ಬೆಂಗಳೂರಿಗೆ ಬೇರೆ ಊರಿನ ಪ್ರವಾಸಿಗರು ಬಂದು ಲಾಡ್ಜ್ ಗಾಗಿ ಬಾಡಿಗೆಯ ಚೌಕಾಸಿ ಮಾಡಿದರೆ ಅಲ್ಲಿಯ ಮಾಲೀಕರು ಇದೇನು ತೋಟದಪ್ಪ ಛತ್ರಾನ..?! ಎಂಬ ಕನ್ನಡ ನಾಣ್ಣುಡಿ ಕರ್ನಾಟಕದಲ್ಲಿ ಹೆಸರುವಾಸಿಯಾಗಿದೆ. ಇದನ್ನು ಸಾಕಷ್ಟು ಕನ್ನಡ ಚಲನಚಿತ್ರಗಳಲ್ಲೂ ಬಳಸಲಾಗಿದೆ.
ಗುಬ್ಬಿ ತೋಟದಪ್ಪನವರು ಕರ್ನಾಟಕ ಕಂಡ ಬಹು ದೊಡ್ಡ ಉದಾರಿ ದಾಸೋಹಿ ಬಡವರ ಪಾಲಿನ ದೇವತೆಯಾಗಿದ್ದರು.
ಇವರು 19 ನೆಯ ಶತಮಾನದ ಶ್ರೇಷ್ಠ ವ್ಯಕ್ತಿಗಳು ಎಂದು ಪರಿಗಣಿಸಲಾಗುತ್ತದೆ.
ಬೆಂಗಳೂರಿಗೆ ಬರುತ್ತಿದ್ದ ಪ್ರವಾಸಿಗರಿಗೆ ಉಚಿತ ಊಟ ಮತ್ತು ವಸತಿಯ ವ್ಯವಸ್ಥೆಯನ್ನು ಮಾಡಿದ್ದರು. ಆ ಸ್ಥಳಕ್ಕೆ “ಗುಬ್ಬಿ ತೋಟದಪ್ಪನವರ ಛತ್ರ”ಎಂಬ ಹೆಸರು ಬಂತು. ಇವರಿಗೆ ಆಗಿನ ಮೈಸೂರು ಅರಸರಾದ ಕೃಷ್ಣರಾಜ ಒಡೆಯರ್ ರವರು “ಧರ್ಮಪ್ರವರ್ತ” ಹಾಗೂ ಬ್ರಿಟಿಷ್ ಸರ್ಕಾರವು “ರಾವ್ ಬಹದ್ದೂರ್” ಎಂಬ ಬಿರುದುಗಳನ್ನು ಇತ್ತು ಗೌರವಿಸಲಾಯಿತು.
ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ಅವರು ಲಿಂಗಾಯತ ಮತ್ತು ಕನ್ನಡಿಗರು ಹೆಮ್ಮೆಯಿಂದ ಅಭಿಮಾನದಿಂದ ಹೇಳಿ ಕೊಳ್ಳುವ ವ್ಯಕ್ತಿತ್ವವನ್ನು ಹೊಂದಿದ್ದರು.
ಭಾರತೀಯ ಸಂಸ್ಕೃತಿಯನ್ನು ಉಳಿಸ ಬೇಕೆಂದು ತಾವು ಹಾಗೂ ಮಡದಿ ಗೌರಮ್ಮ ಹಲವಾರು ಕನಸುಗಳನ್ನು ಕಟ್ಟಿ ಕೊಂಡಿದ್ದರು. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ತೋಟದಪ್ಪ ಕಷ್ಟ ಪಟ್ಟು ದುಡಿದು ಅಪಾರ ಆಸ್ತಿ ಗಳಿಸಿ ಮುಂದೆ ಅದೇ ಸಂಪತ್ತಿನಿಂದ ಸಾಮಾಜಿಕ ಕಾರ್ಯಗಳನ್ನು. ಮಾಡಿದರು.ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆಯು ಬೆಂಗಳೂರು ಮೈಸೂರು ಕೋಲಾರ ಮುಂತಾದ ಕಡೆಯ ಬಡ ಲಿಂಗಾಯತ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಆಶ್ರಯ ತಾಣ
ತೋಟದಪ್ಪನವರು ಗುಬ್ಬಿಯ ಲಿಂಗಾಯಿತ ಬಣಜಿಗ ಶೆಟ್ಟರ ಕುಟುಂಬದಲ್ಲಿ 1838 ರಲ್ಲಿ ತಂದೆ ರುದ್ರಪ್ಪ ಹಾಗೂ ತಾಯಿ ಚೆನ್ನಮ್ಮ ದಂಪತಿಗಳಿಗೆ ಜನಿಸಿದರು. ಪ್ರಾಥಮಿಕ ಶಿಕ್ಷಣ ಮುಗಿಯುತಿದ್ದಂತೆ ತಮ್ಮ 12ನೇ ವಯಸ್ಸಿನಿಂದಲೇ ತೋಟದಪ್ಪನವರು ತಂದೆಯ ಜತೆಗೆ ಅಂಗಡಿಗೆ ಹೋಗಿ ವ್ಯಾಪಾರದಲ್ಲಿ ನಿರತರಾದರು.ಮೂಲತಃ ತುಮಕೂರ ಜಿಲ್ಲೆಯ ಗುಬ್ಬಿಯವರಾದ ಇವರ ತಂದೆಯವರು ಬೆಂಗಳೂರಿನ ಮಾಮೂಲು ಪೇಟೆಗೆ ಬಂದು ನೆಲೆಸಿದರು. ತಮ್ಮ 16ನೇ ವಯಸ್ಸಿನಲ್ಲಿಯೇ ತಂದೆಯನ್ನ ಕಳೆದುಕೊಂಡು ತಮ್ಮಕುಲ ಕಸುಬಾದ ವ್ಯಾಪಾರ ವೃತ್ತಿಯನ್ನು ಮುಂದುವರೆಸಿದರು. ತಮ್ಮ ಶಿಸ್ತುಬದ್ದವಾದ ನಡವಳಿಕೆಯಿಂದ, ಸತ್ಯ ಶುದ್ದ ಕಾಯಕದಿಂದ ಎಲ್ಲರ ಗೌರವ ಮನ್ನಣೆಗಳಿಗೆ ಪಾತ್ರರಾದರು.ಹಂತ ಹಂತವಾಗಿ ಶ್ರೀಮಂತರಾಗಿ ಬೆಂಗಳೂರಿನ ಗಣ್ಯ ವರ್ತಕರಾಗಿ ಪ್ರಸಿದ್ದರಾದರು.
ಸಾಮಾಜಿಕ ಕಾರ್ಯಗಳು
ಸಂತಾನ ವಂಚಿತರಾದ ತೋಟದಪ್ಪನವರು ತಮ್ಮ ಎಲ್ಲಾ ಆಸ್ತಿಯನ್ನು ಲೋಕ ಕಲ್ಯಾಣಕ್ಕೆ ಉಪಯೋಗಿಸಲು ನಿರ್ಧರಿಸಿ, ಪ್ರವಾಸಿಗಳು ಹಾಗೂ ವಿಧ್ಯಾರ್ಥಿಗಳ ಒಳಿತಿಗಾಗಿ ತಮ್ಮ ಆಸ್ತಿಯನ್ನೆಲ್ಲ ಧಾರೆ ಎರೆದರು. ಗೌರಿಬಿದನೂರು ತಾಲ್ಲೂಕಿನ ಅಲಕಾಪುರದ ಶ್ರೀ ಚನ್ನಸೋಮೆಶ್ವರ ದೇವಾಲಯ ಮತ್ತು ಹಿಂದುಪೂರ ತಾಲೂಕಿನ ಗೊಳ್ಳಾಪುರ ಗುರುಮಠದ ಜೀರ್ಣೋದ್ದಾರ ಕಾರ್ಯ ಬೆಂಗಳೂರಿನಲ್ಲಿ ಮೊಟ್ಟ ಮೊದಲ ಸಂಸ್ಕೃತ ಪಾಠಶಾಲೆಯನ್ನು ಸ್ಠಾಪಿಸಿದ ಕೀರ್ತಿ ಶ್ರೀ ತೋಟದಪ್ಪನವರಿಗೆ ಸಲ್ಲುತ್ತದೆ.ಇವರು ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯು 1897 ರಲ್ಲಿ ಬೆಂಗಳೂರು ನಗರ ರೈಲ್ವೆ ನಿಲ್ದಾಣದ ಹತ್ತಿರ 2.5 ಎಕರೆ ಜಾಗವನ್ನು ಆಗಿನ ಮೈಸೂರು ಸರ್ಕಾರದ ರೈಲ್ವೇ ಇಲಾಖೆಯಿಂದ ರೂ.10000 ಕ್ಕೆ ಖರೀದಿಸಿ ಫೆಬ್ರವರಿ 11, 1903 ರಲ್ಲಿ ಪ್ರವಾಸಿಗಳಿಗೆ ಧರ್ಮಛತ್ರ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯವನ್ನು ಆರಂಭಿಸಿತು. ಇದನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಅಧಿಕೃತವಾಗಿ ಉದ್ಘಾಟಿಸಿದರು. ತೋಟದಪ್ಪನವರ ಕೊನೆಯ ದಿನಗಳಲ್ಲಿ ತಮ್ಮ ಆಸ್ತಿಯನ್ನೆಲ್ಲ ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆಗೆ ದಾನ ಮಾಡಿ, ಆ ಸಂಸ್ಥೆಗೆ ಕೆ. ಪಿ. ಪುಟ್ಟಣ್ಣ ಚೆಟ್ಟಿಯವರನ್ನು ಪ್ರಥಮ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು. ಈ ಸಂಸ್ಥೆಯು ಇಂದಿಗೂ ಕಾರ್ಯ ನಿರ್ವಹಿಸುತ್ತಿದೆ. ಈ ವಿಧ್ಯಾರ್ಥಿ ನಿಲಯದ ಸೌಲಭ್ಯವನ್ನು ಕರ್ನಾಟಕದ ಉದ್ದಗಲಕ್ಕೂ ವಿಸ್ತರಿಸಲಾಯಿತು.
2005 ರಲ್ಲಿ, ವಿದ್ಯಾರ್ಥಿ ನಿಲಯವು ಮರುನಿರ್ಮಾಣವಾಯಿತು. ಸಂಸ್ಥೆಯ ಆದಾಯದ ಮೂಲಕ್ಕಾಗಿ ಕೆಂಪೇಗೌಡ ಬಸ್ ನಿಲ್ದಾಣದ ಹತ್ತಿರ ಶತಮಾನೋತ್ಸವ ಭವನ ಅನ್ನು ನಿರ್ಮಿಸಲಾಯಿತು. ಪ್ರಸಕ್ತ ದಿನಗಳಲ್ಲಿ ಪ್ರವಾಸಿ ಮಂದಿರದ ಸೌಲಭ್ಯಗಳು ಅತ್ಯಲ್ಪ ಪ್ರಮಾಣದಲ್ಲಿ ಲಭ್ಯವಿದೆ. ಈ ಪ್ರವಾಸಿ ಮಂದಿರವು ಯಾವುದೇ ಜಾತಿ-ಧರ್ಮಕ್ಕೆ ಮೀಸಲಿರದೇ ಎಲ್ಲರಿಗೂ ತೆರೆದಿದೆ, ವಿಧ್ಯಾರ್ಥಿ ನಿಲಯ ಮಾತ್ರ -ಲಿಂಗಾಯತ ಸಮುದಾಯಕ್ಕೆ ಮಾತ್ರ ಮೀಸಲಿದೆ.ಪ್ರಸಕ್ತ ಸಾಲಿನಲ್ಲಿ ಸುಮಾರು 500 ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾಬ್ಯಾಸ ಮಾಡುತಿದ್ದಾರೆ, ಇಲ್ಲಿಯವರೆಗೆ ಹಾಸ್ಟೆಲ್ ಯಾವುದೇ ಸರ್ಕಾರದ ಅನುದಾನನ್ನು ಸ್ವೀಕರಿಸಿಲ್ಲ. ಈ ಸಂಸ್ಥೆಯು ಪ್ರತಿ ವರ್ಷ ಪ್ರತಿಭಾನ್ವಿತ -ಲಿಂಗಾಯತ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿವೇತನ ನೀಡುತ್ತಿದೆ.
ಉಚಿತ ವಸತಿ ಮತ್ತು ಪ್ರಸಾದ ನಿಲಯದ ಹಳೆಯ ಕೆಲ ವಿದ್ಯಾರ್ಥಿಗಳು
ಶ್ರೀ ಶಿವಕುಮಾರ ಸ್ವಾಮಿಗಳು 1927ರಿಂದ 1930 ರ ಅವಧಿಯಲ್ಲಿ ತೋಟದಪ್ಪ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಾಗಿದ್ದರು. ಮುಂದೆ ಮಾನ್ಯಶ್ರೀ ತೋಟದಪ್ಪ ಗುಬ್ಬಿ ಇವರ ದಟ್ಟವಾದ ಪ್ರಮಾಣದಿಂದ ಡಾ ಸಿದ್ಧಗಂಗಾ ಶ್ರೀಗಳು ತಮ್ಮ ಶ್ರೀ ಮಠದಲ್ಲಿ ಬಡ ವಿದ್ಯಾರ್ಥಿಗಳಿಗೆ ವಸತಿ ಮತ್ತು ಪ್ರಸಾದ ನಿಲಯದ ಜೊತೆಗೆ ಅಕ್ಷರ ಜ್ಞಾನಕ್ಕಾಗಿ ಶಾಲೆಯನ್ನು ಕೂಡ ತೆಗೆದರು.
ಕರ್ನಾಟಕದ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರು 1921ದಿಂದ 1924 ಅವಧಿಯಲ್ಲಿ ತೋಟದಪ್ಪ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಾಗಿದ್ದರು.
ಇವರಿಗೆ ಸಂದ ಗೌರವಗಳು
1905 ರಲ್ಲಿ ಇವರ ಸಾಮಾಜಿಕ ಸೇವೆಗಳನ್ನು ಗುರುತಿಸಿ ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು “ಧರ್ಮಪ್ರವರ್ತ” ಎಂಬ ಬಿರುದನ್ನಿತ್ತು ಗೌರವಿಸಿದರು.
1910 ರಲ್ಲಿ, ಜಾರ್ಜ್ ಐದನೇ, ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದ ಬ್ರಿಟೀಷ್ ಚಕ್ರವರ್ತಿ ಇವರಿಗೆ “ರಾವ್ ಬಹದ್ದೂರ್” ಎಂಬ ಬಿರುದನ್ನು ನೀಡಿದನು.
ತೋಟದಪ್ಪನವರು 21ಫೆಬ್ರವರಿ ೨೧, 1910 ರಲ್ಲಿ ತಮ್ಮ 72ನೇ ವಯಸ್ಸಿನಲ್ಲಿ ನಿಧನರಾದರು.ಇವರ ಸೇವೆ ಸಾಮಾಜಿಕ ಕಾರ್ಯಗಳನ್ನು ಪರಿಗಣಿಸಿ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರು ನಗರ ರೈಲ್ವೆ ನಿಲ್ದಾಣದ ಮುಖ್ಯ ರಸ್ತೆಗೆ ಗೌರವಾರ್ಥವಾಗಿ “ಗುಬ್ಬಿ ತೋಟದಪ್ಪ ರಸ್ತೆ” ಎಂದು ಹೆಸರಿಸಲಾಗಿದೆ. ಇದು ಅವರಿಗೆ ಸಲ್ಲಿಸಿದ ಗೌರವ.
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

