ಕವನ : ಯಾರವಳು ?

0
91

ಯಾರವಳು ?

ಯಾರವಳು ಯಾರವಳು
ಯಾರವಳು ಯಾರು‌ ?
ಬಾಗಿಲಲಿ‌ ನಿಂದವಳು
ಬಂದವಳು ಯಾರು ?

ಹೊಸ್ತಿಲಲಿ ಸೇರಕ್ಕಿ
ಚೆಲ್ಲಿದವಳಾರು ?
ಮನೆಯಲ್ಲಿ‌ ನಗೆಬೆಳಕ
ತುಂಬಿದವಳಾರು ?

ಯಾರವಳು ಯಾರವಳು
ಯಾರವಳು ಯಾರು‌ ?

ರೂಪಲಾವಣ್ಯದಲಿ
ವನಪುವಯ್ಯಾರದಲಿ
ದೇವತಾಸ್ತ್ರೀಯಂತೆ
ಬಳುಕಿದವಳಾರು ?

ಯಾರವಳು ಯಾರವಳು
ಯಾರವಳು ಯಾರು‌ ?

ಮೃದುಮಧುರ ಮಾತಿನಲಿ
ಮೂಲೋಕವನೆ ತೋರಿ
ಮೂಕನಾಗಿಸಿ ಮನವ
ತಣಿಸಿದವಳಾರು ?

ಯಾರವಳು ಯಾರವಳು
ಯಾರವಳು ಯಾರು‌ ?

ನನ್ನೆದೆಯ ಚಪ್ಪರಕೆ
ಲತೆಯಾಗಿ ಹಬ್ಬುತಲಿ
ಚೆಲುವಾದ ಹೂವುಗಳ
ನೀಡಿದವಳಾರು ?

ಯಾರವಳು ಯಾರವಳು
ಯಾರವಳು ಯಾರು‌ ?

ಬೆಳ್ಳಿ ಬಟ್ಟಲು ಲೋಟ
ತೂಗು ತೊಟ್ಟಿಲು ತಂದು
ನನ್ನ ಮನೆಯನು ತುಂಬಿ
ತುಳುಕಿದವಳಾರು ?

ಯಾರವಳು ಯಾರವಳು
ಯಾರವಳು ಯಾರು‌ ?

ಹುಟ್ಟಿದ್ದ ಮನೆಯಿಂದ
ಕೊಟ್ಟಿರುವ ಮನೆವರೆಗೆ
ತೂಗು ಸೇತುವೆಯಾಗಿ
ನಿಂದವಳು ಯಾರು ?

ಯಾರವಳು ಯಾರವಳು
ಯಾರವಳು ಯಾರು ?
ಭಾಗ್ಯವನು ತಂದವಳು
ನಿಂದವಳು ಪಾರು !

ಎನ್.ಶರಣಪ್ಪ ಮೆಟ್ರಿ