ಕಿಲ್ಲಾ ತೊರಗಲ್ಲ- ಬೆಳಗಾವಿ ಜಿಲ್ಲೆ , ರಾಮದುರ್ಗ ತಾಲೂಕಿನ ಕಿಲ್ಲಾ ತೊರಗಲ್ಲದ ಪ್ರಾಚೀನ ಕಾಲದ ಶ್ರೀ ಪವಾಡ ಬಸವೇಶ್ವರ ದೇವರ ಗುಡಿಯಲ್ಲಿ ಶ್ರಾವಣ ಮಾಸದ ಪ್ರಯುಕ್ತ ‘ ಪಲ್ಲಕ್ಕಿ ಉತ್ಸವವು ‘ ಸೋಮವಾರ ದಿ.26 ರಂದು ಮುಂಜಾನೆ ವಿವಿಧ ಧಾರ್ಮಿಕ ಪೂಜೆಗಳ ಮೂಲಕ ವಿಜೃಂಭಣೆಯಿಂದ ಜರುಗಲಿದೆ.
ಹಿಂದೂ ಧರ್ಮದ ಪ್ರಕಾರ ಶ್ರಾವಣ ಮಾಸವನ್ನು ಅತ್ಯಂತ ಪವಿತ್ರ ಮಾಸವೆಂದು ಪರಿಗಣಿಸಲಾಗಿದೆ. ಈ ಮಾಸದಲ್ಲಿ ಭಗವಂತನ ನಾಮಸ್ಮರಣೆ , ಪೂಜೆಯನ್ನು ಮಾಡುವುದರಿಂದ ನಮ್ಮೆಲ್ಲರ ಇಷ್ಟಾರ್ಥಗಳು ನೆರವೇರುವುದರೊಂದಿಗೆ ಭಗವಂತನ ದಿವ್ಯ ಕೃಪೆಗೆ ಪಾತ್ರರಾಗುತ್ತೇವೆ ಎಂಬುದಾಗಿ ಭಕ್ತರು ನಂಬುತ್ತಾರೆ. ಹೀಗಾಗಿಯೇ ಜನರು ತಂತಮ್ಮ ಊರುಗಳಲ್ಲಿನ ಗುಡಿ, ಗುಂಡಾರ, ದೇವಸ್ಥಾನಗಳಲ್ಲಿ ಶ್ರಾವಣ ಮಾಸದಲ್ಲಿ ನಿತ್ಯ ಹರನಾಮ ಸ್ಮರಣೆ, ಭಜನೆ , ಪುರಾಣ , ಕೀರ್ತನೆ, ವಿಶೇಷ ಪೂಜೆ , ಹಾಗೂ ದೇವತಾ ಆರಾಧನೆಯಂಥಹ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಅನಾದಿ ಕಾಲದಿಂದಲೂ ಆಯೋಜಿಸಿ ನಡೆಸಿಕೊಂಡು ಬರುತ್ತಲಿದ್ದಾರೆ.
ಈ ದಿಶೆಯಲ್ಲಿ ರಾಮದುರ್ಗ ತಾಲೂಕಿನ ಕಿಲ್ಲಾ ತೊರಗಲ್ಲದ ಪ್ರಾಚೀನ ಕಾಲದ ” ಶ್ರೀ ಪವಾಡ ಬಸವೇಶ್ವರ ಮೂರ್ತಿಗೆ ” ಶ್ರಾವಣ ಮಾಸದ ಆರಂಭದ ದಿನದಿಂದಲೂ ಪ್ರತಿನಿತ್ಯ ಬೆಳಿಗ್ಗೆ ‘ ರುದ್ರಾಭಿಷೇಕ ಪೂಜೆ ‘, ವೇ. ಶಾಸ್ತ್ರಿಗಳಿಂದ ನಡೆದುಕೊಂಡು ಬಂದಿದ್ದು , ಸೋಮವಾರ ದಿ.26 ರಂದು ಮುಂಜಾನೆ ಶ್ರೀ ಪವಾಡ ಬಸವೇಶ್ವರ ದೇವರ ಪಲ್ಲಕ್ಕಿಯ ಉತ್ಸವದ ಮೂಲಕ ಮಂಗಲಗೊಳ್ಳಲಿದೆ. ಮಹಾ ಮಂಗಳಾರತಿಯ ನಂತರ ” ಅನ್ನ ಪ್ರಸಾದ ” ವಿತರಣೆಯ ಕಾರ್ಯಕ್ರಮ ಜರುಗುವುದು.
ಕಾರಣ ಶ್ರೀ ಪವಾಡ ಬಸವೇಶ್ವರ ದೇವರ ಮಹಾಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಗುರುವಿನ ಪಲ್ಲಕ್ಕಿಯ ಉತ್ಸವದಲ್ಲಿ ಶೃದ್ಧಾ , ಭಕ್ತಿಯಿಂದ ಪಾಲ್ಗೊಂಡು ಶ್ರೀ ಗುರುವಿನ ದರುಶನ , ಆಶೀರ್ವಾದ ಪಡೆದುಕೊಂಡು ಪುನೀತರಾಗುವಂತೆ ಈ ಮೂಲಕ ತಮ್ಮಲ್ಲಿ ಸದ್ಭಕ್ತರ ಪರವಾಗಿ ಕೋರಲಾಗಿದೆ.
ಚಿತ್ರ / ಲೇಖನ ; ಮಹಾಂತೇಶ. ಬ. ಶಿದ್ದಿಭಾವಿ
ಮು , ಅಂಚೆ : ಕಿಲ್ಲಾ ತೊರಗಲ್ಲ
ತಾ.ರಾಮದುರ್ಗ , ಜಿ. ಬೆಳಗಾವಿ.