ಭತ್ತದ ಪೈರು
****************
ಬೆಳೆದಿದೆ ನೋಡು
ಭತ್ತದ ಪೈರು
ಇಳೆಗೆ ಕಳೆಯ ತಂದಿಹುದು
ನೀರಲ್ಲಿದ್ದರೂ
ನೆನೆಯದೆ ನಲುಗದೆ
ಸಮೃಧ್ಧವಾಗಿ ನಿಂದಿಹುದು
ಗಾಳಿಯು ಬೀಸಲು
ತೂಗುತ ತೊನೆಯುತ
ವೈಯಾರಿಯಂತೆ ತೋರುವದು
ಹಸಿರು ಹಸಿರು
ಮಿರಿಮಿರಿ ಮಿಂಚುತ
ಕಣ್ಣಿಗೆ ಸಂತಸ ನೀಡುವದು
ಗರಿಗಳ ತೆರೆದು
ಹೊಡೆಯನು ಹಿರಿದು
ಹೀಚು ಕಾಳು ಕಟ್ಟುವದು
ಚಿಲಿಪಿಲಿಗುಟ್ಟುವ
ಹಕ್ಕಿಯ ಬಳಗವ
ಮುದದಲಿ ತನ್ನೆಡೆ ಸೆಳೆಯುವದು
ಮಾಗುತ ಬರಲು
ಬಣ್ಣವ ಬದಲಿಸಿ
ಹಳದಿ ವರ್ಣಕೆ ತಿರುಗುವದು
ಹಗಲಿರುಳೆನ್ನದೆ
ದುಡಿಯುವ ರೈತನ
ಮನದಲಿ ಖುಷಿಯು ನೆಲೆಸಿಹುದು
.. ಆರ್. ಎಸ್. ಚಾಪಗಾವಿ
ಬೆಳಗಾವಿ 8317404648

