ಬೆಂಗಳೂರು : ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಉತ್ತರಪ್ರದೇಶ ವಾರಾಣಸಿಯ ಕಾಶಿ ಜ್ಞಾನ ಪೀಠದ ಶ್ರೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಬರೆದಿರುವ ವೀರಶೈವ ಪಂಚಸೂತ್ರಾಣಿ ಕೃತಿ ಜ.೮ ರಂದು (ಬುಧವಾರ) ಇಲ್ಲಿಯ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಸಂಜೆ ೬ ಗಂಟೆಗೆ ನಡೆಯುವ ವಿಶೇಷ ಸಮಾರಂಭದಲ್ಲಿ ಲೋಕಾರ್ಪಣೆೆಗೊಳ್ಳಲಿದೆ.
ಹಿಂದೂ ವಿ.ವಿ. ಪಠ್ಯ : ವೀರಶೈವ ಧರ್ಮದ ಪಂಚಪೀಠಗಳಾದ ಶ್ರೀ ರಂಭಾಪುರಿ, ಶ್ರೀಉಜ್ಜಯಿನಿ, ಶ್ರೀಕೇದಾರ, ಶ್ರೀಶ್ರೀಶೈಲ ಹಾಗೂ ಶ್ರೀಕಾಶಿ ಪೀಠಗಳ ಮೂಲ ಸೂತ್ರಗಳಾದ ಕ್ರಮವಾಗಿ ಪಡ್ವಿಡಿ, ವೃಷ್ಟಿ, ಲಂಬನ, ಮುಕ್ತಾಗುಚ್ಛ ಹಾಗೂ ಪಂಚವರ್ಣ ಕುರಿತು ಸಂಪೂರ್ಣ ಸಂಶೋಧನಾ ಉದ್ಗ್ರಂಥವಾಗಿರುವ ವೀರಶೈವ ಪಂಚಸೂತ್ರಾಣಿ ಕೃತಿ ಈಗಾಗಲೇ ಸಂಸ್ಕೃತದಲ್ಲಿ ಪ್ರಕಟಗೊಂಡಿದ್ದು, ಅದು ವಾರಾಣಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಧರ್ಮಾಗಮ ವಿಭಾಗದ ಪಠ್ಯವಾಗಿ ಆಯ್ಕೆಯಾಗಿರುವುದು ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ವಿದ್ವತ್ ಪ್ರಭೆಯನ್ನು ಸಾಕ್ಷೀಕರಿಸುತ್ತದೆ.
ಒಟ್ಟು ೨೫೩೯ ಸಂಸ್ಕೃತ ಶ್ಲೋಕಗಳನ್ನು ಒಳಗೊಂಡ ವೀರಶೈವ ಪಂಚಸೂತ್ರಾಣಿ ಕೃತಿಯ ಕನ್ನಡ ಅನುವಾದ ಕೃತಿ ಇದಾಗಿದೆ. ವೀರಶೈವ ಧರ್ಮದ ಪಂಚಪೀಠಗಳ ಸೂತ್ರಗಳ ಸಂಪೂರ್ಣ ಅರ್ಥ ವಿವರಣೆ ಮತ್ತು ವಿಸ್ತೃತ ವ್ಯಾಖ್ಯಾನದ ಆಳವಾದ ವಿಶ್ಲೇಷಣೆ ಈ ಕೃತಿಯಲ್ಲಿ ಅಡಕವಾಗಿದೆ. ವೀರಶೈವ ವಾಙ್ಮಯ ವಿಹಾರದಲ್ಲಿ ಬಹಳ ಅಪರೂಪದ ದಾರ್ಶನಿಕ ಗ್ರಂಥ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ೫೬೦ ಪುಟಗಳ ಈ ವಿಶಿಷ್ಟ ಕೃತಿಯನ್ನು ಕಾಶಿ ಜ್ಞಾನ ಪೀಠದ ಶೈವಭಾರತಿ ಶೋಧ ಪ್ರತಿಷ್ಠಾನವು ಹೊರತಂದಿದೆ.
ಲೋಕಾರ್ಪಣೆ : ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು ಹಾಗೂ ಶ್ರೀಶೈಲ ಸೂರ್ಯ ಪೀಠದ ಶ್ರೀಜಗದ್ಗುರು ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಕೃತಿ ಲೋಕಾರ್ಪಣೆ ಮಾಡುವರು.
ಕೃತಿ ರಚಿಸಿರುವ ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹಾಗೂ ಕಾಶಿ ಜ್ಞಾನ ಪೀಠದ ಕಿರಿಯ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಶಿವಗಂಗಾಕ್ಷೇತ್ರದ ಡಾ. ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಬೆಂಗಳೂರು ವಿಭೂತಿಪುರಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಕೆರೂರ ಚರಂತಿಮಠದ ಡಾ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಹಿರಿಯ ಸಂಸ್ಕೃತ ವಿದ್ವಾಂಸ ಡಾ. ಸಿ. ಶಿವಕುಮಾರಸ್ವಾಮಿ ಹಾಗೂ ಸಂಸ್ಥೆ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ ಪಾಲ್ಗೊಳ್ಳುವರು. ವಿಶ್ರಾಂತ ಸಂಸ್ಕೃತ ಪ್ರಾಧ್ಯಾಪಕ ವಿದ್ವಾನ್ ಕೋ. ರಂ. ಬಸವರಾಜು ಕೃತಿ ಪರಿಚಯ ಮಾಡುವರೆಂದು ಶ್ರೀಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನದ ಬೆಂಗಳೂರು ಶಾಖೆಯು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
“ಶ್ರೀ ಜಗದ್ಗುರು ಪಂಚಾಚಾರ್ಯರು ಬೋಧಿಸಿದ ಪರಮ ಪದವಿ ಪ್ರಾಪ್ತಿಯವಿಧಿ, ಜೀವಾತ್ಮನ ಸ್ವರೂಪ, ಈಶ್ವರನ ಸ್ವರೂಪ, ಜಗತ್ತಿನ ಸ್ವರೂಪ ಮತ್ತು ಸಾಕ್ಷಾತ್ಕಾರ ಸಂಪಾದನೆಯ ಬಂಧ-ಮೋಕ್ಷಗಳ ವಿಚಾರಗಳ ವಿಸ್ತೃತ ಪ್ರತಿಪಾದನೆಯನ್ನು ವೀರಶೈವ ಪಂಚಸೂತ್ರಾಣಿ ಕೃತಿ ಒಳಗೊಂಡಿದೆ”
-ಶ್ರೀಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಕಾಶಿ ಜ್ಞಾನ ಪೀಠ, ವಾರಾಣಾಸಿ
———————————————————————-
ಪ್ರಕಟಣೆ :
ಶ್ರೀಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನ(ರಿ)ವಾರಾಣಾಸಿ(ಉ.ಪ್ರ.) ಶಾಖೆ : ಬೆಂಗಳೂರು
ವಿಳಾಸ : ಜಿ-೧೧೦೨, ಸ್ಟರ್ಲಿಂಗ್ ಟೆರೇಸಸ್, ೧೦೦ ಅಡಿ ರಿಂಗ್ ರಸ್ತೆ, ಬನಶಂಕರಿ ೩ನೆಯ ಹಂತ, ೫ನೆಯ ಬ್ಲಾಕ್, ಬೆಂಗಳೂರು-೫೬೦೦೮೫ ಮೊಬೈಲ್ : ೯೫೯೧೭೫೮೩೧೦ ಹಾಗೂ ೯೫೯೧೯೬೫೯೪೭