- Advertisement -
ಶುಭ್ರ ಬೆಳಕು
ಎನಿತು ಮನದ ಭಾವ ವಿಷಾದಿಸಿತು
ಆರೋಪ ಮಿಥ್ಯಾರೋಪದಲಿ
ಕಂಗೆಟ್ಟಿತು
ಇದಿರ ಹಳಿಯಲು ಬೇಡ
ತನ್ನ ಬಣ್ಣಿಸಲು ಬೇಡ
ಬಸವ ವಾಕ್ಯ ಮರೆತು
ಸಾಗಿತು
ಮನದ ಇರುಳು ಬೇಗೆ ಸವೆಸಿ
ಬೆಳಗು ಹರಿದಿದೆ
ವಿಶಾಲ ಮನಕೆ
ರವಿ ಉದಯದಿ
ಹೊಳೆಯುತ್ತಿದೆ ಜಗ
ಕಾಯದಲಿ ಕಾಯಕ ಹೊತ್ತು
ಮೂಡಿ ನಿಂತಿದೆ
ಉದಯರಾಗಕೆ
ನಿತ್ಯ ಹೊಸ ಉಲ್ಲಾಸದಿ
ಕಳೆ ಕಟ್ಟಿದೆ ನಿನ್ನಲ್ಲಿ
ಶುಭ್ರ ವಸ್ತ್ರ ಧಾರೆಯ ಮನಕೆ
ಕಸ ಕಡ್ಡಿ ಆಚೆ ಹಾಕು
ಎದೆಯ ಬಾಂದಳದಲಿ
ಶುಭ್ರ ಬೆಳಕು ಹರಿಸು
ಪಾಚಿಗಟ್ಟಿದೆ ತನುವಿನಲಿ
ಕಿಲುಬು ಗಟ್ಟಲು ಬೇಡ
ಹೊತ್ತಿ ಉರಿಸು
ದಿವ್ಯ ದೀಪ್ತಿ
ಅರಿವು ಇರಲಿ ಮುಗಿಲ ಧರೆಗೆ
ನಡೆವ ಪಾದಕೆ ಗಟ್ಟಿ ಮನಸ್ಸು
ಕೂಗಲಿ ಮತ್ತೆ ಹೊಸ ಕನಸಿಗೆ
ಹಾಡಿ ನಲಿಯೋಣ ಬನ್ನಿ
ಮನುಜ ಮತ ವಿಶ್ವಪಥಕೆ
ಹೊಸ ಹೆಜ್ಜೆ ಸವೆಸಿ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪೂರ