ಸಿಂದಗಿ: ಬಸವನ ಬಾಗೇವಾಡಿಯ ವಾರ್ಡ್ ಸಂಖ್ಯೆ 21ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಮುಸ್ಲಿಮರೆ ಕಾರಣ ಎಂದು ಬಸವನ ಬಾಗೇವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐ. ಸಿ. ಪಟ್ಟಣಶೆಟ್ಟಿ ಅವರ ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಸಿಂದಗಿ ಬ್ಲಾಕ್ ಕಾಂಗ್ರೆಸ್‍ನ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ಮೊಹಮ್ಮದಪಟೇಲ್ ಬಿರಾದಾರ ಚಾಟಿ ಬೀಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ತವರೂರು ಇದ್ದ ಹಾಗೆ ಇದನ್ನು ಅರಿಯದೇ ಅವರು ಎಷ್ಟು ಹತಾಶರಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಪಕ್ಷದ ಒಂದು ಜವಾಬ್ದಾರಿಯುತವಾದ ಸ್ಥಾನದಲ್ಲಿದ್ದು ಕೇವಲ ಮುಸ್ಲಿಮರನ್ನು ಗುರಿಯಾಗಿಸಿ ಮಾತನಾಡುವದು ಸರಿ ಅಲ್ಲ. ಪಕ್ಷದ ಬಿ ಫಾರಂ ಕೊಡುವ ಸಂದರ್ಭದಲ್ಲಿ ವಾರ್ಡಿನ ಜನರೊಂದಿಗೆ ಸೇರಿ ವಿಚಾರ ವಿಮರ್ಶೆ ಮಾಡಿ ಯಾರಿಗೆ ಕೊಟ್ಟರೆ ಸೂಕ್ತ ಎಂಬುದನ್ನು ಯೋಚಿಸದೇ ಹಿಟ್ಲರ್ ಆಳ್ವಿಕೆ ಮಾಡಿದಂತೆ ತಮ್ಮ ಮನಸ್ಸಿಗೆ ಬಂದಂತೆ ಬೇಕಾ ಬಿಟ್ಟಿ ಟಿಕೇಟ್ ಕೊಟ್ಟು ಸೋತ ಮೇಲೆ ತಮ್ಮ ವೈಫಲ್ಯವನ್ನು ಮರೆ ಮಾಚಲು ಒಂದು ಸಮುದಾಯವನ್ನು ದೂರುವದು ಎಷ್ಟರ ಮಟ್ಟಿಗೆ ಸರಿ ಇದೆ ಎಂಬುದು ನೀವೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಿಮ್ಮ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆದುಕೊಳ್ಳಬೇಕು ಒಂದು ವೇಳೆ ವಾಪಸ್ ಪಡೆದುಕೊಳ್ಳದೆ ಹೋದಲ್ಲಿ ಮುಂಬರುವ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.