spot_img
spot_img

ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ

Must Read

ಪ್ರತಿ ದಿನವೂ ಒಂದು ಹೊಸ ಬೆಳಗನ್ನು ನಾವು ಕಾಣುತ್ತೇವೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯುಗದ ಆದಿ ಯುಗಾದಿ ಯನ್ನು ನೂತನ ವರ್ಷವನ್ನು ಆರಂಭಿಸಿದರೆ. ವಿದೇಶಿಗರು ಕ್ಯಾಲೆಂಡರ್ ವರ್ಷವನ್ನು ಜನೇವರಿ ಒಂದರಂದು ಆರಂಭಿಸುತ್ತಾರೆ.

ಅದು ಏನೇ ಇರಲಿ ದ.ರಾ.ಬೇಂದ್ರೆಯವರ ಯುಗಾದಿ ಕವನದ ಸಾಲುಗಳನ್ನು ನಾವು ಎಷ್ಟು ಸ್ಮರಿಸಿದರೂ ಕಡಿಮೆಯೇ. ನಿದ್ದೆಗೊಮ್ಮೆ ನಿತ್ಯ ಮರಣ. ಎದ್ದ ಸಲ ನವೀನ ಜನನ. ಇದು ನಿಜಕ್ಕೂ ಅರ್ಥ ಪೂರ್ಣ.ಹೊಸ ವರ್ಷದ ನೆಪದಲ್ಲಿ ಹಿಂದಿನ ಮಧ್ಯರಾತ್ರಿಯವರೆಗೆ ಟೀವಿಗಳಲ್ಲಿನ ವಿವಿಧ ವರ್ಣರಂಜಿತ ಕಾರ್ಯಕ್ರಮಗಳು.

ಅದರಲ್ಲೂ ಮಧ್ಯ ಪ್ರೀಯರಂತೂ ಅದಕ್ಕೆಂದೇ ಹೊಸ ವರ್ಷದ ಸ್ವಾಗತ ನೀಡುವ ಸಂಭ್ರಮಗಳು. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಇದು ನಗರಕ್ಕಷ್ಟೇ ಸೀಮಿತವಾಗದೇ ಹಳ್ಳಿ ಹಳ್ಳಿಗಳಿಗೂ ಯುವಕರನ್ನು ಸೆಳೆಯುತ್ತಿರುವುದು ಶೋಚನೀಯ ಸಂಗತಿ.

ರಸ್ತೆ ತುಂಬೆಲ್ಲ ಸುಣ್ಣದಿಂದ ಹೊಸ ವರ್ಷದ ಶುಭಾಶಯಗಳನ್ನು ಬರೆದು ರಸ್ತೆಯಲ್ಲಿಯೇ ತಮ್ಮ ಹಲವು ಕಾರ್ಯಕ್ರಮಗಳನ್ನು ಮಾಡಿ ಫೇಸ್ಬುಕ್.ವ್ಯಾಟ್ಸಪ್ ಗಳ ತುಂಬೆಲ್ಲ ಅದೇ ಚಿತ್ರಗಳು.

ಇನ್ನು ಕೆಲವರು ಇದು ನಮ್ಮ ಭಾರತೀಯ ಸಂಸ್ಕೃತಿಯದ್ದಲ್ಲ ನಾವು ಯುಗಾದಿಯನ್ನು ಹೊಸ ವರ್ಷವೆಂದು ಆಚರಿಸೋಣ ಎಂಬೆಲ್ಲ ಸಂದೇಶಗಳನ್ನು ಹಾಕುವುದು ಇದನ್ನು ನೋಡಿದಾಗ ಇವೆರಡಕ್ಕಿಂತ  ಭಿನ್ನವಾದ ಆಲೋಚನೆಯನ್ನು ದ.ರಾ.ಬೇಂದ್ರೆಯವರು ಮಾಡಿದ್ದು ಎಷ್ಟು ಸತ್ಯ. ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ಎಂಬುದು ಅಕ್ಷರಶಃ ಸತ್ಯ.

ಪ್ರತಿ ಮುಂಜಾವು ನಮಗೆ ಒಂದು ಹೊಸತನ್ನು ತಂದು ಕೊಡುತ್ತದೆ. ಅದನ್ನು ಸಾರ್ಥಕ ಪಡಿಸಿಕೊಳ್ಳಬೇಕಾದರೆ ನಾವು ಹೇಗೆ ಬದುಕಬೇಕು ಎಂಬುದು ಅಷ್ಟೇ ಮುಖ್ಯವಲ್ಲವೇ.? ನೀವು ಏನೇ ಆಗಿರಿ ಪ್ರತಿ ದಿನದ ಬೆಳಗನ್ನು ಆಶಾಭಾವದೊಂದಿಗೆ ಆರಂಭಿಸಿದರೆ ಬದುಕು ಸಾರ್ಥಕ.

ಪ್ರತಿ ಮುಂಜಾವು ಹಲವು ಸಾಧ್ಯತೆಗಳನ್ನು ಹೊತ್ತು ತರುತ್ತದೆ.ಇಂದು ನಾನು ಅಸಾಧ್ಯವಾದುದನ್ನು ಮಾಡುತ್ತೇನೆ ಎಂದು ದಿನವನ್ನು ಆರಂಭಿಸಿ.ಆ ದಿನ ನಿಮ್ಮ ಯಶಸ್ಸಿನ ದಿನವಾಗಿರುತ್ತದೆ.

ಪ್ರಯತ್ನ ಆತ್ಮವಿಶ್ವಾಸದೊಂದಿಗೆ ಹೊಸ ಬೆಳಗು ಆರಂಭವಾಗಬೇಕಷ್ಟೇ?

ಹಾಗಾದರೆ ನಾವು ಹೇಗೆ ಪ್ರತಿ ದಿನವನ್ನು ಆರಂಭಿಸಬಹುದು. ವಿದ್ಯಾರ್ಥಿಗಳಾಗಿದ್ದರೆ ಓದಿನತ್ತ ಗಮನ ಕೊಡುವ ಮೂಲಕ. ಗೃಹಿಣಿಯಾಗಿದ್ದರೆ ಮನೆಗೆಲಸದಲ್ಲಿ ತೊಡಗುವ ಮೂಲಕ. ನೌಕರರಾಗಿದ್ದರೆ ಮನೆಯ ಹಿರಿಯರಿಗೆ ಸಹಾಯ ಮಾಡುವ ಮನೆಯ ಕೆಲಸಗಳನ್ನು ನಿರ್ವಹಿಸುತ್ತ ನಮ್ಮ ಕಾರ್ಯ ಇಂದು ಏನೇನು ಎಂಬುದರ ಮೂಲಕ. ರೈತರಾಗಿದ್ದರೆ ಭೂತಾಯಿಯ ಸೇವೆಗೆ ಅಣಿಯಾಗುವ ಮೂಲಕ. ಹೀಗೆ ನಾವು ಏನೇನಾಗಿದ್ದೇವೆಯೋ ಎಲ್ಲದರಲ್ಲೂ ಸಕಾರಾತ್ಮಕ ಚಿಂತನೆಯ ಮೂಲಕ ಪ್ರತಿದಿನದ ಆರಂಭವಾದರೆ ಆ ದಿನದ ಅಂತ್ಯವು ಉತ್ತಮವಾಗಿರಲು ಸಾಧ್ಯ.

ನಾವು ಎಷ್ಟು ಹೊತ್ತು ಕೆಲಸ ಮಾಡುತ್ತೇವೆ ಎಂಬುದು ಮುಖ್ಯವಲ್ಲ ಹೇಗೆ ಮಾಡುತ್ತೇವೆ ಎಂಬುದು ಮುಖ್ಯ. 

ಅಧಿಕವಾಗಿ ಮಾಡುವುದಕ್ಕಿಂತ ಸರಿಯಾಗಿ ಮಾಡುವುದು ಶ್ರೇಷ್ಠ. ಇದು ಇಂದಿನ ದಿನಗಳಲ್ಲಿ ಯಾವುದೇ ಕೆಲಸ ಮಾಡಿ ಅದರಲ್ಲಿ ನಿಮ್ಮತನವಿರಲಿ ಎಂಬುದಕ್ಕೆ ಒಂದು ಮಾತು. ಬಸವಣ್ಣನವರು ಕಾಯಕ ನಿಷ್ಠೆಯ ಬಗ್ಗೆ ತಮ್ಮ ಹಲವಾರು ವಚನಗಳಲ್ಲಿ ಹೇಳಿದ್ದಾರೆ. ಬಸವಣ್ಣನವರ ಕಾಯಕ ತತ್ವಪ್ರೇರಣೆಯಿಂದ ಅನೇಕ ಶರಣ ಶರಣೆಯರು ವಿವಿಧ ಕಾಯಕದಲ್ಲಿ ತೊಡಗಿದರು. ಅವರ ಕಾಯಕದಿಂದ ಅವರ ಹೆಸರುಗಳು ಇತರರಿಗೆ ಪ್ರೇರಕ ಶಕ್ತಿಯಾದವು ಉದಾಹರಣೆಗೆ ಆಯ್ದಕ್ಕಿ ಲಕ್ಕಮ್ಮ, ಅಮುಗೆ ರಾಯಮ್ಮ, ಮೋಳಿಗೆ ಮಹಾದೇವಿ ಇಂತಹ ಹಲವಾರು ಶರಣೆಯರು ಕೂಡ ಕಾಯಕ ತತ್ವದ ಮೂಲಕ ಸ್ವಾತಂತ್ರ್ಯ ಅನುಭವಿಸಿದರು.

“WORK IS WORSHIP” ಅಂದರೆ ಕಾಯಕವೇ ಕೈಲಾಸ ಎಂದಿದ್ದಾರೆ ಬಸವಣ್ಣನವರು. ನಾವು ಮಾಡುವ ದಿನ ನಿತ್ಯದ ಕೆಲಸಗಳು ಶ್ರದ್ಧೆ, ಪ್ರಾಮಾಣಿಕತೆ, ನಿಷ್ಠೆಯಿಂದ ಮಾಡಿದರೆ ‘ಕಾಯಕವೇ ಕೈಲಾಸ’ ಎಂಬ ಮಾತಿಗೆ ನಾವು ಸಲ್ಲಿಸಿದ ಋಣ. ಏಕೆಂದರೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಜವಾಬ್ದಾರಿಗಳಿವೆ. ಆ ಜವಾಬ್ದಾರಿ ಅರಿತರೆ ಸಾಕು ಅವರವರ ಕಾರ್ಯ ಸುಗಮವಾದಂತೆ. 

ಕೆಲಸ ಯಾರ ಗೌರವವನ್ನು ತಗ್ಗಿಸುವುದಿಲ್ಲ. ಆದರೆ ತಾವು ಮಾಡುತ್ತಿರುವ ಕೆಲಸದಲ್ಲಿ ಶ್ರದ್ಧೆ ತೋರದೆ ಆ ಕೆಲಸದ ಗೌರವವನ್ನು ತಾವೇ ತಗ್ಗಿಸುವ ಸಂಪ್ರದಾಯ ಇಂದು ಕಂಡು ಬರುತ್ತಿದೆ.

ದೇಶದಲ್ಲಿ, ಹಲವಾರು ಭ್ರಷ್ಟಾಚಾರ, ಲಂಚ, ಕೊಲೆ-ಸುಲಿಗೆ ಅನೈತಿಕತೆಯಂಥ ಹೇಯ ಕೃತ್ಯಗಳು ಜರುಗುತ್ತಿರುವುದಕ್ಕೆ ಕಾರಣ ನಮ್ಮಲ್ಲಿ ಶ್ರದ್ಧೆ, ಭಕ್ತಿ, ನಿಷ್ಠೆ ಪ್ರಾಮಾಣಿಕತೆಯ ಕೊರತೆ ಇರುವುದೇ ಕಾರಣ. ಮನಸ್ಸು ಹೇಯ ಕೃತ್ಯಗಳತ್ತ ತೊಡಗಿದರೆ ಅದರಿಂದ ‘ಹೇಯ’ ಪರಿಣಾಮ ಎದುರಿಸಬೇಕಾಗುತ್ತದೆ. ಅಂದರೆ ಮಾಡಬಾರದ ಕೃತ್ಯ ಮಾಡಿದರೆ ಆಗಬಾರದ್ದು ಆಗಿಯೇ ತೀರುತ್ತದೆ ಎಂಬ “ಮಾಡಿದ್ದುಣ್ಣೋ ಮಹಾರಾಯ” ಗಾದೆಯಂತಾಗುತ್ತದೆ.

ಮಹಾತ್ಮಾ ಗಾಂಧೀಜಿಯವರು ಸಾಬರಮತಿ ಆಶ್ರಮದಲ್ಲಿದ್ದಾಗ ಒಂದು ದಿನ ಹಲವಾರು ಜನ ಗಾಂಧೀಜಿ ಭೇಟಿ ಮಾಡಲೆಂದು ಬೆಳಿಗ್ಗೆ ಅಲ್ಲಿಗೆ ಬಂದರಂತೆ, ಆಗ ಗಾಂಧೀಜಿ ಆಶ್ರಮದಲ್ಲಿರಲಿಲ್ಲ. ಹುಡುಕಿದರೆ ಒಂದು ಮೇಕೆಯ ಹಾಲು ಕರೆಯುತ್ತಿದ್ದರಂತೆ. ಅಂದರೆ ‘ಸ್ವಾವಲಂಬನೆ’ಯ ಬದುಕು ಅವರು ತೋರಿಸಿದ ಪಾಠ, ನಮ್ಮ ಮನೆಯ ಒಳಗೆ ಹೊರಗೆ ನಮ್ಮ ಪ್ರಥಮ ಕರ್ತವ್ಯ ನಾವು ಮಾಡಿದರೆ ನಿರುದ್ಯೋಗ ಸಮಸ್ಯೆಯೇ ಇರದು. ನಾವು ಕರ್ತವ್ಯ ಭ್ರಷ್ಟರಾಗಿ ಪರಾವಲಂಬಿಗಳಾದರೆ ಅಲ್ಲಿ ಸೋಮಾರಿತನ ಹೆಚ್ಚಾಗುತ್ತದೆ.

ನಮ್ಮ ದೇಶ ವಿಶಾಲ ಸಂಪದ್ಭರಿತ ನಾಡು, ಇಲ್ಲಿ ಸಂಪನ್ಮೂಲಗಳ ಕೊರತೆ ಇಲ್ಲ. ಇರುವಂತಹ ಪರಿಸರ, ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡರೆ ಜಗತ್ತಿನಲ್ಲಿಯೇ ‘ಭಾರತ’ದಂತಹ ಮುಂದುವರಿದ ರಾಷ್ಟ್ರ ಯಾವುದೂ ಆಗಲು ಸಾಧ್ಯವಿಲ್ಲ. ಆದರೆ ನಮ್ಮಲ್ಲಿ ‘ಕರ್ತವ್ಯ ಪ್ರಜ್ಞೆ’ ಇಲ್ಲದಿರುವುದೇ ಇಂದಿನ ಪ್ರಚಲಿತ ವಿದ್ಯಮಾನಕ್ಕೆ ಕಾರಣ. 

ಸರಕಾರದ ಯಾವ ಯೋಜನೆಗಳಿಗೂ ಸರಿಯಾದ ಸ್ಪಂದನೆ ಎಲ್ಲಿಯವರೆಗೂ ಇರುವುದಿಲ್ಲವೋ ಅಲ್ಲಿಯವರೆಗೂ ಅದರ ದಾರಿಯಲ್ಲಿ ಎಡರು-ತೊಡರುಗಳು ಸಹಜ.

‘ಪಾಲಿಗೆ ಬಂದದ್ದು ಪಂಚಾಮೃತ’ ಎನ್ನುವಂತೆ ಸಣ್ಣ ಕೆಲಸವೇ ಇರಲಿ, ದೊಡ್ಡ ಕೆಲಸವಿರಲಿ, ಕೆಲಸದ ಬಗ್ಗೆ ಉದಾಸೀನ ಮಾಡದೇ ಕಾರ್ಯ ಮಾಡುತ್ತಾ ಹೋದಂತೆ ಕಾರ್ಯಕ್ಷಮತೆ ತನ್ನಿಂದ ತಾನೆ ನೆಲೆಗೊಳ್ಳುತ್ತಾ ಹೋಗುತ್ತದೆ.

ಸ್ವಾಮಿ ವಿವೇಕಾನಂದರು ಕೂಡ ‘ಯಾವುದಾದರೊಂದು ಕೆಲಸ ಮಾಡುತ್ತಿರುವಾಗ, ಅದರಿಂದಾಚೆಗಿನ ಯಾವ ವಿಷಯವನ್ನು ಯೋಚಿಸಬಾರದು’ ಎಂದು ಹೇಳಿದ್ದಾರೆ. ಮನುಷ್ಯ ಮಾಡುವ ಪ್ರತಿಯೊಂದು ಕೆಲಸಕ್ಕೂ ಉಚಿತ ಸಮಯವೊಂದಿದೆ ಮತ್ತು ಪ್ರತಿ ಸಮಯಕ್ಕೆ ಆತ ಮಾಡಬೇಕಾದ ಉಚಿತ ಕೆಲಸವೊಂದಿದೆ.

ಇಂದಿನ ದಿನದಲ್ಲಿ ಸರ್ಕಾರಿ ಕೆಲಸ ಸಿಗುವುದು ತುಂಬ ಕಷ್ಟ ಕಲಿತವರೆಲ್ಲರೂ ಸರ್ಕಾರಿ ಕೆಲಸಕ್ಕೆ ಕಾಯುವ ಬದಲು ತಮ್ಮ ಮನೆತನದ ಕೆಲಸವನ್ನೋ. ವ್ಯವಸಾಯವನ್ನೋ. ಸ್ವಂತ ಉದ್ದಿಮೆಯನ್ನೋ ಅವಲಂಬಿಸಿದರೆ ಅದಕ್ಕಿಂತ ಹೆಚ್ಚಿನ ಕಾಯಕ ಬೇರೊಂದಿಲ್ಲ. ಇದ್ದುದರಲ್ಲಿಯೇ ತೃಪ್ತಿ ಕಾಣಬೇಕು.

‘ಸುಖಬೇಕೆ? ಕಾಯುತ್ತಿರುವ ಕರ್ತವ್ಯಗಳನ್ನು ಆಗಿಂದಾಗ್ಗೆ ಮಾಡಿ ಮುಗಿಸಿ”ಎಂದು ಐರ್ಲೆಂಡ್ ಗಾದೆ ಮಾತಿದೆ. ಒಳ್ಳೆಯ ಕಾರ್ಯಗಳಿಗೆ ತಕ್ಕ ಉತ್ತಮ ಫಲಗಳು ಬರುವುದು ನಿಶ್ಚಿತ. ಯಶಸ್ಸಿನ ಗುಟ್ಟು ಯಾವುದು ಗೊತ್ತೆ? ಹಿಡಿದ ಕೆಲಸದಲ್ಲಿ ದೃಢ ಸಂಕಲ್ಪದಿಂದಿರುವುದು.

ಹೊಸದಿನ ಹೊಸ ವರ್ಷ ಎಂದೆಲ್ಲ ಪರಿಕಲ್ಪನೆಗಳನ್ನು ಕಟ್ಟಿಕೊಂಡು ಮೋಜು.ಮಸ್ತಿ ಮಾಡಿ ರಾತ್ರಿಯಿಡೀ ಕುಣಿದು ಕುಪ್ಪಳಿಸಿ ಬೆಳಿಗ್ಗೆ ಮಲಗಿದರೆ ಬದುಕು ಸಾರ್ಥಕವಾಗದು. ಅದು ಇನ್ನಷ್ಟು ಗೋಜಲುವಾಗಿ ಶರೀರದ ಮೇಲೆ ಕೆಟ್ಟ ಪರಿಣಾಮವನ್ನೇ ಉಂಟು ಮಾಡೀತು. 

ಈ ದಿನ ನಾನು ಏನನ್ನು ಒಳ್ಳೆಯ ಆಲೋಚನೆಯಲ್ಲಿ ತೊಡಗಿಸಿಕೊಳ್ಳಬಹುದು ಎಂಬುದನ್ನು ಯೋಚಿಸಿದರೆ ಅದಕ್ಕಿಂತ ಸಾರ್ಥಕತೆ ಬೇರೊಂದಿರದು.

ಅದು ಬಿಟ್ಟು ಹಾಳಾದ ಕೆಟ್ಟ ದುರಭ್ಯಾಸದಿಂದ ಕೂಡಿದ ಚಟುವಟಿಕೆಗಳತ್ತ ಗಮನ ಹರಿಸಿದರೆ ಶಾರೀರಿಕವಾಗಿಯೂ ಹಾಳು ಮಾನಸಿಕವಾಗಿಯೂ ಹಾಳು. ಹೀಗಾಗಿ ನಾವು ನೂತನ ವರ್ಷ ಎಂಬುದನ್ನು ಬಿಟ್ಟು ನಮ್ಮತನ ನಮ್ಮ ಸಂಸ್ಕೃತಿಗೆ ಪೂರಕವಾದ ಬದುಕನ್ನು ಬದುಕೋಣ. ಜೊತೆಗೆ ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ಎಂಬುದನ್ನು ಮರೆಯದೇ ಪಾಲಿಸೋಣ. ನಮ್ಮ ಸಂಸ್ಕಾರಯುತ ಬದುಕನ್ನು ಪ್ರತಿನಿತ್ಯ ಬದುಕೋಣ.ಇದು ಪ್ರತಿ ಬೆಳಗಿನ ಆಶಯ ಎಂಬುದನ್ನು ಮರೆಯದಿರೋಣ.

ಮೂಡಲ ಮನೆಯ ಮುತ್ತಿನ ನೀರಿನ

ಎರಕವಾ ಹೊಯ್ದ

ನುಣ್ಣನ್ನೆರಕವ ಹೊಯ್ದಾ

ಬಾಗಿಲ ತೆರೆದೂ ಬೆಳಕೂ ಹರಿದು

ಜಗವೆಲ್ಲಾ ತೊಯ್ದಾ

ಜಗವೆಲ್ಲಾ ತೊಯ್ದಾ

ಪ್ರತಿದಿನದ ಸೂರ್ಯೋದಯವನ್ನು ಬೇಂದ್ರೆಯವರ ಇನ್ನೊಂದು ಕವಿತೆ “ಬೆಳಗು”ವಿನ ಸಾಲುಗಳಂತೆ ಸ್ವಾಗತಿಸೋಣವಲ್ಲವೇ ?.

ಧನಾತ್ಮಕ ಚಿಂತನೆಗಳು ಬದುಕಿಗೆ ಖುಷಿ ನೀಡುತ್ತವೆ. ಜೊತೆಗೆ ನಾವು ಸವಾಲುಗಳನ್ನು ಹೇಗೆ ಎದುರಿಸಬೇಕು ಎಂಬ ಚಿಂತನೆಗೂ ಅವಕಾಶ ನೀಡುತ್ತವೆ. ಹೀಗಾಗಿ ಪ್ರತಿ ದಿನದ ಬೆಳಗು ನಮಗೆ ಹೊಸತಾಗಿ ಹೊಸ ಆಲೋಚನೆ ಚಿಂತನೆಗಳನ್ನು ಹೊಂದುವ ಮೂಲಕ ನೂತನ ದಿನವನ್ನು ಸ್ವಾಗತಿಸಿದರೆ ಪ್ರತಿ ಬೆಳಗು ಹೊಸತಾಗಲು ಸಾಧ್ಯವಿದೆ.


ವೈ.ಬಿ.ಕಡಕೋಳ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ

ಬೆಳಗಾವಿ: ಮಕ್ಕಳಿಲ್ಲದ ಬಡ ದಂಪತಿಗಳಿಗೆ ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ ಕೊಡಿಸಲು ಕೊಲ್ಲಾಪುರದ ಸಿದ್ಧಗಿರಿ ಮಠದ ದತ್ತಿ ಆಸ್ಪತ್ರೆಯಲ್ಲಿ ಐವಿಎಫ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ಮುಜರಾಯಿ,...
- Advertisement -

More Articles Like This

- Advertisement -
close
error: Content is protected !!