spot_img
spot_img

ಮೋಟರ್ ಸೈಕಲ್ ಹುಚ್ಚು ವೇಗಿಗಳಿಗೆ ಪೊಲೀಸರು ಕಡಿವಾಣ ಹಾಕಬೇಕು

Must Read

spot_img
- Advertisement -

ಮೂಡಲಗಿ: ಇತ್ತೀಚೆಗೆ ರಸ್ತೆ ಅಪಘಾತಗಳು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಘಟಿಸುತ್ತಿವೆ. ಇವುಗಳಲ್ಲಿ ಮೋಟರ್ ಸೈಕಲ್ ಅಪಘಾತಗಳೇ ಹೆಚ್ಚಾಗಿವೆ. ಇದು ಹೇಗಿದೆ ಎಂದರೆ ರಸ್ತೆಯಲ್ಲಿ ನಡೆದುಕೊಂಡು ಹೋಗುವವರು ಕೂಡ ಇಂದು ಸುರಕ್ಷಿತವಾಗಿಲ್ಲ.

ಇದಕ್ಕೆ ಉದಾಹರಣೆ ಎಂದರೆ ನನ್ನದೇ ಒಂದು ಅಪಘಾತ. ಇನ್ನೂ ಮೀಸೆ ಬಲಿಯದ ಹುಚ್ಚು ಹುಡುಗರ ಬೈಕ್ ವೇಗದಿಂದಾಗಿ ವಾಕಿಂಗ್ ಹೊರಟಿದ್ದವನು ಇಂದು ಕೈಕಾಲು ಮುರಿದುಕೊಂಡು ಆಸ್ಪತ್ರೆಯಲ್ಲಿ ಬೀಳಬೇಕಾಯಿತು. ಅಪಘಾತ ಮಾಡಿದ ಯುವಕರನ್ನು ಹಿಡಿದು ಪ್ರಶ್ನೆ ಮಾಡಿದರೆ ಅವರ ಹತ್ತಿರ ಗಾಡಿಯ ದಾಖಲಾತಿ ಸರಿಯಾಗಿಲ್ಲ, ಲೈಸೆನ್ಸ್ ಇಲ್ಲ, ಗಾಡಿಯ ಇನ್ಸುರನ್ಸ ಕೂಡ ಇಲ್ಲ ! ಇಂಥ ಗಾಡಿಯನ್ನು ತೆಗೆದುಕೊಂಡು ಅವರು ಅತಿ ವೇಗವಾಗಿ ಜನನಿಬಿಡ ಪ್ರದೇಶವಾದ ಮೂಡಲಗಿ ಆರೋಗ್ಯ ಕೇಂದ್ರದ ರಸ್ತೆಯಲ್ಲಿ ಹೊರಟಿದ್ದರು. ನಾ‌ನು ಬಲಿಪಶುವಾದೆ.

ಇಂಥ ದುರ್ವೇಗಿಗಳು ಹೆಚ್ಚಾಗಲು ಏನು ಕಾರಣ ? ಸಣ್ಣ ವಯಸ್ಸಿನ ಹುಡುಗರಿಗೆ ಬೈಕ್ ಕೊಡುವ ಪಾಲಕರು ಒಂದು ಕಾರಣವಾದರೆ, ಇಂಥ ಬಾಲಕ ಚಾಲಕರನ್ಬು ಹಿಡಿದು ದಾಖಲಾತಿ ಕೇಳದೆ ಬಿಡುವ ಪೊಲೀಸರು ಇನ್ನೊಂದು ಕಾರಣ. 

- Advertisement -

ಕೈಗೆ ಬೈಕ್ ಸಿಕ್ಕ ತಕ್ಷಣ ಹರೆಯದ ಹುಡುಗರ ಕಿವಿಯಲ್ಲಿ ಗಾಳಿ ಹೊಕ್ಕಂತಾಗುತ್ತದೆ. ವೇಗವೇ ಅವರಿಗೆ ಮಜಾ ಕೊಡುತ್ತದೆ. ಆದರೆ ಅವರೇ ದಾರಿಹೋಕರಿಗೆ, ವಯಸ್ಕ ಬೈಕ್ ಚಾಲಕರಿಗೆ ಯಮದೂತರಾಗುತ್ತಾರೆ. ನನಗೆ ಅಪಘಾತವಾಗಿ ಆಸ್ಪತ್ರೆ ಸೇರಿದಾಗ ಅಲ್ಲಿ ಬರುತ್ತಿದ್ದ ಹೆಚ್ಚಿನ ಅಪಘಾತದ ಕೇಸುಗಳೆಲ್ಲ ಇಂಥವೇ…..ನಾನು ವಾಕ್ ಹೊರಟಿದ್ದೆ ಬೈಕ್ ತಂದು ಹಾಯಿಸಿದರು, ಬಸ್ ಗಾಗಿ ಕಾಯುತ್ತ ನಿಂತಾಗ ವೇಗವಾಗಿ ಬಂದ್ ಬೈಕ್ ಡಿಕ್ಕಿ ಹೊಡೆಯಿತು……ಹೀಗೆ.

ಈಗ ಪ್ರತಿದಿನವೂ ಲಕ್ಷಾಂತರ ವಾಹನಗಳು ಅದರಲ್ಲೂ ದ್ವಿಚಕ್ರ ವಾಹನಗಳು ರಸ್ತೆಗೆ ಇಳಿಯುತ್ತಲಿವೆ. ಒಂದೆ ಒಂದು ಒಳ್ಳೆಯ ಮುಹೂರ್ತದ ದಿನ ಸಾವಿರಾರು ದ್ವಿಚಕ್ರ ವಾಹನಗಳು ನಮ್ಮ ಊರಿನಿಂದಲೇ ಮಾರಾಟವಾಗುತ್ತವೆ. ಬೈಕ್ ಎನ್ಬುವುದು ಈಗ ಅನಿವಾರ್ಯ ವಾಹನವಾಗಿ ಹೋಗಿದೆ. ಬೈಕ್ ಮೇಲೆ ಮೇವು ಕಟ್ಟಿಕೊಂಡು ಬರುತ್ತಾರೆ ಅಷ್ಟೇ ಯಾಕೆ ಕೈಯಲ್ಲಿ ಚೊಂಬು ಹಿಡಿದುಕೊಂಡು ಬಯಲಕಡೆಗೆ ಕೂಡ ಬೈಕ್ ಮೇಲೆಯೇ ಹೋಗುವ ಮಹಾನುಭಾವರೂ ಇದ್ದಾರೆ! ಹೀಗಿದ್ದ ಮೇಲೆ ರಸ್ತೆಯ ಮೇಲೆ ಬೈಕ್ ಗಳ ಸಂಖ್ಯೆ ಸಹಜವಾಗಿಯೇ ಅತಿ ಹೆಚ್ಚಾಗಿ ದಿನಂಪ್ರತಿ ಅಪಘಾತಗಳು ಹೆಚ್ಚಾಗುತ್ತವೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲಿ ಆದರೆ ರಸ್ತೆ ಪಕ್ಕ ವಾಕ್ ಹೋಗುವವರು, ಜಾಗರೂಕತೆಯಿಂದ ಬೈಕ್ ಹೊಡೆದುಕೊಂಡು ಹೋಗುವವರು, ರಸ್ತೆ ದಾಟುವ ಶಾಲಾ ಮಕ್ಕಳು, ವೃದ್ಧರು, ಹೆಣ್ಣು ಮಕ್ಕಳು ಯಾಕೆ ಅನುಭವಿಸಬೇಕು ?

ಹಾಗಾದರೆ ಏನು ಮಾಡಬೇಕು ?

ಪೊಲೀಸರು ಈ ದುರ್ವೇಗಿಗಳನ್ನು ನಿಯಂತ್ರಿಸಬೇಕು. ಬೈಕ್ ಮೇಲೆ ಸಣ್ಣ ವಯಸ್ಸಿನ ಹುಡುಗರು ಕಂಡರೆ ಅವರ ಪಾಲಕರನ್ನು ಕರೆಸಿ ಸೂಕ್ತ ಕ್ರಮ ಜರುಗಿಸಬೇಕು. ಅಲ್ಲಲ್ಲಿ ವೇಗ ತಡೆಗಳನ್ನು ಹಾಕಿಸಲು ಕ್ರಮ ಕೈಗೊಳ್ಳಬೇಕು. 

- Advertisement -

ಜನ ನಿಬಿಡ ರಸ್ತೆಗಳಾದ ನಮ್ಮೂರಿನ ಕಾಲೇಜು ರಸ್ತೆ ಮಡ್ಡಿ ಈರಣ್ಣನ ಗುಡಿಯ ತನಕ, ದನದ ಪೇಟೆ ರಸ್ತೆ ಎಪಿಎಮ್ ಸಿ ತನಕ, ಗುರ್ಲಾಪೂರ ರಸ್ತೆಯ ಡಬಲ್ ರಸ್ತೆಯ ತನಕ ವೇಗ ನಿಯಂತ್ರಣ ಹಾಕಬೇಕು. ಆಗಾಗ ಬೈಕ್ ಸವಾರರ ದಾಖಲಾತಿಗಳನ್ನು (ಮುಖ್ಯವಾಗಿ ಲೈಸೆನ್ಸ ) ಪರಿಶೀಲಿಸಿ, ಅವು ಇಲ್ಲದಿದ್ದರೆ ಮುಂದಿನ ಸಲ ತರಲು ಎಚ್ಚರಿಕೆ ನೀಡಬೇಕು ತರದಿದ್ದರೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.

ಪಾದಚಾರಿಗಳ ರಕ್ಷಣೆಗಾಗಿ ಪೊಲೀಸರು ಈ ಕ್ರಮ ಜರುಗಿಸುವುದು ಅನಿವಾರ್ಯ. ಯಾಕೆಂದರೆ, ತಪ್ಪು ಮಾಡಿ ಅಪಘಾತ ಮಾಡಿಕೊಂಡು ನರಳುವುದು ಬೇರೆ ವಿಷಯ ಆದರೆ ಯಾವುದೇ ತಪ್ಪು ಮಾಡದೆ ಪುಂಡ ಪೋಕರಿಗಳ ನಿರ್ಲಕ್ಷದ  ವೇಗಕ್ಕೆ ಬಲಿಯಾಗಿ ಆಸ್ಪತ್ರೆ ಸೇರುವುದು ನಿಜವಾಗಿಯೂ ನರಕ ಯಾತನೆ. ಅದಕ್ಕಾಗಿ ಇಂಥ ಪುಂಡ ಪೋಕರಿಗಳನ್ನು ನಿಯಂತ್ರಿಸುವುದು ಪೊಲೀಸರ ಜವಾಬ್ದಾರಿ. ನಮ್ಮ ಊರಿನ ಪೊಲೀಸ್ ಇಲಾಖೆ ಈ ದುರ್ವೇಗಿಗಳನ್ನು ಖಂಡಿತ ನಿಯಂತ್ರಿಸುತ್ತದೆ ಎಂಬ ಭರವಸೆ ಇದೆ.


ಉಮೇಶ ಬೆಳಕೂಡ

ಮೂಡಲಗಿ

- Advertisement -
- Advertisement -

Latest News

ಕವನ: ಕಲೆಯ ಲೀಲೆ

"ಕಲೆಯ ಲೀಲೆ" ಲೀಲಾವತಿ ಎಂದರೆ ಕಲೆಯ ಕಡಲು ನಟನೆಯಲ್ಲಿ ಕೈಗೆಟುಕದ ಮುಗಿಲು ಮರೆಯದ ಕಲಾವಿದೆ ಇವರು ಮರೆತರು ಇವರ ಇವರಿಂದ ಬೆಳೆದವರು ಸಾರುತ್ತಿದ್ದವು ಮೌಲ್ಯ ಇವರ ಚಿತ್ರಗಳು ಕಲಿಸುತ್ತಿದ್ದವು ಪಾಠ ಇವರ ಹಾಡುಗಳು ಜೀವನವೇ ಇರುತ್ತಿತ್ತು ಇವರ ಸಿನಿಮಾದಲ್ಲಿ ಬದುಕುತ್ತಿದ್ದರು ಸಿನಿಮಾದಂತೆ ಜನರು ಜೀವನದಲ್ಲಿ ಬಡವಾಯಿತು ಸಿನಿಮನೆ ಹಿರಿಯ ಕಲೆ ತಲೆಗಳಿಲ್ಲದೆ ಚಿತ್ರರಂಗ ಸಾಗಿದೆ ಕಲೆ...
- Advertisement -

More Articles Like This

- Advertisement -
close
error: Content is protected !!
Join WhatsApp Group