
ಸಿಂದಗಿ: ಪಟ್ಟಣದಲ್ಲಿರುವ ಅಕ್ರಮ ನಳಗಳನ್ನು ಸಕ್ರಮಗೊಳಿಸಲು ೧ ತಿಂಗಳ ಗಡುವು ನೀಡಲಾಗುವುದು. ಸಾರ್ವಜನಿಕರು ಅಕ್ರಮ ನಳಗಳನ್ನು ಸಕ್ರಮಗೊಳಿಸಿಕೊಳ್ಳಬೇಕು ಒಂದು ವೇಳೆ ಮಾಡಿಕೊಳ್ಳದೇ ಹೋದರೆ ಅಂತಹವರ ಆಸ್ತಿಯ ಮೇಲೆ ಬೋಜಾ ಏರಿಸಲಾಗುವುದು ಎಂದು ಅಧ್ಯಕ್ಷ ಶಾಂತವೀರ ಬಿರಾದಾರ ಎಚ್ಚರಿಕೆ ನೀಡಿದರು.
ಪಟ್ಟಣದ ಪುರಸಭೆಯ ಸಭಾ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾರು ಅಕ್ರಮವಾಗಿ ನಳಗಳನ್ನು ಮಾಡಿಕೊಂಡಿದ್ದಾರೆ ಅಂಥವರು ಪುರಸಭೆಗೆ ಬಂದು ರೂ. ೩೦೦೦ ಹಣವನ್ನು ಭರಣಾ ಮಾಡಿ ಸಕ್ರಮಗೊಳಿಸಿಕೊಳ್ಳಬೇಕು. ರಿ.ಸ.ನಂ ೪೭೩ ಮತ್ತು ೪೭೪ರ ಆಶ್ರಯ ವಸತಿ ಯೋಜನೆಯಲ್ಲಿ ಹಂಚಿಕೆಯಾದ ಮನೆಗಳಿಗೆ ಕೆಲಸದ ಆದೇಶ ನೀಡಲಾಗಿದೆ. ೧೦ಸಾವಿರ ಮೇಲ್ಪಟ್ಟು ಇರುವ ಬಿಲ್‌ಗಾಗಿ ೧೧ಜನರ ಉಪಸಮಿತಿಯನ್ನು ಸ್ಥಾಪನೆ ಮಾಡಿ ಅವರ ಸಮ್ಮುಖದಲ್ಲಿಯೇ ಪಾಸ್ ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ಪಟ್ಟಣದಲ್ಲಿರುವ ಎನ್‌ಎ ಲೇಔಟ್ ಮಾಲೀಕರು ಕಡ್ಡಾಯವಾಗಿ ಉದ್ಯಾನವನ ಮತ್ತು ನಾಗರಿಕ ಸೌಲಭ್ಯ ಜಾಗಗಳಿಗೆ ಕಂಪೌಂಡ್ ನಿರ್ಮಿಸಿ ಕೊಡಬೇಕೆಂದು ನೋಟಿಸ್ ನೀಡಲು ಪ್ರಾರಂಭಿಸಲಾಗಿದೆ. ಪುರಸಭೆಯ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಲು ಸಹಕಾರ, ಸಹಾಯ ನೀಡಿದರೆ ಅವರು ತಿಳಿಸಿದವರ ಹೆಸರನ್ನು ಉದ್ಯಾನವನಕ್ಕೆ ಇಡಲಾಗುವುದು. ವಿವೇಕಾನಂದ ವೃತ್ತದಿಂದ ಟಿಪ್ಪುಸುಲ್ತಾನ್ ವೃತ್ತದವರೆಗೆ ಸಂಚಾರದಟ್ಟಣೆಯಿಂದ ಸಾರ್ವಜನಿಕರಿಗೆ ತೊಂದರೆವುಂಟಾಗುತ್ತಿದ್ದು, ಎಕಮುಖ(ಒನ್‌ವೇ) ನಿರ್ಮಿಸಿ ಫಲಕಗಳನ್ನು ಅಳವಡಿಸಲಾಗುವುದು. ಸಿಂದಗಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಬಳಗಾನೂರ ಕೆರೆಯ ಪಂಪನ್ನು ದುರಸ್ಥಿಗೊಳಿಸಲಾಗಿದೆ. ಪುರಸಭೆಯಲ್ಲಿ ಏಜೆಂಟರ್ ಹಾವಳಿ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸಿಂದಗಿಯ ಸಾರ್ವಜನಿಕರಿಗೆ ಉಪಯುಕ್ತವಾಗುವ ಮುಕ್ತಿ ವಾಹನವನ್ನು ನನ್ನ ಸಹೋದರ ದಿ.ರವಿಕುಮಾರ ಬಿರಾದಾರ ಅವರ ಸ್ಮರಣಾರ್ಥವಾಗಿ ಫೆ.೨೩, ೨೦೨೫ರಂದು ಪುರಸಭೆಗೆ ಕಾಣಿಕೆಯಾಗಿ ನೀಡುವೆ ಎಂದು ಅಧ್ಯಕ್ಷ ಶಾಂತವೀರ ಬಿರಾದಾರ ಪ್ರಕಟಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ, ಸದಸ್ಯ ಸಂದೀಪ ಚೌರ, ಸಾಯಬಣ್ಣ ಪುರದಾಳ, ಮುಖ್ಯಾಧಿಕಾರಿ ಸುರೇಶ ನಾಯಕ, ಜೆಇ ಅಜರ್ ನಾಟೀಕಾರ ಸೇರಿದಂತೆ ಅನೇಕರು ಇದ್ದರು.