ಸಂಶೋಧಕ – ಸಂಘಟಕ ಡಾ. ಆರ್. ವಾದಿರಾಜು ಅವರಿಗೆ ಅಭಿನಂದನೆ
ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ ದೇಸಿ ದರ್ಶನ ಮಾಲೆಯಡಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ರವರ ಯೋಜನಾ ಸಂಪಾದಕತ್ವದಲ್ಲಿ ಪ್ರಕಟವಾಗಿ ಸಂಸ್ಕೃತಿ ಚಿಂತಕ , ಅಂಕಣಕಾರ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಲೇಖಕರಾಗಿ ಬರೆದಿರುವ ‘ ದಾಸ ಪಂಥ ’ ಕೃತಿಯ ಅವಲೋಕನ ಕಾರ್ಯಕ್ರಮವನ್ನು ಬೆಂಗಳೂರಿನ ಹನುಮಂತನಗರದ ಶ್ರೀ ಬಾಲಾಜಿ ಪದವಿ ಕಾಲೇಜು ಸಭಾಂಗಣದಲ್ಲಿ ಇದೇ ಡಿ.20 ಮಂಗಳವಾರ ಬೆಳಿಗ್ಗೆ 10.00 ಗಂಟೆಗೆ ಆಯೋಜಿಸಲಾಗಿದೆ.
ಕಾದಂಬರಿಕಾರ ಡಾ.ಕೆ. ರಮಾನಂದ ಸಮಾರಂಭ ಉದ್ಘಾಟಿಸಲಿದ್ದಾರೆ, ಸಂಸ್ಕೃತ ಪ್ರಾಧ್ಯಾಪಕ ಡಾ. ವಾದಿರಾಜ ಅಗ್ನಿಹೋತ್ರಿ’ ದಾಸ ಪಂಥ ’ ಕೃತಿಯ ಅವಲೋಕನ ಮಾಡುವರು. ಇದೇ ಸಂದರ್ಭದಲ್ಲಿ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಸಹಯೋಗದಲ್ಲಿ ಸಂಶೋಧಕ – ಸಂಘಟಕ ಡಾ. ಆರ್. ವಾದಿರಾಜುರವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲ ಪ್ರೊ.ಉಮೇಶ್ ದಕ್ಷಿಣಾಮೂರ್ತಿ ತಿಳಿಸಿದ್ದಾರೆ.
“ದಾಸ ಪಂಥ” – ಒಂದು ಮರು ಓದು
ಹದಿಮೂರನೆಯ ಶತಮಾನದಲ್ಲಿ ಆಚಾರ್ಯ ಮಧ್ವರು ಹರಿದಾಸ ಸಾಹಿತ್ಯಕ್ಕೆ ಒಂದು ರೂಪುರೇಷೆ ಕೊಟ್ಟು ಪ್ರೇರಕಶಕ್ತಿಯಾದರು. ಮಧ್ವಾಚಾರ್ಯರ ತರುವಾಯ ಶ್ರೀ ವಾದಿರಾಜರಾದಿ ಯತಿಗಳು ಪುರಂದರ ದಾಸರಾದಿ ದಾಸರುಗಳು ಪ್ರಾಕೃತ ಭಾಷೆಯಲ್ಲಿ ಲಕ್ಷಾಂತರ ಪದ, ಪದ್ಯ, ಸುಳಾದಿ, ಉಗಾಭೋಗಾದಿಗಳನ್ನು ರಚಿಸಿ ಸಂಸ್ಕೃತ ಅರಿಯದ ಜನರಿಗೆ ಅರ್ಥ ಮಾಡಿಕೊಳ್ಳಲು ಸುಲಭ ಮಾಡಿದ್ದಾರೆ. “ದಾಸಪಂಥ” ವು ವಿಶೇಷವಾಗಿ ಪ್ರಚಾರಕ್ಕೆ ಬಂದದ್ದು ಕನ್ನಡದಲ್ಲಿ ರಚನೆಯಾದ ದಾಸ ಸಾಹಿತ್ಯದ ಮೂಲಕ.
ದಾಸ ಸಾಹಿತ್ಯ ಒಂದು ವರ್ಗಕ್ಕೆ ಸೀಮಿತವಾಗಲಿಲ್ಲ. ಅದು ಎಲ್ಲ ವರ್ಗಗಳ ಅರಮನೆ, ಗುರುಮನೆ ಮತ್ತು ಜನ ಸಾಮಾನ್ಯರನ್ನೂ ಮುಟ್ಟಿ, ಎಲ್ಲ ಕಾಲದಲ್ಲಿಯೂ ಸ್ವೀಕೃತವಾಗಿರುವುದು ಅದರ ವಿಶೇಷವಾಗಿದೆ. ಅವರವರ ಧರ್ಮದ ಅಸ್ತಿತ್ವವನ್ನು, ಅವರವರ ನಂಬುಗೆಗಳನ್ನು, ಶ್ರದ್ಧೆಯನ್ನು ಉಳಿಸಿ ಜನರ ಮನಸ್ಸನ್ನು ಧರ್ಮದಲ್ಲಿ ನಡೆಯುವಂತೆ ಮಾಡಿದ ಬಹುಪಾಲು ಶ್ರೇಯಸ್ಸು ದಾಸ ಸಾಹಿತ್ಯಕ್ಕೆ ಸಲ್ಲುತ್ತದೆ.
ವಿಶೇಷವಾಗಿ ಅರ್ಥವಿಲ್ಲದ ಆಚಾರ ವಿಚಾರಗಳನ್ನು, ಅಂಧಾನುಕರಣೆಯನ್ನು ಖಂಡಿಸುತ್ತ ಮುಕ್ತಿಗೆ ಸಾಧನೆಯಾಗಿ, ವಿಶೇಷವಾಗಿ ಸ್ತ್ರೀಯರಿಗೂ, ಹಿಂದುಳಿದ ಸಮುದಾಯಕ್ಕೂ ಆಧ್ಯಾತ್ಮದ ದಾರಿಯನ್ನು ಒದಗಿಸಿ ಕೊಡುವಲ್ಲಿ ಮುಂದಾದದ್ದು ದಾಸ ಸಾಹಿತ್ಯದ ಅದ್ಭುತ ಸಾಧನೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ಭಕ್ತಿ ಸಾಹಿತ್ಯದಲ್ಲಿ ಚಿಂತನೆ ಕಡಿಮೆಯಾಗುತ್ತ ಬಂದಿವೆ. ಇದು ವ್ಯಸನದ ಬೆಳವಣಿಗೆ. ಧಾರ್ಮಿಕ ಚಿಂತನೆ ಮತ್ತು ಆಚರಣೆಗಳು ಸಡಿಲವಾಗುತ್ತಿರುವ ಇಂದಿನ ಪರಿಸರದಲ್ಲಿ ಸಂಪ್ರದಾಯ, ಭಕ್ತಿ ಮತ್ತು ಧಾರ್ಮಿಕ ಶ್ರದ್ಧೆಯನ್ನು ಸದೃಢಗೊಳಿಸಲು ದಾಸಸಾಹಿತ್ಯ ಪ್ರಧಾನ ಶಕ್ತಿ. ಈ ದಿಸೆಯಲ್ಲಿ ದೇಸೀ ಪರಂಪರೆಯ ಇತಿಹಾಸವನ್ನು ಮರು ಓದುವ ಅಗತ್ಯ ಇದೆ. ದಾಸರ ಹಾಡುಗಳನ್ನೆಲ್ಲಾ ಸಂಶೋಧಿಸಿ ಹೊರತೆಗೆದು ದಾಸಸಾಹಿತ್ಯದ ಸಾರ್ವತ್ರಿಕ ಹಾಗೂ ಸಾರ್ವಕಾಲಿಕ ಮೌಲ್ಯಗಳ ಪುನರ್ ಪ್ರತಿಷ್ಠಾಪನೆಯಾಗಬೇಕಿದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ ‘ದೇಸಿ ದರ್ಶನ ಮಾಲೆ’ ಯಡಿ ರಚಿತವಾಗಿರುವ ಈ ಪುಸ್ತಕದ ಸಿದ್ಧತೆಯಲ್ಲಿ ಸಂಸ್ಕೃತಿ ಚಿಂತಕ ಡಾ| ಗುರುರಾಜ ಪೋಶೆಟ್ಟಿಹಳ್ಳಿಯವರು ತುಂಬ ಶ್ರಮ ವಹಿಸಿರುವುದು ತಿಳಿಯುತ್ತದೆ. ಸಂಶೋಧಕರಿಗೆ ನೆರವಾಗಬಲ್ಲ ನೂರಾರು ವಿವರಗಳು ಇಲ್ಲಿವೆ. ಈ ಕೃತಿಯು ಮುಂದಿನ ಇಂತಹ ಹಲವು ಸಂಶೋಧನೆ ಮತ್ತು ದಾಖಲಾತಿಗಳಿಗೆ ದಾರಿ ಮಾಡುವ ಭರವಸೆಯನ್ನಿಡಬಹುದು.
ಹಿರಿಯ ವಿದ್ವಾಂಸ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಯೋಜನಾ ಸಂಪಾದಕರಾಗಿ ರೂಪಿಸಿರುವ ದೇಸಿ ದರ್ಶನ ಮಾಲೆ ಮೂಲಕ, ಇಂದಿನ ಪೀಳಿಗೆಯ ಅಧ್ಯಯನಶೀಲ ಸಾಹಿತಿ ಡಾ| ಗುರುರಾಜ ಪೋಶೆಟ್ಟಿಹಳ್ಳಿಯವರು ಸಿದ್ಧಪಡಿಸಿರುವ “ದಾಸಪಂಥ” ಎಂಬ ಕೃತಿಯು ದೇಸೀ ಪರಂಪರೆಯ ಇತಿಹಾಸವನ್ನು ಕ್ರಮವರಿತು ನಿರೂಪಿಸಿದೆ. ಸಮಗ್ರ ಭಕ್ತಿ ಪಂಥದ, ಶ್ರೇಷ್ಠ ಕೃತಿಯಾಗಿ, ಸಂಗ್ರಾಹ್ಯ ಯೋಗ್ಯ ಕೃತಿಯಾಗಿದೆ.ಇಂತಹ ಅತ್ಯುತ್ತಮ ಕೃತಿಯನ್ನು ಕೊಟ್ಟ ಡಾ.ಗುರುರಾಜ ಪೋಶೆಟ್ಟಿಹಳ್ಳಿಯವರಿಗೆ ಅಭಿನಂದನೆ ಸಲ್ಲುತ್ತದೆ.
– ಡಾ. ರಾಮಮೂರ್ತಿ ಕರಣಂ , ದಾಸ ಸಾಹಿತ್ಯ ಸಂಶೋಧಕರು , ಪುಣೆ
ಸಂಶೋಧಕ – ಸಂಘಟಕ ಡಾ. ಆರ್. ವಾದಿರಾಜು – ಕಿರು ಪರಿಚಯ
ಡಾ. ಆರ್. ವಾದಿರಾಜು ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿಯನ್ನು ಪಡೆದು, ನಂತರ ಆಂದ್ರಪ್ರದೇಶದ ಕುಪ್ಪಂನಲ್ಲಿರುವ ದ್ರಾವಿಡಿಯನ್ ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ ಪದವಿಯನ್ನು ಪಡೆದಿದ್ದಾರೆ. ಹಾಗೆಯೇ ಅಮೇರಿಕಾಸ್ ಯೋಗ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪದವಿಯನ್ನು ಸಹ ಪಡೆದಿದ್ದಾರೆ. ಸುಜನಿ, ಸೌರಭ, ಭಾವಕುಸುಮ, ಮುಂತಾದ ವಿಮರ್ಶಾ ಲೇಖನಗಳ ಸಂಕಲನಗಳನ್ನು ಹೊರತಂದಿದ್ದಾರೆ. ಅಲ್ಲದೆ ಸ್ಪಂದನದ ಸೊಗಡು, ಕಾವ್ಯ ಸಿಂಚನ, ಬಾಗಿನ, ರತ್ನಸಿರಿ, ವಚನ ವೈವಿಧ್ಯ, ದಾಸ ವೈಭವ, ಹರಿದಾಸ ತರಂಗಿಣಿ, ಸಾಹಿತ್ಯ ಶೋಧ, ಮುಂತಾದ 18 ಕೃತಿಗಳನ್ನು ಸಂಪಾದಿಸಿದ್ದಾರೆ.
ಶ್ರೀಯುತರು ನಿರಂತರವಾಗಿ ಕನ್ನಡ ಸಾಹಿತ್ಯ ಹಾಗೂ ಹರಿದಾಸ ಸಾಹಿತ್ಯದ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ನೇಹಕೂಟ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾಗಿ ಅಲ್ಲದೆ ವಚನ ಸಾಹಿತ್ಯ ಅಕಾಡೆಮಿ, ದಾಸ ಸಾಹಿತ್ಯ ಪರಿಷತ್ತು ಮುಂತಾದ ಅನೇಕ ಸಂಘ ಸಂಸ್ಥೆಗಳಲ್ಲಿ ಕಾರ್ಯದರ್ಶಿಗಳಾಗಿ ಹಾಗೂ ಮುಳಬಾಗಿಲು ಶ್ರೀಪಾದರಾಜ ಮಠದ ಅಂಗಸಂಸ್ಥೆ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆಯಲ್ಲಿ ಸಹ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರ ಸಾಹಿತ್ಯ ಸೇವೆ ಹಾಗೂ ಸಂಘಟನಾ ಶಕ್ತಿಯನ್ನು ಗುರುತಿಸಿ ನಾಡಿನ ಹಲವಾರು ಸಂಘ ಸಂಸ್ಥೆಗಳು ಶ್ರೀ ವಿವೇಕಾನಂದ ಯುವ ಗೌರವ ಪ್ರಶಸ್ತಿ, ಹರಿದಾಸ ಅನುಗ್ರಹ ಪ್ರಶಸ್ತಿ, ಕನ್ನಡ ಸೇವಾರತ್ನ ಪ್ರಶಸ್ತಿ, ಹೆಬ್ಬಗೋಡಿ ಗೋಪಾಲ ಪುಸ್ತಕ ಬಹುಮಾನ ಪ್ರಶಸ್ತಿ, ಅಸುಂಡಿ ಹುದ್ದಾರ್ ಕೃಷ್ಣರಾವ್ ಸ್ಮಾರಕ ದತ್ತಿ ಪ್ರಶಸ್ತಿ, ಡಾ. ಕವಿತಾಕೃಷ್ಣ ಕಾವ್ಯ ಪ್ರಶಸ್ತಿ , ಕನ್ನಡ ರತ್ನ ಪುರಸ್ಕಾರ ನೀಡಿ ಗೌರವಿಸಿವೆ. ಪ್ರಸ್ತುತ ಬೆಂಗಳೂರಿನ ಬಸವನಗುಡಿಯ ಆರ್.ವಿ. ರಸ್ತೆಯಲ್ಲಿರುವ ವಿಜಯ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಾಂಸ್ಕೃತಿಕ ಬರವಣಿಗೆಯ ಕ್ರಿಯಾಶೀಲ ವ್ಯಕ್ತಿತ್ವ – ಡಾ|| ಗುರುರಾಜ ಪೋಶೆಟ್ಟಿಹಳ್ಳಿ
ಸಾಹಿತ್ಯ ಸೇವೆಯನ್ನು ಹೇಗೆಲ್ಲ ಮಾಡಬಹುದೆಂಬುದಕ್ಕೆ ಗುರುರಾಜ ಅವರು ಉತ್ತಮ ಉದಾಹರಣೆಯಾಗಿದ್ದಾರೆ. ಶ್ರೀಯುತ ಗುರುರಾಜರವರ ವೃತ್ತಿ – ಪ್ರವೃತ್ತಿಗಳೆರಡು ಬರವಣಿಗೆಯೇ ಆಗಿದೆ , ಪತ್ರಿಕೋದ್ಯಮದ ನಂಟು- ಪ್ರಣವ ಮೀಡಿಯಾ ಹೌಸ್‍ನಲ್ಲಿ ನಿರ್ದೇಶಕರಾಗಿ ಮತ್ತು ಹಲವಾರು ಪತ್ರಿಕೆಗಳಲ್ಲಿ ಅಂಕಣಕಾರರಾಗಿ, ಸಂಪಾದಕೀಯ ಸಲಹೆಗಾರರಾಗಿ, ವಿಶೇಷ ಸಂಚಿಕೆಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.
43ರ ವಯೋಮಾನದ ಗುರುರಾಜರ ಪೂರ್ವಿಕರು ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿ ತಾಲೂಕಿನ ಪೋಶೆಟ್ಟಿಹಳ್ಳಿ ಗ್ರಾಮದವರು , ಇಂಡಿಯನ್ ವರ್ಚುಯಲ್ ಅಕಾಡೆಮಿ ಫಾರ್ ಪೀಸ್ & ಎಜುಕೇಷನ್ ಎಂಬ ಖಾಸಗಿ ವಿಶ್ವವಿದ್ಯಾಲಯವು ಇಂಡಾಲಜಿ ವಿಷಯದಲ್ಲಿ ಗಣಪತಿಯ ಕುರಿತಾಗಿ ವಿಶೇಷ ಅಧ್ಯಯನಕ್ಕೆ ಡಾಕ್ಟರೇಟ್ ಪದವಿ ನೀಡಿದೆ.ಆದಿಚುಂಚನಗಿರಿ ಮಠದಿಂದ ನಡೆದ ‘ನಾಥ ಪಂಥದ’ ಕುರಿತಾದ ವಿಚಾರ ಸಂಕಿರಣದಲ್ಲಿ, ಉಡುಪಿಯಲ್ಲಿ ಇಸ್ಕಾನ್ ಆಯೋಜಿಸಿದ್ದ “ಚೈತನ್ಯ ಪ್ರಭು” ಕುರಿತಾದ ಸಮಾವೇಶ ಪ್ರಬಂಧ ಮಂಡನೆ – ಸಂವಾದದಲ್ಲಿ ಭಾಗವಹಿಸಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಪಡೆದ ಇವರ ಮೊದಲ ಕೃತಿ ಕನ್ನಡ ಕಂಪಿನಲಿ ಕರಿವದನ ; ಭಕ್ತಿ ಪಾರಿಜಾತ – ವಿವಿಧ ಕೇಶವ ನಾಮಗಳ ಸಂಕಲನ; ಭಾರತೀಯ ಸಂಸ್ಕೃತಿಯಲ್ಲಿ ಗುರುಗಳ ಮಹತ್ವ ಸಾರುವ ಕುರಿತು -ವಂದೇ ಗುರು ಪರಂಪರಾಮ್ ;ಪ್ರೇರಾಣಾದಾಯಿ ಬರಹಗಳ ಅಂಕಣ ಸಂಕಲನ – ಸತ್ಸಂಗ ಸಂಪದ; ದೇಸಿ ದರ್ಶನ ಮಾಲೆಯಡಿ ‘ದಾಸ ಪಂಥ’ ಮೊದಲದ ಹೊತ್ತಗೆಗಳ ಮೂಲಕ ಸಾಹಿತ್ಯದ ಸವಿಯನ್ನು ಕಾಣಬಹುದು.
ಸಾಮಾಜಿಕ ಕಾರ್ಯಗಳಲ್ಲೂ ಸಕ್ರಿಯವಾಗಿರುವ ಇವರು “ಕರ್ನಾಟಕ ಸರ್ವೋದಯ ಮಂಡಲ” ದಲ್ಲಿ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರಾಗಿಯೂ, ಕಾಕೋಳು ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ಟ್ರಸ್ಟೀಗಳಾಗಿಯೂ, ಪ್ರತಿಷ್ಠಿತ ಹತ್ತು ಹಲವು ಆಧ್ಯಾತ್ಮಿಕ – ಸಾಂಸ್ಕೃತಿಕ – ಶೈಕ್ಷಣಿಕ ಸಂಘಟನೆಗಳಿಗೆ ಮಾಧ್ಯಮ ಸಮಾಲೋಚಕರಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಆಚರಣೆ, ಹಬ್ಬ ಹರಿದಿನಗಳ ಮಹತ್ವ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಮಾಹಿತಿಯುಕ್ತ ಅಧ್ಯಯನಪೂರ್ಣ ಪ್ರಬುದ್ಧ ಲೇಖನಗಳ ಮೂಲಕ ಓದುಗರ ಮನಸೆಳೆದ ಇವರಿಗೆ ಸದ್ಗುರು ಸಾಧನ ರತ್ನ – ಶ್ರೀಗುರು ರಾಘವೇಂದ್ರ ಸುಗಮ ಸಂಗೀತ ಶಾಲೆ; ಡಾ. ಕೆ ಶಿವರಾಮ ಕಾರಂತ ಸದ್ಭಾವನಾ ಪ್ರಶಸ್ತಿ – ಕರ್ನಾಟಕ ಕಲಾವಿದರ ಕಲ್ಯಾಣ ವೇದಿಕೆ; ಸರ್ ಎಮ್ ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿ – ಸುರ್ವೆ ಪ್ರತಿಷ್ಠಾನ; ಭಕ್ತಿ ಸಂಸ್ಕೃತಿ ಸೇವಾ ರತ್ನ – ಸೌರಭ, ಶಿವಮೊಗ್ಗ; ಸುವರ್ಣ ಶ್ರೀ ರಾಜ್ಯ ಪ್ರಶಸ್ತಿ; ಆಚಾರ್ಯ ವಿದ್ಯಾರಣ್ಯ ಪ್ರಶಸ್ತಿ – ಹಿಮಾಲಯ ಫೌಂಡೇಶನ್; ಶ್ರೀ ಮಧ್ವ ವಿಜಯ ಪ್ರಶಸ್ತಿ – ವಿಶ್ವಮಧ್ವಮತ ವೆಲ್ಫೇರ್ ಅಸೋಸಿಯೇಷನ್ ; ಸಾಕ್ಷಿ ಸಂಸ್ಥೆಯ ಟಿ.ವಿ.ಕಪಾಲಿ ಶಾಸ್ತ್ರಿ ಪ್ರಶಸ್ತಿ, ಧನ್ವಂತರಿ ಪುರಸ್ಕಾರ, ಧರ್ಮಪ್ರಚಾರಕ ಪಯೋನಿಧಿ ; ದಾಸಾನುಗ್ರಹ ಯುವ ಸ್ಪೂರ್ತಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ.