ಪೆಹಲ್ಗಾಮ್ ನಿಂದ ಕುದಿವ ರಕ್ತದವರೆಗೆ
ಒಂದೊಮ್ಮೆ ನಾನು ಕಾಶ್ಮೀರಕ್ಕೆ ಹೋಗಿದ್ದರೆ
ಬಂದೂಕು ಹಿಡಿದು ಬಂದ ಸೈತಾನರು ನನ್ನ ಧರ್ಮ ಕೇಳಿದರೆ ಅವರಿಗೆ ಏನೆಂದು ಹೇಳಲಿ.?
ಧರ್ಮದ ಹೆಸರಲ್ಲೇ ನಮ್ಮನ್ನು ಒಡೆದು ಆಳಲು ಹೊರಟವರು
ಬದುಕುಳಿದು ಬಂದವನ ನಿಲ್ಲಿಸಿ
ಅಲ್ಲಿನ ಅನುಭವ ಕೇಳಿದರೆ ಏನೆಂದು ಹೇಳಲಿ?
ನನ್ನದೇ ಸೋದರಿಯೊಬ್ಬಳು ನೆಲಕ್ಕುರುಳಿದ
ಗಂಡನ ಉಸಿರುನಿಂತ ದೇಹದ ಎದುರು
ತನ್ನ ಹೃದಯ ಒಡೆದು ಬಿಕ್ಕಿ ರೋಧಿಸುವಾಗ
ದೇಶದ ಮುಕುಟದಲ್ಲಿ ಹಾರಿದ ಗುಂಡಿನ ಸದ್ದಿಗೆ ಮಗುವೊಂದು
ಭಯಗೊಂಡು ಬಿಕ್ಕಳಿಸಿ ಅಳುವಾಗ
ಏನೆಂದು ಸಂತೈಸಲಿ?
ಧರ್ಮದ ಹೆಸರಿನಲ್ಲಿ ಅಧರ್ಮದ ಹಾದಿ ತುಳಿದು
ನೆತ್ತರ ಸುರಿಸಿದ ರಕ್ಕಸರಿಗೆ ಏನೆಂದು ಶಪಿಸಲಿ.
ಭದ್ರತಾ ಲೋಪ ಎಂದು ಯಾರದೋ ತಲೆಗೆ ಕಟ್ಟಿ ಮೌನಕ್ಕೆ ಜಾರಲೇ? ಉಳಿದವರಂತೆ ತಲೆಗೆ ತಲೆಯೇ ದಂಡವಾಗಲಿ ಎಂದು ಒಂದಷ್ಟು ದಿನ ಹೂಂ ಕರಿಸಿ
ಮತ್ತೆ ಮೌನಕ್ಕೆ ಜಾರಲೇ?
ಗಾಯಾಳು ಹುಡುಗನ ಹೊತ್ತು ಕಣಿವೆಯಲ್ಲಿ
ಇಳಿದು ಏರುತ್ತ ಓಡೋಡಿ ಬಂದವನಿಗೆ
ಧನ್ಯವಾದಗಳನ್ನಾದರೂ ಹೇಗೆ ತಿಳಿಸಲಿ.
ಸಾವಿರಾರು ಕೋಟಿ ಆದಾಯ ತರುವ
ಪ್ರವಾಸಿ ತಾಣದಲ್ಲಿ ಪ್ರವಾಸಿಗರಿಗೆ ರಕ್ಷಣೆ ಇಲ್ಲವೇ
ಅಂತ ವಿದೇಶಿ ಗೆಳೆಯರು ಕೇಳುವ ಪ್ರಶ್ನೆಗೆ ಏನೆಂದು ಉತ್ತರಿಸಲಿ?
ರಕ್ತದ ಕೋಡಿ ಹರಿಸಿದ ಪಾಪಿಗಳ ನೆತ್ತರ
ಹರಿಸಿಯೇ ಉತ್ತರ ಕೊಡಿ ಎಂದು ಬಂದೂಕು ಹಿಡಿದ ಸೈನಿಕರಿಗೆ ಹೇಗೆ ಹುರಿದುಂಬಿಸಲಿ.
ಯಾವುದಕ್ಕೂ ಒಂದಷ್ಟು ತಯಾರಿ ಇದ್ದೇ ಇರುತ್ತದೆ ಇಲ್ಲಿ
ದೇವಮಾನವರ ಹೆಸರಲ್ಲಿ ವಂಚಿಸಲು ಹೊರಟವರ
ಆತ್ಮಗಳಿಗೆ ನನ್ನನ್ನೂ ಕೊಂದು ಬಿಡಿ ಎಂದು ಕೈ ಮುಗಿದಳಂತೆ ತಾಯಿ.
ರಕ್ತ ಮೆತ್ತಿದ ಕೈಗಳಲ್ಲಿ ಬಂದೂಕು ಹೊತ್ತ ಮನುಷ್ಯ ರೂಪದ ರಕ್ಕಸರ ಎದುರು ಹೇಗೆ ನಾನು ಕರುಣೆಗೆ ಖಾತರಿಸಲಿ?
ರಕ್ಷಿಸಲು ಧಾವಿಸಿ ಇಹಲೋಕ ತ್ಯಜಿಸಿದವನ
ಮನೆಯೊಳಗೂ ದುಃಖ ಆವರಿಸಿದೆ ಅಲ್ಲಿ
ಹೇಳಿ ನಾನು ಯಾರನ್ನು ದ್ವೇಷಿಸಲಿ
ನಾನು ನನ್ನ ದೇಶದ ಜನರನ್ನಲ್ಲದೇ
ಮತ್ಯಾರನ್ನು ಪ್ರೀತಿಸಲಿ
ಒಮ್ಮುಖವಾಗಿ ಮಾತನಾಡಿ ಯಾರಿಗೋ ಜೈ ಅಂದವರ
ಧರ್ಮದ ಹೆಸರಲ್ಲಿ ವಿಂಗಡಿಸಲು ಹವಣಿಸಿ ಬಾಲ ಅಲ್ಲಾಡಿಸುತ್ತ, ಬೂಟು ನೆಕ್ಕುತ್ತ
ಕೂಗುತ್ತಿರುವ ಕೂಗುಮಾರಿಗಳಿಗೆ ಏನೆಂದು ಹೇಳಿ
ಬಾಯಿ ಮುಚ್ಚಿಸಲಿ.
ಗೊತ್ತು ನನಗೆ ಸತ್ಯ ನುಡಿಯುವವರನ್ನೇ
ಜರಿಯುತ್ತಾರೆ ಈ ಜಗದಲ್ಲಿ
ಕ್ರೌರ್ಯಕ್ಕೆ ಪ್ರತಿಯಾಗಿ ಕ್ರೌರ್ಯವೇ ಉತ್ತರಿಸಬೇಕು ನಿಜ.ಆದರೆ ಧರ್ಮದ ಬೇಗುದಿಯಲ್ಲಿ
ಗೊಂದಲ ಸೃಷ್ಟಿಸಲು ಹೊರಟವರಿಗೆ ಮುಚ್ಚಿ ಹೋದ ಸತ್ಯದ ಘೋರಿಗಳ ಅದು ಹೇಗೆ ಅಗೆದು ತೋರಿಸಲಿ?
ಜಾತಿ ಕೇಳಿದವರಿಗೆ ನನ್ನದು ಮನುಷ್ಯ ಜಾತಿ
ಪರಸ್ಪರ ಪ್ರೀತಿಗೆ ಪ್ರತಿಯಾಗಿ ಪ್ರೀತಿ ಹಂಚುವ
ಛಾತಿ ಎಂದು ಅದು ಹೇಗೆ ಸಾರಿ ಸಾರಿ ಹೇಳಲಿ.
ನನ್ನ ಎದೆಯೊಳಗೂ ಹೊತ್ತಿ ಉರಿಯುತ್ತಿದೆ ಬೆಂಕಿ.
ನಿತ್ಯ ಕೊಲೆ ಸುಲಿಗೆ ದರೋಡೆ ಅತ್ಯಾಚಾರಗಳ ಸುದ್ದಿ ಕಿವಿಗೆ ಅಪ್ಪಳಿಸುತ್ತದೆ ಇಲ್ಲಿ.
ನನ್ನ ದೇಶದ ಒಡಲ ಕುಡಿಗಳಿಗೆ ಆದ
ಅನ್ಯಾಯವನ್ನು ಪ್ರತಿಭಟಿಸುವಾಗಲೂ
ಜಾತಿ ಕೇಳಿ ಉನ್ಮಾದಗೊಳ್ಳುತ್ತಿದ್ದಾರೆ ಇಲ್ಲಿನ ಜನ
ನಿತ್ಯ ಕತ್ತಲು ಆವರಸುತ್ತಿರುವ ಈ ಜಗದಲ್ಲಿ ಪ್ರೀತಿಯನ್ನಷ್ಟೇ ಹರಡುವ ಬೆಳಕಿನ ದೀಪ ನಾ ಹೇಗೆ ಹೊತ್ತಿಸಲಿ
ದೀಪಕ ಶಿಂಧೇ
9482766018