spot_img
spot_img

ಕಾರ್ಯಕ್ಷಮತೆಯೇ ಸಾಧನೆಗೆ ಸೂಕ್ತ ಸಾಧನ

Must Read

ಒಂದು ರಸ್ತೆಯಲ್ಲಿ ಮೂವರು ಕಲ್ಲು ಕಟೆಯುತ್ತಿದ್ದರು. ನೀವೇಕೆ ಕಲ್ಲು ಕಟೆಯುತ್ತಿದ್ದೀರೆಂದು ಪ್ರಶ್ನಿಸಿದಾಗ ಮೊದಲನೆಯವ ‘ನನ್ನ ಹೊಟ್ಟೆ ಪಾಡಿಗೆ ಮಾಡುತ್ತಿದ್ದೇನೆ.’ ಎಂದ. ಮತ್ತೊಬ್ಬ ‘ಯಾವುದೇ ದೇವಸ್ಥಾನವಂತೆ ಅದಕ್ಕೆ ಕಟೆಯುತ್ತಿದ್ದೇನೆ.’ ಎಂದ.

ಮೂರನೆಯವನು ಈ ಊರಿನ ಜನರಿಗೆ ಧ್ಯಾನ ಮಾಡಲು ಮಂದಿರ ಕಟ್ಟಲ್ಪಡುತ್ತಿದೆ. ಅದರಲ್ಲಿ ನನ್ನದೂ ಪಾಲಿದೆಯೆಂಬುದು ನನಗೆ ಆನಂದ.’ ಎಂದ. ಈ ಪುಟ್ಟ ದೃಷ್ಟಾಂತದಲ್ಲಿ ವ್ಯಕ್ತಿತ್ವದ ಮೂರು ಮಜಲುಗಳು ಕಾಣಿಸುವುದಲ್ಲವೇ? ಹೌದು ಕೆಲಸದ ಪ್ರತಿ ನಮಗಿರುವ ಮನೋಭಾವ ನಮ್ಮ ಬದುಕನ್ನು ಸುಂದರಗೊಳಿಸುವ ಇಲ್ಲವೇ ಹಾಳು ಮಾಡುವ ಶಕ್ತಿಯನ್ನು ಹೊಂದಿದೆ. ಕೆಲಸವನ್ನು ನಿಷ್ಟೆಯಿಂದ ಮಾಡಿದರೆ ಬದುಕಿನ ಅನೇಕ ಸಂಗತಿಗಳು ಉತ್ತಮಗೊಳ್ಳುತ್ತವೆ. ನಾನು ಮಾಡುವ ಕೆಲಸ ಇತರರಿಗೆ ಸಂತೋಷ ಕೊಡಲಿ ಬಿಡಲಿ ಮೊದಲು ನಾನು ಅದಕ್ಕೆ ಶತಪ್ರತಿಶತವಾಗಿ ನನ್ನನ್ನೇ ನಾನು ಕೊಟ್ಟುಕೊಳ್ಳಬೇಕು ಎಂದುಕೊಂಡರೆ ಅದರ ಫಲ ಅತ್ಯದ್ಭುತ. ಕೆಲಸದ ನೈತಿಕತೆಯನ್ನು ಬೆಳೆಸಿಕೊಂಡರೆ ಕಾರ್ಯಕ್ಷತೆಯನ್ನು ಬಲಗೊಳಿಸಬಹುದೆಂಬುದು ನಮಗೆಲ್ಲ ಗೊತ್ತು. ಆದರೆ ಅದು ಹೇಗೆ ಬಲಗೊಳಿಸುವುದು ಎಂಬ ಪ್ರಶ್ನೆ ಕಾಡುತ್ತದೆ. ಉತ್ತಮ ಕೆಲಸದ ನೈತಿಕತೆಯನ್ನು ಅಳವಡಿಸಿಕೊಳ್ಳಲು ಇಲ್ಲವೆ ಕೆಲವು ಸಲಹೆಗಳು.

ಸಮಯಪಾಲನೆ:

ಕೆಲವರಿಗೆ ಬಾಗಿಲಿನಿಂದ ಹೊರಬರಲು ಕಷ್ಟವಾಗುತ್ತದೆ. ಕೆಲವು ನಿಮಿಷಗಳಲ್ಲಿ ಗಡಿಯಾರವನ್ನು ಮುಂದಕ್ಕೆ ಹೊಂದಿಸುವುದು ಬೇಗನೆ ಹೊರಡಲು ಸಹಾಯ ಮಾಡಬಹುದು. ಕೆಲಸಕ್ಕೆ ತಡವಾಗಿ ಹೋಗುವುದು ನೀವು ಕೆಲಸಕ್ಕೆ ಮೀಸಲಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಸಮಯಕ್ಕೆ ಸರಿಯಾಗಿ ಅಥವಾ ಮುಂಚಿತವಾಗಿ ಇರುವ ಅಭ್ಯಾಸವನ್ನು ಬೆಳಸಿಕೊಳ್ಳಿ ಇದು ನಿಮಗೆ ಕೆಲಸಕ್ಕೆ ಮಾನಸಿಕವಾಗಿ ಸಿದ್ಧರಾಗಲು ಅವಕಾಶ ನೀಡುತ್ತದೆ. ಅಂದಿನ ಕೆಲಸದ ಸಂಕ್ಷಿಪ್ತ ಟಿಪ್ಪಣಿ ಪರಿಶೀಲಿಸಲು ಸಾಧ್ಯವಾಗುವುದು. ಸಮಯ ಅಮೂಲ್ಯ ಮೌಲ್ಯ. ಅದನ್ನು ಬುದ್ಧಿವಂತಿಕೆಯಿಂದ ಬಳಸಿ.’ನೀವು ಇಂದು ಮಾಡಬಹುದಾದ ಕೆಲಸವನ್ನು ನಾಳೆಯವರೆಗೂ ಬಿಡಬೇಡಿ.’ ಎಂಬುದು ಬೆಂಜಮಿನ್ ಫ್ರಾಂಕ್ಲಿನ್ ಹೇಳಿದ ಮಾತು.ಸಮಯವು ಹಣವೆಂಬುದನ್ನು ಗಮನದಲ್ಲಿರಿಸಿ ಫ್ರಾಂಕ್ಲಿನ್ ಇದನ್ನು ನುಡಿದಿರಬಹುದು. ಕಾರ್ಯಗಳನ್ನು ಸಮಯೋಚಿತವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಿ.ಬಲವಾದ ಕೆಲಸದ ನೀತಿಯನ್ನು ಹೊಂದಿದ ಜನರು ತಮ್ಮ ಕೆಲಸವನ್ನು ಮುಂದೂಡುವುದಿಲ್ಲ.

ವೃತ್ತಿಪರತೆ:

ವೃತ್ತಿಪರತೆಯೆಂದರೆ ನೀವು ಧರಿಸುವ ಗರಿ ಗರಿಯಾದ ಬಿಳಿ ಶರ್ಟ್ ಹಾಗೂ ಟೈ ಅಲ್ಲ. ಅದನ್ನು ಮೀರಿದ ನಿಮ್ಮ ವರ್ತನೆ ಮೌಲ್ಯಗಳು ಮತ್ತು ನಡವಳಿಕೆಯನ್ನು ಒಳಗೊಂಡಿದೆ. ಸಕಾರಾತ್ಮಕವಾಗಿ ಮತ್ತು ಸೌಹಾರ್ದಯುತವಾಗಿರಲು ಪ್ರಯತ್ನ ಪಡಿ. ಇತರರನ್ನು ಗೌರವದಿಂದ ಕಾಣಿ. ನೀವು ಹೇಳುವ ಮತ್ತು ಮಾಡುವ ಕೆಲಸಗಳಲ್ಲಿ ಪ್ರಾಮಾಣಿಕ ನ್ಯಾಯಯುತ ಮತ್ತು ಸ್ಥಿರವಾಗಿರಿ. ಇದರಿಂದ ಸಮಗ್ರತೆಯ ಖ್ಯಾತಿ ಖಂಡಿತ. ಪ್ರಪಂಚದ ದೊಡ್ಡ ಶ್ರೀಮಂತರಲ್ಲೊಬ್ಬರಾದ ಬಿಲ್ ಗೇಟ್ಸ್ ಡಾಲರ್ ಮೊತ್ತದ ಒಡೆಯರಾಗಿದ್ದು ವೃತ್ತಿಪರತೆಯಿಂದ. ಕರ್ತವ್ಯಲೋಪವನ್ನು ಹೊಂದಿದ್ದರೆ ಇಂತಹ ದೊಡ್ಡ ಹಂತವನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲ.

ಸ್ವಯಂ ಶಿಸ್ತು:

ಯಾವುದೇ ಮೌಲ್ಯಯುತವಾದುದನ್ನು ಸಾಧಿಸಬೇಕೆಂದರೆ ಅದು ಶಿಸ್ತನ್ನು ಬೇಡುತ್ತದೆ.ದೀರ್ಘಾವಧಿಯ ಗುರಿಯ ಮೇಲೆ ಕೇಂದ್ರೀಕರಿಸಬೇಕು. ಅಲ್ಪಾವಧಿಯ ತೃಪ್ತಿಯಿಂದ ಅಡ್ಡ ದಾರಿ ಹಿಡಿದರೆ ಹಳ್ಳಕ್ಕೆ ಬಿದ್ದಂತೆಯೇ ಸರಿ. ನಿರಂತರವಾಗಿರಲು ಮತ್ತು ಯೋಜನೆಗಳನ್ನು ಅನುಸರಿಸಲು ಸ್ವಯಂ ಶಿಸ್ತು ಅಳವಡಿಸಿಕೊಳ್ಳಿ. ನಿಮ್ಮನ್ನು ನೀವು ಶಿಸ್ತಿನಿಂದ ತರಬೇತುಗೊಳಿಸಿ ಕಾರ್ಯಗಳಲ್ಲಿ ಶ್ರೇಷ್ಠತೆಗಾಗಿ ಶ್ರಮಿಸಿ. ಮೇರಿ ಕ್ಯೂರಿ ತನ್ನೆಲ್ಲ ನೋವುಗಳ ನಡುವೆಯೂ ಸ್ವಯಂ ಶಿಸ್ತಿನಿಂದ ವೈಜ್ಞಾನಿಕ ಸಂಗತಿಗಳನ್ನು ಆವಿಷ್ಕಾರಗೊಳಿಸುತ್ತಲೇ ಹೋದಳು.ಎರಡು ಸಲ ನೋಬೆಲ್ ಪ್ರಶಸ್ತಿಗೆ ಭಾಜನಳಾದಳು.

ಸಮತೋಲಿತವಾಗಿರಿ:

ಆರೋಗ್ಯಕರ ಕೆಲಸದ ಜೀವನವನ್ನು ಸೃಷ್ಟಿಸುವುದು ಮುಖ್ಯವಾಗಿದೆ. ಅತಿಯಾದ ಕೆಲಸ ಮಾಡುವುದರಿಂದ ವಿಪರೀತವಾಗಬಹುದು ಮತ್ತು ಕೆಲಸವನ್ನು ಗೊಂದಲಗೊಳಿಸಬಹುದು. ಉತ್ತಮ ಕೆಲಸದ ನೀತಿಯನ್ನು ಹೊಂದಿರುವುದು ಎಂದರೆ ನಿಮ್ಮ ಕಣ್ಣುಗಳನ್ನು ಕಂಪ್ಯೂಟರ್ ಮಾನಿಟರ್‍ಗೆ ಅಂಟಿಸುವುದು ಎಂದರ್ಥವಲ್ಲ. ನಿಮ್ಮನ್ನು ನೀವು ಹೇಗೆ ನೋಡಿಕೊಳ್ಳಬೇಕೆಂಬುದನ್ನು ಒಳಗೊಂಡಿದೆ. ಸಮತೋಲಿತ ಆಹಾರ ಸೇವನೆ, ವ್ಯಾಯಾಮ, ವಿಶ್ರಾಂತಿ, ರಿಚಾರ್ಜ್ ಮಾಡಲು ಸರಿಯಾದ ನಿದ್ರೆ ಬೇಕು. ಆದ್ಯತೆಗಳನ್ನು ಸ್ಪಷ್ಟವಾಗಿ ಇಟ್ಟುಕೊಳ್ಳುವುದು ಕೆಲಸದಲ್ಲಿ ಸರಿಯಾದ ದೃಷ್ಟಿಕೋನವನ್ನು ಕಾಪಾಡಿಕೊಳ್ಳಲು ಸಹಕಾರಿ. ಮಾಯಾ ಎಂಜೆಲೋ ಹೇಳಿದರು ‘ನೀವು ಮಾಡದ ಹೊರತು ಏನೂ ಕೆಲಸವನ್ನು ಮಾಡಲಾಗುವುದಿಲ್ಲ..’ ಕೆಲಸದ ನೈತಿಕತೆಯು ಸ್ವಯಂಚಾಲಿತರಾಗಲು ಪ್ರೇರೇಪಿಸುತ್ತದೆ. ಸಮತೋಲಿತ ವ್ಯಕ್ತಿತ್ವವನ್ನು ಹೊಂದಿದ ಮದರ್ ಥೆರೆಸಾ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು.ಅವರು ಕೇಳದಿದ್ದರೂ ಭಾರತ ರತ್ನ ನೋಬೆಲ್ ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂದವು.

ಅಭ್ಯಾಸಗಳನ್ನು ನಿರ್ಮಿಸಿ:

‘ಈಗಲೇ ಮಾಡು.’ ಮತ್ತು ‘ಸರಿಯಾಗಿ ಮಾಡು.’ ಎನ್ನುವುದು ವಿಶ್ವಾಸಾರ್ಹ ಕೆಲಸದ ನೀತಿಯನ್ನು ನಿರ್ಮಿಸುವಲ್ಲಿ ಪ್ರಮುಖ ಅಭ್ಯಾಸವಾಗಿದೆ. ಅಲ್ಪಾವಧಿಯ ಕೆಲಸದ ನಂತರ ಬೇಗನೆ ಬೇಸರಿಸಿದರೆ ನಿರಂತರತೆಯ ಕೊರತೆ ಕಾಡುತ್ತದೆ. ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸವನ್ನು ಸುಲಭಗೊಳಿಸುವ ವಿಧಾನ ಕಂಡುಕೊಳ್ಳಿ. ನೀವು ಎಷ್ಟು ಸಮಯದವರೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು ಎಂಬುದನ್ನು ಲೆಕ್ಕಾಚಾರ ಮಾಡಿ. ಹೊರಗಿನ ಎಲ್ಲ ಗಳನ್ನು ದೂರವಿರಿಸಿ ‘ಈಗ ಮಾಡು.’ ಅಭ್ಯಾಸವನ್ನು ರೂಪಿಸಿ. ಕೆಲಸವನ್ನು ಕಷ್ಟಪಟ್ಟು ಮಾಡಿದರೆ ಅದು ಭಾರವೆನಿಸುವುದು. ಇಷ್ಟಪಟ್ಟು ಮಾಡಿದರೆ ಇತಿಹಾಸದಲ್ಲಿ ಮಿಂಚುವ ನಾಯಕರಂತೆ ಮೈಲಿಗಲ್ಲುಗಳನ್ನು ನಿರ್ಮಿಸಬಲ್ಲಿರಿ.


ಜಯಶ್ರೀ ಅಬ್ಬಿಗೇರಿ, ಬೆಳಗಾವಿ
9449234142

- Advertisement -
- Advertisement -

Latest News

ಮಣ್ಣು ಉಳಿಸಿ ಹೋರಾಟಕ್ಕೆ ಬೆಂಬಲ ನೀಡೋಣ – ಅಶೋಕ ಅಲ್ಲಾಪೂರ

ಸಿಂದಗಿ - ಜಗತ್ತಿನ ಜೀವ ಸಂಕುಲಕ್ಕೆ ಆಶ್ರಯವಾದ ಭೂಮಿಯನ್ನು ಮತ್ತು ಮಣ್ಣನ್ನು ಉಳಿಸಿ ಮುಂದಿನ ಜನಾಂಗಕ್ಕೆ ಫಲವತ್ತಾದ ಭೂಮಿ ನೀಡಲು ಶ್ರೀ ಸದ್ಗುರು ಜಗ್ಗಿ ವಾಸುದೇವ್...
- Advertisement -

More Articles Like This

- Advertisement -
close
error: Content is protected !!