ಬಸವಣ್ಣನೆಂದರೆ
ಬಸವಣ್ಣನೆಂದರೆ ಸಾಕು .
ನಾವು ಭಾವುಕರಾಗುತ್ತೇವೆ .
ಅವನ ಪುತ್ಥಳಿಗೆ ಮಾಲೆ ಹಾಕಿ
ದಿನವಿಡೀ ಕುಣಿಯುತ್ತೇವೆ.
ಶರಣರ ಸೂತಕದಲ್ಲಿ
ವಚನ ಹೊತ್ತು ಮೆರೆಯುತ್ತೇವೆ.
ಅವರ ಅಂಕಿತ ತಿದ್ದಿ
ನಾವು ದೊಡ್ಡವರಾಗುತ್ತೇವೆ.
ಗುರು ವಿರಕ್ತರ ಪಲ್ಲಕ್ಕಿ
ಹೊತ್ತು ಕಾದಾಡುತ್ತೆವೆ .
ಬಸವನ ಕಂಚಿನ ಮೂರ್ತಿಗೆ
ಕೋಟಿ ಕೋಟಿ ಸುರಿಯುತ್ತೇವೆ.
ಜಾತ್ರೆ ಹಬ್ಬ ಮೇಳ ಉತ್ಸವದಲ್ಲಿ .
ಚಂದಾ ವಸೂಲಿ ಹಪ್ತಾ ಎತ್ತುತ್ತೇವೆ.
ಅಕ್ಕ ಮಾತೆ ಸ್ವಾಮಿ ಶರಣರ
ಅಣತಿಯಂತೆ ದುಡ್ಡು ಮಾಡುತ್ತೇವೆ.
ಮಠದೊಳಿಗಿನ ಬೆಕ್ಕು
ಒಮ್ಮೊಮ್ಮೆ ಇಲಿಯ ಕಂಡು
ನೆಗೆಯುತ್ತವೆ ಸುದ್ದಿಯಾಗುತ್ತವೆ.
ವರ್ಷವಿಡಿ ಶರಣರ ಜಯಂತಿಗಳು
ಶಾಲೆಗೆ ರಜಾ ಉಳಿದವರು ಬಾರಿನಲ್ಲಿ
ಬಸವನ ಹೆಸರಲಿ ಹಣ ಮಾಡದವರು
ಪಾಪಿಗಳು ಮೂರ್ಖರು .
ಬಸವಣ್ಣನೆಂದರೆ ಸಾಕು .
ನಾವು ಭಾವುಕರಾಗುತ್ತೇವೆ .
ಕುಣಿದು ಕೇಕೆ ಹಾಕುತ್ತೇವೆ
ಘೋಷಣೆಗಳ ಅಬ್ಬರಿಸುತ್ತೇವೆ .
ಜಗಕೆ ಬೇಕಾದ ಬಸವಣ್ಣ ,
ನಮಗೆ ತಿಳಿಯಲೊಲ್ಲ ಇನ್ನೂ .
ಭಾವುಕರು ಮುಗ್ಧರು ಮೂಢರು .
ನಾವು ಬಸವನರಿಯಲೋಲ್ಲೆವು .
———-
ವಿಶ್ವ ಬೆಳಕು
ದೀನ ದುರ್ಬಲರ
ಅಪ್ಪಿಕೊಂಡೆ
ಶೋಷಿತರ
ಎತ್ತಿಕೊಂಡೆ
ಸತ್ಯ ಸಮತೆ
ಶಾಂತಿ ಪ್ರೀತಿ
ಕಾಯಕವ
ಕಲಿಸಿಕೊಟ್ಟೆ
ಹಾಸಿ ದುಡಿದು
ಹಂಚಿ ತಿನ್ನುವ
ದಾಸೋಹವ
ಮಾಡಿ ಕೊಟ್ಟೆ
ಬಸವಣ್ಣ
ವಿಶ್ವಕೆ ಬೆಳಕಾದೆ
ವಚನ ಚೇತನ
ಸುತ್ತಲು
ಜಾತಿ ಕೊಚ್ಚೆಯಲಿ
ನಾವು ಬಿದ್ದೆವು
ನಿನ್ನನರಿಯದೆ
ಬಳಲುತಿರುವೆವು
ದೀಪದಡಿಯಲಿ
ಕತ್ತಲು
——————————–
ಡಾ.ಶಶಿಕಾಂತ ಪಟ್ಟಣ ಪುಣೆ