ಕನಕ ಹಂಬಲಿಸಿದಂತೆ
ದಾಸನಾ ಮೊರೆಯ ಕೃಷ್ಣ/
ಆದರದಿ ಆಲಿಸುವಂತೆ/
ಶ್ರೀಶನಾ ಒಲುಮೆಗೆ ತಾ/
ಕನಕ ಹಂಬಲಿಸಿದಂತೆ//
ಕೊಳಲನೂದಿ ದಾಮೋದರ
ಮರೆಯಾಗಿ ಹೋದಂತೆ/
ರಾಗದಿ ಹೊಮ್ಮುವ ತುಡಿತಕೆ/ ಶ್ಯಾಮನು ತಾಳ ಹಾಕಿದಂತೆ//
ಬೃಂದಾವನದಿ ಮುರಳಿ/
ಕೋಲಾಟಕೆ ಕರೆದಂತೆ/
ಸುಳಿವೇ ತೋರದೆ ಅನೀಶ/
ಬೆಣ್ಣೆ ಕದ್ದ ನವನೀತನಂತೆ//
ಅಲ್ಲೊಮ್ಮೆ ಇಲ್ಲೊಮ್ಮೆ ಹರಿ/
ಕಳ್ಳಾಟವ ಆಡುತಿರುವಂತೆ
ಹಾಡಿಹಾಡಿ ಬೆವರಿದ ಕನಕ/
ದರುಶನಕೆ ಹಾತೊರೆದಂತೆ//
ಕಾಣದೆ ಮಂದಿರದಿ ಗೋಪ/
ತಾ ಕಡಗೋಲು ಪಿಡಿದಂತೆ/
ಗಾನಸೇವೆಯಗೈಯ್ಯೆ ಕನಕ/
ಹರಿಯು ಬಾಗಿಲ ತೆರೆವಂತೆ//
ಮುಚ್ಚಿದ ಬಾಗಿಲೊಳು ಕೃಷ್ಣ/
ಅರ್ಚಕರ ಅಣತಿಯಂತೆ/
ಅಳುತ ಕೂಗಿದರೂ ಆತ/
ದಾಸನ ಮೊರೆ ಕೇಳದಂತೆ//
ಮೈಮರೆತು ದಾಸ ಮುರಳಿ/
ಮಾಧವನ ಜಪಿಸಿದಂತೆ/
ನಡೆಯೆ ಗುಡಿಯ ಹಿಂದೆ/
ಗೋಡೆಗೆ ಕಿಂಡಿ ಕೊರೆದಂತೆ//
ಕಾಣಬಹುದೇ ಬಾಲ ಅಲ್ಲಿ/
ಬಾಗಿ ಇಣುಕುತಿರುವಂತೆ
ತಿರುಗಿ ನಿಂತ ಕೇಶವ ಕನಕಗೆ/ ದಿವ್ಯ ಮುಖವ ತೋರುವಂತೆ//
ಶ್ರೀಮತಿ ಶಾರದಾ ವೀರಣ್ಣ ಬೆಟಗೇರಿ, ಗಂಗಾವತಿ.