ಮೂಡಲಗಿ: ರಾಜ್ಯದಲ್ಲಿ ಈ ಸಲ ಬದಲಾವಣೆಯನ್ನು ಬಯಸಿದ್ದಾರೆ ಅದೇ ರೀತಿ ಅರಭಾವಿ ಕ್ಷೇತ್ರದಲ್ಲೂ ನೀವು ಬದಲಾವಣೆ ಮಾಡಲು ಮನಸ್ಸು ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಮೂಡಲಗಿಯ ಬಸವ ಮಂಟಪದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ನಾಲ್ಕು ವರ್ಷ ಬಿಜೆಪಿ ಸರ್ಕಾರ ಇತ್ತು. ಅವರದೇ ಸರ್ಕಾರ ಇದ್ದರೂ ಅರಭಾವಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ಆದ್ದರಿಂದ ಜನಪರ ಕಾಳಜಿ ಇರುವ ಅರವಿಂದ ದಳವಾಯಿಯವರನ್ನು ಈ ಸಲ ನೀವು ಆಯ್ಕೆ ಮಾಡಬೇಕು ಎಂದರು
೧೬೦ ಭರವಸೆಗಳಲ್ಲಿ ೧೫೮ ಭರವಸೆಗಳನ್ನು ಈಡೇರಿಸಿ, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಎಲ್ಲ ಬೇಡಿಕೆಗಳನ್ನು ನಾವು ಈಡೇರಿಸಿದ್ದೇವೆ. ಬಿಜೆಪಿಯವರು ಕೋಮುವಾದಿಗಳು, ಸಮಾಜದಲ್ಲಿ ಅಶಾಂತಿಯನ್ನು ನಿರ್ಮಿಸಿ ಆಳ್ವಿಕೆ ಮಾಡುವವರು, ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವವರು ಎಂದು ಟೀಕಿಸಿದ ಸಿದ್ಧರಾಮಯ್ಯ, ಮೋದಿಯವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಹಾಗೂ ಅಚ್ಛೇ ದಿನ್ ಆಯೇಂಗೆ ಎನ್ನುವ ನುಡಿಗಳನ್ನು ವಿಡಂಬನೆ ಮಾಡಿದರು.
ತಮ್ಮ ಸರ್ಕಾರದ ಎಲ್ಲ ಭಾಗ್ಯಗಳನ್ನು ನೆನಪಿಸಿದ ಸಿದ್ಧರಾಮಯ್ಯ ಬಿಜೆಪಿ ಸರ್ಕಾರ ಬಂದ ಮೇಲೆ ಈ ಎಲ್ಲ ಭಾಗ್ಯಗಳು ಮಾಯವಾಗಿವೆ ಎಂದರು. ಪ್ರವಾಹ, ಬರಗಾಲ ಬಂದು ಜನರು ಕಷ್ಟದಲ್ಲಿದ್ದರೂ ಬಿಜೆಪಿಗೆ ಕಾಳಜಿಯಿಲ್ಲ ಎಂದು ಹರಿಹಾಯ್ದರು.
ಅರಭಾವಿ ಕ್ಷೇತ್ರದ ಅಭ್ಯರ್ಥಿ ಅರವಿಂದ ದಳವಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಿದ್ಧರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕಾದರೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು.
ಕಾಂಗ್ರೆಸ್ ಪಕ್ಷದಿಂದ ನಾಲ್ಕು ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗಿದ್ದು ಇದಕ್ಕೆ ಯಾವುದೇ ಜಾತಿ ಭೇದ ಇಲ್ಲ, ಬಡವ ಬಲ್ಲಿದ ಎಂಬ ಭೇದ ಇಲ್ಲ. ಆದ್ದರಿಂದ ಅರಭಾವಿಯಿಂದ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಸಿದ್ಧರಾಮಯ್ಯ ಅವರ ಕೈ ಬಲಪಡಿಸಬೇಕು ಎಂದರು.
ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ಮೋದಿಯವರ ಒಂಬತ್ತು ವರ್ಷಗಳ ಅಧಿಕಾರದಲ್ಲಿ ತುಂಬಾ ಬೆಲೆ ಏರಿಕೆಯಾಗಿದೆ. ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಇದ್ದಾಗಲೂ ಇದೇ ಪರಿಸ್ಥಿತಿ ಇತ್ತು. ಸಿದ್ಧರಾಮಯ್ಯ ಸರ್ಕಾರ ಇದ್ದಾಗ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದರು ಎಂದರು.
ವೇದಿಕೆಯ ಎಸ ಆರ್ ಸೋನವಾಲಕರ, ಸುರೇಶ ಲಾತೂರ, ಅಶೋಕ ಪೂಜೇರಿ, ಪ್ರಕಾಶ ರಾಠೋಡ, ಅಮರಸಿಂಹ ಪಾಟೀಲ, ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರುಗಳು ಹಾಗೂ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.