ಸಿಂದಗಿ: ರಾಜ್ಯದಲ್ಲಿ ಅತೀವೃಷ್ಟಿಯಿಂದ ಎಲ್ಹ ಹಾನಿಯಾಗಿ ರೈತರು ಸಂಕಷ್ಟ ಎದುರಿಸುವಂತಾಗಿದ್ದು ಅಲ್ಪ ಸ್ವಲ್ಪ ಇರುವ ಕಬ್ಬಿಗೆ ಈ ಜಿಲ್ಲೆಯಲ್ಲಿರುವ ಎಲ್ಲ ಕಾರ್ಖಾನೆಗಳು ರೂ. ೩೫೦೦ ವೈಜ್ಞಾನಿಕ ಬೆಂಬಲ ಬೆಲೆ ನೀಡಿ ರೈತರ ಕಷ್ಟಕ್ಕೆ ಆಸರೆಯಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸೀರು ಸೇನೆ ಉತ್ತರ ವಲಯ ಅಧ್ಯಕ್ಷ ಧರ್ಮಣ್ಣ ಬಿರಾದಾರ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆವತಿಯಿಂದ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ದಿ. ೩ ರಂದು ಜಿಲ್ಲಾಧಿಕಾರಿಗಳು ಎಲ್ಲಾ ರೈತರ ಸಭೆ ಕರೆಯಲಾಗಿತ್ತು ಆ ಸಭೆಯಲ್ಲಿ ಕಾರ್ಖಾನೆಗಳು ಹಳೆ ಚಾಳಿ ಮುಂದುವರೆಸದಂತೆ ಎಚ್ಚರಿಕೆ ನೀಡಿ ರೈತರಿಗೆ ಸಾಥ್ ನೀಡಿದ್ದಾರೆ.
ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಜವಾಬ್ದಾರಿ ಹೊತ್ತುಕೊಳ್ಳಬೇಕು. ಹಿಂದೆ ಕಾರ್ಖಾನೆಗಳು ನೀಡಿದ ಬೆಲೆಗೆ ಅಣಿಯಾಗಬಾರದು. ರೈತರು ಕಷ್ಟದಿಂದ ಹೊರಬೇಕಾದರೆ ಕನಿಷ್ಠ ಮೂರುವರೆ ಸಾವಿರ ಬೆಲೆ ನೀಡಬೇಕು. ಆ ಬೆಲೆ ನಿಗದಿಯಾಗುವವರೆಗೂ ಕಬ್ಬು ಕಟಾವು ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ಉಪಾಧ್ಯಕ್ಷ ಮುತ್ತುಗೌಡ ಪಾಟೀಲ ಮಾತನಾಡಿ, ಸನ್ ೨೦೨೫-೨೬ನೇ ಸಾಲಿನಲ್ಲಿ ರೈತರ ಕಬ್ಬಿಗೆ ಬೆಂಬಲ ಬೆಲೆ ನೀಡಬೇಕು ಎಂದು ಇಡೀ ರಾಜ್ಯಾಧ್ಯಂತ ಹೋರಾಟ ನಡೆಯುತ್ತಿದ್ದು ಕಳೆದ ವರ್ಷ ಬರೀ ೨೮೦೦ ಬೆಲೆ ನೀಡಿದ್ದು ಇದನ್ನು ಸಕ್ಕರೆ ಸಚಿವ ಶಿವಾನಂದ ಪಾಟೀಲ, ಶಾಸಕ ಅಶೋಕ ಮನಗೂಳಿ ಅವರು ಕಾರ್ಖಾನೆ ಮಾಲೀಕರ ಜೊತೆ ಮಾತನಾಡಿ ರೈತರಿಗೆ ೩ ೫೦೦ ಬೆಲೆ ನೀಡುವಂತೆ ಮಾಡಿ ರೈತರ ಕಷ್ಠಕ್ಕೆ ಸಹಕಾರಿಯಾಗಬೇಕು ಎಂದು ಮನವಿ ಮಾಡಿದರು.
ತಾಲೂಕು ಸಂಚಾಲಕ ಧರ್ಮಣ್ಣ ಗಬಸಾವಳಗಿ ಮಾತನಾಡಿ, ರೈತರು ಅನೇಕ ವರ್ಷಗಳಿಂದ ಪ್ರಕೃತಿ ವಿಕೋಪಕ್ಕೆ ಸಿಲುಕಿ ಹಾನಿಯೊಳಗಾಗುತ್ತ ಬಂದಿದ್ದಾರೆ ಅಲ್ಲದೆ ಈ ಬಾರಿ ಅತಿವೃಷ್ಠಿಯಿಂದ ಎಲ್ಲ ಬೆಳೆಗಳು ಹಾನಿಯಾಗಿ ಸಂಕಷ್ಟ ದಲ್ಲಿ ಸಿಲುಕಿದ್ದಾರೆ. ಕಾರಣ ಸರಕಾರ ಮಧ್ಯೆ ಪ್ರವೇಶಿಸಿ ಕಾರ್ಖಾನೆ ಮಾಲೀಕರಿಗೆ ಸೂಚನೆ ನೀಡಿ ಕನಿಷ್ಠ ಮೂರುವರೆ ಸಾವಿರ ಬೆಲೆ ನೀಡುವಂತೆ ಸೂಚಿಸಬೇಕು ಎಂದು ಒತ್ತಾಯಿಸಿದರು.

