ಊಟಿ; ಗಿರಿವನಗಳ ಮಧುವನ

Must Read

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...

ನದಿ ಸ್ವಚ್ಛತೆಗೆ ಚಾಲನೆ ನೀಡಿದ ಈರಣ್ಣ ಕಡಾಡಿ

ಗೋಕಾಕ: ಪ್ರಕೃತಿ ಉಚಿತವಾಗಿ ಕೊಟ್ಟಿರುವ ನೀರನ್ನು, ಗಿಡ ಮರಗಳು ಉಚಿತವಾಗಿ ಕೊಟ್ಟಿರುವ ಆಮ್ಲಜನಕವನ್ನು ನಾಶ ಮಾಡುವ ಮೂಲಕ ಸ್ವಯಂಕೃತ ಅಪರಾಧಗೈದ ನಾವೆಲ್ಲ ನದಿ ಸ್ವಚ್ಛತೆ ಮಾಡುವ...

ಮುಷ್ಕರ ಮತ್ತು ಆರ್ಥಿಕ ಪರಿಸ್ಥಿತಿ

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರಚಲಿತದಲ್ಲಿರುವ ಒಂದು ವಿದ್ಯಮಾನಗಳಲ್ಲಿ ಮುಷ್ಕರ ಕೂಡ ಒಂದು. ಬಂದ್ ಬಂದ್ ಬಂದ್.ಏನಿದು?ಏಕೆ ಮಾಡಬೇಕು? ಇದರಿಂದ ಆಗುವ ಬದಲಾವಣೆಗಳೇನು? ಯಾರಿಗೆ ಲಾಭ?...

ಬಿರು ಬೇಸಿಗೆ ಹೊರಗೆ ಹೋಗಲು ಸಾಧ್ಯವೇ ಇಲ್ಲ ಎನ್ನುವಂತಹ ವಾತಾವರಣ ಈ ಸಂದರ್ಭ ಮನಸ್ಸಿಗೆ ತಂಪೆರೆಯಬಲ್ಲ ಗಿರಿಧಾಮಗಳಿಗೆ ಹಸಿರು ಹೊತ್ತ ನಿಸರ್ಗತಾಣಗಳಿಗೆ ಹೋಗಬೇಕೆನಿಸುತ್ತದೆ. ಹಾಗಾದರೆ ಅಂತಹ ತಾಣಗಳನ್ನು ಹುಡುಕಾಟ ನಡೆಸಿದರೆ ಕರ್ನಾಟಕದ ಗಡಿಯಾಚೆ ತಮಿಳುನಾಡಿನ ಊಟಿ ಬೇಗನೇ ಎಲ್ಲರ ಗಮನ ಸೆಳೆಯುವ ಸ್ಥಳ.ಇದನ್ನು ಗಿರಿಧಾಮಗಳ ರಾಣಿ ಎಂದೂ ನೂತನ ದಂಪತಿಗಳ ಮಧುಚಂದ್ರಕ್ಕೆ ಹೇಳಿ ಮಾಡಿಸಿದ ತಾಣವೆಂದೂ ಹೇಳುತ್ತಾರೆ. ಹಾಗಿದ್ದರೆ ಕನಿಷ್ಠ ಎರಡು ದಿನದ ಮಟ್ಟಿಗಾದರೂ ಈ ಸ್ಥಳಕ್ಕೆ ಹೋಗುವ ಯೋಚನೆ ಮಾಡಿಕೊಂಡರೆ ನಿಜಕ್ಕೂ ಸ್ವರ್ಗದಲ್ಲಿದ್ದೇವೆ ಎನೋ ಎನ್ನುವ ಭಾವವನ್ನು ಹುಟ್ಟು ಹಾಕುವ ತಾಣದಲ್ಲಿ ನೀವಿರುತ್ತೀರಿ ಎಂದರೆ ತಪ್ಪಾಗಲಿಕ್ಕಿಲ್ಲ. ಅಂಥಹ ಅದ್ಬುತ ಸ್ಥಳವೇ ಊಟಿ.

ಮೈಸೂರಿನಿಂದ ಗುಂಡ್ಲುಪೇಟೆ ಬಂಡೀಪುರ ಮೂಲಕ 155 ಕಿ.ಮೀ. ಅಂತರದ ಪಯಣ ಊಟಿ.ಮೈಸೂರಿನಿಂದ ಹೊರಟರೆ ಗುಂಡ್ಲುಪೇಟೆ, ಬಂಡೀಪುರ,ನಂತರ ವಯ್ನಾಡ ಎಂಬ ಕೇರಳ ರಾಜ್ಯದ ಪ್ರದೇಶದಲ್ಲಿರುತ್ತೀರಿ. ಅಲ್ಲಿ ಚಹಾ ಸೇವನೆ ಮಾಡಿ ನೇರವಾಗಿ ಚಲಿಸಿದರೆ ಊಟಿಯತ್ತ ನಮ್ಮ ಪಯಣ ಇರುತ್ತದೆ.

- Advertisement -

ಇಲ್ಲಿ ಪಾಲಾರ್ ನದಿ ಹರಿಯುತ್ತಿದೆ ಇದರ ದಡಗುಂಟ ಜಿಂಕೆ ನವಿಲುಗಳು ಸಂಚರಿಸುವುದನ್ನು ಕಾಣಬಹುದು. ಒಂದೆಡೆ ನಿಮ್ಮ ವಾಹನ ನಿಲ್ಲಿಸಿ ಇವುಗಳನ್ನು ನೋಡಬಹುದು. ಇದೊಂದು ದಟ್ಟ ಅಭಯಾರಣ್ಯ ಇಲ್ಲಿ ಆನೆಗಳ ಹಿಂಡು ಕಾಣುತ್ತದೆ. ಅವುಗಳ ಪಾಡಿಗೆ ಅವು ಸಂಚರಿಸುತ್ತಿರುತ್ತವೆ. ಹಾಗೆ ನೋಡುತ್ತ ನಿಮ್ಮ ವಾಹನ ನಿಧಾನವಾಗಿ ಚಲಿಸಿದರೆ ರಸ್ತೆಯಲ್ಲಿ ಹಾಯ್ದು ಹೋಗುವ ಹುಲಿ, ಚಿರತೆಯನ್ನೂ ನೀವು ಕಾಣಬಹುದು. ಇಲ್ಲಿ ಮಧುಮಲೈ ಎಂಬ ಪ್ರದೇಶದಲ್ಲಿ ನೀವಿರುತ್ತೀರಿ. ಇದೊಂದು ಹುಲಿ ಸಂರಕ್ಷಿತ ಪ್ರದೇಶ,ಅಲ್ಲಲ್ಲಿ ಚೆಕ್ ಪೋಸ್ಟಗಳಲ್ಲಿ ನಿಮ್ಮನ್ನು ಹುಡುಕುವ ರೀತಿ ಅಲ್ಲಿನ ಕಣ್ಗಾವಲಿನವರು ನಿಮ್ಮ ವಾಹನವನ್ನೆಲ್ಲ ತಪಾಸಣೆ ನಡೆಸುವರು.

ಇನ್ನು ಮುಂದೆ ತಿರುವಿನ ಬೆಟ್ಟದ ಎತ್ತರದ ಹಾದಿ ಕಣ್ಮುಚ್ಚಿ ಕುಳಿತುಕೊಳ್ಳಬೇಕು ಎನಿಸಿದರೂ ಕಣ್ಮುಚ್ಚಲಾಗದು. ಏಕೆಂದರೆ ಎತ್ತರವಾದ ಮರಗಳು, ದಟ್ಟದಾದ ಕಾಡು ನೀಲಗಿರಿ ಬೆಟ್ಟದ ರಮಣೀಯತೆ ನಿಮ್ಮನ್ನು ಕಾಡತೊಡಗುತ್ತದೆ. ಆ ನಿಸರ್ಗ ಸೌಂದರ್ಯಕ್ಕೆ ಎಂತವರೂ ಮರುಳಾಗುತ್ತಾರೆ. ಇಂತಹ ತಿರುವಿನ ರಸ್ತೆಯಲ್ಲಿ ವಾಹನ ಮೇಲೇರತೊಡಗುತ್ತದೆ. ಎಂಟು ಸಾವಿರ ಅಡಿ ಎತ್ತರದ ಈ ಬೆಟ್ಟವನ್ನು ಮೇಲೇರಿ ಬಂದಾಗ ಕಲ್ಲತ್ತಿ ಎಂಬ ಊರಲ್ಲಿ ನೀವಿರುತ್ತೀರಿ.ಇಲ್ಲಿ ಬಾಳೆಕಾಯಿ ಭಜಿ. ಚಹಾ/ಕಾಫಿ ಸೇವಿಸಿ ಸ್ವಲ್ಪ ಹೊತ್ತು ವಿಶ್ರಮಿಸಿಕೊಳ್ಳಿ.ಇಲ್ಲಿಂದ ಮುಂದೆ 20 ಕಿ.ಮೀ ಸಾಗಿದರೆ ನಾವು ತಲುಪುವ ಭೂಮಿಯ ಮೇಲಿನ ಸ್ವರ್ಗ ಊಟಿ.

ಒಂದು ಕ್ಷಣ ಊಟಿಯ ಇತಿಹಾಸವನ್ನು ಕೆದಕುತ್ತ ಪ್ರಯಾಣ ಬೆಳೆಸಿದರೆ “ಊಟಿಯನ್ನು ನೀಲ ಬೆಟ್ಟಗಳೆಂದು, ತೋಡ ಜನರು ಇಲ್ಲಿ ವಾಸಿಸುತ್ತಿದ್ದರಿಂದ ಅವರು ಒಂಟಿ ಕಲ್ಲನ್ನು ಪೂಜಿಸುತ್ತಿದ್ದರಿಂದ ಓತ್ ಕಲ್ ಎಂದೂ,ಬ್ರಿಟಿಷರು ಈ ಸ್ಥಳವನ್ನು ಕಂಡು ಓತ ಕಲ್ ಎನ್ನುವುದನ್ನುಊಟಿ ಎಂದು ಕರೆದಿರುವುದನ್ನು ಕಾಣಬಹುದು.

ವಿಹಾರಪ್ರಿಯ ಬ್ರಿಟಿಷರು ಇಲ್ಲಿ ಒಚಿಟಿ ಕಂಬಿಯ ರೈಲನ್ನು ಕೂಡ ತಂದು ತಮ್ಮ ಪ್ರಯಾಣ ಸುಗಮ ಮಾಡಿಕೊಂಡಿರುವರಲ್ಲದೇ ಸೈನಿಕರ ವಿಹಾರಕ್ಕಾಗಿ ಅಲ್ಲಲ್ಲಿ ಸೈನ್ಯದ ಬಿಡಾರಗಳನ್ನು ನಿರ್ಮಿಸುವ ಮೂಲಕ ಇದನ್ನು ವಿಹಾರತಾಣವಾಗಿ ಬಳಕೆ ಮಾಡಿಕೊಂಡಿದ್ದರು. ಮೈಸೂರಿನ ಮಹಾರಾಜರ ಕಾಲಕ್ಕೆ ಅವರಿಗೂ ಕೂಡ ಈ ತಾಣ ಅವರ ಒಂದು ಅರಮನೆಯನ್ನೂ ಕೂಡ ಒಳಗೊಂಡಿದ್ದು ಇಂದಿಗೂ ಈ ಸ್ಥಳ ಉದ್ಯಾನವನವಾಗಿ ಕರ್ನಾಟಕದ ಸುಪರ್ದಿಯಲ್ಲಿರುವುದಕ್ಕೆ ಸಾಕ್ಷಿ.

ಬ್ರಿಟಿಷರು ಇಲ್ಲಿ ಆಲೂಗಡ್ಡೆ,ಗಜ್ಜರಿ(ಕ್ಯಾರೆಟ್) ಕಾಲಿಪ್ಲವರ,ಸ್ಟ್ರಬೆರಿ,ಪೀಚ್ ಹಣ್ಣು,ಪ್ಲಮ್, ಚಹಾ ಉತ್ಪಾದನೆಗೆ ಬಳಕೆ ಮಾಡಿಕೊಂಡರು. ಜೊತೆಗೆ ಚಾಕಲೆಟ್ ತಯಾರಿಕೆಗೂ ಬಳಸಿಕೊಂಡರು. ಇಲ್ಲಿ ಫಿಲ್ಮ್ ರೋಲ್ ಕೂಡ ತಯಾರಾಗುತ್ತವೆ. ಹೀಗೆ ವಿವಿಧ ಚಟುವಟಿಕೆಗಳಿಗೂ ಇದನ್ನು ಬ್ರಿಟಿಷರು ಬಳಸಿರುವುದನ್ನು ಇತಿಹಾಸದಿಂದ ತಿಳಿಯಬಹುದು. ಹೀಗೆ ಇತಿಹಾಸ ಕೆದಕುತ್ತ ಹೋದಂತೆ ಊಟಿಯ ಬಸ್ ನಿಲ್ದಾಣದಲ್ಲಿ ನೀವಿರುತ್ತೀರಿ. ಇಲ್ಲಿ ಹೆಚ್ಚು ಜನ ಕನ್ನಡ ಮಾತನಾಡುವುದನ್ನು ಕಾಣಬಹುದು.

ಸ್ವಂತ ವಾಹನದಲ್ಲಿ ಬಂದಿದ್ದರೆ ಊಟಿ ತೋರಿಸಲು ಗೈಡ್ ಪಡೆದುಕೊಳ್ಳಿ ಬಸ್ ಮೂಲಕ ಬಂದಿದ್ದರೆ ಇಲ್ಲಿ ಖಾಸಗೀ ವಾಹನಗಳಿಗೆ ಕೊರತೆಯಿಲ್ಲ. ದರ ಹೊಂದಿಸುವುದು ಮಾತ್ರ ದುಸ್ತರ ಹೆಚ್ಚು ದರ ಹೇಳುತ್ತಾರೆ. ನೋಡಿ ಹೊಂದಾಣಿಕೆ ಮಾಡಿಕೊಳ್ಳುವುದು ನಿಮಗೆ ಬಿಟ್ಟಿದ್ದು.ಒಂದು ಯೋಗ್ಯ ದರದಲ್ಲಿ ಹೊಂದಿಸಿಕೊಳ್ಳಿ ಇಡೀ ಊಟಿಯನ್ನು ಅವರು ತಮ್ಮ ವಾಹನದಲ್ಲಿ ನಿಮಗೆ ತೋರಿಸುವರು.

ಇಲ್ಲಿ ನೀವು ಸ್ಥಳಗಳು ಸಾಕಷ್ಟಿವೆ ಅವುಗಳಲ್ಲಿ ಪ್ರಮುಖವಾದವುಗಳೆಂದರೆ:

ಬೊಟಾನಿಕ್ ಗಾರ್ಡನ್

ಇದು ಬಸ್ ನಿಲ್ದಾಣದಿಂದ. 2.5 ಕಿ.ಮೀ ಅಂತರದಲ್ಲಿದೆ.ಇಲ್ಲಿ ಪ್ರವೇಶ ದರ ದೊಡ್ಡವರಿಗೆ 20 ರೂ.ಚಿಕ್ಕವರಿಗೆ 10 ರೂ. ಕ್ಯಾಮರಾಗಳಿಗೆ 30 ರೂ.ವಿಡಿಯೋಗಳಿಗೆ 100 ರೂ ಹೀಗೆ ದರ ನಿಗದಿಪಡಿಸಿದ್ದಾರೆ. ನಿಮ್ಮ ಸಂಖ್ಯೆಗೆ ಅನುಗುಣವಾಗಿ ಟಿಕೇಟ್ ಪಡೆದು ಒಳ ಪ್ರವೇಶಿಸಿದರೆ ಸಾಕು. 22 ಹೆಕ್ಟೇರ್ ಪ್ರದೇಶವನ್ನು ಹೊಂದಿದ ಬೊಟಾನಿಕಲ್ ಗಾರ್ಡನ್ ದಲ್ಲಿ ನೀವಿರುವಿರಿ.

ಇದನ್ನು 1847 ರಲ್ಲಿ ಸಾರ್ವಜನಿಕರ ವೀಕ್ಷಣೆಗೆ ಬಳಕೆ ಮಾಡಲಾಗಿದೆ. ಪ್ರತಿವರ್ಷ ಮೇ ತಿಂಗಳಲ್ಲಿ ಇಲ್ಲಿ ಪುಷ್ಪ ಪ್ರದರ್ಶನ ಮತ್ತು ವಿರಳ ಸಸ್ಯಗಳ ಜಾತಿಯ ಪ್ರದರ್ಶನ ಕೂಡ ನಡೆಯುತ್ತದೆ. ಇಲ್ಲಿ ಸಾವಿರಾರು ಜಾತಿಯ ಹೂವು.ಗಿಡ.ಪೊದೆ.ಬಳ್ಳಿ.ಮರ.ಮತ್ತು ಬೋನ್ಸಾಯ್ ಗಿಡಗಳು.ವಿಶಾಲವಾದ ಹುಲ್ಲಿನ ಹಾಸು. ಐದು ವಿಭಾಗಗಳಾದ ಲೋವರ್ ಗಾರ್ಡನ್,ನ್ಯೂ ಗಾರ್ಡನ್.ಇಟಾಲಿಯನ್ ಗಾರ್ಡನ್.ಫೌಂಟೇನ್, ಟರೆಸ್ ನರ್ಸರಿ.ಬೊಟಾನಿಕಲ್ ಹೀಗೆ ಐದು ಹೆಸರಿನ ಉದ್ಯಾನಗಳು ಇದರೊಳಗಡಗಿವೆ.ಇವುಗಳನ್ನೆಲ್ಲ ನೋಡಲು ಕನಿಷ್ಠ ಅರ್ಧ ದಿನವಾದರೂ ಬೇಕು. ಅಲ್ಲಲ್ಲಿ ಪ್ರೇಮಿಗಳು ತಮ್ಮ ಬೆಚ್ಚಗಿನ ಅಪ್ಪುಗೆಯಲ್ಲಿ ಮಲಗಿರುವರು ಅದನ್ನು ನೋಡಿ ಕೀಟಲೆ ಮಾಡದಂತೆ ಸಂಚರಿಸಿ.ಇದೊಂದು ರೋಮ್ಯಾಂಟಿಕ್ ಸ್ಥಳವಾದ್ದರಿಂದ ಜೋಡಿಗಳು ತಮ್ಮಷ್ಟಕ್ಕೆ ತಾವು ಮೈಮರೆತ ದೃಶ್ಯಗಳು ಹೇರಳ.ಸೌಂದರ್ಯ ತಾಣದಲ್ಲಿ ಇದು ಸಹಜ ಕೂಡ.

ನೀಲಗಿರಿ ರೈಲು

ನೀಲಗಿರಿ ರೈಲನ್ನು ಹತ್ತುವುದು ಕೂಡ ಊಟಿಯ ಅನುಭೂತಿಯಲ್ಲೊಂದು ಹೊಸ ಅನುಭವ. ಇದು ಪುಟ್ಟ ರೈಲು.ಪ್ರವಾಸಿಗರ ಜನದಟ್ಟಣಿ ಇಲ್ಲಿ ಬಹಳ. ಯಾವ ಕಾಲದಲ್ಲಿಯೇ ಬನ್ನಿ ಈ ರೈಲು ತುಂಬಿದ ಜನಜಂಗುಳಿಯಿಲ್ಲದೇ ಇಲ್ಲವೇ ಇಲ್ಲ. ಇದರಲ್ಲಿ ಹತ್ತಿ ಊಟಿ ಸುತ್ತುವುದೇ ಒಂದು ಮಧುರ ಅನುಭವ. ಇದು ಬೆಟ್ಟ ಗುಡ್ಡಗಳ ನಡುವೆ ಚಲಿಸುವಾಗ ಅಲ್ಲಲ್ಲಿ ಬರುವ ಗುಹೆಗಳ ನಡುವೆ ಹೊರಟಾಗ ಆವರಿಸಿಕೊಳ್ಳುವ ಕತ್ತಲೆ ಮಜಾ ಆತ್ಮಾನಂದವನ್ನು ನೀಡುತ್ತದೆ.

ಶಿಖರವನ್ನು ಏರಿ ಇಳಿಯುವ ಈ ರೈಲಿನಲ್ಲಿ ಊಟಿಯ ಪ್ಲ್ಯಾಂಟೇಶನ್‍ಗಳಲ್ಲಿ ಕಾಫಿ, ಟೀ ಗಳ ಸೌಂದರ್ಯ.ವಿಭಿನ್ನ ಶೈಲಿಯ ಊಟಿಯ ಗಗನ ಚುಂಬಿ ಕಟ್ಟಡಗಳು. ಸುತ್ತಲಿನ ನಿಸರ್ಗ.ಬ್ರಿಟಿಷರ ಕಾಲಕ್ಕೆ ನಿರ್ಮಿಸಿದ್ದ ರೈಲು ಹಳಿಗಳು ಇಂದಿಗೂ ತಮ್ಮ ಏಕತಾನತೆಯನ್ನು ಇಲ್ಲಿ ಉಳಿಸಿಕೊಂಡಿದ್ದು ನಮ್ಮ ದೇಶದ ಮೊದಲ ಗುಡ್ಡ ಪ್ರದೇಶದ ರೈಲು ಎಂಬ ಹೆಗ್ಗಳಿಕೆಯೊಂದಿಗೆ ಮನಸೂರೆಗೊಳ್ಳುತ್ತದೆ. ಊಟಿಗೆ ಬಂದವರು ಈ ರೈಲು ಪ್ರಯಾಣಿಸದೇ ಹೋದರೇ ಏನೋ ಒಂದನ್ನು ಕಳೆದುಕೊಂಡಂತೆ ಸರಿ.

ಬೋಟ್ ಹೌಸ್ ಲೇಕ್

ಇದೊಂದು ವಿಶಿಷ್ಟ ಅನುಭವ ನೀಡುವ ವಿಶಾಲವಾದ ಕರೆ. ಇದು ಊಟಿಯ ಪ್ರಧಾನ ಆಕರ್ಷಣೆ ಕೂಡ. ಬೆಟ್ಟದಿಂದ ಇಳಿದು ಬರುವ ನೀರು ವಿಶಾಲ ಕೆರೆಯಲ್ಲಿ ನಿಲ್ಲುವಂತೆ ಅಣೆಕಟ್ಟು ನಿರ್ಮಿಸಲಾಗಿದೆ ಈ ಕೆರೆಯಲ್ಲಿ ಸ್ಪೀಡ್ ಬೋಟ್.ದೊಡ್ಡ ಬೋಟ್ ಮತ್ತು ಪಡೆಲ್ ಬೋಟಿಂಗ್ ಮಜಾ ಅನುಭವಿಸಬಹುದು.ಎಲ್ಲದಕ್ಕೂ ಅದರದೇ ಆದ ದರ ನಿಗದಿಗೊಳಿಸಲಾಗಿದೆ ಎಂಬುದು ನೆನಪಿರಲಿ. ಈ ಕೆರೆಯನ್ನು 1824 ರಲ್ಲಿ ಊಟಿಯ ಮೊದಲ ಕಲೆಕ್ಟರ್ ಜಾನ್ ಸುಳಿವಾನ್ ಎಂಬುವರು ಕಟ್ಟಿಸಿದ್ದು ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ.

ಸ್ಟೋನ್ ಹೌಸ್

ಈಗ ಊಟಿಯ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರ ನಿವಾಸವಾಗಿರುವ ಕಲ್ಲಿನ ಮನೆ 1822 ರಲ್ಲಿ ಕಟ್ಟಿದ ಮೊದಲ ಮನೆಯಾಗಿತ್ತು.ಊಟಿಯ ಮೂಲ ನಿವಾಸಿಗಳಾದ ತೋಡಾಗಳ ಗುಡಿಸಲಿನ ಮಾದರಿಗಳು ಈಗಲೂ ಆಕರ್ಷಕವಾಗಿ ಎದ್ದು ನಿಂತಿವೆ. ಈಗ ಇವು ಕಾಂಕ್ರೀಟ್ ಮನೆಗಳು “ಅರಗಿನ ಮನೆ” ಹೆಸರಿನಲ್ಲಿ 142 ವರ್ಷಗಳ ಹಳೆ ಬಂಗಲೆಯಲ್ಲಿ ಭಾರತೀಯ ಇತಿಹಾಸ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಸಂಬಂಧಿಸಿದ ಪ್ರಮುಖ ವ್ಯಕ್ತಿಗಳ ಅರಗಿನ ಮೂರ್ತಿಗಳನ್ನು ಇಲ್ಲಿ ಇಡಲಾಗಿದೆ. ಗಾಲ್ಫ್ ಕೋರ್ಸ, ಟ್ರೈಬಲ್ ಮ್ಯೂಜಿಯಂ, ಅಣೆಕಟ್ಟುಗಳು ಕೂಡ ಇಲ್ಲಿನ ಪ್ರಮುಖ ಕೇಂದ್ರಗಳು.

ಗುಲಾಬಿಗಳ ಉದ್ಯಾನ

ಊಟಿಯಲ್ಲಿರುವ ಗುಲಾಬಿ ಹೂಗಳ ತೋಟ ಸೆಂಟೆನರಿ ರೋಸ್ ಪಾರ್ಕ ದೇಶದಲ್ಲಿಯೇ ಅತ್ಯಂತ ದೊಡ್ಡದು. ಇಲ್ಲಿ 20000 ಜಾತಿಯ ಗುಲಾಬಿಗಳಿವೆ. ಕೆಂಪು, ಕಪ್ಪು, ಹಸಿರು, ನೀಲಿ, ಗುಲಾಬಿ, ಹಳದಿ ಹೀಗೆ ಎಲ್ಲ ಬಣ್ಣಗಳ ಹಾಗೂ ವಿಭಿನ್ನ ರೀತಿಯ ಗುಲಾಬಿ ಹೂಗಳು ಇಲ್ಲಿವೆ.

ದೊಡ್ಡಬೆಟ್ಟ ಶಿಖರ

ಇದು ನೀಲಗಿರಿಯಲ್ಲೇ ಅತ್ಯಂತ ಹೆಚ್ಚು ಎತ್ತರವಾದ (2.623 ಮೀ) ಶಿಖರವಾಗಿದೆ.ಊಟಿಯಿಂದ ಸುಮಾರು 10.ಕಿ.ಮೀ ದೂರದಲ್ಲಿದೆ. ಇದು ಪಶ್ಚಿಮ ಮತ್ತು ಪೂರ್ವ ಘಟ್ಟಗಳ ಸಂಧಿಸ್ಥಾನದಲ್ಲಿ ಬರುತ್ತದೆ. ಹಾಗೂ ನೀಲಗಿರಿ ಬೆಟ್ಟ ಶ್ರೇಣಿಯ ಸುಂದರ ದೀರ್ಘದೃಶ್ಯಗಳನ್ನು ಇಲ್ಲಿ ಕಾಣಬಹುದು. ಮನಮೋಹಕ ನೋಟವನ್ನು ದೂರದರ್ಶಕದಿಂದ ನೋಡಲು ಅನುಕೂಲವಾಗುವಂತೆ ಎತ್ತರದ ಕಟ್ಟಡದಲ್ಲಿ ಅಳವಡಿಸಿರುವುದು ಇಲ್ಲಿನ ವಿಶೇಷ. ಬೆಟ್ಟದಲ್ಲಿ ಅಲ್ಲಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಿದ್ದು ಸುತ್ತಲೆಲ್ಲ ಅಲೆಯುತ್ತ ಇಲ್ಲಿನ ನಿಸರ್ಗವನ್ನು ಸವಿಯಬಹುದು.

ವೆನ್ಲಾಕ್ ಡೌನ್ಸ

ಇದೊಂದು ಹುಲ್ಲುಗಾವಲು ಪ್ರದೇಶವಾಗಿದ್ದು. ನೀಲಗಿರಿಯ ಮೂಲ ಜೈವಿಕ ದೃಶ್ಯದ ಮಾದರಿಯಾಗಿದೆ. ಇದು ತರಂಗದಂಥ ಬೆಟ್ಟಗಳನ್ನು ಹೊಂದಿದೆ ಇದನ್ನು ಹೆಚ್ಚಾಗಿ ಯಾರ್ಕ್‍ಶಿರ್ ಡೇಲ್ಸನಂತಹ ಬ್ರಿಟಿಷ್ ದ್ವೀಪಗಳಲ್ಲಿರುವ ಪ್ರದೇಶಗಳಿಗೆ ಹೋಲಿಸಲಾಗುತ್ತದೆ. ಇದು ಚಲನಚಿತ್ರ ಚಿತ್ರೀಕರಣಕ್ಕೆ ಪ್ರಸಿದ್ದವಾದ ಸ್ಥಳವಾಗಿದೆ. ನಿರ್ದಿಷ್ಟವಾಗಿ ಮುಖ್ಯ ಊಟಿಯಿಂದ ಪಿಕಾರಕ್ಕೆ ಹೋಗುವ ರಸ್ತೆಯಲ್ಲಿ(ಮೈಸೂರ ರಸ್ತೆಯೆಂದು ಕರೆಯುತ್ತಾರೆ ಊಟಿಯಿಂದ 14 ಕಿ.ಮೀ ಅಂತರದಲ್ಲಿ ಈ ಪ್ರದೇಶವಿದೆ.

ಏನೇ ಆಗಲಿ ಜೀವನದಲ್ಲಿ ಒಮ್ಮೆಯಾದರೂ ಇಂತಹ ಸ್ಥಳ ನೋಡಲೇಬೇಕು. ಭೂಮಿಯ ಮೇಲಿನ ಸ್ವರ್ಗವೆಂದು ಕರೆಸಿಕೊಳ್ಳುವ ಊಟಿಗೆ ಮೈಸೂರು ಮತ್ತು ಬೆಂಗಳೂರಿನಿಂದ ಬರಲು ಬಸ್ ವ್ಯವಸ್ಥೆಯಿದ್ದು. ಮೈಸೂರಿನಿಂದ ಟೂರ್ ಪ್ಯಾಕೇಜ್ ಸರಕಾರಿ ಮತ್ತು ಖಾಸಗಿ ವಾಹನಗಳಲ್ಲಿ ಕೂಡ ಅನುಕೂಲವಿದೆ. ಇಲ್ಲಿನ ಚಹಾ ತೋಟಗಳು.ನೀಲಗಿರಿ ಮರಗಳು. ನಿಸರ್ಗದಿಂದ ಕೂಡಿದ ಬೆಟ್ಟಗಳ ಸಾಲು.ಸದಾ ತಂಪಾದ ಹವಾಮಾನದಿಂದ ಕೂಡಿದ ವಾತಾವರಣ ಯಾವುದೇ ಸಮಯದಲ್ಲಿ ಬಂದರೂ ಊಟಿ ಉತ್ತಮವೇ ಚಳಿಗಾಲ ಮತ್ತು ಮಳೆಗಾಲದಲ್ಲಿ ಬಂದರೆ ಹೊದೆಯಲು ಮತ್ತು ಮೈಮೇಲೆ ಹಾಕಿಕೊಳ್ಳಲು ಬೆಚ್ಚನೆಯ(ಸಾಕಷ್ಟು) ಬಟ್ಟೆಯೊಂದಿಗೆ ಬನ್ನಿ.

ಕೈ ಕಾಲುಗಳಿಗೂ ಕೂಡ ಬೆಚ್ಚಗಿನ ಹೊದಿಕೆಗಳು ಇದ್ದರೆ ಅನುಕೂಲ ಅಷ್ಟೊಂದು ಚಳಿ ಇಲ್ಲಿರುತ್ತದೆ. ಬೇಸಿಗೆಯಲ್ಲಿ ಮಾತ್ರ ಚಳಿ ಇದ್ದರೂ ಕೂಡ ಅದು ಮಳೆಗಾಲ ಮತ್ತು ಚಳಿಗಾಲದಷ್ಟು ಅನಿಸದು. ಹೀಗಾಗಿ ಮುಂಚೆ ಎಲ್ಲ ವ್ಯವಸ್ಥೆಯೊಂದಿಗೆ ಇಲ್ಲಿಗೆ ಬರಬೇಕು. ಹಣವಂತರಿಗೆ ಇಲ್ಲಿನ ವಸತಿ ಅನುಕೂಲ ಬಡವರಿಗೆ ಇದು ಕೈಗೆಟುಕದು. ಅಷ್ಟೊಂದು ದುಬಾರಿ ವೆಚ್ಚ ಇಲ್ಲಿ ಕೊಠಡಿಗಳಿಗೆ ಪಾವತಿಸಬೇಕಾಗುತ್ತದೆ. ಒಟ್ಟಾರೆ ಸಾಕಷ್ಟು ಹಣದ ವ್ಯವಸ್ಥೆಯೊಂದಿಗೆ ಬಂದಿದ್ದಲ್ಲಿ ಎರಡು ದಿನ ಊಟಿಯನ್ನು ಕಣ್ತುಂಬಿಕೊಳ್ಳಬಹುದು.


ವೈ.ಬಿ.ಕಡಕೋಳ(ಶಿಕ್ಷಕರು)
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್

- Advertisement -
- Advertisement -

Latest News

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...
- Advertisement -

More Articles Like This

- Advertisement -
close
error: Content is protected !!