ಕವನ : ಹೊಸತೇನಿದೆ ?

Must Read

ಹೊಸತೇನಿದೆ ?

ಹೊಸತೇನಿದೆ
ಏನಿದೆ ಹೊಸತು ಈ
ಮುಂಜಾವಿನಲ್ಲಿ
ಅದೇ ಹಳೆಯ
ಬಗೆಹರಿಯದ ನೂರು
ಕಂಟಕ ಆತಂಕಗಳು
ರಾತ್ರಿ ಕಚ್ಚಿದ ಕಹಿ ಸುದ್ದಿ
ನಿನ್ನೆಯನೇ ಮತ್ತೆ ಮತ್ತೆ
ಬಿಚ್ಚಿಡುವ ಆ ನಾಳೆಯಲ್ಲಿ…?
ಹೊಸತೇನಿದೆ

ಹೊಸತೇನಿದೆ
ಮುಂದುವರೆದ ಈ ನಿನ್ನೆಯಲ್ಲಿ?
ಯುದ್ಧ ಸಾವು ನೋವು
ಬಡತನ ಹಸಿವಿಗೆ
ತತ್ತರಿಸಿದವರ ನಡುವೆ
ಕುಡಿದು ತೂರಾಡುವವರ ಸಂಭ್ರಮ

ಹೊಸತೇನಿದೆ ?
ಬುದ್ಧ ಬಸವರ ಬೇಸಾಯವೇ
ಮರೆತು ನಿತ್ಯ ಕೊಲೆ ಸುಲಿಗೆಯಲಿ
ಸತ್ಯ ಹುಡುಕುವ ನಾಟಕ
ಮತದಾನ ಮಾಡಲು ಜನರು
ಹೊರಗೆ ಟಿವಿ ಪತ್ರಿಕೆ
ನೆಲದ ಭವಿಷ್ಯ ಬರೆಯುತ್ತಿವೆ

ಹೊಸತೇನಿದೆ?
ಶಾಂತಿ ಸಮತೆ ಸಮಾಧಿಯಾಗಿ
ದಮನಗಳು ಹಿಂಸೆಯೇ ಧರ್ಮವಾಗಿರುವಾಗ
ಕರುಳ ಪ್ರೀತಿಯ ಕೊಯ್ದು
ಎಳೆ ಹಸುಗಳ ಮಾರಣ ಹೋಮ
ಇನ್ನೂ ನಿಂತಿಲ್ಲ

ಹೊಸತೇನಿದೆ ?
ಅದೇ ಜಾತಿ ಮತ ಧರ್ಮಗಳ
ದ್ವೇಷ ಬೀಜ ಬಿತ್ತನೆ
ನಿರುದ್ಯೋಗಿಗಳು ರೀಲ್
ಮಾಡುತ್ತಿದ್ದಾರೆ
ಭಜಿ ಮಾರುತ್ತಿದ್ದಾರೆ

ಸೂರ್ಯನ ದಿನಚರಿಯೇ
ಇರುಳ ಉಸ್ತುವಾರಿಯಲ್ಲಿರುವಾಗ..
ಮುಂಜಾನೆಯ ಮುಂಗೋಳಿಗಳು
ಹೊರಡಿಸುತ್ತವೆ ಫರ್ಮಾನು
ಅವರ ಹೇಳಿಕೆಯಂತೆ ಬದುಕ ಬೇಕು

ಹೊಸತೇನಿದೆ?
ಮುಂದುವರೆದ ಆ ನಿನ್ನೆಯಲ್ಲಿ…?
ವಿಶ್ವ ನಾಯಕನಾಗುವ ಬಯಕೆ
ಸತ್ತ ಹೆಣಗಳ ಗೋರಿಯ ಮೇಲೆ
ಸಾಮ್ರಾಟನ ಸಮೃದ್ಧಿ ಅಟ್ಟಹಾಸ

ಹೊಸತೇನಿದೆ?
ಕರಾಳ ಮುಖ ಸವರಿ
ಕದ್ದು ಮುಚ್ಚಿಡುವ
ಕನ್ನಡಿಗಳು ಇರುವತನಕ
ನಂಜಿನ ಕೀವು ನೆತ್ತಿಗೇರಿ
ಕಣ್ಣು ಮಂಜಾಗಿರುವ ತನಕ..
ವಿಶ್ವಾಸ ಮೂಡಿಸದ
ಸಾಹಿತ್ಯವಿರುವ ತನಕ
ಸುತ್ತುತ್ತಲೇ ಇರುವ
ಗಂಡು ಜೋಗುತಿಯರ ಮೆರವಣಿಗೆ
ಚಕ್ರವ್ಯೂಹ ಬೇಧಿಸದ ತನಕ..
ಏನಿದೆ ಹೊಸತು?

ಹೊಸತೇನಿದೆ?
ನಾಳೆಯಾಗದ ಈ ನಿನ್ನೆಯಲ್ಲಿ ?
ಮಂದಿರ ಮಸೀದಿ ಚರ್ಚ
ಬಸದಿ ವಿಹಾರಗಳು ಬೆಪ್ಪನೆ ಮಲಗಿವೆ
ಕಾವಿ ಬುರ್ಖಾಗಳ ಕಾದಾಟ
ಹಲಾಲ್ ಬಾಡೂಟ
ಹತ್ತಿ ಉರಿಯುತ್ತಿದೆ ದೇಶ

ಹೊಸತೇನಿದೆ ?
ಮತ್ತೆ ಹೊರಗೆ ಸಜ್ಜಾಗಿವೆ
ಮೊಹಲ್ಲಾಗಳ ಮುಂದೆ
ಭುಸುಗುಟ್ಟುತ್ತಿರುವ
ಬುಲ್ದೊಜರ್ ಭೀತಿಯ
ಮತ್ತೊಂದು ಕ್ರೂರ ದಿನದಲ್ಲಿ ..

ಹೊಸತೇನಿದೆ?
ಕೇರಿಯಲೆಂದೂ ಕಾಲಿಡದ
ಗ್ರಹಣ ಸೂರ್ಯನ ನಡಿಗೆಯಲ್ಲಿ..
ಭಾನುವಾರಗಳೇ ಇರದ
ತಾಯಂದಿರರ ಕ್ಯಾಲೆಂಡಿರಿನಲ್ಲಿ …

ಹೊಸತೇನಿದೆ?
ಮುಂದುವರೆದ
ನಿನ್ನೆಯ ಆ ಹಳೆಯ ಕಥೆಯಲ್ಲಿ ?
ಮನೆ ಚಾವಡಿಯಲ್ಲಿ ಮಾತು
ಒಳಗೆ ಒಲೆಗೆ ತೂತು
ನಡುಮನೆಯಲ್ಲಿ
ಮನು ಸಂತಾನ
ಸೈತಾನನ ಹಿರಿತನದಲಿ
ಮಂತ್ರ ಪೂಜೆ ಘೋಷಣೆ

ಹೊಸತೇನಿದೆ ?
ಈ ಬೆಳಗಲ್ಲಿ ಮತ್ತೆ
ಅದೇ ಹಳೆಯ ಪುಸ್ತಕದ
ಹೊಸ ಭರವಸೆ ಹಳಸಲು
ಕನಸು ಕುಣಿಯುತಿವೆ
ಮತ್ತೊಂದು ಅಧ್ಯಾಯದಲಿ.
ಮಂಕಾಗಿವೆ ವಚನ

ಹೊಸತೇನಿದೆ ಇಂದು ಮತ್ತೆ?
ಇರುಳ ಮರುಳಿಲ್ಲದ ಹೊಸ
ಬೆಳಕು ಬೇಕೀಗ ನಮ್ಮ ನಡುವೆ
ಕರಾಳ ಕತ್ತಲ ಜೊತೆ
ಒಳಒಪ್ಪಂದವಲ್ಲ
ದರ್ಪಿಗೆ ಬೆದರಿ ಮುದುರಿ
ಕುಳಿತುಕೊಳ್ಳುವುದಲ್ಲ.

ಹೊಸತೇನಿದೆ?
ಹತ್ತಿಕ್ಕುವ ತುಳಿಯುವ
ದಮನಗಳ ಯುಗ
ಯುಗಾಂತವಾಗಬೇಕೀಗ
ವೇಷ ಮರೆಸಿದ ವರ್ಷಾಂತವಲ್ಲ
ರಾತ್ರಿ ಕಂಠ ಪೂರ್ತಿ ಕುಡಿದು
ತೂರಾಡುವದಲ್ಲ

ಹೊಸ ಸೂರ್ಯನ ಸಂಕ್ರಮಣಕ್ಕೆ
ಸಿದ್ಧಾವಾಗ ಬೇಕು
ಸಮತೆ ಮಮತೆಗಳ ಹಣತೆ
ಹಚ್ಚ ಬೇಕು
ತ್ಯಾಗ ಬಲಿದಾನಗಳ ತೈಲ ಸುರಿದು
ಬೆಳಗ ಬೇಕು ಭಾರತ

________________________
ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

LEAVE A REPLY

Please enter your comment!
Please enter your name here

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group