ಕವನ:  ಗುರುವೇ ದೇವರು 

0
233

ಗುರುವೇ ದೇವರು

ಓ ಗುರುವೇ ನಿನಗೆ ಶರಣು ಶರಣು
ಬ್ರಹ್ಮ, ವಿಷ್ಣು,ಮಹೇಶ್ವರ ನಿನ್ನೊಳಗಿಹರು ಕಾಣು
ಜನನಿ ಮೊದಲ ಗುರು
ಆ ಗುರುವಿಗೆ ನೀನೇ ಮೊದಲ ಗುರು.

ಬಾಲಕನೆಂಬ ಕಲ್ಲನ್ನು ಮೂರ್ತಿಯನ್ನಾಗಿಸಿದ ಶಿಲ್ಪಿ ನೀನು
ಮಕ್ಕಳ ಜ್ಞಾನದ ಹಸಿವು ನೀಗಿಸಿದ ಜ್ಞಾನೇಶ್ವರ ನೀನು
ತಿದ್ದಿ ತೀಡಿ ಬೈದು ಹೊಡೆದು ಅಕ್ಷರ ಕಲಿಸಿದೆ
ವಿದ್ಯೆಯ ಪರಿಮಳವನ್ನು ಎಲ್ಲೆಡೆ ನೀ ಪಸರಿಸಿದೆ.

ಬಡವನಿರಲಿ ಧನಿಕ ಇರಲಿ ಯಾರೇ ಇರಲಿ ನಿನ್ನ ಬಳಿ ಜ್ಞಾನ ಪಡೆಯಲು ಬರಲೇಬೇಕು
ಅವರಿವರನ್ನದೆ ಸರ್ವರಿಗೂ ಜ್ಞಾನ ಉಪದೇಶ ಮಾಡುವೆ
ಮಕ್ಕಳ ಪಾಲಿಗೆ ತಂದೆ ತಾಯಿ ಬಂಧು ಎಲ್ಲವೂ ನೀನಾಗಿರುವೆ.

ಅಜ್ಞಾನದ ಅಂಧಕಾರ ಕಳೆವೆ ನೀನು
ಸುಜ್ಞಾನದ ಸುಜ್ಯೋತಿಯನ್ನು ಬೆಳಗಿಸುವೆ ನೀನು
ನಿನ್ನ ಸುಬುದ್ದಿ ಬಳಸಿ ಸನ್ಮಾರ್ಗ ಪ್ರವರ್ತಕನನ್ನಾಗಿ ಮಾಡುವ ಚೈತನ್ಯ ಸ್ವರೂಪವೇ ನೀನು.

ಗು ಕಾರೊ ಗುಣಾತೀತ
ರು ಕಾರೊ ರೂಪಾತೀತ ನೀನಾದೆ ಗುರುವೇ
ಶಿಸ್ತು ಬದ್ಧನಾಗಿ, ಕ್ಷ ಕಿರಣ ಬೀರಿ ಕ್ಷಮಾ ಗುಣ ಉಳ್ಳವನಾಗಿ, ಕರುಣಾಮಯಿಯಾಗಿ ಕರ್ಮಧಾರೆ ಉಂಟು ಮಾಡುವೆ ನೀ ಗುರುವೇ.

ನಾಲ್ಕು ಗೋಡೆ ಮಧ್ಯೆ ಸಮಾಜ ನಿರ್ಮಿಸುವ ನಿರ್ಮಾಪಕನು
ನೀ ಕಲಿಸಿದ ಅಕ್ಷರ ಸಂಸ್ಕಾರ ಸಮಾಜದ ಕಣ್ಣು
ವೈದ್ಯ, ವಕೀಲ,ಇಂಜಿನಿಯರ್, ಪೊಲೀಸ್ ಹೀಗೆ ಹಲವರನ್ನು ಸಮಾಜಕ್ಕೆ ನೀಡಿದ ಕೀರ್ತಿ ನಿನ್ನದು
ನಿನಗೆ ಕೋಟಿ ಕೋಟಿ ಶರಣು ನನ್ನದು.

ಗುರುವಿನ ಗುಲಾಮನಾಗುವ ತನಕ ಮುಕ್ತಿ ದೊರೆಯದಣ್ಣ
ಗುರುವಿನ ಅನುಗ್ರಹ ಪಡೆದು ಕಲಿಯಬೇಕಣ್ಣ
ಮುಂದೆ ಗುರಿ ಹಿಂದೆ ಗುರು ಇರಬೇಕಣ್ಣ
ಗುರು ತೋರಿದ ಮಾರ್ಗವು ನಮ್ಮ ಭವಿಷ್ಯ ನೋಡಣ್ಣ.

ಕಲಿತ ಋಣವನ್ನು ಕಲಿಸಿ ತೀರಿಸಬೇಕು
ಗುರು ನಿಂದೆ ಮಹಾ ಪಾಪ ನೋಡು
ಮುನಿದರೂ ಗುರು ಕಾಯುವನು ನಿನ್ನ ನೋಡು
ಅಂತಹ ಗುರುವಿಗೆ ವಂದಿಸಿ ಚಿರಋಣಿಯಾಗಿರು ನೀನು.

ಜ್ಯೋತಿ ಬಸವರಾಜ ಬೆಳವಿ.
ಜ್ಯೋತಿ ಸಂಜು ಮುರಾಳೆ.