ಚಿನ್ನ
ಚಿನ್ನದ ದರ ಆಡುತ್ತಿದೆ ತೂಗುಯ್ಯಾಲೆ
ಇಳಿದು ಮತ್ತೆ ಏರಿ..!
ಏರಿದಾಗ ಕೊಡಿಸಲು ಮುನಿಸು
ಇಳಿದಾಗ ಬಾರದು ಮನಸು
ಅಯ್ಯೋ ನೋಡಲಾಗದು ಮಡದಿಯ ಮಾರಿ
ಅದಕೇ ರಮಿಸಿದೆ ಭ್ರಮಿಸಿದೆ
ಇಷ್ಟಕ್ಕೇ ಮುನಿಸೇ ಚಿನ್ನ
ಬೆಳ್ಳಿ ಬಂಗಾರವೆಲ್ಲ ಏನು ಚೆನ್ನ..?!
ನೀನೇ ಅಲ್ಲವೇ ನನ್ನ ಚಿನ್ನ ರನ್ನ..!!
ಅಂದವೊಡನೆ ನಕ್ಕು
ಗೊತ್ತು ಗೊತ್ತು ನಿಮ್ಮ ಹುಸಿ ಮಾತು
ಕೇಳಿ ಕೇಳಿ ಕಿವಿಯಾಗಿದೆ ತೂತು
ನಿಮ್ಮ ಮಾತು ವರ್ಣನೆ ಬರೀ ಕೇಳೋಕಷ್ಟೇ ಚೆನ್ನ
ಅದಕೇ ದಿನವೂ ಹಾಕಿ ನಿಮ್ಮ ಜೇಬಿಗೆ ಕನ್ನ
ಕೂಡಿಸಿರುವೆ ನಾ ಕೊಂಚ ಹಣವನ್ನ
ಇನ್ನು ಬಿಟ್ಟು ಬಿಡಿ ನೀವು ಇದರ ಚಿಂತೆಯನ್ನ
ಅದರಿಂದಲೇ ಮಾಡಿಸಿಕೊಳ್ಳುವೆ ತುಸು ಒಡವೆಯನ್ನ..!
ಅವಳ ಮಾತು ಕೇಳಿ ನನಗೋ ಗಾಬರಿ ಹೋದೆ ಹೌಹಾರಿ
ಆದರೂ ತಂದುಕೊಂಡೆ ಮನಸ್ಸಿಗೆ ಸಮಾಧಾನ
ಅಂತೂ ಜೇಬಿಗೇ ಹಾಕಿದರೂ ಕನ್ನ
ಹಗುರ ಮಾಡಿದಳಲ್ಲ ಮನಸಿನ ಭಾರಾನ
ಅಂದುಕೊಂಡು ಖುಷಿಯಿಂದಲೇ ಅವಳಿಗೆಂದೆ
ನಡಿ ಈಗಲೇ ಅಂಗಡಿಗೆ ಹೋಗೋಣ
ನಿನಗೇನು ಬೇಕೋ ಅದನ್ನ ತರೋಣ
ತಕ್ಷಣ ಅವಳೆಂದಳು
ಐದೇ ನಿಮಿಷದಲ್ಲಿ ಆಗುವೆ ತಯಾರಿ
ಹೋಗಿಬಿಡುವ ಹಾರಿ
ಹಾಂ ಮರೆತಿದ್ದೆ ಹೇಳುವುದು ಒಂದು ಮಾತನ್ನ
ಹೇಗಾದರೂ ಇರಲಿ
ಜೊತೆಗೆ ತೆಗೆದಿಟ್ಟುಕೊಂಡಿರಿ
ನಿಮ್ಮ ಎಟಿಎಂ ಕಾರ್ಡನ್ನ..!!
ಆರ್. ಸುನೀಲ್, ತರೀಕೆರೆ, ಚಿಕ್ಕಮಗಳೂರು