ಮಾಗಿಯ ಚಳಿ
ಚಳಿ ಎಂದರೆ ರತಿ ಸುಖದ ಸಮೃದ್ಧ ಕಾಲವಲ್ಲ,
ಕಾಯ್ದಿರುವ ಧರೆಯನ್ನರಸಿದ ಸುಸಂಸ್ಕೃತದ ಸಂಭ್ರಮ
ಬಿಚ್ಚಿದ ದೇಹಗಳೆಲ್ಲ ಮುಚ್ಚಿಕೊಂಡು ಕೂಡ್ರಿಸುವ ಸಂಪ್ರದಾಯದ ಸೊಗಸು
ಮಾಘ ಮಾಸದ
ನಡುಗುವ ಚಳಿಯಲಿ
ವೃಕ್ಷದಿಂದ ದೂರಾದ ಬೀಜದಂತೆ
ಇನಿಯಳ ನೆನಪಲಿ
ಸುತ್ತಿದ ಕತ್ತಲ ಬೀಗಲು
ಹೊಕ್ಕ ಹಾಸಿಗೆಲಿ ಅನಂತವಾಗಲು
ಕೊರೆಯುವ ಚಳಿ ಕಾಲವಾಯಿತು
ಆನಂದದ ರಸಗಂಗೆಯಲಿ ತೇಲಾಡುವ ಮನಗಳು
ವಿಶ್ವಾಮಿತ್ರನಾದರೂ
ರಸ ವಿರಸಕ್ಕೆ ತಿರುಗಿ
ದುಂಬಿಯ ಮನಕೆ
ಜೇನಾಗುವುದು
ಮಿಲನದಲ್ಲಿ ಎಲ್ಲಿ ಯೋಗ, ಯೋಗ್ಯ?
ತಂಪಾದ ಮಾರುತಗಳು
ಕಾಯ ಸೋಕಿ
ಜೀವ ಹಿಂಡುತಿವೆ
ಈ ಇರುಳ ಹೊತ್ತಲಿ
ನಲ್ಲೆಯ ಬಳಿ ದಾಸನಾಗಿ ದೀನನಾದರೆ ಸ್ವರ್ಗ ಕಾಲಡಿಯಲಿ ಬೀಳಲಾರದೇ?
ಥಂಡಿಗಾಲದ
ಬೆಚ್ಚನೆಯ ಅಮೃತವನ್ನು ದೂರೀಕರಿಸುವನೊಬ್ಬ
ವಿರಾಗಿ
ಬದುಕಿನ ಸುಂದರ
ಕ್ಷಣದ ಚಳಿಗಾಲದಲಿ
ಜೀವ ಜೀವಗಳು ಬೆಸೆದು ನಲ್ಲ-ನಲ್ಲೆಯರ ಸಮಾಗಮದ
ಸಮಾಧಿ ಸ್ಥಿತಿಯೇ ಸ್ವರ್ಗ!
ಇನಿಯನ ಇಂಚರವ ಕೇಳುತ ಮನದ ಉಯ್ಯಾಲೆ ತೂಗಲು
ಸೌಂದರ್ಯದ ಮೇನಕೆ
ರಜನಿಯ ಕೈದೀಪ ನಲ್ಲೆ
ಸುಖದ ಹೊದಿಕೆಯಲ್ಲಿ
ರಸಗಳ ಉದ್ಭವವೇ
ಆನಂದದ ಬೆಳಕು ಸೂಸಲು
ಚಳಿ ತಂಪು ತಾವರೆಯಾಯಿತು
ಶಿವಕುಮಾರ ಕೋಡಿಹಾಳ, ಮೂಡಲಗಿ