spot_img
spot_img

ಭಾವದೀವಿಗೆ ಕಾರ್ಯಕ್ರಮ; ಮೂಡಲಗಿಯಲ್ಲಿ ಹರಿದ ಭಾವ ಗಾನ, ತುಂಬಿದ ಮನ

Must Read

- Advertisement -

ಮೂಡಲಗಿ – ಅಪ್ಪಟ ವಾಣಿಜ್ಯಿಕ ಪ್ರದೇಶವಾದ ಮೂಡಲಗಿಯಲ್ಲಿ ಒಂದು ಸಂಗೀತಮಯ ಪ್ರಪಂಚ ಬುಧವಾರ ಸಂಜೆ ತೆರೆದುಕೊಂಡಿತು. ಉದಯೋನ್ಮುಖ ಗಾಯನ ಪ್ರತಿಭೆಗಳೂ ಸೇರಿದಂತೆ ರವೀಂದ್ರ ಸೋರಗಾಂವಿ, ಮೃತ್ಯುಂಜಯ ದೊಡ್ಡವಾಡ, ಬಸವರಾಜ ಮುಗಳಖೋಡ, ಶಬ್ಬೀರ ಡಾಂಗೆಯವರಂಥ ಹಿರಿಯ ಗಾಯಕರೂ ಸೇರಿ ಸ್ಥಳೀಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗಾನ ಸುಧೆಯನ್ನು ರಸಿಕರಿಗೆ ಉಣಬಡಿಸಿದರು.

ಇಂಡಿಯನ್ ಮ್ಯೂಜಿಕ್ ಅಸೋಸಿಯೇಶನ್ ಹಾಗೂ ಮೂಡಲಗಿಯ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾವಗೀತೆಗಳ ಸಂಗೀತ ಕಾರ್ಯಕ್ರಮಕ್ಕೆ ಇಡಲಾಗಿದ್ದು ‘ ಭಾವದೀವಿಗೆ ‘ ಎಂಬ ಸುಂದರ ಹೆಸರು.

- Advertisement -

ದೀವಿಗೆ ಎಂಬುದು ದೀಪದ ಸುಂದರ ಹೆಸರು. ಆ ದೀವಿಗೆಯ ಮೂಲಕ ಸಂಗೀತದ ಭಾವಗಳ ಬೆಳಕನ್ನು ಹರಿಸಿದರು ವಿವಿಧ ಗಾಯಕರುಗಳು. ಇವರಲ್ಲಿ ಹಲವು ಉದಯೋನ್ಮುಖ ಪ್ರತಿಭೆಗಳಿದ್ದರೂ ಅವರೂ ಯಾವುದರಲ್ಲಿಯೂ ಕಡಿಮೆ ಇಲ್ಲದಂತೆ ತಮ್ಮ ಪ್ರತಿಭೆಯನ್ನು ಗಾಯನದ ಮೂಲಕ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು. ಅದರಲ್ಲೂ ಕೇವಲ ವ್ಯಾಪಾರ ವಾಣಿಜ್ಯದ ಅಖಾಡವಾದ ಮೂಡಲಗಿಯಲ್ಲಿ ಒಂದು ಸಾಹಿತ್ಯಿಕ, ಸಂಗೀತದ ಅಲೆ ಮೂಡಿಸುವುದು ಸಾಹಸವೇ ಸರಿ ಅಂಥ ಸಾಹಸವನ್ನು ಲಯನ್ಸ್ ಕ್ಲಬ್ ನವರು ಮಾಡಿ ಯಶಸ್ವಿಯಾದರು.

ಬುಧವಾರದ ಸಂಜೆ ಸುಂದರವಾಗಿತ್ತೆನ್ನಲು ಹಲವು ಕಾರಣಗಳು. ಸುಡುವ ಬಿಸಿಲು ಕಡಿಮೆಯಾಗಿ ಹದವಾಗಿ ತಂಪುಗಾಳಿ ಬೀಸುತ್ತಿತ್ತು. ಶತಮಾನದಷ್ಟು ಹಳೆಯದಾದ ಕನ್ನಡ ಪ್ರಾಥಮಿಕ ಶಾಲೆಯ ಬಯಲಿನಲ್ಲಿ ಹಾಕಲಾದ ಶಾಮಿಯಾನ ಸರಳ ಸುಂದರವಾಗಿತ್ತು. ಗಾಯನ ಲೋಕಕ್ಕೆ ಸೂಕ್ತವಾದ ವಾತಾವರಣ ಅಲ್ಲಿತ್ತು. ಸಂಜೆಯ ಸಮಯಕ್ಕೇ ಸರಿಯಾಗಿ ಆರಂಭವಾದ ಭಾವ ಗೀತೆಗಳ ಕಾರ್ಯಕ್ರಮ ರಸಿಕರನ್ನು ತನ್ನತ್ತ ಸೆಳೆಯತೊಡಗಿತ್ತು.

- Advertisement -

ಭಾವದೀವಿಗೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಇಂಡಿಯನ್ ಮ್ಯೂಜಿಕ್ ಅಸೋಸಿಯೇಶನ್ ಅಧ್ಯಕ್ಷ, ಶಾಸ್ತ್ರೀಯ ಸಂಗೀತಗಾರ ರವೀಂದ್ರ ಸೋರಗಾಂವಿಯವರು. ಕಾರ್ಯಕ್ರಮವನ್ನು ಉದ್ಘಾಟಿಸಿದವರು ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮೃತ್ಯುಂಜಯ ದೊಡ್ಡವಾಡ ಅವರು. ಹಾರ್ಮೋನಿಯಂ ನುಡಿಸುವುದರ ಮೂಲಕ ವಿಭಿನ್ನವಾಗಿ ಕಾರ್ಯಕ್ರಮ ಉದ್ಘಾಟಿಸಿದರು.

ನಂತರ ಆರಂಭವಾಗಿದ್ದೇ ಭಾವ ಸಂಗೀತದ ರಸದೌತಣ. ಸಮಾರಂಭದಲ್ಲಿ ಪ್ರಾರ್ಥನಾ ಗೀತೆ ಹಾಡಿದ ರವೀಂದ್ರ ಅವರು ಭಕ್ತಿಯಲ್ಲಿ ಎಲ್ಲರನ್ನೂ ತೇಲಿಸಿಬಿಟ್ಟರು. ಅವರ ಜೊತೆ ತಬಲಾ ವಾದಕರದು ಅಮೋಘ ಸಾಧನೆ. ಸಂಗೀತ ರಸಿಕರು ತಲೆದೂಗುವಂತಾಯಿತು. ಮೃತ್ಯುಂಜಯ ದೊಡ್ಡವಾಡರು ಕಾರ್ಗಿಲ್ ಯುದ್ಧದ ಸಂದರ್ಭದ ದೇಶಭಕ್ತಿ ಗೀತೆ ಹಾಡುತ್ತಿದ್ದರೆ ಮೈಯೆಲ್ಲ ರೋಮಾಂಚನ ಜೊತೆಗೇ ನಮ್ಮ ಸೈನಿಕರ ಬಗ್ಗೆ ಅಭಿಮಾನ ಹೆಚ್ಚಾಗುವಂತೆ ಮಾಡಿತು.

ಮೂಡಲಗಿಯವರೇ ಆದ ಜಾನಪದ ಜಾಣ ಶಬ್ಬೀರ ಡಾಂಗೆ, ಐಶ್ವರ್ಯ ತಳವಾರ, ಶ್ರೀಕಾಂತ ನಾಯಕ ಉತ್ತಮವಾಗಿ ಹಾಡಿದರು. ಝೀ ಸರಿಗಮಪ ವಿಜೇತ ಓಂಕಾರ ಪತ್ತಾರ ಹಾಗೂ ನಾಗವೇಣಿ ಎಂಬ ಇಬ್ಬರು ತರುಣ, ತರುಣಿಯರ ಹಾಡುಗಳು ಸುಶ್ರಾವ್ಯವಾಗಿದ್ದವು. ನಾಗವೇಣಿಯವರು ಕೃಷ್ಣನ ಕುರಿತು ಹಾಡಿದ ಹಾಡು ( ಬಹುಶಃ ಪುರಂಧರ ದಾಸರದು ) ಕುಣಿಯುವಂತೆ ಮಾಡಿತು.

ಬಸವರಾಜ ಮುಗಳಖೋಡ, ಶಿವಾನಂದ ಬಿದರಿ, ಬಸವಲಿಂಗಯ್ಯ ಹಿಡಕಲ್ ಹೀಗೆ ಅನೇಕ ಗಾಯಕ ಮಹನೀಯರು ಆ ಸಂಜೆಯನ್ನು ಸಂಗೀತದ ಮಾಧುರ್ಯದಿಂದ ತುಂಬಿಬಿಟ್ಟರು.

ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿರುವ ಮೂಡಲಗಿ ಲಯನ್ಸ್ ಕ್ಲಬ್ ಇಂಥ ಸಂಗೀತ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚು ಹೆಚ್ಚು ಮಾಡುತ್ತಿದ್ದರೆ ಮೂಡಲಗಿ ನಗರಿಗರ ನಾಲಿಗೆಯ ಮೇಲೆ ಸರಸ್ವತಿ ವಾಸಿಸುವುದರಲ್ಲಿ ಯಾವ ಸಂದೇಹವೂ ಇಲ್ಲ.


ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಸೌರ ವಿದ್ಯುತ್ ಉತ್ಪಾದನೆ ಮಾಹಿತಿ ಕಾರ್ಯಾಗಾರ

ಕ್ಯಾಷುಟೆಕ್ ನಿರ್ಮಿತಿ ಕೇಂದ್ರ ಶಕ್ತಿನಗರದ ಅಭಿಯಂತರುಗಳಿಗೆ ಹಾಗೂ, ರಾಯಚೂರು ಜಿಲ್ಲೆಯ ವಿವಿಧ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ "ಸುಸ್ಥಿರ ಹಸಿರು ವಿದ್ಯುಚ್ಛಕ್ತಿ ಉತ್ಪಾದನೆಗೆ ಸೌರಶಕ್ತಿ ಬಳಕೆ"...
- Advertisement -

More Articles Like This

- Advertisement -
close
error: Content is protected !!
Join WhatsApp Group