ಮೂಡಲಗಿ: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಸತತ ಎರಡನೆಯ ಬಾರಿಗೆ ಕಡಿಮೆ ಮಾಡುವ ಮೂಲಕ ವಾಹನ ಸವಾರರ ಸಂಕಷ್ಟಕ್ಕೆ ಸ್ಪಂದಿಸಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಕೇಂದ್ರ ಸರ್ಕಾರದ ಈ ನಿರ್ಣಯ ಮೂಲಕ ಪ್ರತಿ ಲೀಟರಿಗೆ ಪೆಟ್ರೋಲ್ ದರ ರೂ 9.50, ಡೀಸೆಲ್ ಒಂದು ಲೀಟರಿಗೆ ರೂ 7 ದರ ಇಳಿಕೆಯಾಗಲಿದೆ. ಇದರ ಜೊತೆಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯ 9 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಪ್ರತಿ ಗ್ಯಾಸ್ ಸಿಲಿಂಡರ್ಗೆ 200 ರೂ ಸಬ್ಸಿಡಿಯನ್ನು ಘೋಷಿಸಿರುವುದು ಕೇಂದ್ರ ಸರ್ಕಾರದ ಬಡಜನರ ಬಗ್ಗೆ ಇರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಅಲ್ಲದೇ 1.05 ಲಕ್ಷ ಕೋಟಿ ರೂ.ಗಳಷ್ಟು ರಸಗೊಬ್ಬರಕ್ಕೆ ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿರುವುದು ಇದು ರೈತ ಪರ ಸರ್ಕಾರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಮುಂದಿನ ದಿನಗಳಲ್ಲಿ ಕಟ್ಟಡ ಕೆಲಸಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಸಿಮೆಂಟ್ ದರ ಇಳಿಸಲು ಸರ್ಕಾರ ಚಿಂತನೆ ನಡೆಸಿರುವುದು ಸ್ವಾಗತಾರ್ಹ. ಈ ಎಲ್ಲ ನಿರ್ಣಯಗಳ ಕಾರಣದಿಂದ ಸರ್ಕಾರ ಜನಸಾಮಾನ್ಯರ, ಬಡವರ ಮತ್ತು ರೈತರ ಪರ ಸರ್ಕಾರ ಎಂಬುದು ಮತ್ತೊಮ್ಮೆ ಸಾಬೀತಾಗಿರುವುದು ಇದನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ. ವಿರೋಧ ಪಕ್ಷಗಳು ಕೂಡಾ ಇಂತಹ ಅದ್ಬುತ ಮತ್ತು ಐತಿಹಾಸಿಕ ನಿರ್ಣಯವನ್ನು ಅನಿವಾರ್ಯವಾಗಿ ಸ್ವಾಗತಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸಂಸದ ಈರಣ್ಣ ಕಡಾಡಿ ಪತ್ರಿಕಾ ಹೇಳಿಕೆ ನೀಡಿದರು.