ಅಂಗನವಾಡಿ ಕೇಂದ್ರವನ್ನು ಸ್ಮಾರ್ಟ್ ಕ್ಲಾಸ್ ಮಾಡಿದ ಪಾಲಕರು

0
214
          ಮೂಡಲಗಿ – ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಬೆಳಗಾವಿ ರವರ ನಿರ್ದೇಶನದಂತೆ ಪ್ರತಿ ತಿಂಗಳ ಮೂರನೆಯ ಶನಿವಾರ ಅಂಗನವಾಡಿ ಕೇಂದ್ರಗಳಲ್ಲಿ ಪಾಲಕರ ಸಭೆಗಳನ್ನು ನಡೆಸಲಾಗುತ್ತದೆ. ಅದೆ ರೀತಿ ಶಿಶು ಅಭಿವೃದ್ಧಿ ಯೋಜನೆ ಅರಭಾವಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ದಿನಾಂಕ-19-10-2024 ರಂದು ಪಾಲಕರ ಸಭೆ ಜರುಗಿತು.
    ಅದರಂತೆ ಶಿಶು ಅಭಿವೃದ್ಧಿ ಯೋಜನೆ ಅರಭಾವಿ ವ್ಯಾಪ್ತಿಗೆ ಬರುವ ಗೋಕಾಕ ತಾಲೂಕಿನ ಘಟಪ್ರಭಾ ಜೆ.ಜಿ.ಕೋ ಆಸ್ಪತ್ರೆ ಆವರಣದಲ್ಲಿ ಇರುವ ಅಂಗನವಾಡಿ ಕೇಂದ್ರ ಸಂಖ್ಯೆ,450ರಲ್ಲಿ ನಡೆದ ಪಾಲಕರ ಸಭೆ ತುಂಬಾ ಫಲಪ್ರದಾಯಕವಾಗಿತ್ತು.ಅಲ್ಲಿ ಮಕ್ಕಳು, ಪಾಲಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿ ಸ್ಮಾರ್ಟ್ ಟಿವಿ ಖರೀದಿಸಿ ಅದರ ಮೂಲಕ ಮಕ್ಕಳಿಗೆ ಪಾಠ ಕಲಿಸಲಾಗುತ್ತದೆ. ಸೋಮವಾರ ನಡೆದ ಪಾಲಕರ ಸಭೆಯಲ್ಲಿ ಮಕ್ಕಳ ಪಾಲಕರಿಂದ ಸ್ಮಾರ್ಟ್ ಟಿವ್ಹಿ ಮೂಲಕ ಪಾಠ ಕಲಿಸುವ ಬಗ್ಗೆ ಚಾಲನೆ ನೀಡಲಾಯಿತು.
    ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು  ಡೆಸ್ಕ್ ವ್ಯವಸ್ಥೆ ಮಾಡಲಾಗಿದೆ. ಘಟಪ್ರಭಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರರಾದ ಹಣಮಂತ ನೆರಳಿ ರವರು ಕೇಂದ್ರದ ಎಲ್ಲಾ ಮಕ್ಕಳಿಗೆ ಸಮವಸ್ತ್ರಗಳನ್ನು ವಿತರಿಸಿದರು ಮತ್ತು ಜೆ,ಜಿ,ಕೋ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಬಿ.ಕೆ.ಚ್ ಪಾಟೀಲ ರವರು ಅಂಗನವಾಡಿ ಕೇಂದ್ರಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದರು. ಈ ರೀತಿ ಸಮುದಾಯದ ಸಹಭಾಗಿತ್ವದಲ್ಲಿ ಅಂಗನವಾಡಿ ಕೇಂದ್ರ ಚೆನ್ನಾಗಿ ನಡೆಯುತ್ತಿದ್ದು.ಈ ಸಂದರ್ಭದಲ್ಲಿ ಪಾಲಕರಿಗೆ,ಪೊಲೀಸ್ ಅಧಿಕಾರಿಗಳಿಗೆ, ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ, ಹಾಗೂ ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಪಲ್ಲವಿ ರಾಜಾಪೂರ, ಮೇಲ್ವಿಚಾರಕಿಯಾದ ಶ್ರೀಮತಿ ಶಶಿಕಲಾ ಗುಡವಾಲೆ ಇವರಿಗೆಲ್ಲರಿಗೂ ಮೂಡಲಗಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಯಲ್ಲಪ್ಪ ಗದಾಡಿಯವರು ಅಭಿನಂದನೆ ತಿಳಿಸಿದರು.  ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಪಾಲಕರು ಮತ್ತು ಮುದ್ದು ಮಕ್ಕಳು ಪಾಲ್ಗೊಂಡಿದ್ದರು.