ಮೂಡಲಗಿ: ‘ಮಕ್ಕಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಪಾಲಕರ ಪಾತ್ರವು ಪ್ರಮುಖವಾಗಿದೆ’ ಎಂದು ಯಕ್ಸಂಬಾದ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ವೀರೇಶ ಪಾಟೀಲ ಹೇಳಿದರು.
ಇಲ್ಲಿಯ ಚೈತನ್ಯ ಆಶ್ರಮ ವಸತಿ ಶಾಲೆಯಲ್ಲಿ ಪಾಲಕರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪಾಲಕರು ಮಕ್ಕಳ ಮೇಲಿನ ಅತಿಯಾದ ಪ್ರೀತಿ, ಮೋಹದಿಂದಾಗಿ ಪಾಲಕರೇ ಮಕ್ಕಳ ದಾರಿ ತಪ್ಪಿಸಬಹುದಾಗಿದೆ ಎಂದರು.
ಜಗತ್ತಿನಲ್ಲಿ ಯಾವ ಮಗು ದಡ್ಡನಾಗಿರುವುದಿಲ್ಲ. ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವರ ಬೆಳವಣಿಗೆಯನ್ನು ಮಾಡಬೇಕು. ಪಾಲಕರು ಮಕ್ಕಳೊಂದಿಗೆ ಹೆಚ್ಚು ಬೆರೆಯುವುದರಿಂದ ಮಕ್ಕಳಲ್ಲಿ ಹೆಚ್ಚು ಆತ್ಮವಿಶ್ವಾಸ ಬೆಳೆಯುತ್ತದೆ ಎಂದರು.
ಮಕ್ಕಳು ಚಿಕ್ಕವರಿದ್ದಾಗ ಪಾಲಕರು ಅವರಿಗೆ ಹಣದ ಬೆಲೆ ತಿಳಿಸಿ, ಸಂಬಂಧಗಳ ಬಗ್ಗೆ ಅರಿವು ಮೂಡಿಸಬೇಕು, ಬೇರೆ ಮಕ್ಕಳೊಂದಿಗೆ ಹೋಲಿಸಿ ಅವರಲ್ಲಿ ಕೀಳರಿಮೆ ಬೆಳೆಸುವುದನ್ನು ಬಿಟ್ಟು ಬೆಳೆಯಲಿಕ್ಕೆ ದಾರಿ ಹುಡುಕಿಕೊಡಿರಿ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರ ಅಜಿತ್ ಮನ್ನಿಕೇರಿ ಮಾತನಾಡಿ, ಮಕ್ಕಳಲ್ಲಿ ವಿಶೇಷ ಪ್ರತಿಭೆ ಇರುತ್ತದೆ. ಅಂಥ ಪ್ರತಿಭೆಯನ್ನು ಹೊರೆತೆಗೆಯುವ ಕೆಲಸವನ್ನು ಶಿಕ್ಷಣ ಮಾಡುತ್ತದೆ. ಶಾಲಾ ಸಂಕುಲದೊಂದಿಗೆ ಪಾಲಕರು ಸಹ ಕಾಳಜಿ ವಹಿಸಿದ್ದಾದರೆ ಮಕ್ಕಳು ಯಶಸ್ಸಿನತ್ತ ಸಾಗುತ್ತಾರೆ ಎಂದರು.
ಸಾಹಿತಿ ಬಾಲಶೇಖರ ಬಂದಿ ಮಾತನಾಡಿ, ಚೈತನ್ಯ ಶಾಲೆಯು ಪ್ರತಿಭೆಗಳನ್ನು ಬೆಳೆಸುವ ತಾಣವಾಗಿದೆ. ಸಂಸ್ಥೆಯ ಸಂಸ್ಥಾಪಕ ಸಿದ್ದಣ್ಣ ಹೊರಟ್ಟಿ ಅವರು ನೆಟ್ಟ ಸಸಿಯು ಇಂದು ಹೆಮ್ಮರವಾಗಿ ಚೈತನ್ಯ ಸಂಸ್ಥೆಯು ಎಲ್ಲ ದಿಕ್ಕುಗಳಿಗೆ ಶಿಕ್ಷಣದ ಕಂಪನ್ನು ಬೀರುತ್ತಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ಎಸ್.ಎಂ. ಕಮದಾಳ ಮಾತನಾಡಿ, ಚೈತನ್ಯ ಶಾಲೆಯು ಮಕ್ಕಳ ಭವಿಷ್ಯವನ್ನು ನಿರ್ಮಿಸುವಲ್ಲಿ ಮಾಡಿರುವ ಸಾಧನೆಯು ಶ್ಲಾಘನೀಯವಾಗಿದೆ ಎಂದರು.
ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ವೈ. ಬಿ. ಪಾಟೀಲ, ರುಕ್ಮಿಣಿ ಸಿದ್ದಣ್ಣ ಹೊರಟ್ಟಿ, ವಿಜಯ ಎಸ್. ಹೊರಟ್ಟಿ, ಭಾರತಿ ಪಾಟೀಲ, ಡಾ. ವಿದ್ಯಾ ಹೊರಟ್ಟಿ, ಶಂಕರ ಕ್ಯಾಸ್ತಿ, ಪ್ರೊ. ಸುಭಾಷ ಪತ್ತಾರ ವೇದಿಕೆಯಲ್ಲಿದ್ದರು.
ಶಾಲಾ ಮುಖ್ಯಸ್ಥ ಕುಮಾರ ಹುಬ್ಬಳ್ಳಿ ಸ್ವಾಗತಿಸಿದರು, ಸಂಧ್ಯಾ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು, ಶಿವರಾಜ ಕಾಂಬಳೆ, ಮಲ್ಲಿಕಾರ್ಜುನ ಕುಂಬಾರ ನಿರೂಪಿಸಿದರು.
ಗಮನಸೆಳೆದ ನೃತ್ಯ:
ಭರತ ನಾಟ್ಯ ಮಾಡಿದ ಕೀರ್ತಿ ಕುಲಕರ್ಣಿ, ಸುಶ್ರಾವ್ಯವಾಗಿ ಗಾಯನ ಮಾಡಿದ ಸರೋಜಿನಿ ಬಡಿಗೇರ ಹಾಗೂ ಮಲ್ಲಕಂಬ ತರಬೇತುದಾರ ಮೆಹಬೂಬ್ ಬಂಡಿವಾಡ ಮಾರ್ಗದರ್ಶನದಲ್ಲಿ ನಡೆದ ಮಕ್ಕಳ ಮಲ್ಲಕಂಬ ಪ್ರದರ್ಶನವು ಎಲ್ಲರ ಗಮನಸೆಳೆದವು.