spot_img
spot_img

ಸಂವಿಧಾನ ದಿವಸ (ರಾಷ್ಟ್ರೀಯ ಕಾನೂನು ದಿನಾಚರಣೆ) ಅಂಗವಾಗಿ ‘ವಕೀಲರಾಗಿ ಮಹಾತ್ಮ ಗಾಂಧೀಜಿ ’ ವಿಶೇಷ ಉಪನ್ಯಾಸ ಮತ್ತು ಡಾ.ಹೆಚ್.ಎಸ್.ಸುರೇಶ್ ರವರ ‘ಪಾತಕಲೋಕದಿಂದ ಗಾಂಧಿಯಾನದೆಡೆಗೆ’ ಸಾಂದರ್ಭಿಕ ಕೃತಿ ಬಿಡುಗಡೆ

Must Read

- Advertisement -

ಬೆಂಗಳೂರು: ನಗರದ ಆರ್.ವಿ. ರಸ್ತೆಯ ವಿಜಯ ಕಾಲೇಜು  ಮತ್ತು ಕರ್ನಾಟಕ ಸರ್ವೋದಯ ಮಂಡಲದ  ಸಂಯುಕ್ತಾಶ್ರಯದಲ್ಲಿ  ಸಂವಿಧಾನ ದಿವಸ (ರಾಷ್ಟ್ರೀಯ ಕಾನೂನು ದಿನಾಚರಣೆ) ಅಂಗವಾಗಿ ವಿಶೇಷ ಉಪನ್ಯಾಸವನ್ನು ನ. 22 ಮಂಗಳವಾರ ಮಧ್ಯಾಹ್ನ 1.00 ಗಂಟೆಗೆ  ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಬಿ.ಹೆಚ್.ಎಸ್ ಉನ್ನತ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ. ಕೆ. ಎಸ್. ಸಮೀರಸಿಂಹ  ಕಾರ್ಯಕ್ರಮ ಉದ್ಘಾಟಿಸಿ, ಡಾ.ಹೆಚ್.ಎಸ್.ಸುರೇಶ್ ರವರ ‘ಪಾತಕಲೋಕದಿಂದ ಗಾಂಧಿಯಾನದೆಡೆಗೆ’ (ಲಕ್ಷ್ಮಣ್ ತುಕಾರಾಂ ಗೋಲೆ ಪರಿವರ್ತನೆ ಕಥೆ)  ಸಾಂದರ್ಭಿಕ ಕೃತಿ ಬಿಡುಗಡೆ ಮಾಡುವರು.  ‘ವಕೀಲರಾಗಿ ಮಹಾತ್ಮ ಗಾಂಧೀಜಿ’ ಕುರಿತು ತುಮಕೂರಿನ ಹಿರಿಯ ಗಾಂಧಿ ಚಿಂತಕ  ಲ. ನರಸಿಂಹಯ್ಯ ತೊಂಡೋಟಿ ಉಪನ್ಯಾಸ ನೀಡುವರು.

- Advertisement -

ಕರ್ನಾಟಕ ಸರ್ವೋದಯ ಮಂಡಲ ಅಧ್ಯಕ್ಷ ಡಾ. ಹೆಚ್. ಎಸ್. ಸುರೇಶ್ ಪ್ರಾಸ್ತಾವಿಕ ನುಡಿಗಳನ್ನಾಡುವರು, ಪ್ರಾಂಶುಪಾಲೆ  ಪ್ರೊ. ಕೆ.ಎಸ್. ಶೈಲಜಾ ಅಧ್ಯಕ್ಷತೆ ವಹಿಸುವರು,  ರಾ.ಸೇ.ಯೋ ಅಧಿಕಾರಿ ಪ್ರೊ.ಎಸ್.ಎ. ಶ್ರೀಕಂಠ , ಉಪ ಪ್ರಾಂಶುಪಾಲ ಡಾ.ಡಿ.ರಾಧಾಕೃಷ್ಣ , ಕರ್ನಾಟಕ ಸರ್ವೋದಯ ಮಂಡಲ ಕಾರ್ಯದರ್ಶಿ ಡಾ. ಯ.ಚಿ. ದೊಡ್ಡಯ್ಯ ಉಪಸ್ಥಿತರಿರುವರು ಎಂದು  ಕರ್ನಾಟಕ ಸರ್ವೋದಯ ಮಂಡಲ, ಬೆಂಗಳೂರು ನಗರ ಜಿಲ್ಲೆ ಅಧ್ಯಕ್ಷ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿವರಗಳಿಗೆ :  90356 18076

ಡಾ. ಹೆಚ್.ಎಸ್.ಸುರೇಶ್ ಕಿರು ಪರಿಚಯ:

ನರಸಿಂಹರಾಜಪುರ ಮೂಲದ ಹೊಸ್ಕೆರೆ ಶಂಕರ ಭಟ್ಟ ಸುರೇಶ್ ಜನಿಸಿದ್ದು ಶಿವಮೊಗ್ಗದಲ್ಲಿ. ಆಯನೂರು, ಮಂಡಿಘಟ್ಟ, ಕುಂದಾಪುರ, ಶಿವಮೊಗ್ಗ ದಲ್ಲಿ ಶಿಕ್ಷಣ.ಹಾರನಹಳ್ಳಿ, ಮತ್ತೂರಿನಲ್ಲಿ ಕೆಲ ವರ್ಷ ಪ್ರೌಢ ಶಾಲೆ ಶಿಕ್ಷಕರಾಗಿದ್ದು ನಂತರ ಮಡಿಕೇರಿ ಮತ್ತು ಮಂಡ್ಯ ವಿ. ಸಿ. ಫಾರಂ ನಲ್ಲಿ ಸಾಮಾಜಿಕ ಶಿಕ್ಷಣ ವಿಸ್ತರಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಅಲ್ಲಿಂದ ಕೇಂದ್ರ ಸರಕಾರದ ನೆಹ್ರೂ ಯುವ ಕೇಂದ್ರವನ್ನು ಸೇರಿ ಮಂಡ್ಯ ಜಿಲ್ಲೆಯ ಯುವಜನರ ಪ್ರೀತಿಗೆ ಪಾತ್ರರಾದರು.

- Advertisement -

ಮುಂದೆ ರಾಷ್ಟ್ರೀಯ ಸೇವಾ ಯೋಜನೆ ಯಲ್ಲಿ ಸೇರ್ಪಡೆಯಾಗಿ ಮಹಾರಾಷ್ಟ್ರ ಗೋವಾ, ಗುಜರಾತ್, ಕೇರಳ, ಕರ್ನಾಟಕದಲ್ಲಿ ಎನ್. ಎಸ್.ಎಸ್. ಸಲಹೆಗಾರರಾಗಿ ಕೆಲಸ ಮಾಡಿ 2009 ರಲ್ಲಿ ನಿವೃತ್ತರಾದರು . ಹುಬ್ಬಳ್ಳಿಯಲ್ಲಿನ ರಾಜ್ಯ ಕಾನೂನು ವಿಶ್ವ ವಿದ್ಯಾಲಯದಲ್ಲಿ ಎನ್ನೆಸ್ಸೆಸ್ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದರು. ರಾಜ್ಯ ಯುವ ರೆಡ್ ಕ್ರಾಸ್ ಸಲಹೆಗಾರರಾಗಿ ಕಾಲೇಜುಗಳಿಗೆ ಅಗತ್ಯವಾದ ಮಾರ್ಗದರ್ಶಿ ಕೈಪಿಡಿ ರಚಿಸುವುದರಲ್ಲಿ ಪ್ರಧಾನ ಪಾತ್ರ ವಹಿಸಿದರು.

ನಿವೃತ್ತ ಐಎಎಸ್ ಅಧಿಕಾರಿ ಭರತ್ ಲಾಲ್ ಮೀನಾ ಅವರಿಂದ ಸ್ಥಾಪಿತ ಅಪ್ನಾ ದೇಶ್ ಸಂಸ್ಥೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.ಸರ್ವ ಸೇವಾ ಸಂಘ ವಾರ್ಧ ಇವರ ಆಹ್ವಾನದ ಮೇರೆಗೆ ಬಾಂಗ್ಲಾ ದೇಶ್‍ನ ನೌಕಾಲಿ ಯಲ್ಲಿ ಆಕ್ಟೋಬರ್ 2,   2018ರಲ್ಲಿ ನಡೆದ ಹತ್ತು ದಿನಗಳ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.

ಇವರ ‘ಎನ್. ಎಸ್ .ಎಸ್. ಅಧಿಕಾರಿಗಳಲ್ಲಿ ಪಾತ್ರ ಪರಿಕಲ್ಪನೆ’ ಪ್ರೌಢ ಪ್ರಬಂಧಕ್ಕೆ ಮಹಾರಾಷ್ಟ್ರದ ನಾಂದೇಡ್ ವಿಶ್ವವಿದ್ಯಾಲಯದ ಪಿಹೆಚ್. ಡಿ. ಲಭಿಸಿದೆ. ಶ್ರೀಲಂಕಾ, ಸಿಂಗಪೂರ್, ಬ್ರಿಟನ್, ಫ್ರಾನ್ಸ್ , ಅಮೆರಿಕ, ವೆಸ್ಟ್ ಇಂಡೀಸ್‍ನಲ್ಲಿನ ಯುವ ಸೇವೆಗಳ ಅಧ್ಯಯನ ಮಾಡಿದ್ದಾರೆ. ದೂರದರ್ಶನದ ಚಂದನ ವಾಹಿನಿಯಲ್ಲಿ,  ಬೆಂಗಳೂರು ಆಕಾಶವಾಣಿಯಲ್ಲಿ ಸಂದರ್ಶನ, ಸಂವಾದಗಳಲ್ಲಿ ಭಾಗಿಯಾಗಿದ್ದಾರೆ. ಪ್ರಸ್ತುತ ಕರ್ನಾಟಕ ರಾಜ್ಯ ಸರ್ವೋದಯ ಮಂಡಲದ ಅಧ್ಯಕ್ಷರಾಗಿದ್ದಾರೆ.

ಡಾ.ಹೆಚ್.ಎಸ್.ಸುರೇಶ್ ರವರ ‘ಪಾತಕಲೋಕದಿಂದ ಗಾಂಧಿಯಾನದೆಡೆಗೆ’ (ಲಕ್ಷ್ಮಣ್ ತುಕಾರಾಂ ಗೋಲೆ ಪರಿವರ್ತನೆ ಕಥೆ) ಅಪರಾಧಿ ಆಗಿದ್ದವನ ಅಮೃತ ಕ್ಷಣ ಉತ್ತಮ ಪುಸ್ತಕವನ್ನು ಓದಿ ಅದರ ಪ್ರಭಾವಲಯಕ್ಕೆ ಒಳಗಾಗಿ, ಇನ್ನಷ್ಟು ಓದಿ ಹೆಚ್ಚು ಪ್ರಭಾವಿತರಾದವರ ಉದಾಹರಣೆಗಳಿವೆ.

ಆದರೆ ವ್ಯಕ್ತಿಯ ಜೀವನ ಚರಿತ್ರೆ ಅಂದರೆ, ಆತ್ಮಕಥೆಯನ್ನು ಓದಿದ ಮಾತ್ರದಿಂದ  ಪ್ರಭಾವಿತವಾದದ್ದು ಮಾತ್ರವಲ್ಲ ಪರಿವರ್ತಿತವಾದದ್ದು ಬಹಳ ಅಪರೂಪ. ಅದರಲ್ಲೂ ವಿಚಾರಣಾಧೀನ ಖೈದಿಯಾಗಿ ಶಿಕ್ಷೆಗೂ ಪಾತ್ರನಾದ 25-30ರ ತರುಣ ಅಪರಾಧಿ ಪರಿವರ್ತಿತನಾಗಿ ಸಭ್ಯ ಜೀವನ ಮಾರ್ಗವನ್ನು ಕಂಡುಕೊಂಡು ಬಾಳುತ್ತಿದ್ದಾನೆ ಎಂಬುದು ನಂಬಲೇಬೇಕಾದ ಸತ್ಯ- ಪರಮ ಸತ್ಯ. ಸ್ಥಿತ್ಯಂತರ ಗತಿಯ ಸಮಾಜದಲ್ಲಿ ಒಂದು ಜೀವಂತ ಸಾಕ್ಷಿ !

ದಕ್ಷಿಣ ಆಫ್ರಿಕಾದಲ್ಲಿ ಆಡಳಿತಾರೂಢವಾಗಿದ್ದ ಬಿಳಿಯರ ಪ್ರಭುತ್ವ  ಮಾಡುತ್ತಿದ್ದ ಅನ್ಯಾಯ, ಅಪಮಾನ ಮತ್ತು ಅಸಮಾನತೆಯ ವಿರುದ್ಧ  ಹೋರಾಡಲು ಆರಂಭಿಸಿದ್ದ ಗಾಂಧೀಜಿ ತನ್ನ ಪ್ರತ್ಯಕ್ಷ ನಡೆ  ನುಡಿಗಳಿಂದಲೇ  ಜನರಲ್  ಸ್ಮಟ್ಸ್ ನ ಗರ್ವದ ಕವಚವನ್ನು ಕಳಚುವಂತಾಯಿತು. ಎಂಥಹಾ ದೊಡ್ಡ ಮನುಷ್ಯ ಗಾಂಧೀಜಿ! ಎಂದು ಪ್ರಶಂಸಿಸುವಷ್ಟರ ಮಟ್ಟಿಗೆ  ಪರಿವರ್ತನೆಗೊಂಡ ಎಂದು ನಾವು ತಿಳಿದಿದ್ದೇವೆ. ಆದರೆ ಪ್ರತ್ಯಕ್ಷವಾಗಿ ಗಾಂಧೀಜಿಯನ್ನು ಎಂದೂ ಕಾಣದಿದ್ದ ಅಪರಾಧಿ ಗೋಲೆ  ಮರಾಠಿ ಲೇಖಕ ಅಪ್ಪಾಸಾಹೇಬ್ ಪಟವರ್ಧನ್ ಅವರು ಭಾಷಾಂತರಿಸಿದ್ದ ‘ಸತ್ಯಾಚೆ ಪ್ರಯೋಗ್’ ಓದಿ, ಜ್ಞಾನೋದಯವಾಗಿ, ಹೊಸ ಹುಟ್ಟನ್ನು ಪಡೆದಿದ್ದಾನೆ ಅನ್ನುವುದಕ್ಕೆ, ಗಾಂಧಿಯೋತ್ತರ ತಲೆಮಾರಿನ ಯುವಕರೂ ಪರಿವರ್ತಿತರಾಗುವ  ಪ್ರಗತಿಪರ ಮನಸ್ಕರು ಎಂಬುದಕ್ಕೆ ಸರ್ವೋತ್ತಮ ಸಾಕ್ಷಿ ಲಕ್ಷ್ಮಣ್  ತುಕಾರಾಮ್ ಗೋಲೆ.

ಆಧುನಿಕ ನಗರಗಳಲ್ಲಿ ಒಂದಾದ, ಹಾಗೆಯೇ ಅಲ್ಲ ಸಲ್ಲದ ವಿದ್ಯಮಾನಗಳಿಗೆ ತವರಾದ,  ಮುಂಬೈನಲ್ಲಿ  ಸನ್ನಿವೇಶವಶಾತ್  ರೇಜರ್ ರೌಡಿಯಾದ  ಲಕ್ಷ್ಮಣ್ ತುಕಾರಾಮ್ ಗೋಲೆ  ಕೊಲೆ, ಅತ್ಯಾಚಾರಗಳನ್ನು ಬಿಟ್ಟು ಮಿಕ್ಕೆಲ್ಲ ವಿದ್ಯಮಾನಗಳಲ್ಲೂ  ನಿಸ್ಸೀಮನಾಗಿ  ಕಾರಾಗೃಹವಾಸಿಯಾದ ಆತನಿಗೆ ಗಾಂಧಿ ಆತ್ಮಕಥೆ ದೊರೆತದ್ದು ಅಮೃತ ಕ್ಷಣವೇ ಆಯಿತು. ಚಿಂತನೆಗೆ, ಪರಿವರ್ತನೆಗೆ, ಮಾರ್ಗದರ್ಶಿಯಾಗಿ ಕಾರಾಗೃಹದಿಂದ ಗೃಹಸ್ಥಾಶ್ರಮ ಸೇರುವ – ಬಾಳುವ  ಯೋಗ್ಯನನ್ನಾಗಿ ರೂಪಿಸಿತೆಂಬುದೇ ಮುಖ್ಯ !

ಮಹಾರಾಷ್ಟ್ರದ ಈ ಪರಿವರ್ತಿತ ಮಿತ್ರನನ್ನು  ಕರ್ನಾಟಕ ಸರ್ವೋದಯ ಮಂಡಲದ  ಮೂಲಕ  ರಾಜ್ಯಕ್ಕೂ ಬರಮಾಡಿಕೊಂಡು  ಶಿವಮೊಗ್ಗ, ಮಂಡ್ಯ,  ಪರಪ್ಪನ ಅಗ್ರಹಾರ, ಧಾರವಾಡ, ಗುಲ್ಬರ್ಗ, ಮೈಸೂರು ಚಾಮರಾಜನಗರ, ತುಮಕೂರು, ಮಧುಗಿರಿ ಜೈಲುಗಳಿಗೆ  ಕರೆದುಕೊಂಡು ಹೋಗಿ ಅಲ್ಲಿದ್ದ ವಿಚಾರಣಾಧೀನರಿಗೆ ದರ್ಶನ-ಉಪನ್ಯಾಸಗಳನ್ನು ಏರ್ಪಡಿಸಿದ ಡಾ.ಹೆಚ್.ಎಸ್.ಸುರೇಶ್ ಅವರ ಪ್ರಯತ್ನ  ಪ್ರಶಂಸನೀಯವಾದದ್ದು.

ಗಾಂಧೀಜಿಯ ಜೀವನ ಗಂಗೆಯಲ್ಲಿ ಮಿಂದು ಮೆರುಗು ಪಡೆದ  ಪರಿವರ್ತಿತರಾಗಿ ಸಮಾಜದೊಂದಿಗೆ ಗುರುತಿಸಿಕೊಂಡು ಶಿಷ್ಟರಾಗಿ ರಚನಾತ್ಮಕವಾಗಿ ಬಾಳುತ್ತಿರುವವರನ್ನು  ಕುರಿತಾದ ಸಾಹಿತ್ಯ ರಚನೆಯಾಗಿ ಗಾಂಧಿಯೋತ್ತರ ಸಾಹಿತ್ಯ ಎಂಬಂತೆ ಹೊರಬರಬೇಕಾಗಿದೆ ಎಂದು ‘ಪಾತಕಲೋಕದಿಂದ ಗಾಂಧಿಯಾನದೆಡೆಗೆ’ (ಲಕ್ಷ್ಮಣ್ ತುಕಾರಾಂ ಗೋಲೆ ಪರಿವರ್ತನೆ ಕಥೆ) ಕೃತಿಗೆ ಮುನ್ನುಡಿ ಬರೆದಿರುವ ತುಮಕೂರಿನ ಹಿರಿಯ ಗಾಂಧಿ ಚಿಂತಕ ಎಲ್. ನರಸಿಂಹಯ್ಯ, ತೊಂಡೋಟಿ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ.

ಪುಸ್ತಕದ ಕುರಿತು ಅಭಿಪ್ರಾಯಗಳು:

ಮಹಾರಾಷ್ಟ್ರದ ಪರಿವರ್ತಿತ ಕೈದಿ ಲಕ್ಷ್ಮಣ್ ಗೋಲೇ ಇವರು 05.12.2021 ರಂದು ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದಾಗ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿ ಶ್ರೀಮಠದ ವಿದ್ಯಾರ್ಥಿಗಳನ್ನು ಕುರಿತು ಮಾತನಾಡುವಾಗ ‘ಇಲ್ಲಿ ಮಕ್ಕಳಿಗೆ ದೊರೆಯುತ್ತಿರುವ ತ್ರಿವಿಧ ದಾಸೋಹಗಳಲ್ಲಿ ಒಂದಾದರೂ ನನ್ನ ಬಾಲ್ಯದಲ್ಲಿ ದೊರಕಿದ್ದರೆ ನನ್ನ ಬದುಕಿನ ಗತಿಯೇ ಬದಲಾಗುತ್ತಿತ್ತು’ ಎಂದು ಅಭಿಪ್ರಾಯಪಟ್ಟರು.


ಗೋಲೇಯವರು ಗಾಂಧೀಜಿಯವರ “ನನ್ನ ಸತ್ಯಾನ್ವೇಷಣೆ” ಎಂಬ ಸ್ವಪರಿಚಯದ ಪುಸ್ತಕವನ್ನು ಓದಿದ ನಂತರ ಅದರಿಂದ ಪ್ರಭಾವಿತರಾಗಿ ಪಾತಕ ಲೋಕದಿಂದ ಹೊರ ಬಂದು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು ಉತ್ತಮ ಜೀವನ ನಡೆಸುತ್ತಿರುವುದು ಶ್ಲಾಘನೀಯ.

-ಶ್ರೀ ಸಿದ್ಧಲಿಂಗ ಸ್ವಾಮಿಗಳು, ಅಧ್ಯಕ್ಷರು, ಸಿದ್ಧಗಂಗಾ ಮಠ.


ಚಿಕ್ಕನಾಯಕನಹಳ್ಳಿಯಲ್ಲಿನ ರೋಟರಿ ಪ್ರೌಢಶಾಲೆ ಮತ್ತು ನವೋದಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಲಕ್ಷ್ಮಣ ಗೋಲೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಟಾಲ್ಸ್‍ಟಾಯ್ ಅವರ ಪುಸ್ತಕ ಗಾಂಧೀಯವರನ್ನು ಪ್ರಭಾವಿಸಿದ್ದರೆ, ಗಾಂಧೀಜಿ ಆತ್ಮಕಥೆಯ ಓದು ಗೋಲೆ ಅವರ ಪರಿವರ್ತನೆಗೆ ಕಾರಣವಾಯಿತು.

ಪ್ರೊ. ಎಂ. ವಿ. ನಾಗರಾಜರಾವ್, ಲೇಖಕರು – ಪ್ರಕಾಶಕರು, ಚಿ.ನಾ. ಹಳ್ಳಿ


ಬಾಪೂಜಿ ಅವರ ‘ನನ್ನ ಸತ್ಯಾನ್ವೇಷಣೆ’ ಎಲ್ಲರಿಗೂ, ಎಲ್ಲ ಕಾಲಕ್ಕೂ, ಎಲ್ಲ ದೇಶಕ್ಕೂ ಪ್ರಸ್ತುತವಾಗಬಲ್ಲ ಒಂದು ಮಹಾಕಾವ್ಯ ಅನ್ನುವುದನ್ನು ಲಕ್ಷ್ಮಣ್ ಗೋಲೆಯ ಈ ಪರಿವರ್ತನೆಯ ನಿಜ ಜೀವನದ ಕಥಾನಕ ಸ್ಪಷ್ಟ ಪಡಿಸುತ್ತದೆ.

ಎಂ. ಬಸವಯ್ಯ , ಸಂಸ್ಥಾಪಕರು, ಬಾಪೂಜಿ ವಿದ್ಯಾಕೇಂದ್ರ, ತುಮಕೂರು


ಅನೇಕರು ಅಪರಾಧ ಮಾಡುತ್ತಾರೆ, ಸೆರಮನೆ ಸೇರುತ್ತಾರೆ. ಶಿಕ್ಷೆ ಮುಗಿಸಿ ಹೊರಬಂದ ಮೇಲೆ ಮತ್ತದೇ ಅಪರಾಧಗಳಿಗೆ ಜೈಲು ಸೇರುವ ಜೈಲ್ ಬರ್ಡ್‍ಗಳನ್ನು ನೋಡಿದ್ದೇವೆ. ಆದರೆ ಕೆಲವೇ ಕೆಲವು ಮಂದಿ ಪರಿವರ್ತಿತರಾಗಿ ಸಮಾಜಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ. ಅಂತಹವರಲ್ಲಿ ಎದ್ದು ಕಾಣುವವ ವ್ಯಕ್ತಿ ಮಹಾರಾಷ್ಟ್ರದ ಲಕ್ಷ್ಮಣ ಗೋಲೆ. ಅವರ ಬಗ್ಗೆ ನಾನು ದೂರದರ್ಶನ ಚಂದನದಲ್ಲಿ ಪ್ರಸ್ತುತಪಡಿಸಿದಾಗ ಉತ್ತಮ ಪ್ರತಿಕ್ರಿಯೆ ಬಂದಿತ್ತು. ಗಾಂಧಿ ಮಾರ್ಗವನ್ನನುಸರಿಸಿ, ನಾಡಿನೆಲ್ಲೆಡೆ ಸಂಚರಿಸಿ, ಅಪರಾಧಿಗಳ ಮನಃಪರಿವರ್ತನೆ ಮಾಡುತ್ತಿರುವುದು ಶ್ಲಾಘನೀಯ. ಇಂತಹ ವ್ಯಕ್ತಿಯ ಬಗ್ಗೆ ಡಾ.ಹೆಚ್.ಎಸ್.ಸುರೇಶ್ ಅವರು ಮನಮುಟ್ಟುವಂತೆ ನಿರೂಪಿಸಿದ್ದಾರೆ. ಎಲ್ಲರೂ ಓದಿ ಸ್ಫೂರ್ತಿ ಪಡೆಯುವಂತಹದ್ದು. ಕನ್ನಡ ಸಾಹಿತ್ಯಕ್ಕೊಂದು ಅಮೂಲ್ಯ ಕೊಡುಗೆ.

-ಎಂ.ಎನ್. ಸುಂದರರಾಜ್,ಅಧ್ಯಕ್ಷರು, ಕರ್ನಾಟಕ ಸಂಘ, ಶಿವಮೊಗ್ಗ


ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆಯ, 2010ರಲ್ಲಿ, ನಾನು ನಿರ್ದೇಶಕನಿರುವಾಗ, ಲಕ್ಷ್ಮಣ ತುಕಾರಾಂ ಗೋಲೆಯ ಮಾತು ಆಲಿಸಲು ವಿದ್ಯಾರ್ಥಿಗಳು ತವಕದಿಂದ ಕಾಯುತ್ತಿದ್ದರು.  ಪರಿಸ್ಥಿತಿಯ ಒತ್ತಡದಿಂದಾಗಿ ಓರ್ವ ಸಜ್ಜನನು ಪಾತಾಕಿ ಆಗಿ ರೂಪಿತವಾದ ಬಳಿಕ ಸತ್ಪ್ರಜೆಯಾಗಿ ಪರಿವರ್ತನೆ ಆಗಲು ಇರುವ ಸಕಲ ಅವಕಾಶಗಳನ್ನು ಬಳಸಲು ಮುಂದಾಗಿ, ಇತರರಿಗೆ ಪ್ರೇರಕವಾಗಿ ಹೆಜ್ಜೆ ಇರಿಸಲು ದೃಢ ಸಂಕಲ್ಪ ಇದ್ದಾಗ ಮಾತ್ರ ಸಾಧ್ಯ ಎನ್ನುವ ನಂಬಿಕೆಗೆ ಲಕ್ಷ್ಮಣ ತುಕಾರಾಂ ಗೋಲೆಯ ಜೀವನ ದರ್ಶನ ಉತ್ತಮ ದೃಷ್ಟಾಂತವಾಗಿ ನಿಲ್ಲಬಲ್ಲದು.

ಪ್ರೊ ಸಿ. ಎನ್. ಮಂಜಪ್ಪ, ನಿವೃತ್ತ ನಿರ್ದೇಶಕರು, ಕಾನೂನು ಶಾಲೆ, ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ


ಗಾತ್ರ ಮತ್ತು ಮೌಲ್ಯ-ಇವುಗಳಲ್ಲಿ ಈ ಹೊತ್ತಗೆ ಎರಡನೆಯದನ್ನು ಪ್ರತಿನಿಧಿಸುತ್ತದೆ ಎಂದು ನನ್ನ ಅನಿಸಿಕೆ.

ಡಾ.ಗುರುರಾಜ ಪೋಶೆಟ್ಟಿಹಳ್ಳಿ, ಅಂಕಣಕಾರರು


ಈ ಬರಹವನ್ನು ಓದಿ ಮುಗಿಸಿದ ಮೇಲೆ ಗಾಂಧೀ ಅದೆಷ್ಟು ಪ್ರಸ್ತುತ ಮತ್ತು ಶಕ್ತಿಶಾಲಿ ಎಂಬ ಭಾವನೆ ಮೂಡಿದರೆ ಅಚ್ಚರಿಯೇನೂ ಇಲ್ಲ. ನಮ್ಮ ಅನೇಕ ವೈಯುಕ್ತಿಕ, ಸಾಮಾಜಿಕ ವ್ಯಸನಗಳಿಗೆ ಗಾಂಧೀ ಉತ್ತರ ನೀಡಬಲ್ಲ ದೊಡ್ಡ ಶಕ್ತಿ ಅತ್ಯಂತ ರೋಚಕವಾಗಿ, ಸಿನಿಮೀಯ ರೀತಿಯಲ್ಲಿ ಬರೆಯಬಹುದಾಗಿದ್ದ ಗೋಲೆಯವರ ಈ ಆತ್ಮ ನಿವೇದನೆಯ ಕಥಾನಕವನ್ನು ಡಾ. ಹೆಚ್. ಎಸ್. ಸುರೇಶ್‍ರವರು ಅತ್ಯಂತ ಸಂಯಮದಿಂದ ಓದುಗರಿಗೆ ತಲುಪಿಸುವ ಪರಿ ವಿಶೇಷವಾದದ್ದು.

-ಡಾ. ಹೆಚ್.ಎಸ್. ನಾಗಭೂಷಣ,ಪ್ರಾಂಶುಪಾಲರು,ಕಮಲಾ ನೆಹರು ಮೆಮೋರಿಯಲ್ ಮಹಿಳಾ ಕಾಲೇಜು, ಶಿವಮೊಗ್ಗ


ವರ್ತಮಾನದ ಭಾರತಕ್ಕೆ ಪರಿವರ್ತನೆಯ ಮಹಾಪರ್ವವನ್ನೇ ಪಠಿಸುವ ಪಠ್ಯದಂತಿರುವ ಈ ಕೃತಿಯ ನಾಮಾಂಕಿತವೇ ಆಸಕ್ತಿಯನ್ನು ಮೂಡಿಸುವಂತಿದೆ. ಬುದ್ಧನಿಂದ ಪರಿವರ್ತಿತನಾದ ಅಂಗೂಲಿಮಾಲ, ಬಸವಣ್ಣನಿಂದ ಪರಿವರ್ತಿತರಾದ ತಳ ಸಮುದಾಯದ ಜನರು ಸತ್ಯಶೋಧಕ ಸಂಸ್ಥೆಯಿಂದ ಸಮಾಜಮುಖಿಯಾದ ಸಾಮಾನ್ಯ ಜನರು, ಮಹಾತ್ಮಗಾಂಧಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ಸರ್ವಜನಾಂಗದ ತೋಟವಾದ ಭಾರತದ ಕಥನವನ್ನು ಆಗಾಗ್ಗೆ ನಾವು ಸ್ಮರಿಸಿಕೊಳ್ಳಲೇ ಬೇಕು. ಇಂತಹ ಅಸಂಭವವಾದ ಘನ ಕಾರ್ಯವನ್ನು ಆಗು ಮಾಡಿದ ಕರ್ನಾಟಕ ಸರ್ವೋದಯ ಮಂಡಲದ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಎಲ್ಲಾ ಪದಾಧಿಕಾರಿಗಳಿಗೆ ಆತ್ಮೀಯ ನಮನ. ಈ ಕೃತಿ ಹೆಚ್ಚು ಪ್ರಚಾರ ಮತ್ತು ವಿತರಣೆಗೊಳ್ಳಲಿ ಎಂದು ಆಶಿಸುತ್ತೇನೆ.

ಇಂದಿರಾ ಕೃಷ್ಣಪ್ಪ , ಗೌ.ಕಾರ್ಯದರ್ಶಿ,ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು

- Advertisement -
- Advertisement -

Latest News

ಹಾಲವಾಣ(ಹೊಂಗಾರಕ)

ಸಣ್ಣ ವಯಸ್ಸಿನಲ್ಲಿ ಕೈಗೆ ಮದರಂಗಿ ಕಟ್ಟಲು ಬಳಸುತ್ತಿದ್ದ ಎಲೆ ಹಾಲವಣ. ಇದರ ಬಳಕೆ ಒಂದೇ ಎರಡೇ. ರೈತರ ಹೊಲದಲ್ಲಿ ನೆಟ್ಟು ಎಲೆ ಬಳ್ಳಿ ಮೆಣಸಿನ ಬಳ್ಳಿ ಹಬ್ಬಿಸಲು....
- Advertisement -

More Articles Like This

- Advertisement -
close
error: Content is protected !!
Join WhatsApp Group