್ಟಿಕೊಡುವ ಕೃತಿ.. ಇದು ನನ್ನ ಭಾಷಣದ ಎರಡು ಸಾಲು.
ಅಂದ್ಹಾಗೆ ಸ್ಟಾನ್ಲಿ ಸರ್ 1967-68ರಲ್ಲಿ ಭಾರತಕ್ಕೆ ಬಂದು ಹಾಸನ ಜಿಲ್ಲೆಯ ಗೊರೂರು ಮತ್ತು ಪೊನ್ನಾಥಪುರ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಎರಡು ವರ್ಷ ಇಲ್ಲೇ ವಾಸ್ತವ್ಯ ಮಾಡಿ ಈ ಎರಡು ಗ್ರಾಮಗಳ ಜನಜೀವನ, ಬದುಕು ಆಚಾರ ವಿಚಾರಗಳು, ಹಬ್ಬ ಆಚರಣೆಗಳು, ಮದುವೆ, ಹೆಣ್ಣನ್ನು ಗುಡ್ಲಿಗೆ ಕೂಡುವ, ಪಿತೃಪಕ್ಷ ಎಡೆ ಇಡುವ ಹೀಗೆ ಬಗೆಬಗೆಯ ನಮ್ಮ ಹಿಂದು ಸಂಸ್ಕೃತಿಯಲ್ಲಿ ಆಳವಾಗಿ ಬೇರು ಬಿಟ್ಟಿರುವ ಜನಪದ ಆಚಾರ ವಿಚಾರಗಳಿಗೆ ಹೆಚ್ಚು ಒತ್ತುಕೊಟ್ಟು ಆಹಾರ ಪದ್ಧತಿ, ವ್ಯವಸಾಯ ಅದರಲ್ಲೂ ಮಹಿಳೆ ಹೊಲ ಉಳುವ ಬಿತ್ತನೆ ಮಾಡುವ ಕಾಯಕ, ಹೊಲದಲ್ಲಿ ನಿಂತ ಕೃಷಿಕ, ಬಲೆ ಬೀಸಿ ಮೀನು ಹಿಡಿಯುವ ಬೆಸ್ತರ ..ಹೀಗೆ ವಿದೇಶಿ ದಂಪತಿಗಳು ಅಂದು ತೆಗೆದಿರುವ ಪೋಟೋಗಳು ಪುಸ್ತಕದಲ್ಲಿದ್ದು ನನ್ನನ್ನು ನಿಜಕ್ಕೂ ವಿಸ್ಮಯಗೊಳಿಸಿದವು.
ಗೊರೂರು ಸೋಮಶೇಖರ್ ಅವರು ಗೊರೂರಿನಲ್ಲಿ ಜನಿಸಿದವರಾಗಿ ಸದ್ಯ ಬೆಂಗಳೂರು ವಾಸಿ. ಇವರು ನಮ್ಮ ಚಿಕ್ಕಪ್ಪನವರು. ನಿವೃತ್ತ ಕಾರ್ಯಪಾಲಕ ಇಂಜಿನಿಯರ್. ಈಗ ಅವರ ವಯಸ್ಸು 90 ದಾಟಿದೆ. ಅವರು ಈ ಹಿಂದೆ ಪ್ರಕಟಿಸಿರುವ ತಮ್ಮ ‘ಗೊರೂರು ನೆನಪುಗಳು’ ಕೃತಿಯಲ್ಲಿ ‘ಅಮೆರಿಕನ್ ಮಹಿಳೆ’ ಎಂಬ ಉಪ ಶೀರ್ಷಿಕೆಯ ಭಾಗದಲ್ಲಿ ಬರೆದಿರುವ ಬರಹ ಓದಲು ತಮಾಷೆಯಾಗಿದೆ.
ಸಂಪ್ರದಾಯಗಳ ನಡುವೆಯೂ ಒಂದು ಘಟನೆ ನೆನಪಿನಲ್ಲಿ ಉಳಿಯಿತು. ನನ್ನ ಹಿರಿಯ ಮಗನ ಹುಟ್ಟಿದ ದಿನ ಆಚರಿಸಿದೆವು. ನಮ್ಮ ಕುಟುಂಬದ ಹೆಂಗಸರದೇ ಏರ್ಪಾಡಿನ ನೇತೃತ್ವ. ಪೇಟೆ ಬೀದಿಯ ಹೆಂಗಸರೂ ನನ್ನ ಹೆಂಡತಿಯ ನೆರವಿಗೆ ಬಂದರು. ಹಳ್ಳಿಗಾಡಿನ ಭಾರತೀಯರ ಜೀವನ ಬಗೆಗೆ ಸಂಶೋಧನೆ ನಡೆಸುತ್ತಿದ್ದ ಅಮೆರಿಕಾ ಮಹಿಳೆಯೊಬ್ಬರು ಆಗ ಗೊರೂರಿನಲ್ಲಿದ್ದರು. ಅವರೂ ಬಂದಿದ್ದರು. ನನ್ನ ಅಣ್ಣ ಶಿವರಾಮಯ್ಯ ವಿಷಯ ತಿಳಿಸಿ ಆಹ್ವಾನಿಸಿದ್ದರು. ಈ ಮಹಿಳೆ ಮನೆಗಳಿಗೆ ಹೋಗಿ ವಿಷಯ ಸಂಗ್ರಹಣೆ ಮಾಡುವಾಗ ಊರವರು ಬಹಳ ಉತ್ಸುಕರಾಗಿ ಮಾಹಿತಿ ಒದಗಿಸುತ್ತಿದ್ದರಂತೆ..!
ಒಮ್ಮೆ ಒಂದು ತಿಪ್ಪೆಯ ಮೇಲೆ ಒಂದು ಸಗಣಿ ಉಂಡೆಗೆ ಗರಿಕೆ ಹುಲ್ಲು ಸಿಗಿಸಿ ಬೆನಕನನ್ನು ಮಾಡಿ ಪೂಜಿಸಿರುವುದನ್ನು ನೋಡಿ ಆಕಸ್ಮಾತ್ ಅಲ್ಲಿ ಹೋಗುತ್ತಿದ್ದ ನನ್ನ ಬಂಧು ನಂಜುಂಡಪ್ಪನನ್ನು ಕೇಳಿದರಂತೆ. ಆತ ಗೊಬ್ಬರ ಎನ್ನುವುದಕ್ಕೆ ಇಂಗ್ಲೀಷಿನಲ್ಲಿ ಗೋಬರ್ ಎಂದು ಭಾಷಾಂತರಿಸಿದ್ದ.! ತಿಪ್ಪೇ, ಪೂಜೆ, ಜಮೀನು, ಬೆಳೆ ಇಂತಹ ಪದಗಳಿಗೆ ತರ್ಜುಮೆ ಮಾಡಿ ಇಂಗ್ಲೀಷಿನಲ್ಲಿ ಮಾತನಾಡಲು ಯತ್ನಿಸಿದನಂತೆ. ಆ ಮಹಿಳೆಗೆ ಏನೂ ಅರ್ಥವಾಗದೆ ನಗುತ್ತಾ ಮುಂದೆ ನಡೆದರಂತೆ. ನಂಜುಂಡಪ್ಪನ ಜೊತೆಗಿದ್ದವರೂ ಆ ಮಹಿಳೆ ನಕ್ಕಾಗ ಜೋರಾಗಿ ನಕ್ಕುಬಿಟ್ಟರಂತೆ.. ಆಗಿನಿಂದ ಆತನನ್ನು ಗೋಬರ್ ನಂಜುಂಡಪ್ಪ ಎಂದು ಕರೆಯುತ್ತಿದ್ದಾರೆ. ಆ ಮಹಿಳೆ ಗೊರೂರಿನಲ್ಲಿ ಇರುವ ತನಕ ಕೆಲವರು ಆಕೆಯೊಡನೆ ಇಂಗ್ಲೀಷಿನಲ್ಲಿ ಮಾತನಾಡಲು ಯತ್ನಿಸಿ ತಮ್ಮ ಇಂಗ್ಲೀಷ್ ಭಾಷೆಯ ಮೇಲಿನ ಪ್ರಭುತ್ವ ಪ್ರದರ್ಶಿಸಲು ಹೋಗಿ ಇವರನ್ನು ಚೆನ್ನಾಗಿ ನಗಿಸುತ್ತಿದ್ದರು.
ಅವರು ಮಗುವಿನ ತೊಟ್ಟಿಲು ಸಮೀಪವೇ ಚೆನ್ನಾಗಿ ಕಾಣುವ ಜಾಗ ಆರಿಸಿ ಕುಳಿತರು. ಸಾಮಾನ್ಯವಾಗಿ ಹೆಂಗಸರು ಕುಳಿತುಕೊಳ್ಳುವ ಜಾಗವಾದರೂ ಅವರ ಒಂದು ಬದಿಯಲ್ಲಿ ಕೆಲವು ಗಂಡಸರೂ ಕುಳಿತರು. ವಿಲಾಯಿತಿ ಹೆಣ್ಣನ್ನು ನೋಡುವ ಕುತೂಹಲದಿಂದ ಸ್ವಲ್ಪ ಹೊತ್ತು ಹೆಚ್ಚಾಗಿಯೇ ಕುಳಿತರೂ, ಯಾರಾದರೂ ಸ್ವಲ್ಪ ಜಾಗ ಬಿಡಿ ಎಂದಾಗ ಏಳುತ್ತಿದ್ದರು. ಅವರು ಕೇಳುತ್ತಿದ್ದ ಪ್ರಶ್ನೆಗಳಿಗೆ ತೀರಾ ಸಮೀಪದಲ್ಲಿ ಕುಳಿತಿದ್ದ ಕೆಲವರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡಿ ಅದನ್ನು ಭಯಂಕರ ಇಂಗ್ಲೀಷಿನಲ್ಲಿ ವಿವರಿಸುತ್ತಿದ್ದರು. ಆ ಮಹಿಳೆ ತನಗೆ ಚೆನ್ನಾಗಿ ಅರ್ಥವಾಯಿತು ಎನ್ನಿಸಿದಾಗ ಬರೆದುಕೊಳ್ಳುತ್ತಿದ್ದರು. ಪ್ರತಿಯೊಂದು ಆಚರಣೆಯ ಬಗೆಯೂ ಕೇಳುತ್ತಿದ್ದರು. ಅವರು ಬರೆದುಕೊಳ್ಳುತ್ತಿದ್ದಾರೆಂದು ತಿಳಿದು ಹೆಂಗಸರು ನಿಗಾವಹಿಸಿ ಶಾಸ್ತ್ರ ಮಾಡುತ್ತಿದ್ದರು. ಅವರು ಕೇಳಿದರೆ ಪುನ: ಮಾಡಿ ತೋರಿಸುತ್ತಿದ್ದರು. ಸಾಂಪ್ರದಾಯಿಕ ಹಾಡುಗಳನ್ನು ತುಸು ಹೆಚ್ಚಾಗಿಯೇ ಹಾಡಿದರು. ಆ ದಿನ ಮಾತ್ರ ಹಾಡು ಎಂದು ಒತ್ತಾಯವಿಲ್ಲದಿದ್ದರೂ ಒಬ್ಬರು ನಿಲ್ಲಿಸಿದ ಕೂಡಲೇ ಇನ್ನೊಬ್ಬರು ಹಾಡಲು ಪ್ರಾರಂಭಿಸುತ್ತಿದ್ದರು. ಕೆಲವರು ನಿಜಕ್ಕೂ ಚೆನ್ನಾಗಿಯೇ ಹಾಡಿ ಅತಿಥಿಯ ಗಮನ ಸೆಳೆದರು. ಆಕೆ ಗುರುತು ಹಾಕಿಕೊಂಡದ್ದೇನು ಎಂಬುದು ಅವರಾರಿಗೂ ತಿಳಿಯಲಿಲ್ಲ.
ಮೂಲೆಯಲ್ಲಿ ಕುಳಿತಿದ್ದ ಒಂದು ಮುದುಕಿ..ನನ್ನ ತಾಯಿಯ ಗೆಳತಿ..ಎದ್ದು ಹೋಗಿ ಮಗುವನ್ನು ಹರಸಿ, ಲಟಿಕೆ ಮುರಿದು ದೃಷ್ಟಿ ಆಗದಿರಲಿ ಎಂದು ಗಟ್ಟಿಯಾಗಿಯೇ ಹೇಳಿತು. ಮಗುವಿನ ಬೆರಳಲ್ಲಿ ಎರಡು ರೂಪಾಯಿಯ ನೋಟು ಇಟ್ಟಿತು. ಅಜ್ಜಿಯ ಕೈ ನಡುಗುತ್ತಿದ್ದು ಆ ನೋಟು ಬಿದ್ದು ಹೋಯಿತು.’ಓ ಕಡಿಮೆ ಆಯ್ತಾ, ಮುದ್ಕಿ ಹತ್ರ ಇನ್ನೆಷ್ಟು ಇದ್ದೀತು ಹಿಡ್ಕೊ..ಎಂದು ಹೇಳುತ್ತಾ ಮತ್ತೆ ಕೈಗಿತ್ತಾಗ ಮಗು ಗಟ್ಟಿಯಾಗಿ ಹಿಡಿದುಕೊಂಡಿತು. ಆಗ ಎಲ್ಲರೂ ನಕ್ಕರು. ಅಜ್ಜಿಯೂ ಸಂತೋಷದಿಂದ ಮಗುವಿನ ಕೆನ್ನೆ ಮುಟ್ಟಿ ಚಪ್ಪಾಳೆ ತಟ್ಟಿತು. ಇದನ್ನೆಲ್ಲಾ ಆ ಮಹಿಳೆ ತುಂಬಾ ಕುತೂಹಲದಿಂದ ಗಮನಿಸುತ್ತಿದ್ದಳು. ಆಗ ಹಲವು ಪ್ರಶ್ನೆಗಳನ್ನು ಕೇಳಿ ತಿಳಿದುಕೊಂಡರು. ತಮ್ಮ ಮಾಹಿತಿ ಪುಸ್ತಕದಲ್ಲಿ ಒಂದು ಅಜ್ಜಿ ಮಗುವಿಗೆ 2 ರೂ. ಕಾಣಿಕೆ ನೀಡಿತು ಎಂದು ಬರೆದುಕೊಂಡರಲ್ಲದೆ ಆ ಅಜ್ಜಿಯ ಹೆಸರನ್ನು ಕೇಳಿ ಮಂಜಮ್ಮ ಎಂದು ದಾಖಲಿಸಿಕೊಂಡರು. ಕೆಲವು ಹೆಸರುಗಳ ಅರ್ಥ ಇಂಗ್ಲೀಷಿನಲ್ಲಿ ಏನು ಎಂದು ಕೇಳಿ ತಿಳಿದುಕೊಳ್ಳುತ್ತಿದ್ದರು. ಅಲ್ಲಿ ಕುಳಿತಿದ್ದವರು ತಮಗೆ ತಿಳಿದಷ್ಟು ಇಂಗ್ಲೀಷಿನಲ್ಲಿ ಭಾಷಾಂತರಿಸಿ ಹೇಳುವಾಗ ನಗೆಯ ಅಲೆಗಳು ಏಳುತ್ತಿದ್ದವು. ಆ ಭಾಷಾಂತರಕಾರ ರಲ್ಲಿ ನನ್ನ ಒಬ್ಬ ಅಣ್ಣನೂ ಒಬ್ಬ. ಆ ಮಹಿಳೆಯೂ ಮುಕ್ತವಾಗಿ ನಗುತ್ತಾ ತನಗೆ ಬೇಕಾದುದನ್ನು ಮಾತ್ರ ಬರೆದುಕೊಳ್ಳುತ್ತಿದ್ದರು. ಕಡೆಯಲ್ಲಿ ಆರತಿಯನ್ನು ವಿಶೇಷ ಆಸಕ್ತಿ ವಹಿಸಿ ಮಾಡಿದರು. ಆ ಮಹಿಳೆಗೆ ನನ್ನ ಅತ್ತಿಗೆಯೊಬ್ಬರು ಕುಂಕುಮ ಕೊಟ್ಟು, ತಾಂಬುಲ ನೀಡಿ ಮಡಿಲು ತುಂಬಿಸಿದರು. ಅವರು ಮಗುವಿನ ತಾಯಿಗೆ ಮಡಿಲು ತುಂಬಿಸುವುದನ್ನು ಮೊದಲೇ ನೋಡಿದ್ದರು. ಬಹಳ ಸಂತೋಷವಾಯಿತೆಂದರು. ನಾನು ಕೈ ಮುಗಿದು ಬೀಳ್ಕೊಟ್ಟನು. ಮನೆ ಚಿಕ್ಕದಾದುದರಿಂದ ಬರುವವರನ್ನು ಒಳಕ್ಕೆ ಕರೆತರುವುದು ಕಳುಹಿಸುವುದು ಇದರಲ್ಲೇ ನಿರತನಾಗಿದ್ದೆನಾಗಿ ಆ ಮಹಿಳೆಯೊಡನೆ ಮಾತನಾಡಲು ಆಗಲೇ ಇಲ್ಲ. ಮತ್ತೆ ಪರಿಚಯ ಮಾಡಿಕೊಳ್ಳುವ ಅವಕಾಶವೂ ಸಿಗಲಿಲ್ಲ. ಅವರು ಮುಂದೆ ಕೆಲವು ದಿನಗಳ ಬಳಿಕ ಅಮೆರಿಕಾಕ್ಕೆ ಹಿಂತಿರುಗಿದರು. ಆ ಮಹಿಳೆಯ ಆಹ್ವಾನಕ್ಕೆ ಹೊಂದಿಸಿಕೊಂಡು ಗೊರೂರು ರಾಮಸ್ವಾಮಿ ಅಯ್ಯಂಗಾರರು ಅಮೆರಿಕಾ ಪ್ರವಾಸ ಹೋಗಿ ಬಂದರು. ಅವರು ಬರೆದಿರುವ ಅಮೆರಿಕಾದಲ್ಲಿ ಗೊರೂರು ಪುಸ್ತಕದಲ್ಲಿ ಈ ಮಹಿಳೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೆಚ್ಚಾಗಿಯೇ ಬರೆದಿದ್ದಾರೆ…
—
ಗೊರೂರು ಅನಂತರಾಜು, ಹಾಸನ.
ಮೊ: 9449462879.
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.