ಮೂಡಲಗಿ: ‘ಮಕ್ಕಲ್ಲಿರುವ ಸುಪ್ತ ಕಲಾ ಪ್ರತಿಭೆಯನ್ನು ಗುರುತಿಸಿ ಅವರನ್ನು ಸಾಂಸ್ಕೃತಿಕವಾಗಿ ಬೆಳೆಸುವಲ್ಲಿ ಶಿಕ್ಷಣ ಇಲಾಖೆಯ ಪ್ರತಿಭಾ ಕಾರಂಜಿಯು ಪ್ರಮುಖ ಪಾತ್ರವಹಿಸುತ್ತದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಹೇಳಿದರು.
ಇಲ್ಲಿಯ ಉಮಾಬಾಯಿ ಪ್ರೌಢ ಶಾಲೆಯ ಆತಿಥ್ಯದಲ್ಲಿ ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇವರು ಶನಿವಾರ ಆಯೋಜಿಸಿದ್ದ ಮೂಡಲಗಿ ವಲಯ ಮಟ್ಟದ ಪತ್ರಿಭಾ ಕಾರಂಜಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುವುದಕ್ಕೆ ಪ್ರತಿಭಾ ಕಾರಂಜಿಯು ಪ್ರೇರಣೆಯಾಗುತ್ತದೆ ಎಂದರು.
ಶಿಕ್ಷಣ ಇಲಾಖೆಯ ೨೦೦೪ರಲ್ಲಿ ಪ್ರಾರಂಭಿಸಿರುವ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಎರಡು ದಶಕಗಳನ್ನು ಪೂರೈಸಿದೆ. ಮಕ್ಕಳಲ್ಲಿ ಚೈತನ್ಯ ಮೂಡಿಸುವ ಮೂಲಕ ಅವರಲ್ಲಿ ಕಲಿಕೆಗೂ ಉತ್ತೇಜನ ನೀಡುತ್ತದೆ. ಮಕ್ಕಳಲ್ಲಿ ನಾಡಿನ ಕಲೆ, ಜಾನಪದ ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುತ್ತದೆ ಎಂದರು.
ಮುಖ್ಯ ಅತಿಥಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ. ಲೋಕನ್ನವರ ಮಾತನಾಡಿ ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ಬೆಳೆಸುತ್ತದೆ ಮತ್ತು ಅವರಲ್ಲಿನ ಕಲಾ ಪ್ರತಿಭೆಯನ್ನು ಅನಾವರಣಗೊಳಿಸುತ್ತದೆ ಎಂದರು.
ಪುರಸಭೆ ಅಧ್ಯಕ್ಷೆ ಖುರಶಾದ ನದಾಫ, ಉಪಾಧ್ಯಕ್ಷೆ ಭೀಮವ್ವ ಪೂಜೇರಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಅತಿಥಿಗಳಾಗಿ ಪುರಸಭೆ ಸದಸ್ಯರಾದ ಗಫಾರ ಡಾಂಗೆ, ವಿ.ಬಿ. ಮುಗಳಖೋಡ, ರವಿ ಮೂಡಲಗಿ, ಸಲೀಮ ಇನಾಮದಾರ, ಲಕ್ಕಪ್ಪ ಶಾಬನ್ನವರ, ಯಮನಪ್ಪ ಬಸಳಿಗುಂದಿ, ಉಮಾಬಾಯಿ ಶಾಲೆಯ ಅಧ್ಯಕ್ಷೆ ಸುನಿತಾ ಹೊಸೂರ, ಅನ್ವರ ನದಾಪ, ರಾಜು ಪೂಜಾರಿ ತಾಲ್ಲೂಕ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ. ಮಾವಿನಗಿಡದ, ನೌಕರರ ಸಂಘದ ಕೆ.ಆರ್. ಅಜ್ಜಪ್ಪನವರ, ಪ್ರೌಢ ಶಾಲಾ ಸಂಘದ ಪರುಶರಾಮ ಕುಲಕರ್ಣಿ, ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಗೋವಿಂದ ಸಣ್ಣಕ್ಕಿ, ಶಿವನಂದ ಕುರಣಗಿ, ಸಂತೋಷ ಪಾಟೀಲ, ಶಾಲಾ ಮುಖ್ಯ ಶಿಕ್ಷಕಿ ಕೆ.ಆರ್. ಪಿರೋಜಿ, ಎಂ.ಎಂ. ಕೆಂಚನ್ನವರ, ಶಿಕ್ಷಣ ಸಂಯೋಜಕರಾದ ಸತೀಶ ಬಿ.ಎಸ್, ಆರ್.ವಿ. ಯರಗಟ್ಟಿ, ನಾಗರಾಜ ಗಡಾದ, ತಾಲ್ಲೂಕಿನ ೧೮ ಕ್ಲಸ್ಟರ್‌ಗಳಿಂದ ಮಕ್ಕಳು ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.