ಮಳೆಬಿಲ್ಲು ಹಬ್ಬ
ಮಳೆಬಿಲ್ಲು ಮಳೆಬಿಲ್ಲು ಮಳೆಬಿಲ್ಲು
ಗೊತ್ತಿರುವುದೊಂದೆ ನಮಗೆ ಕಾಮನಬಿಲ್ಲು
ಹಾಗಾದರೆ ಯಾವುದೀ ಮಳೆಬಿಲ್ಲು
ಹುಡುಕೋನ ಬನ್ನಿರಿ ಎಲ್ಲಿಹುದೆಂದು೧
ಹುಡುಕುತ ಹೊರಟಾಗ ಸಿಕ್ಕಿತು
ಸರ್ಕಾರಿ ಶಾಲೆಗಳಲ್ಲಿ ಹರಡಿತ್ತು
ಮಳೆಬಿಲ್ಲಲಿ ಮೈಮರೆತ ಶಿಕ್ಷಕರು
ಶಿಕ್ಷಕರ ಜೊತೆ ಬೆರೆತ ಮಕ್ಕಳು೨
ಲಗೋರಿ ಆಡುತ ಕುಣಿದಿಹರು
ಚೌಕಾಬಾರ ಆಣೆಕಲ್ಲು ಹುಡುಕಿಹರು
ಗಾಳಿಪಟ ಹಾರಿಸಿ ನೊರೆಗುಳ್ಳಿ ಊದಿಹರು
ಪೇಪರ್ ರಾಕೆಟ್ ವಿಮಾನವನ್ನೂ ಮಾಡಿಹರು೩
ಶಾಲೆಯಲ್ಲಿ ಜಾತ್ರೆಯ ಸಡಗರವು
ನೋಡಬನ್ನಿರಿ ನಡೆದಿದೆ ನಾಟಕವೂ
ಭಾವೈಕ್ಯತೆಯಲಿ ಕೂಡಿ ನಲಿದಿಹರು
ಕೋವಿಡ್ ಜಾಗೃತಿಯ ಅರಿತಿಹರು ೪
ಕಸದಿಂದ ರಸವನು ತೆಗೆದಿಹರು
ಅಂದದ ಗೊಂಬೆಗಳ ಮಾಡಿಹರು
ಮಣ್ಣಿನ ಆಟಿಕೆ ಬಿದಿರಿನ ಬುಟ್ಟಿ
ರಂಗೋಲಿಯನ್ನೂ ಹಾಕಿ ನಲಿದಿಹರು೫
ವಿಧವಿಧ ಕತೆಗಳ ಹೇಳಿಹರು
ಹಾಡು ಹಾಡುತ ಹೆಜ್ಜೆಯ ಹಾಕಿಹರು
ಪರಿಸರವ ತಿಳಿಯುತ ತಾವು
ಪ್ರತಿದಿನ ಶಾಲೆಗೆ ಬರುತಿಹರು ೬
ಕೆರೆದಡ ಮಗ್ಗಿಆಟ ಮಾಯಾಚೌಕ
ಕೂಡಿಕಳೆ ಎನ್ನುತ ಮಕ್ಕಳು
ಗಣಿತದ ಭಯವನೇ ದೂಡಿಹರು
ಸರಳ ಲೆಕ್ಕಾಚಾರವ ಮಾಡಿಹರು೭
ಇತಿಹಾಸದ ಪುಟಗಳ ತಿರುವುತಲಿ
ದೇಶದ ನಾಯಕರ ನೆನೆದಿಹರು
ಸರಳ ಪ್ರಯೋಗ ಮಾಡುತಲಿ
ವಿಜ್ಞಾನದ ತಿಳುವಳಿಕೆ ಪಡೆದಿಹರು೮
ಸಿಂಗಾರ ಗೊಂಡವು ಶಾಲೆಗಳು
ಅಂಗಳ ತುಂಬೆಲ್ಲಾ ಮಕ್ಕಳು
ಗೋಡೆಯ ಮೇಲೆ ಚಿತ್ತಾರಗಳು
ತಯಾರಾದವು ಕಲಿಕಾ ಮೂಲೆಗಳು೯
ಇದುವೇ ನೋಡಿರಿ ಮಳೆಬಿಲ್ಲು
ಕಾಮನಬಿಲ್ಲಿಗಿಂತ ಚಿತ್ತಾರದಬಿಲ್ಲು
ಮಕ್ಕಳಿಗೆ ನಿರ್ಮಿಸಿದ ಸಕ್ಕರೆಕಲ್ಲು
ಶಿಕ್ಷಕ ಮಕ್ಕಳ ನಡುವೆ ಬೆಸೆಯುತಿದೆ ಬಾಂಧವ್ಯವನ್ನು
ಶ್ರೀಮತಿ ಜ್ಯೋತಿ ಕೋಟಗಿ ಬಿ ಆರ್ ಪಿ ಕಿತ್ತೂರ