ಕವಯಿತ್ರಿ ಶ್ರೀಮತಿ ರೇಖಾ ಪ್ರಕಾಶ್ ಅವರ ಚೊಚ್ಚಲ ಕೃತಿ ಕನಸಿನೆಡೆಗೆ ಒಂದು ಹೆಜ್ಜೆ. ಇದೊಂದು ಕವನ ಸಂಕಲನ. ಇದರಲ್ಲಿ ಸರಿಸುಮಾರು 84 ಕವಿತೆಗಳಿವೆ. ಮೇಡಂ, ಮೊನ್ನೆ ಭಾನುವಾರ ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಈ ಪುಸ್ತಕ ಕೊಟ್ಟರು. ಓದಿ ಏನಾದರೂ ಬರೆಯಿರಿ ಎಂದರು.
ನಾನು ಬರೆಯುವುದನ್ನು 64ರ ಇಳಿ ವಯಸ್ಸಿನಲ್ಲೂ ಬಿಟ್ಟಿಲ್ಲ. ಬಾಲ್ಯದ ವಿದ್ಯಾರ್ಥಿ ದಿನಗಳಲ್ಲಿ ಗೊರೂರು ಎಂಬ ಹಳ್ಳಿಯಲ್ಲಿ ಸಮಯ ಕಳೆಯಲೆಂದು ಕಥೆ ಕಾದಂಬರಿ ಓದುತ್ತಿದ್ದೆ. ಆಗೆಲ್ಲಾ ಟಿವಿ ಇಲ್ಲದ ದಿನಗಳಲ್ಲಿ ಪುಸ್ತಕಗಳ ಓದು ನನ್ನ ಮನಸ್ಸಿಗೆ ಮುದ ನೀಡಿ ದಿನ ದೂಡಿದ್ದೆ ತಿಳಿಯುತ್ತಿರಲಿಲ್ಲ. ಈಗ ಮನೆಯಲ್ಲಿ ಟಿವಿ ಇದೆ. ಎಷ್ಟೊತ್ತು ನೋಡೋದು. ನೋಡಿ ನೋಡಿ ಬೇಸರವಾದಾಗ ಮತ್ತೆ ಪುಸ್ತಕ ಹಿಡಿಯುವುದು. ಓದುವುದು ಮೊದಲಿನಂತೆ ಸಾಧ್ಯವಾಗುತ್ತಿಲ್ಲ. ಆಗ ದಿನಕ್ಕೆ ಒಂದು ಪುಸ್ತಕ ಓದಿ ಮುಗಿಸಿಬಿಡುತ್ತಿದ್ದೆ. ಕಾನೂರು ಸುಬ್ಬಮ್ಮ ಹೆಗ್ಗಡತಿ ಕಾದಂಬರಿಯನ್ನು ಒಂದು ದಿನದಲ್ಲಿ ಓದಿ ಕೊಡಬೇಕಿತ್ತು. ಇಲ್ಲವಾದರೆ ಖಾಸಗಿ ಲೈಬ್ರರಿ ಮಾಲೀಕರಿಗೆ ಎರಡು ರೂ. ಕೂಡಬೇಕಿತ್ತು. ವಿದ್ಯಾರ್ಥಿ ದಿನಗಳಲ್ಲಿ ಇದು ಕಷ್ಟಸಾಧ್ಯ. ನಮ್ಮದು ಮಧ್ಯಮ ವರ್ಗದ ಕುಟುಂಬ. ಅದಕ್ಕೆ ಒಂದೇ ದಿನದಲ್ಲಿ ಆ ಬೃಹತ್ ಕಾದಂಬರಿ ಓದಿ ಮುಗಿಸಿದ್ದೆ. ಬಾತ್ ರೂಮನಲ್ಲೂ ಪುಸ್ತಕ ಬಿಟ್ಟಿರಲಿಲ್ಲ. ಅಂತಹ ಹುಚ್ಚು ಓದಿನಲ್ಲಿ ಅಪ್ಪ ಸ೦ಪಾದಿಸಿದ್ದ ಗದ್ದೆಯ ಕಡೆಗೂ ತಿರುಗಿ ನೋಡಲಿಲ್ಲ…ಈಗ ಗದ್ದೆ ಮೋಡಿಗೆ ಮನೆಯೂ ಕೈ ತಪ್ಪಿದೆ.
ಕವಯಿತ್ರಿಯ ನನ್ನಪ್ಪ ರೈತ ಕವಿತೆ ಓದುವಾಗ ಇವೆಲ್ಲಾ ನೆನಪಾದವು.
ಬಡ ರೈತ ನನ್ನಪ್ಪ
ನಾನು ರೈತನ ಮಗಳು
ಹಳ್ಳಿಯಲ್ಲೇ ಬೆಳೆದೆ ನಾನು
ಬಡತನದಲ್ಲೇ ಓದು ಮುಗಿಸಿದ್ದೆ
ನನ್ನಪ್ಪ ಬೆವರು ಬಸಿದು
ಉತ್ತಿ ಬಿತ್ತುತ್ತಿದ್ದರು.
ಮಣ್ಣಿನ ಕಣ ಕಣದಲ್ಲೂ
ಬೆರೆತಿತ್ತು ನನ್ನಪ್ಪನ ಬೆವರ ಹನಿ…
ಈಗ ನನ್ನಪ್ಪ ಇಲ್ಲ. ಅಪ್ಪನಿಗೂ ಮೊದಲೇ ಅವ್ವ ಸತ್ತಿದ್ದಳು. ನನ್ನ ಗಂಡ ದುಡಿದು ಸಂಪಾದಿಸಿದ ಜಮೀನನಲ್ಲೇ ಮಣ್ಣಾಗಬೇಕೆಂದು ಹೇಳುತ್ತಿದ್ದ ಅವ್ವನ ಆಸೆ ಅಪ್ಪ ನೆರವೇರಿಸಿದ್ದರು.
ನನ್ನವ್ವನ ಕೈ ತಾಕಿ ಬಿತ್ತಿದಾ ಬೆಳೆ
ಬೆಳೆದು ರಾಶಿಯಾಯಿತು ಕಣದಲ್ಲಿ
ಅವ್ವ ಬೀಸಿ ಮಾಡಿದ ಹಿಟ್ಯಲ್ಲಿ
ತಟ್ಟುತ್ತಿದ್ದಳು ರೊಟ್ಟಿ..
ಮೇಡಂರ ಈ ಕವಿತೆಯ ಸಾಲು ನನ್ನ ಅಪ್ಪ ಅಮ್ಮನ ಸೆನಪಿಸಿದ್ದು ಸುಳ್ಳಲ್ಲ. ಅಪ್ಪನಿಗೂ ಅಷ್ಟೇ. ಗದ್ದೆಯ ಬಳಿ ಹೋದಾಗಲೆಲ್ಲಾ ಅವ್ವನ ನೆನಪು ಕಾಡಿ ಹಿಂಡುತ್ತಿತ್ತು. ಈ ಮನದ ನೋವನ್ನು ನಮ್ಮ ಗದ್ದೆಯನ್ನು ವಾರಕ್ಕೆ ಮಾಡಿಕೊಂಡಿದ್ದ ಪೇಟೆ ಬೀದಿಯ ರಾಜನಿಗೆ ಅಪ್ಪ ಹೇಳಿ ಅವರ ಬಾವ ಮೈದುನನಿಗೆ ಜಮೀನು ಮಾರಿ ನಾವು ಊರು ಬಿಟ್ಟಿದ್ದೆವು.
ಒಲವಾಗಿ ಬಂದವಳು ನೀ
ನೆನಪಾಗಿ ಕಾಡುತ್ತಿರುವೆ
ಬಾಳಿಗೆ ಬೆಳಕಾಗಬೇಕಾದ ಏಳು
ಹೃದಯಕ್ಕೆ ಕೊಳ್ಳಿ ಇಟ್ಟಿರುವೆ
ಕನಸಲ್ಲೂ ಕಾಡುವೆ
ನನ್ನ ಕವಿತೆಯಲ್ಲೂ ಮೂಡುವೆ
ಕಣ್ಮುಂದೆ ನೀನಿಲ್ಲ
ನನ್ನ ಬದುಕಿಗೆ ಆಸರೆ ಇಲ್ಲ..(ಕವಿತೆ: ವಿಧಿಯಾಟ )
ಮೇಡಂ ಅವರ ಈ ಕವಿತೆಯ ಸಾಲು
ಗಾಢವಾಗಿ ಮನ ತಟ್ಟುತ್ತದೆ. ಅವರ ತಮ್ಮ ಮನದ ಮಾತಿನಲ್ಲಿ ಬರೆಯುತ್ತಾರೆ.
ಇಲ್ಲಿರುವ ಕೆಲವು ಕವಿತೆಗಳು ಮನದಾಳದಿಂದ ಹುಟ್ಟಿ ತಕ್ಷಣಕ್ಕೆ ಬರೆದ ಕವಿತೆಗಳು. ವಿಧಿಯಾಟ ಈ ಕವಿತೆಯು ನನ್ನ ಸಂಬಂಧಿಯೊಬ್ಬರ ಸಾವಿನಿಂದ ನೊಂದು ತಕ್ಷಣಕ್ಕೆ ಬರೆದ ಕವಿತೆ. ಇವರ ಈ ಕವಿತೆ ನನ್ನ ಮನ ಬಡಿದೆಬ್ಬಿಸಿತಲ್ಲ. ಇದೇ ಕವಿತೆಯ ಶಕ್ತಿ.
ಕಲ್ಪನೆಗೂ ಸಿಗದ ಕಾವ್ಯ ನೀನು
ಬರೀ ಕಲ್ಪನೆಯಾಗೇ ಉಳಿಯಬೇಡ ಗೆಳತಿ
ನನ್ನ ಕಣ್ಣುಗಳಲ್ಲಿ ಹೊಳೆವ ನಕ್ಷತ್ರ ನೀನು
ನಿಲುಕದ ನಕ್ಷತ್ರವಾಗಿ ಉಳಿಯಬೇಡ ಗೆಳತಿ
ಕವಿತೆ: (ಅನುಬಂಧ)
ಕೃತಿಯಲ್ಲಿ ನಾಡಶ್ರೀ ಬಾ. ನಂ. ಲೋಕೇಶ್ ಬರೆದಂತೆ.. ಕಾವ್ಯವೆಂಬುದು ಸ್ವಾನುಭವದ ಸೆಲೆ. ಈ ಸೆಲೆ ಅಲೆಯಾಗಿ ತರ೦ಗಿಸಿದಾಗ ಸಹೃದಯತೆ ಜಾಗೃತಗೊಳ್ಳುತ್ತದೆ. ಜಾಗೃತಗೊಂಡ ಮನ ಮದುಳಿಗೆ ಕಾರ್ಯತತ್ಪರವಾಗಲು ತಿಳಿಸುತ್ತದೆ. ಹೀಗೆ ಹೃದಯಾಂತರಾಳದಿಂದ ಹೊರ ಸೂಸುವ ಕಾವ್ಯವೇ ನಿಜ ಕಾವ್ಯ..
ಹೊರಗೆ ಮಿಂಚು ಮಳೆ ಸುರಿಯುತಿತ್ತು
ಹೃದಯ ನಿನ್ನ ನೆನಪ ತರುತಿತ್ತು
ಮನಸ್ಸು ನೀ ದೂರಾದ ಕಾರಣವ
ಹುಡುಕುತಿತ್ತು
ಏಕೆ ದೂರಾದೆ ಕಾರಣವಿಲ್ಲದೇ ?
ಹೇಳು ನನ್ನೊಲವೇ
( ಕವಿತೆ: ಹೇಳಿ ಹೋಗು ಕಾರಣ)
ತಾವು ಕವಯತ್ರಿ ಆಗುವ ಕಾರಣವನ್ನು ರೇಖಾ ಮೇಡಂ ಹೇಳಿ ಮುಂದೆ ಹೋಗಿದ್ದಾರೆ.
ಎರಡು ವರ್ಷಗಳ ಹಿಂದೆ ಸಮಯ ಕಳೆಯಲೆಂದು ಮುಖಪುಟದಲ್ಲಿ ಖಾತೆ ತೆರೆದೆ. ಅಲ್ಲಿ ಕೆಲವು ಸಾಹಿತಿಗಳು ಬರೆಯುತ್ತಿದ್ದ ಕವಿತೆಗಳನ್ನ ಓದುತ್ತಿದ್ದೆ. ನನಗೂ ಬರೆಯಬೇಕೆಂದು ಮನಸ್ಸಾಗುತ್ತಿತ್ತು. ನನ್ನ ಮಗನ ಹುಟ್ಟುಹಬ್ಬಕ್ಕೆ ಬರೆದೆ ಈ ಕವಿತೆ
ಕಡಲಾಳದ ಮುತ್ತೊಂದು
ಒಡಲಾಳದಿ ಬಂದಿತ್ತಂದು
ಬಾಲ್ಯದ ನಿನ್ನ ತುಂಟಾಟ ಮರೆತಿಲ್ಲ ನಾನಿಂದೂ
ಮನೆ ಮನ ಬೆಳಗುತಿಹೆ ನೀನಿಂದು..
ಕವಯಿತ್ರಿ ಜನ್ಮಸ್ಥಳ ಅರಸೀಕೆರೆ ತಾ ಕೆಂಪು ಸಾಗರ. ಪ್ರಸ್ತುತ ಹಾಸನದ ವಾಸಿ. ತಮ್ಮ ಚೊಚ್ಚಲ ಕೃತಿಯಲ್ಲೇ ಭರವಸೆ ಮೂಡಿಸುತ್ತಾರೆ. ಇವರಿಂದ ಇನ್ನೂ ಹೆಚ್ಚಿನ ಕಾವ್ಯ, ಸಾಹಿತ್ಯ ರಚನೆಗೊಳಲ್ಲಿ ಎಂದು ಆಶಿಸುತ್ತೇನೆ.
ಮನವ ಹಣತೆಯಾಗಿಸಿ
ತನುವ ಬತ್ತಿಯಾಗಿಸಿ…
ಶಿವ ಶರಣರ ನುಡಿ ಕೇಳಿ
ನಾಲ್ಕಕ್ಷರ ಬರೆಯುವಂತಾದಳು ಕೇಳಾ
—
ಗೊರೂರು ಅನಂತರಾಜು,
ಹಾಸನ.
ಮೊ: 9449462879