ಔಷಧಿ ಹಾಗೂ ಸುಗಂಧಿ ಸಸ್ಯಗಳ ಪಾಲುದಾರರ ಸಮ್ಮಿಲನ, ಸಂವಾದ ಮತ್ತು ಸಮನ್ವಯ ಕಾರ್ಯಕ್ರಮವು ನಾಗಾವಿಯ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯದಲ್ಲಿ ಜರುಗಿತು.
ಸಸ್ಯ ಸಂಜೀವಿನಿ ಔಷಧೀ ಹಾಗೂ ಸುಗಂಧಿ ಸಸ್ಯಗಳ ಪಾಲುದಾರರ ಒಕ್ಕೂಟ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯ ನಾಗಾವಿ, ಅರಣ್ಯ, ಆಯುಷ್, ತೋಟಗಾರಿಕೆ, ಮತ್ತು ಕೃಷಿ ಇಲಾಖೆ ಹಾಗೂ “ಧರಿತ್ರಿ” ಕೃಷಿ ಪರಿವಾರ ಗದಗ, ಮತ್ತು ಶ್ರೀ ಕಪ್ಪತಮಲ್ಲೇಶ್ವರ ತೋಟಗಾರಿಕೆ ರೈತ ಉತ್ಪಾದಕ ಕಂಪನಿ ಕಡಕೋಳ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವು ಡೋಣಿಯ ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನ ಮಠದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿ, ಕುಲಪತಿ. ಡಾ. ಎಸ್.ವಿ.ನಾಡಗೌಡರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಯಿತು.
ಒಕ್ಕೂಟದ ಉದ್ದೇಶ, ನಡೆದುಬಂದ ದಾರಿ ಕುರಿತು, ಕಪ್ಪತಗುಡ್ಡದಲ್ಲಿ ಅಳಿವಿನಂಚಿನಲ್ಲಿರುವ ವಿವಿಧ ಔಷಧೀ ಹಾಗೂ ಸುಗಂಧ ಸಸ್ಯಗಳನ್ನು ಉಳಿಸುವ, ಬಳಸುವ, ಬೆಳೆಸುವ ಅವಶ್ಯಕತೆ ಹಾಗೂ ಜೀವ ವೈವಿಧ್ಯತೆಯ ಸಂರಕ್ಷಣೆಯಲ್ಲಿ ಸಹಕಾರಿಯಾಗುವ ಕುರಿತು ಬೆಂಗಳೂರಿನ ಟ್ರಾನ್ಸ್ ಡಿಸಿಪ್ಲಿನರಿ ವಿಶ್ವವಿದ್ಯಾಲಯದ ಪ್ರೊ. ಡಾ. ಜಗನ್ನಾಥರಾವ್ ತಮ್ಮ ಪ್ರಾಸ್ತಾವಿಕದಲ್ಲಿ ವಿವರಿಸಿದರು.
ಸಸ್ಯ ಸಂಜೀವಿನಿಯ ಪ್ರಧಾನ ಸಂಚಾಲಕ ಡಿ.ಕೆ.ಮಹೇಶಕುಮಾರರವರು ಒಕ್ಕೂಟದ ಧ್ಯೇಯೋದ್ದೇಶ, ಕ್ರಮಿಸಿದ ದಾರಿ, ರಾಜ್ಯಾದ್ಯಂತ ಹಮ್ಮಿಕೊಂಡ ಸಂಘಟನಾ ಸಭೆಗಳು, ಸಿದ್ಧತಾ ಸಭೆಗಳ ವಿವರಗಳನ್ನು ಸಭೆಯಲ್ಲಿ ಮಂಡಿಸಿದರು.
ಗದಗ ಜಿಲ್ಲಾ ಆಯುಷ್ ಅಧಿಕಾರಿ ಡಾ. ಎಮ್.ಎಸ್ ಉಪ್ಪಿನರವರು ಮಾತನಾಡುತ್ತಾ ಆಯುಷ್ ಇಲಾಖೆಯು ಒಕ್ಕೂಟದ ಕಾರ್ಯಕ್ರಮಗಳ ಅನುಷ್ಠಾನಗೊಳಿಸಲು ಸಹಕರಿಸುವದಾಗಿ ತಿಳಿಸಿದರು.
ಪ್ರಗತಿಪರರ ರೈತ ಗುರುನಾಥಗೌಡ ಓದುಗೌಡರ ಒಕ್ಕೂಟದ ರಚನೆ ಹಾಗೂ ರೈತಪರ ಸೇವಾಭಾವ ಸ್ತುತ್ಯರ್ಹ ಕಾರ್ಯವಾಗಿದ್ದು, ಔಷಧೀಯ ಸಸ್ಯಗಳ ಅಭಿವೃದ್ಧಿಗಾಗಿ ವ್ಯವಸ್ಥಿತ ಅಧ್ಯಯನದ ಅವಶ್ಯಕತೆಯಿದ್ದು ಆ ನಿಟ್ಟಿನಲ್ಲಿ ಗ್ರಾಮೀಣ ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸುಗಳನ್ನು ಪ್ರಾರಂಭಿಸಿ ಕಪ್ಪತಗುಡ್ಡದಲ್ಲಿಯ ಅಪರೂಪದ ಔಷಧೀಯ ಸಸ್ಯಗಳ ಸಂರಕ್ಷಣೆಯು ಸುಲಭಗೊಳ್ಳುವುದಲ್ಲದೇ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದಾಗಿದೆಯೆಂದು ನುಡಿದರು.
ವಿವಿಧ ಇಲಾಖೆಗಳಿಂದ ಆಗಮಿಸಿದ್ದ ಅಧಿಕಾರಿಗಳು ಒಕ್ಕೂಟದೊಂದಿಗೆ ಸಹಕರಿಸಿ ರೈತರ ಹಾಗೂ ಪಾಲುದಾರರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
ಹುಲಕೋಟಿಯ ಕೆ.ವಿ.ಕೆ ಯ ವಿಜ್ಞಾನಿ ಡಾ.ಎಚ.ಆರ್.ಹಿರೇಗೌಡರ, ಹಾಗೂ ಪಾರಂಪರಿಕ ವೈದ್ಯ ಡಾ. ಚನಮಲ್ಲಯ್ಯ ಕಂಬಿ ಈ ಸಂದರ್ಭದಲ್ಲಿ ವಿಷಯ ಮಂಡಿಸಿದರು.
ಸಂವಾದದಲ್ಲಿ ಭಾಗಿಯಾಗಿದ್ದ ಒಕ್ಕೂಟದ ನಿರ್ದೇಶಕ ಭಾಲಚಂದ್ರ ಜಾಬಶೆಟ್ಟಿಯವರು ಮಾತನಾಡುತ್ತಾ ಒಕ್ಕೂಟದ ರೂಪರೇಷೆಗಳು ಸಿದ್ಧಗೊಂಡಿದ್ದು ಪಾಲುದಾರರಲ್ಲಿ ಮುಖ್ಯವಾಗಿ ರೈತರು, ಎಫ್.ಪಿ.ಓ ಗಳು, ಸಂಘ ಸಂಸ್ಥೆಗಳು, ಹಾಗೂ ಸಾಮಾನ್ಯ ಸದಸ್ಯರರನ್ನೊಳಗೊಂಡ ನಾಲ್ಕು ತೆರನಾದ ವಿಭಾಗಗಳಿದ್ದು, ಪರಸ್ಪರ ಸಹಕಾರದಿಂದ ಔಷಧೀ ಸಸ್ಯಗಳನ್ನು ಉಳಿಸುವುದು, ಬಳಸುವದು, ಬೆಳೆಸುವುದು, ಮೌಲ್ಯ ವರ್ಧನೆ ಮಾಡುವುದು, ಹಾಗೂ ವೃತ್ತಿನಿರತ ಪಾರಂಪರಿಕ ವೈದ್ಯರ ಸೇವೆಯನ್ನು ಜನಪ್ರಿಯಗೊಳಿಸುವ ಯೋಜನೆ ಹಮ್ಮಿಕೊಳ್ಳಲಾಗುತ್ತದೆಯೆಂದು ತಿಳಿಸಿದರು.
ಸಿರಸಿಯ ಪ್ರಗತಿಪರ ರೈತ ಪ್ರಶಾಂತ ಜೋಷಿಯವರು ಸಾವಯವ ಹಾಗೂ ನೈಸರ್ಗಿಕ ಕೃಷಿಯ ಅನುಭವಗಳನ್ನು ಹಂಚಿಕೊಂಡರು.
ಬೆಂಗಳೂರಿನ ಮಾರುತಿ ರಾವ್ ರವರು ರೈತರು, ಖರೀದಿದಾರರು, ಮೌಲ್ಯ ವರ್ಧಕರ ಮಧ್ಯ ಸಮನ್ವಯ ಸಾಧಿಸಲು ಆ್ಯಪ್ ಸಿದ್ಧಗೊಳಿಸಲಾಗಿದ್ದು ಅದರಿಂದಾಗಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದಾಗಿದ್ದು, ರೈತರು ಸದುಪಯೋಗ ಪಡೆದುಕೊಳ್ಳಲು ಕರೆ ನೀಡಿದರು.
ರೈತರ ಹಾಗೂ ಪಾರಂಪರಿಕ ವೈದ್ಯರ ಸಮಸ್ಯೆಗಳನ್ನು ಸಂವಾದದಲ್ಲಿ ಕೂಲಂಕುಷವಾಗಿ ಚರ್ಚಿಸಿ ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳಲು ಒಕ್ಕೂಟ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತದೆಯೆಂದು ಭರವಸೆ ನೀಡಲಾಯಿತು.
ಕಳೆದ 30 ವರ್ಷಗಳಿಂದ ಕಪ್ಪತಗುಡ್ಡದಿಂದ ಔಷಧೀಯ ಸಸ್ಯಗಳನ್ನು ವೈಜ್ಞಾನಿಕ ಪದ್ಧತಿಯಿಂದ ಸಂಗ್ರಹಿಸಿ ಆಯುರ್ವೇದ, ಸಾಂಪ್ರದಾಯಿಕ ಹಾಗೂ ಪಾರಂಪರಿಕ ವೈದ್ಯರಿಗೆ ಪೂರೈಸಿ ಜನಸಾಮಾನ್ಯರ ಆರೋಗ್ಯ ಸಂರಕ್ಷಣೆಯಲ್ಲಿ ತೊಡಗಿರುವ ಹೊಸಳ್ಳಿಯ ಕಸ್ತೂರೆವ್ವ ಹಾರೂಗೇರಿಯವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ವಿಶ್ವವಿದ್ಯಾಲಯದ ತೋಟಗಾರಿಕೆ ವಿಭಾಗದ ಡಾ. ಉಡಚಪ್ಪ ಪೂಜಾರವರು ಮಾತನಾಡುತ್ತಾ ಔಷಧೀಯ ಸಸ್ಯಗಳ ನರ್ಸರಿ ಪ್ರಾರಂಭಿಸಿದ್ದು, ರೈತರಿಗೆ ಸಸಿ ಪೂರೈಸುವ ಕಾರ್ಯದಲ್ಲಿ ವಿಶ್ವವಿದ್ಯಾಲಯವು ತೊಡಗಿಕೊಂದಿದೆಯೆಂದು ತಿಳಿಸಿದರು.
ಕಪ್ಪತಗುಡ್ಡದಲ್ಲಿರುವ ಸಸ್ಯ ವೈವಿಧ್ಯತೆಯನ್ನು ಸಂರಕ್ಷಿಸಲು ವಿಶ್ವವಿದ್ಯಾಲಯವು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು
ಕುಲಪತಿ ಡಾ. ಎಸ್.ವಿ.ನಾಡಗೌಡರು ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ನಂದಿವೇರಿ ಸಂಸ್ಥಾನ ಮಠದ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ಆಶೀರ್ವಚನ ನೀಡುವ ಸಂದರ್ಭದಲ್ಲಿ ಕಪ್ಪತಗುಡ್ಡದ ಮಡಿಲಲ್ಲಿ ಅಸಂಖ್ಯಾತ ಅಪರೂಪದ ಸಸ್ಯಗಳಿದ್ದು, ಅವುಗಳ ಸಂರಕ್ಷಣೆಗಾಗಿ ಶ್ರೀ ಮಠವು ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಅದರಲ್ಲಿ ಈ ಒಕ್ಕೂಟ ಸ್ಥಾಪನೆಯೂ ಸಹ ಒಂದು ಭಾಗವಾಗಿದೆ.
ರಾಜ್ಯಾದ್ಯಂತದ ವಿವಿಧ ಪಾಲುದಾರರನ್ನು ಸಂಘಟಿಸಿ ಪರಸ್ಪರ ಒಳಿತಿಗಾಗಿ ಸಮನ್ವಯ ಸಾಧಿಸಿ ಪ್ರತಿಯೊಬ್ಬರಿಗೂ ಉಪಯುಕ್ತವಾಗುವಂತೆ ಯೋಜಿಸಲಾಗುತ್ತದೆಯೆಂದು ನುಡಿದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಡಾ. ಬಸವರಾಜ ನಾವಿ ಯವರು ರೈತ ಗೀತೆ ಹಾಡಿದರು. ರುದ್ರಣ್ಣ ಗುಳಗುಳಿ ಸ್ವಾಗತಿಸಿದರು, ಡಾ. ನಾಭೂಷಣ, ನೈಸರ್ಗಿಕ ಕೃಷಿಕ ದೇವರಡ್ಡಿ ಅಗಸನಕೊಪ್ಪ ಕಾರ್ಯಕ್ರಮ ಸಂಯೋಜಿಸಿದರು.
ಸೊರಟೂರಿನ ಬಸವರಾಜ ಶೈಲಪ್ಪನವರ ನಿರೂಪಿಸಿದರು.
ಡಾ. ದೀಕ್ಷಿತ, ವಿಶ್ವವಿದ್ಯಾಲಯದ ಸಿಬ್ಬಂದಿ, ನೂರಾರು ರೈತರು, ವಿದ್ಯಾರ್ಥಿಗಳು, ಪಾಲ್ಗೊಂಡಿದ್ದರು
ಭಾಲಚಂದ್ರ ಜಾಬಶೆಟ್ಟಿ
9741888365