ನೆನಪಾಗಲೆ ಇಲ್ಲ
ನೂರಾರು ದೇವರ ಪೂಜಿಸಿ
ಹಲವಾರು ವೃತ ನೇಮ ಮಾಡಿ
ಮಡಿಲು ತುಂಬಿದ ಕರಳು ಕುಡಿಗಳು
ದಿಢೀರನೆ ಬದಲಾದವಲ್ಲ.
ಹಸಿವ ಮರೆತು ಲಾಲಿಸಿದ್ದು
ಬರಸೆಳೆದು ಅಪ್ಪಿದ್ದು
ತನ್ನದೆಲ್ಲ ಧಾರೆ ಎರೆದು
ಈಗೀಗ ಭಿನ್ನತೆಯ ರಾಗಾಲಾಪವೆಲ್ಲ .
ಹೊಟ್ಟೆ ಬಟ್ಟೆ ಕಟ್ಟಿ
ಆಸೆ ಅಂಬರ ಕಳಚಿ
ದುಡಿದು ಹಣ್ಣಾಗಿದ್ದು
ನಿಮಗೆಂದು ನೀವೇಕೆ ತಿಳಿಯಲಿಲ್ಲ.
ಬದುಕಿಗೆ ಬಲವ ತುಂಬಿದವರ
ಅಕ್ಷರ ಕಲಿಸಿದವರ
ಶಕ್ತಿ ಯುಕ್ತಿ ತಿಳಿಸಿದವರ
ವಾತ್ಸಲ್ಯ ಅರಿವಾಗಲೆ ಇಲ್ಲ.
ಮೋಹದ ಬಲೆಯಲ್ಲಿ ಸಿಲುಕಿ
ಸ್ವಾರ್ಥದ ಸುಖವ ಅರಸಿ
ತಾನಷ್ಟೇ ಎಂಬ ಗತ್ತಿನ ನಡೆಗೆ
ಹೆತ್ತವರ ಬಯಕೆ ಗಮನಿಸಲೇ ಇಲ್ಲ
ಮಹಲು ಕಟ್ಟಿಸಿ ಸಂಭ್ರಮದಿ
ಊರವರ ಕರೆಸಿ ಉಣಿಸಿ
ಜಂಭದ ಕೋಳಿಯ ರೀತಿಯಲಿ
ಭೂಮಿಗೆ ತಂದವರ ನೆನಪಾಗಲೇ ಇಲ್ಲ.
ಮುಪ್ಪಿನ ಮನಕೆ ತಂಪಾಗುವರೆಂಬುದು
ನೆರಳು ನೀಡುವ ಭರವಸೆ
ಬೆರಳು ಹಿಡಿದು ನಡೆಸಿದ್ದು
ಗೋಳಾಟದಿ ನರಳಿದೆ ಗಮನಿಸಲೇ ಇಲ್ಲ.
ಮರೆಯಾದಾಗಲು ಬರಲೇ ಇಲ್ಲ
ಕಾಲಚಕ್ರದ ಅಡಿಯಾಳು ನಾವು
ವಾಸ್ತವ ಅರಿವಾಗುವ ಹೊತ್ತಿಗೆ
ಭ್ರಮೆಯ ಬದುಕೆಂದು ಅನಿಸಲೆ ಇಲ್ಲ.
ರೇಷ್ಮಾ ಕಂದಕೂರ. ಗಂಗಾವತಿ