ಕವನಗಳು

0
144

ಬಸವನೆಂಬುದೇ ಮಂತ್ರ
——————————–
ದಿನ ದಲಿತರ ಅಪ್ಪಿಕೊಂಡನು
ನ್ಯಾಯ ನಿಷ್ಠುರಿ ಬಸವನು
ಜಾತಿ ಭೇದ ತೊಡೆದು ಹಾಕಿ
ಶಾಂತಿ ಸಮತೆ ಕೊಟ್ಟನು

ವರ್ಗ ವರ್ಣ ಕಿತ್ತು ಹಾಕಿ
ಲಿಂಗ ಭೇದವ ತೊರೆದನು
ಗುಡಿ ಗೋಪುರ ಜಡ ಜಗಕೆ
ಕೊನೆ ಹೇಳಿದ ಧೀರ ಬಸವನು .

ಕಾವಿ ಮಠವ ಬೇಡವೆಂದ
ದುಡಿಮೆ ದೇವರೆಂದ ಬಸವ
ಶ್ರಮವೇ ತಪವು ಜಪವೆಂದನು
ಕಾಯವೇ ಕೈಲಾಸವೆಂದನು

ವಚನ ಶಾಸ್ತ್ರ, ಪ್ರಬಲ ಅಸ್ತ್ರ
ಗಣಾಚಾರವೇ ಮಾರ್ಗವು
ಸತ್ಯ ದರ್ಶನ ಷಟಸ್ಥಲವು
ಬಸವ ಬಯಲು ಮೋಕ್ಷವು

ಬಸವನೆಂಬುದೇ ಮಂತ್ರ ವಿಭೂತಿ
ಬಸವ ಪಾವನ ರುದ್ರಾಕ್ಷಿಯು
ಬಸವ ಗುರು ಲಿಂಗ ಜಂಗಮ
ಬಸವ ಪಾದೋದಕ ಪ್ರಸಾದವು .

ಬಸವ ಸ್ಮರಣೆ ಪುಣ್ಯ ಕಾಯವು
ಬಸವ ಅವಿರಳ ಮುಕ್ತಿಯು

———————————————-

ಮನುಜನಾಗಿ ಬದುಕುವಾಸೆ

ನವಿಲಿನಂತೆ ರೆಕ್ಕೆ ಬಿಚ್ಚಿ
ನೆಲದ ಮೇಲೆ ಕುಣಿಯುವಾಸೆ
ಗುಬ್ಬಿಯಂತೆ ಗೂಡು ಬಿಟ್ಟು
ಆಗಸದಿ ಹಾರೋವಾಸೆ
ರಾಗದಲ್ಲಿ ಹಾಡೋ ಇಚ್ಛೆ
ಕಳ ಕಂಠದ ಕೋಗಿಲೆ
ತಂಪು ಕೊಳದಲಿ ಮಿಂದು
ಹ೦ಸೆಯಾಗಿ ನಲಿಯುವಾಸೆ
ಮಂಗನಂತೆ ಕೊಂಬೆ ಕೊಂಬೆ
ಜಿಗಿಯುವಾಸೆ
ಇಣಚಿಯಂತೆ ಅತ್ತ ಇತ್ತ
ಇಣುಕುವಾಸೆ
ಚಿಟ್ಟೆಯಂತೆ ಕನಸು ಹೊತ್ತು
ಹೂವು ಮರವ ಮುಟ್ಟುವಾಸೆ
ಮೀನಿನಂತೆ ಕಡಲಾಳದಿ
ನೀರಿನಲ್ಲಿ ಈಜುವಾಸೆ
ಆನೆಯಂತೆ ಅಡವಿಯಲ್ಲಿ
ರಾಜನಾಗಿ ಮೆರೆಯುವಾಸೆ
ಕುದುರೆಯಾಗಿ ದಶ ದಿಕ್ಕಿಗೆ
ಗಾಳಿಯಂತೆ ಓಡುವಾಸೆ
ಇಂದ್ರಲೋಕ ಚಂದ್ರಲೋಕ
ಗಗನದಲ್ಲಿ ಸುತ್ತುವಾಸೆ
ಮನುಷ್ಯನಾಗಿ ಭೂಮಿ ಮೇಲೆ
ಮನುಜನಾಗಿ ಬದುಕುವಾಸೆ
________________________
ಡಾ.ಶಶಿಕಾಂತ ಪಟ್ಟಣ, ರಾಮದುರ್ಗ

LEAVE A REPLY

Please enter your comment!
Please enter your name here