ದೇವರಿಗೊಂದು ಮನವಿ
ಮರೆಯುವ ಶಕ್ತಿ ಕೊಡು ದೇವರೇ ಎಲ್ಲವನ್ನೂ ಮರೆತು ಸುಮ್ಮನಿದ್ದು ಬಿಡುವೆ. ನಾನು, ನನ್ನಿಂದಲೆ ಎಲ್ಲ ಎಂದು ಮೆರೆಯುವದನ್ನು,ಎಲ್ಲರೂ ನನ್ನವರೆಂದು ಸುಖಾ ಸುಮ್ಮನೇ ನಾನು ಕಂಡವರ ಜೊತೆಗೆ ಬೆರೆಯುವದನ್ನು…
ಮರೆಯುವ ಶಕ್ತಿ ಕೊಡು ದೇವರೇ ನನಗೆ ಆಗಾಗ ಆದ ಕೇಡನ್ನು
ಮುಷ್ಟಿ ಗಾತ್ರದ ಎದೆಗೆ ನೀನು ಮೊಗೆ ಮೊಗೆದು ಕೊಟ್ಟ ನೋವನ್ನು…
ಅಷ್ಟೇ ಅಲ್ಲ ಆಗಾಗ ಅಲ್ಲಲ್ಲಿ ನನ್ನ ಶಕ್ತಿ ಮೀರಿ ನಾನು ಮಾಡಿರುವ ಒಳಿತನ್ನೂ…
ಮರೆಯುವ ಶಕ್ತಿ ಕೊಡು ದೇವರೇ.ಸ್ವಾರ್ಥ, ತೀರ್ಥ, ವಿನಾಕಾರಣದ ಜಗಳ,ಹುಸಿ ಮುನಿಸು,ಕೆಟ್ಟ ಕೋಪ,ಯಾವ ಕಾರಣಕ್ಕೋ ನನ್ನ ಆತ್ಮಕ್ಕೆ ಆದ ತಾಪ…
ಎಲ್ಲವನ್ನೂ ಮರೆಯಬೇಕಿದೆ
ಹಳೆಯ ನೆನಪುಗಳು ಕಾಡಿ ನೋಯಿಸಿದ್ದನ್ನು,ಹುಟ್ಟಿದ ಪ್ರೀತಿಯನ್ನು ಯಾರೋ ಸಾಯಿಸಿದ್ದನ್ನು,ಮರೆಯಬೇಕಿರುವದು ಬಹಳ ಇದೆ.
ಮರೆಯುವ ಶಕ್ತಿ ಕೊಡು ದೇವರೇ
ನಾನು ಮಾಡಿದ ಉಪಕಾರವನ್ನು,
ಅಪಾತ್ರರು ಯಾರಿಗೋ ನಾ
ತೋರಿದ ಪ್ರೀತಿಯನ್ನು, ಅಷ್ಟೇ ಯಾಕೆ ನನ್ನ ಎದೆಗೆ ಇರಿದವರ ಮುಖಗಳನ್ನೂ….
ಮರೆಯುವ ಶಕ್ತಿ ಕೊಡು ದೇವರೇ ನನ್ನ ನಂಬಿಸಿ ವಂಚಿಸಿದವರನ್ನು,
ಮತ್ತು ನನ್ನನ್ನೆ ನಂಬಿ ಏನನ್ನೊ ಬಯಸಿ ಬಸವಳಿದು ಬಂದವರನ್ನು,ನನ್ನ ಖಾಲಿ ಕೈಗಳ ನೋಡಿ ಒಳ ತುಮುಲಗಳ ಹೇಳದೆ ಎದ್ದು ಹೋದವರನ್ನು…
ಮರೆಯುವ ಶಕ್ತಿ ಕೊಡು ದೇವರೇ
ಬೆಳಿಗ್ಗೆ ಅಷ್ಟೇ ಅರಳಿ,ಸುವಾಸನೆಯ ಬೀರಿ ನಿನ್ನ ಮುಡಿಗೆ ಏರದೆ ಮಸಣದ ಮಗ್ಗುಲಿಗೂ ಹೊರಳದೆ
ಬಾಡಿದ ಕುಸುಮಗಳನ್ನು
ಮರೆಯುವ ಶಕ್ತಿ ಕೊಡು ದೇವರೇ
ಕೊಟ್ಟಂತೆ ಮಾಡಿ ನೀನು ಕಿತ್ತುಕೊಂಡ ಹಲವರ ಬದುಕಿನ ಸುಖಗಳನ್ನು.ಮತ್ಯಾರದೋ ಹಣೆಯಲ್ಲಿ ನೀನು ಬರೆದಿರುವದನು ನೋಡಿ ವಿಧಿ ತನ್ನ ಅಟ್ಟಹಾಸ ಮೆರೆಯುವದನ್ನು…
ಮರೆಯುವ ಶಕ್ತಿ ಕೊಡು ದೇವರೇ
ಮಕ್ಕಳ ಕಳೆದುಕೊಂಡವರ ಪುತ್ರಶೋಕವನ್ನು,ಹಸಿದ ಹೊಟ್ಟೆಗೆ ಈಗಷ್ಟೇ ತಣ್ಣೀರ ಬಟ್ಟೆಯ ಕಟ್ಟೆ ನಿದ್ದೆಗೆ ಜಾರ ಹೊರಟವರು ತಮಗಾದ ಹಸಿವನ್ನು ಮತ್ತೆ ಮತ್ತೆ ನೆನೆಯುವದನ್ನು…
ಮರೆಯುವ ಶಕ್ತಿ ಕೊಡು ದೇವರೇ
ಅಮ್ಮನಿಲ್ಲದ ತಬ್ಬಲಿ ಕಂದಮ್ಮಗಳು ಅವಳಿಗಾಗಿ ಅಳುವದನ್ನು,ವಿಧವೆಯೊಬ್ಬಳು ತನ್ನ ಗತಕಾಲವ ನೆನೆದು ಕಣ್ಣೀರು ಸುರಿಸುವದನ್ನು,
ಮರೆಯುವ ಶಕ್ತಿ ಕೊಡು ದೇವರೇ ವೃದ್ಧಾಶ್ರಮದಲ್ಲಿ
ಇರುವ ಎಲೆ ಉದುರಿದ ಮರಗಳು ಎಂದೋ ಹಕ್ಕಿಗಳ ನೆನಪು ತೆಗೆದು ಬಿಕ್ಕುವದನ್ನು.
ಮರೆಯುವ ಶಕ್ತಿ ಕೊಡು ದೇವರೇ
ಮಕ್ಕಳ ಹೆತ್ತವರು ಹಂಗಿಸಿದಾಗೆಲ್ಲ
ಕಣ್ಣ ನೀರಿನ ಬದಲು ನೆತ್ತರನ್ನೇ ಹರಿಸಿ ಬಂಜೆಯೊಬ್ಬಳು ಖಾಲಿ ತೊಟ್ಟಿಲ ತೂಗುವದನ್ನು.
ವೇಶ್ಯೆಯೊಬ್ಬಳು ಸಿಕ್ಕ ಹೆಣ್ಣುಮಗುವಿನ ಚುಕ್ಕು ತಟ್ಟಿ
ತನ್ನ ಕಡೆಗಾಲದ ಆಸರೆ ಎಂದು ಅದಕ್ಕೆ
ಲಾಲಿ ಹಾಡುವದನ್ನು.
ಸಾಧ್ಯವಾದರೆ ನೆನಪಿಸಿ ಬಿಡು ಅಬಲೆ,ಅಮಾಯಕ,ಅಪ್ರಾಪ್ತ ಜೀವಗಳ ಮೇಲೆ ಎರಗಲು ಹೊರಟ ಕಾಮಾಂಧರಿಗೆ ಅವರ ಹೆತ್ತ ತಾಯಿ ಇಂತ ಕಾಮ ಪೀಪಾಸುಗಳ ಹೆರುವಾಗ ಜೀವನ್ಮರಣದ ಮಧ್ಯೆ ನರಳಿರುವದನ್ನು.
ಮರೆಯುವ ಶಕ್ತಿ ಕೊಡು ದೇವರೇ…
ಕಾದ ಕುಲುಮೆಗೆ ಬಿದ್ದ ಕತ್ತಿ,ಚೂರಿ,ಹತಿಯಾರುಗಳಷ್ಟೇ ಅಲ್ಲ ಬಂದೂಕಿನ ನಳಿಕೆಯಿಂದ ಹೊರಟ ಗುಂಡು ಕಾಡ ತೂಸುಗಳು ತಮ್ಮ ಗುರಿಯ ತಲುಪುವದನ್ನು…
ತಂತಿ ಬೇಲಿಗಳ ಹಾಕಿ ಗಡಿ ಸರಹದ್ದುಗಳ ಮಾಡಿದ ಮನುಷ್ಯ, ಮನುಷ್ಯ ರೂಪಗಳ ನೋಡಿ ದ್ವೇಷ ಕಾರುವದನ್ನು.
ದೀಪಕ ಶಿಂಧೇ
9482766018