- Advertisement -
ಹುಡುಕುತ್ತಿದ್ದೇನೆ
ಹುಡುಕುತ್ತಿದ್ದೇನೆ
ಶರಣರು ಕಂಡ ಕಲ್ಯಾಣ
ಹೊಸ ನೆಲ ಜಲ ಆಕಾಶ
ಗಾಳಿ ಬೆಳಕು ಸಿಗುತ್ತಿಲ್ಲ
ಸಿಕ್ಕರೂ
ಹೊಸ ಮನುಜರ
ಗುರುತು ಸಿಗುತ್ತಿಲ್ಲ
ಶರಣರ ರುಂಡ ಚೆಂಡಾಡಿದ
ಖಡ್ಗ ಕಠಾರಿ ಚೂರಿ
ಸಿಕ್ಕರೂ ಕೊಲೆಗಾರರ
ಗುರುತು ಸಿಗುತ್ತಿಲ್ಲ
ವಚನಗಳಿಗೆ ಕಿಚ್ಚು
ಹಚ್ಚಿದ ಹಿಲಾಲು
ದೀವಿಗೆ ಸಿಕ್ಕಿವೆ,
ಕಟ್ಟುಗಳ ಕೆಂಡಕ್ಕೆ
ಸುರುವಿದ ಮುಖಗಳು
ಸಿಗುತ್ತಿಲ್ಲ
ಅಣ್ಣ ಸಿಗಬಹುದೆಂದು
ಹುಡುಕುತ್ತಿದ್ದೇನೆ ಕಲ್ಯಾಣವ
ದೇವರ ಸಿಕ್ಕರೂ
ಸಿಗಲಿಲ್ಲ ಬಸವಣ್ಣ
ಅವರು ಕೊಡುವ
ಪ್ರಸಾದ ಬೊನಕ್ಕೆ
ತಟ್ಟೆಯೊಡ್ಡಿದೆ
ಹುಗ್ಗಿ ಹೋಳಿಗೆ ಸಿಕ್ಕಿತು
ಸಿಗಲಿಲ್ಲ ಪ್ರಸನ್ನತೆ
ಬಸವಣ್ಣನವರ ಕೊಂದವರೇ
ಇಂದು ಅವನ ಪುರಾಣ
ಪ್ರವಚನ ಮಾಡಿ
ಹಾಡಿ ಹೊಗಳುವ ಕಾವಿ
ಮಠಗಳು ಸಿಕ್ಕಿವೆ.
ದಾರಿಯುದ್ದಕ್ಕೂ
ಬಿಕ್ಕುವ ಧ್ವನಿ ಅಳುವ ಮಕ್ಕಳು
ಎಳೆಹೂಟಿಗೆ ಸಿಲುಕಿದ
ರಕ್ತದ ಕಲೆಗಳು ಸಿಕ್ಕಿವೆ
ಹುಡುಕುತ್ತೀದ್ದೇನೆ
ಕಲ್ಯಾಣ ಅನುಭವ ಮಂಟಪ
ಬಸವನ ಮಹಾಮನೆ
–
*ಡಾ ಶಶಿಕಾಂತ ಪಟ್ಟಣ ರಾಮದುರ್ಗ*