ಭ್ರೂಣ ಲಿಂಗ ಪತ್ತೆ ಪ್ರಕರಣದಲ್ಲಿ ಮೂಡಲಗಿಯ ವೈದ್ಯರು
ಮೂಡಲಗಿ : ರಾಜ್ಯ ಸೂಕ್ತ ಪ್ರಾಧಿಕಾರ ಮತ್ತು ರಾಜ್ಯ ತಪಾಸಣೆ ಹಾಗೂ ಮೇಲ್ವಿಚಾರಣೆ ಸಮಿತಿಯಿಂದ ಜು.15ರಂದು ಗೋಕಾಕ ನಗರದ ಇಕ್ರಾ ಸರ್ಜಿಕಲ್ ಮತ್ತು ಮೆಟರ್ನಿಟಿ ಎಂಬ ಆಸ್ಪತ್ರೆಯಲ್ಲಿ ರಹಸ್ಯ ಕಾರ್ಯಚರಣೆ ಕೈಗೊಂಡ ಅಧಿಕಾರಿಗಳ ತಂಡ ಗುಪ್ತವಾಗಿ ಭ್ರೂಣಲಿಂಗ ತಪಾಸಣೆ, ಗರ್ಭಪಾತ ನಡೆಸುತ್ತಿರುವ ಬಗ್ಗೆ ದಾಖಲೆ ಸಮೇತ ಇಕ್ರಾ ಆಸ್ಪತ್ರೆಯ ವ್ಶೆದ್ಯಾಧಿಕಾರಿ ಮತ್ತು ಏಜೆಂಟ ಸಿಕ್ಕಿಬಿದ್ದಿರುವ ಘಟನೆಗೆ ಸಂಬಂಧಿಸಿದಂತೆ ಮೂಡಲಗಿ ಪಟ್ಟಣದ ಡಾ. ಎಸ್.ಎಸ್ ಪಾಟೀಲ ಆಸ್ಪತ್ರೆಯನ್ನ ಆರೋಗ್ಯ ಇಲಾಖೆಯ ತಾಲೂಕಾಧಿಕಾರಿಗಳ ತಂಡ ಸೀಜ್ ಮಾಡಿರುವ ಘಟನೆ ಮಂಗಳವಾರದಂದು ಜರುಗಿದೆ.
ಇಕ್ರಾ ಆಸ್ಪತ್ರೆಯಲ್ಲಿ ದಾಳಿ ನಡೆದ ವೇಳೆ ಅಧಿಕಾರಿಗಳ ಬಲೆಗೆ ಬಿದ್ದ ವ್ಯಕ್ತಿಗಳು ಗೋಕಾಕ ತಾಲೂಕಿನ ಸಿದ್ದಾರ್ಥ ಪೂಜೇರಿ ಆಸ್ಪತ್ರೆ ಮತ್ತು ಮೂಡಲಗಿ ಪಟ್ಟಣದ ಡಾ. ಎಸ್.ಎಸ್ ಪಾಟೀಲ ಆಸ್ಪತ್ರೆಗಳಿಂದ ಶಿಫಾರಸ್ಸು ಮಾಡುತ್ತಿದ್ದರು ಎಂಬ ಹೇಳಿಕೆ ನೀಡಿದರಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳು ಮೂಡಲಗಿ ಪಟ್ಟಣದ ಡಾ. ಎಸ್.ಎಸ್ ಪಾಟೀಲ ಆಸ್ಪತ್ರೆಯನ್ನ ಸೀಜ್ ಮಾಡಿದ್ದಾರೆ ಎಂದು ಎನ್ನಲಾಗಿದೆ.
ಆರೋಗ್ಯ ಇಲಾಖೆಯ ತಾಲೂಕಾ ವೈದ್ಯಾಧಿಕಾರಿ ಮುತ್ತಣ್ಣ ಕೊಪ್ಪದ ಸುದ್ದಿಗಾರರೊಂದಿಗೆ ಮಾತನಾಡಿ, ಗೋಕಾಕ ನಗರದಲ್ಲಿ ನಡೆದ ಘಟನೆಯಲ್ಲಿ ಮೂಡಲಗಿ ಪಟ್ಟಣದ ಡಾ. ಎಸ್.ಎಸ್ ಪಾಟೀಲ ಆಸ್ಪತ್ರೆಯ ಹೆಸರು ಬಂದಿರುವ ಹಿನ್ನೆಲೆ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ಮಾಡಲಾಯಿತು. ಪರಿಶೀಲನೆ ವೇಳೆಯಲ್ಲಿ ವೈದ್ಯಕೀಯ ಚಿಕಿತ್ಸೆಗೆ ಬೇಕಾಗುವ ಸಲಕರಣೆಗಳು, ಬೆಡ್‍ಗಳು ಹಾಗೂ ಇನ್ನಿತರ ವಸ್ತುಗಳು ಕಂಡು ಬಂದಿದ್ದು, ಭ್ರೂಣಲಿಂಗ ತಪಾಸಣೆ ಮತ್ತು ಗರ್ಭಪಾತಕ್ಕೆ ಬಳಸುವ ಯಾವುದೇ ಸಲಕರಣೆಗಳು ಕಂಡು ಬಂದಿಲ್ಲ. ಮೇಲಾಧಿಕಾರಿಗಳ ಆದೇಶದಂತೆ ಆಸ್ಪತ್ರೆಯನ್ನು ಸೀಜ್ ಮಾಡಲಾತ್ತಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ರಾಜು ಪಾಟೀಲ, ನಿತೀನ ಶಿಂಧೆ ಹಾಗೂ ಇನ್ನಿತರರು ಸಿಬ್ಬಂದಿಗಳು ಇದ್ದರು.