ಗಾಂಧಿ ಮತ್ತು ನಾನು
೧೯೭೭ರಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂಕ್ರಮಣ ಪ್ರಕಾಶನದಿಂದ ನಮ್ಮ ಗುರುಗಳಾದ ಚಂಪಾ ಅವರು ಸಂಪಾದಿಸಿದ” ಗಾಂಧೀ, ಗಾಂಧೀ -” ಕವನ ಸಂಕಲನದಲ್ಲಿ ಪ್ರಕಟಗೊಂಡ ನನ್ನ ಮೊದಲ ಕವನ” ಶರಣು ಶರಣಾರ್ಥಿ “. ಈಗ ನಾನು ಅದನ್ನು ” ಗಾಂಧೀ ಮತ್ತು ನಾನು” ಹೆಸರಿನಿಂದ ಫೇಸ್ಬುಕ್ ಗೆ ಬಿಡುತ್ತಲಿದ್ದೇನೆ. ಅಲ್ಲದೆ ಅಂದು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಿದ ಕವಿಗೋಷ್ಠಿಯಲ್ಲಿ ಇದನ್ನು ವಾಚಿಸಿದ್ದೇನೆ.
ತಾತ ,
ನೀ ಸತ್ತ ಮೂರು ವರ್ಷಕ್ಕೆ
ನಾನು ಹುಟ್ಟಿದ್ದು,
ಗಾಂಧೇಪ್ಪ ಎಂದು
ನಿನ್ನ ಹೆಸರಿನಿಂದಲೇ
ಜೋಗುಳ ಹಾಡಿಸಿಕೊಂಡಿದ್ದು,
ಕಲ್ಲು ಸಕ್ಕರೆ ಆಸೆಗಾಗಿ,
“ಗಾಂಧೀ ಮಾರಾಜಕೀ ಜೈ “,
ಎಂದು ಜಿಗಿಜಿಗಿದು ಕೇ ಕೆ ಹಾಕುತ್ತ
ನಿನ್ನ ದಿನ ಆಚರಿಸಿದ್ದು,
ಏನೋ ಒಂದು ಅರೆಮರೆತ
ಕನಸು
ಒಂದು ಜೀವಂತ ಉದ್ರೇಕ ಅಷ್ಟೇ.
ಆದರೆ ಅಜ್ಜ ,
ನಿನ್ನ ಪಂಜೆ ಹರಿದು
ಮಸಿ ಅರಿವೇ ಮಾಡಿದ ,
ನಿನ್ನ ಕೋಲು ಮುರಿದು
ಒಲೆಗೆ ಹಾಕಿದ ,
ನೀ ನಡೆದ ದಾರಿಯಲ್ಲಿ
ಉಚ್ಚಿ ಹೊಯ್ದ ಈ ಸಮಾಜದಲ್ಲಿ
ನಾನೂ ಬದುಕಬೇಕೆಂದರೆ
ನಿನ್ನ ರಾಮ ರಾಜ್ಯದ
ಕನಸಿನ ಕನ್ನಡಿ ಒಡೆದು ಚೂರಾಗಿ
ನನ್ನೆದೆಗೆ ಚುಚ್ಚಿ ಚುಚ್ಚಿ
ರಕ್ತ ಬರಿಸುತ್ತಲಿದೆ.
ನೀನು ಶಾಂತಿ ಎಂದೆ,
ನಾನು ಜಪಿಸಿದೆ.
ಜಪಿಸಿ ಸೊಂಟವ
ಮುರಿದುಕೊಂಡು ಬಿದ್ದೆ.
ಹಿಂಸೆಯನ್ನು ಮಾಡಬೇಡೆಂದೆ,
ಬಿಟ್ಟುಬಿಟ್ಟೆ.
ಆದರೆ ರಟ್ಟೆಯ ಕಸುವು
ವ್ಯರ್ಥವಾಗಿ ವ್ಯಕ್ತಿತ್ವವನ್ನು
ಕಳೆದುಕೊಂಡೆ.
ಸತ್ಯವನ್ನೇ ನುಡಿ ಎಂದೇ,
ನುಡಿದೆ.
ಆದರೆ ಸೆಟೆದು ನಾ ಬಿದ್ದೆ –
ಅಂದಾಗ ಯಾರಿಗೆ ಬೇಕು
ನಿನ್ನ ಈ ತತ್ವಗಳು?
ಶರಣು ಶರಣಾರ್ಥಿ
ಶಿವಾನಂದ ಬ. ಬೆಳಕೂಡ